ಟಿ. ದೇವಿದಾಸ್
400 ವರ್ಷಗಳಿಗಿಂತಲೂ ಹೆಚ್ಚು ಚರಿತ್ರೆಯಿರುವ ದಸರಾವನ್ನು ಸ್ವಾತಂತ್ರ್ಯಾ ನಂತರದಲ್ಲಿ ಮೈಸೂರು ಅರಸರ ಬದಲು ಚಿನ್ನದ ಅಂಬಾರಿಯಲ್ಲಿ ನಾಡದೇವತೆ ತಾಯಿ ಚಾಮುಂಡೇಶ್ವರಿಯ ವಿಗ್ರಹವನ್ನಿಟ್ಟು ಆಕೆಗೆ ಶ್ರದ್ಧೆ ಮತ್ತು ಭಕ್ತಿಯಿಂದ ಪುಷ್ಪಾರ್ಚನೆ ಸಲ್ಲಿಸಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸುವ ಸಂಪ್ರದಾಯವಿದೆ. ನಿಸ್ಸಂದೇಹವಾಗಿ ಅಪ್ಪಟ ಸನಾತನ ಹಿಂದೂ ಸಂಪ್ರದಾಯದ ಪದ್ದತಿಯಂತೆಯೇ ಇದು ನಡೆಯುತ್ತದೆ. No doubt at all. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕೀರ್ತಿಯನ್ನು ತಾನು ಪಸರಿಸಿದ್ದೇನೆ ಎನ್ನುವ ಬಾನು ಮುಷ್ತಾಕ್ ಅವರಿಗೆ ಇದು ಗೊತ್ತಿಲ್ಲದ ಸಂಗತಿಯೇನಲ್ಲ. ಬೂಕರಿಗಾಗಿ ಬಾನು ಮುಷ್ತಾಕ್ ಅವರಿಗೆ ಅಭಿನಂದನೆಗಳನ್ನು ಬಯಸುತ್ತೇನೆ. ಆದರೆ, ಇದೇ ಸಂದರ್ಭದಲ್ಲಿ ದಸರಾ ಉದ್ಘಾಟನೆಯ ಗೌರವವನ್ನು ಮನತುಂಬಿ ಸ್ವೀಕರಿಸಿರುವ ಬಾನು ಮುಷ್ತಾಕ್ ಅವರ ಪ್ರಜ್ಞೆಗೆ ಒಂದಿಷ್ಟು ಪ್ರಶ್ನೆಗಳು:
1. ಹಿಂದೂಧರ್ಮವನ್ನು ಖಂಡ ತುಂಡವಾಗಿ ವಿರೋಧಿಸಿದ, ತಾಯಿ ಭುವನೇಶ್ವರಿಯನ್ನು ಮತ್ತು ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಧ್ವಜವನ್ನು ಒಪ್ಪಿಕೊಳ್ಳಲಾರದ, ಮುಸ್ಲಿಂ ಮಹಿಳೆಯರ ಅನುಕೂಲಕ್ಕಾಗಿ ತ್ರಿವಳಿ ತಲಾಖಿಗೆ ನಿಷೇಧ ಹೇರಿದ್ದಾಗ ಅಂತಹ ಕ್ರಾಂತಿಕಾರಿ ಬದಲಾವಣೆಯನ್ನು ಒಪ್ಪಿ ಸ್ವೀಕರಿಸುವ ಮನೋಭಾವವನ್ನು ಹೊಂದದೆ ನೀವು ಕೇಂದ್ರ ಸರ್ಕಾರದ ವಿರುದ್ಧ ಬಹಿರಂಗವಾಗಿ ಹರಿಹಾಯ್ದ ನೀವು ಹಿಂದೂಧರ್ಮದ ನಂಬಿಕೆಯಾದ ಬಹುತ್ವದ ಮೂರ್ತಿ ಪೂಜೆಯನ್ನು ಹೇಗೆ ಒಪ್ಪುತ್ತೀರಿ? ನಿಮ್ಮ ಧರ್ಮ ಇದನ್ನು ಒಪ್ಪುತ್ತದೆಯೇ? ನಿಮ್ಮ ಧರ್ಮಗುರುಗಳು ಒಪ್ಪುತ್ತಾರೆಯೇ? ಅಥವಾ ಇನ್ಮುಂದೆ ಇವ್ಯಾವುದನ್ನೂ ಲೆಕ್ಕಿಸದೆ ನಿಜವಾದ ಜಾತ್ಯತೀತರಾಗುವಿರೆ?
2. ನಿತ್ಯವೂ ಅಲ್ಲಾಹು ಅಕ್ಬರ್ ಎಂದು ಐದು ಬಾರಿ ಪ್ರಾರ್ಥನೆ ಮಾಡುವ ಮೂಲಕ ಅಲ್ಲಾಹು ಒಬ್ಬನೇ ದೇವರು, ಅಲ್ಲಾಹುವಿನ ಹೊರತು ಆರಾಧನೆಗೆ ಅರ್ಹರಾದ ಮತ್ತೊಂದು ದೇವರಿಲ್ಲ. ಮೂರ್ತಿಪೂಜೆಯನ್ನು ಒಪ್ಪದ, ಬಹುತ್ವದ ಮೂರ್ತಿಯನ್ನು ಪೂಜಿಸುವವರು ಕಾಫಿರರು, ಕಾಫಿರರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ ಇಲ್ಲವೇ ಅವರನ್ನು ಕಂಡಲ್ಲಿ ಕೊಲ್ಲಿ ಎನ್ನುವ ಇಸ್ಲಾಂ ಮತದ ಸಿದ್ಧಾಂತವನ್ನು ನೀವು ಧಿಕ್ಕರಿಸಿದಂತಾಗುವುದಿಲ್ಲವೆ? ಮುಸಲ್ಮಾನರು ಹಿಂದೂ ದೇವತೆಗಳನ್ನು ಪೂಜಿಸುವುದು ನಿಷಿದ್ಧ, ಹಾಗೆ ಮಾಡಿದಲ್ಲಿ ಅದು ಹರಾಮ್ ಆಗುತ್ತದೆ ಮತ್ತು ಅವರು ಧರ್ಮ ಭ್ರಷ್ಟರಾಗುತ್ತಾರೆಂದ ಮಾತನ್ನು ಧಿಕ್ಕರಿಸುವ ಛಾತಿಯನ್ನು ತೋರುತ್ತೀರೆ?
3, ಅಲ್ಲಾಹುವಿನಿಂದ ಮಾತ್ರ ಮೋಕ್ಷಕ್ಕೆ ದಾರಿ ಎನ್ನುವ ಧಾರ್ಮಿಕ ನಂಬಿಕೆಗಳನ್ನು ಮೀರಿ ದಸರಾ ಹಬ್ಬದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ಶ್ರದ್ಧೆ ಮತ್ತು ಭಕ್ತಿಯಿಂದ ಪೂಜೆ ಮಾಡುತ್ತೀರೆ? ಅಂದರೆ ಧರ್ಮಭ್ರಷ್ಟರಾಗುವಿರೆ? ನಿಮ್ಮ ಧಾರ್ಮಿಕ ನಂಬಿಕೆಗಳಿಗೆ ನೀವು ಮೋಸ ಮಾಡಿದಂತಾಗುವುದಿಲ್ಲವೆ? ಅಥವಾ ಅದಕ್ಕೆ ನೀವು ಸಿದ್ಧರಾಗಿದ್ದೀರೆ?
4. ಮಸೀದಿಗಳಲ್ಲಿ ಮುಸಲ್ಮಾನ ಸ್ತ್ರೀಯರಿಗೆ ಪ್ರವೇಶವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಧಾರ್ಮಿಕ ಶ್ರದ್ಧಾಕೇಂದ್ರಕ್ಕೆ ಬೂಕರ್ ಪ್ರಶಸ್ತಿಯ ಪ್ರಭಾವದಿಂದ ನಿಮ್ಮ ಧರ್ಮದ ಸ್ತ್ರೀಯರನ್ನು ಬರುವಂತೆ ಮಾಡಲು ನಿಮಗೆ ಸಾಧ್ಯವಿದೆಯೇ? ಹಾಗೆ ಬಂದರೆ ನಿಮ್ಮ ಧರ್ಮ ಅದನ್ನೊಪ್ಪುತ್ತ ದೆಯೇ? ವೈಚಾರಿಕ ಕಾಠಿಣ್ಯತೆಯಿಂದ ನಲುಗುತ್ತಿರುವ ನಿಮ್ಮ ಧರ್ಮದ ಆಚರಣೆಗಳಿಗೆ ನೀವು ಹೊಸ ಮುನ್ನುಡಿಯನ್ನು ಬರೆಯುತ್ತೀರೆ?
5. ಸಚಿವ ಮಹದೇವಪ್ಪನವರು ದಸರಾ ಎನ್ನುವುದು ಸಾಂಸ್ಕೃತಿಕ ಉತ್ಸವ; ಹಾಗಾಗಿ ಬಾನು ಮುಷ್ತಾಕ್ ಉದ್ಭಾಟನೆ ಮಾಡುವುದರಲ್ಲಿ ತಪ್ಪಿಲ್ಲ ಅಂತ ಫರ್ಮಾನು ಹೊರಡಿಸಿದ ಹಾಗೆ ಬಹುದೊಡ್ದ ಮಾತಾಡಿದ್ದಾರೆ. ಆದರೆ ದಸರಾ ಎನ್ನುವುದು ಅಪ್ಪಟ ಹಿಂದೂ ಸನಾತನ ಧಾರ್ಮಿಕ ಕಾರ್ಯಕ್ರಮ. ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ. ಅಪ್ಪಟ ಹಿಂದೂ ಸನಾತನ ಧಾರ್ಮಿಕ ಹಬ್ಬವನ್ನು ನೀವು ಉದ್ಘಾಟಿಸುವುದು ಹಿಂದೂ ಸನಾತನ ಧಾರ್ಮಿಕ ನಂಬಿಕೆ ಮತ್ತು ಆಚರಣೆಗೆ ದ್ರೋಹ ಮಾಡಿದಂತಾಗುತ್ತದೆ ಎಂದು ನಿಮಗಾದರೂ ಅನಿಸಬೇಕಿತ್ತಲ್ಲವೆ? ಈ ಮೂಲಕ ಹಿಂದೂ ಸನಾತನಿಗಳಿಗೆ ಏನು ಸಂದೇಶವನ್ನು ಕೊಡಲು ಮುಂದಾಗಿದ್ದೀರಿ?
6. ಕೆಲ ವರ್ಷಗಳ ಹಿಂದೆ ಸಾರ್ವಜನಿಕ ಸಭೆಯೊಂದರಲ್ಲಿ, ಹಳದಿ ಮತ್ತು ಕುಂಕುಮ ಬಣ್ಣವನ್ನು ಕನ್ನಡ ತಾಯಿ ಭುವನೇಶ್ವರಿಯವರಿಗೆ ತೊಡಿಸಿ ಕನ್ನಡವನ್ನು ಭುವನೇಶ್ವರಿಯನ್ನಾಗಿ ಮಾಡಿಬಿಟ್ಟಿರಿ. ಅರಿಶಿನ-ಕುಂಕುಮವನ್ನು ಲೇಪಿಸಿ ಭುವನೇಶ್ವರಿಯನ್ನಾಗಿ ಮಂದಾಸನದ ಮೇಲೆ ಕೂರಿಸಿಬಿಟ್ಟಿರಿ. ತನ್ನಂತಹ ಅನ್ಯಧರ್ಮೀಯರನ್ನು ಕನ್ನಡದಿಂದ ದೂರ ಮಾಡಿರುವ ಕಾರಣ, ತಾನು ಭುವನೇಶ್ವರಿಯನ್ನು ಒಪ್ಪುವುದಿಲ್ಲ ಈ ಕಾರಣಕ್ಕಾಗಿ ನಾವು ನಮ್ಮ ಮಕ್ಕಳಿಗೆ ಕನ್ನಡ ಕಲಿಸಲಾಗಲಿಲ್ಲ, ಹಾಗಾಗಿ ನಾನೆಲ್ಲಿ ನಿಲ್ಲಬೇಕು. ನಾನೇನನ್ನು ನೋಡಲಿ, ನಾನೆಲ್ಲಿ ತೊಡಗಿಕೊಳ್ಳಬೇಕು? ನನ್ನನ್ನು ಹೊರಗಟ್ಟುವಿಕೆ ಇಂದಿನಿಂದಲ್ಲ, ಎಂದಿನಿಂದಲೋ ಆರಂಭವಾಗಿತ್ತು. ಆದರೆ, ಇಂದು ಪೂರ್ಣಗೊಂಡಿದೆಯಷ್ಟೆ ಎಂದು ಹೇಳಿದ್ದಾರೆ. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ| ಯತ್ರೈತಾಸ್ತು ನ ಪೂಜಂತೇ ಸರ್ವಾಸ್ತತ್ರಾ ಫಲಾಃ ಕ್ರಿಯಾಃ || ಎಲ್ಲಿ ಸ್ತ್ರೀಯರಿಗೆ ಗೌರವ ಸನ್ಮಾನಗಳು ದೊರೆಯುತ್ತವೆಯೋ ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ. ಯಾವ ಮನೆಯಲ್ಲಿ ಸ್ತ್ರೀಯರು ಗೌರವಿಸಲ್ಪಡುವುದಿಲ್ಲವೋ ಅಲ್ಲಿ ಮಾಡುವ ಎಲ್ಲ ಪೂಜೆಗಳು ನಿಷ್ಫಲವಾಗುತ್ತವೆ- ಅನ್ನುತ್ತ ಭುವನೇಶ್ವರಿಯ ಹೆಸರಿನಲ್ಲಿ ಕನ್ನಡಿಗರು ತನ್ನನ್ನು ತುಳಿಯುವುದನ್ನು ನಿಲ್ಲಿಸಿ ಎನ್ನುವ ಮೂಲಕ ಬಹಿರಂಗವಾಗಿಯೇ ದ್ವೇಷವನ್ನು ವ್ಯಕ್ತಪಡಿಸಿದ್ದ ನೀವು ಎಲ್ಲವನ್ನೂ ಮರೆತುಬಿಟ್ಟಿರೆ? ಇದೆಂಥಾ ಪ್ರಗತಿಪರ ಚಿಂತನೆ ನಿಮ್ಮದು? ಕನ್ನಡವಷ್ಟೇ ಅಲ್ಲ, ಸಂಸ್ಕೃತವೂ ನಿಮ್ಮನ್ನು ತುಳಿದುಬಿಟ್ಟಿದೆಯೆ?
7. ಬಹುತ್ವವನ್ನು ನಂಬದ, ಕೇವಲ ಏಕ ದೇವರು, ಏಕ ಧರ್ಮಗ್ರಂಥ ಮತ್ತು ಏಕಧರ್ಮದ ಖಟ್ಟರ್ ಅನುಯಾಯಿಯಾಗಿರುವ ನಾನು ಕಾಂಗ್ರೆಸ್ ಸರ್ಕಾರದ ಮುಸಲ್ಮಾನರ ಓಲೈಕೆ ರಾಜಕೀಯಕ್ಕೆ ದಾಳವಾಗಿಬಿಟ್ಟೆ ಅಂತ ನಿಮಗೆ ಅನಿಸುವುದಿಲ್ಲವೆ?
8. ಕನ್ನಡವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿ. ಅಲ್ಲಿಯವರ ಬಾಯಲ್ಲಿ ಕನ್ನಡ ಎಂದು ಹೇಳಿಸಿದ್ದೇನೆ. ನನ್ನಂತೆ ನೀವು ಸಾಧನೆ ಮಾಡಿದರೆ ಟೀಕೆ ಮಾಡಲು ಅರ್ಹತೆ ಸಿಗುತ್ತದೆ. ಇಲ್ಲದೆ ಹೋದರೆ ನಿಮ್ಮ ಯಾವುದೇ ಮಾತಿನಲ್ಲಿ ಸ್ಪಷ್ಟತೆ ಇರುವುದಿಲ್ಲ ಎಂದು ಹೇಳಿದ ನಿಮಗೆ ಈಗಾಗಲೇ ಕನ್ನಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದವರ ಬಗ್ಗೆ ಗೊತ್ತಿಲ್ಲವೆ?
9. ದೀಪಾ ಭಸ್ತಿಯವರು ಆಂಗ್ಲಭಾಷೆಗೆ ಅನುವಾದ ಮಾಡಿ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರದೇಶದಲ್ಲಿ ಬಿಡುಗಡೆ ಮಾಡಿದ್ದರಿಂದಾಗಿಯೇ ಬೂಕರ್ ಪ್ರಶಸ್ತಿ ಸಂದಿದೆಯೇ ವಿನಾ ನಿಮ್ಮ ಕನ್ನಡದ ಕೃತಿಗಲ್ಲ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಅಂತಾರಾಷ್ಟ್ರೀಯ ಮಟ್ಟಕ್ಕೆ ನಿಮ್ಮ ಕೃತಿಯನ್ನು ತೆಗೆದುಕೊಂಡು ಹೋದ ದೀಪಾ ಅವರ ಶ್ರಮಸಾಧನೆ ಬಹುದೊಡ್ಡದು. ಆದರೆ, ಬೂಕರ್ ಪಡೆದ ಅನಂತರದಲ್ಲಿ ನಿಮ್ಮಲ್ಲಿ ಕಾಣತೊಡಗಿದ ಪರಮ ಔದಾರ್ಯದ ಅಭಿವ್ಯಕ್ತಿಯಲ್ಲಿ ಎಲ್ಲಿಯೂ ದೀಪ ಅವರ ಶ್ರಮಕ್ಕೆ ಬೆಲೆಯೂ ಕಾಣಲಿಲ್ಲ; ಗೌರವವೂ ಕಾಣಲಿಲ್ಲ!
10. ಬೂಕರ್ ಪ್ರಶಸ್ತಿಯ ಮೊತ್ತವನ್ನು ನಿಮಗೂ ಮತ್ತು ದೀಪಾ ಭಸ್ತಿ ಇಬ್ಬರಿಗೂ ಸಮನಾಗಿ ಪ್ರಶಸ್ತಿ ಫಲಕದೊಂದಿಗೆ ಹಂಚಿರುವಾಗ ಕೇವಲ ಬೂಕರ್ ಪ್ರಶಸ್ತಿ ಬಂದಿರುವುದಕ್ಕಾಗಿ ನಿಮ್ಮನ್ನು ಈ ಸರ್ಕಾರ ದಸರಾ ಉದ್ಘಾಟನೆಗೆ ಅಹ್ವಾನಿಸಿದರೆ ದೀಪಾ ಬಸ್ತಿಯವರಿಗೆ ಅಗೌರವ ತೋರಿದಂತಾಗುತ್ತದೆ ಅಂತ ನಿಮಗೆ ಅನಿಸಬೇಕಿತ್ತು. ಆದರೆ ನಿಮಗೆ ಅನಿಸಿಲ್ಲ! ಬಹು ಔದಾರ್ಯದ ಮಾತುಗಳನ್ನಾಡುವ ನೀವು ದೀಪಾ ಅವರೊಂದಿಗೆ ನಾನು ಉದ್ಭಾಟನೆ ಮಾಡುತ್ತೇನೆ ಎನ್ನಬಹುದಿತ್ತಲ್ಲವೆ? ಆ ಅವಕಾಶವನ್ನು ಕೈಚೆಲ್ಲಿ ಸ್ವಾರ್ಥವನ್ನು ಮೆರೆದುಬಿಟ್ಟೆ ಅಂತ ಅನಿಸಲಿಲ್ಲವೆ?
11. ದಸರಾ ಉದ್ಘಾಟನೆಯ ಆಹ್ವಾನ ಬಂದಾಗ ನಿಮಗೆ ಅರಿಶಿನ ಕುಂಕುಮ ಬಣ್ಣದ ಕನ್ನಡ ದೇವಿ ಮರೆತು ಒಮ್ಮೆಲೇ ನೀವು ಜಾತ್ಯತೀತರಾಗಿಬಿಟ್ಟಿರಿ. ಸರ್ಕಾರದ ಓಲೈಕೆ ರಾಜಕಾರಣದ ಅರಿವಿದ್ದೂ, ಆಹ್ವಾನದ ಹಿಂದಿನ ಕುಟಿಲತೆಯ ಅರಿವಿದ್ದೂ ನೀವೀಗ ಸನಾತನ ಹಿಂದೂಗಳ ಟೀಕೆಗಳನ್ನು ಎದುರಿಸುವಂತಾಗಿರುವುದು ನಿಮ್ಮಲ್ಲಿ ಅಸಹನೆಯ ಭಾವವನ್ನು ಹುಟ್ಟಿಸಲಿಲ್ಲವೆ?
12. ಹಳದಿ ಕೆಂಪು ಬಣ್ಣದ ತಾಯಿ ಭುವನೇಶ್ವರಿಯ ಕನ್ನಡ ನನ್ನಂತಹ ಅಲ್ಪಸಂಖ್ಯಾತರನ್ನು ಆರಂಭದಿಂದಲೂ ತುಳಿಯುತ್ತಲೇ ಬಂದಿರುವುದಕ್ಕೆ ನಾನೇ ಸಾಕ್ಷಿ. ಈಗ ಬೂಕರ್ ಪ್ರಶಸ್ತಿ ಬಂದಾಕ್ಷಣ ಅದೇ ಹಳದಿ ಕೆಂಪು ಬಣ್ಣದ ಕನ್ನಡವನ್ನು ನೀವು ಒಪ್ಪಿ ಅಪ್ಪಿಕೊಂಡಿರುವುದು ನಿಮ್ಮ ಧರ್ಮದ ಮೇಲೆ ನಿಮಗಿರುವ ನಿಷ್ಠೆಯ ಬಗ್ಗೆ ಅನುಮಾನವನ್ನು ಹುಟ್ಟಿಸುತ್ತದೆ ಅಂತ ಅನಿಸಲ್ಲವೆ?
13. ಅದೆಲ್ಲ ಇರಲಿ. ನಿಮ್ಮ ಕೃತಿ ಬೂಕರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾದಾಗ ನಿಮ್ಮ ಗೆಳತಿ ಹಾಗೂ ಲೇಖಕಿ ಮೈಸೂರಿನ ಮೀನಾ ಅವರು ನಿಮಗೆ ಬೂಕರ್ ಪ್ರಶಸ್ತಿ ಬರಲಿ ಎಂದು ಚಾಮುಂಡೇಶ್ವರಿಗೆ ಹರಕೆ ಹೊತ್ತಿದ್ದರಂತೆ. ಅನಿರೀಕ್ಷಿತವೋ ನಿರೀಕ್ಷಿತವೋ ಅಥವಾ ಮೀನಾ ಅವರ ಹರಕೆಯೋ ನಿಮಗೆ ಪ್ರಶಸ್ತಿ ಬಂದೇಬಿಟ್ಟಿದೆ. ಆಫ್ ಕೋರ್ಸ್ ಕನ್ನಡದ ಮಟ್ಟಿಗೆ ಇದು ಖುಷಿಯ ವಿಚಾರವೇ ಅಹುದು. ನೋ ಡೌಟ್. ಆದರೆ ಮೈಸೂರಿನಲ್ಲಿ ನಡೆದ ಲಿಟ್ ಫೆಸ್ಟಿವಲ್ ಗೆ ಬಂದಾಗ ಮೀನಾ ಅವರು, ಚಾಮುಂಡಿ ಬೆಟ್ಟಕ್ಕೆ ಹೋಗಿ ಹರಕೆ ತೀರಿಸೋಣ ಎಂದಾಗ ನಿಮಗೆ ಸಮಯ ಸಿಗಲಿಲ್ಲವೆ? ಆದರೆ ಈಗ ಅದೇ ಚಾಮುಂಡೇಶ್ವರಿ ತಾಯಿಯೇ ನನ್ನನ್ನು ಕರೆಸಿಕೊಳ್ಳುತ್ತಿದ್ದಾಳೆಂದು ಹರ್ಷವನ್ನು ನೀವು ವ್ಯಕ್ತಪಡಿಸುವುದಕ್ಕೆ ಏನರ್ಥ?
14. ಬೂಕರ್ ಅಂತಹ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದೀರಿ ಎಂದು ಇನ್ನು ಮುಂದೆ ನಿಮ್ಮ ಧರ್ಮದ ಪ್ರಾರ್ಥನಾ ಮಂದಿರಕ್ಕೆ ಹೋಗಲು ಅನುಮತಿ ನಿಮಗೆ ಸಿಗುತ್ತದೆಯೇ? ಅದರೆ ನಮ್ಮ ಸನಾತನ ಹಿಂದೂ ಧರ್ಮದ ತಾಯಿ ಚಾಮುಂಡೇಶ್ವರಿ ತಾಯಿಯ ದರ್ಶನಕ್ಕೆ ಯಾವುದೇ ಬೇಧ ಭಾವವಿಲ್ಲದೆ ಮುಕ್ತವಾದ ಅವಕಾಶವಿದೆ. ಇದು ಹಳದಿ ಕೆಂಪು ಬಣ್ಣದ ತಾಯಿ ಭುವನೇಶ್ವರಿಯ ಶಕ್ತಿ ಮತ್ತು ಮಹತ್ವ ಅಂತ ನಿಮಗೆ ಈಗಲಾದರೂ ಅರ್ಥವಾಗುತ್ತದೆಯೇ?
15. ಭಾಷೆ ಮತ್ತು ಧರ್ಮವನ್ನು ಯಾರೂ ಬೆರೆಸಲಾರರು. ಆಫ್ ಕೋರ್ಸ್ ಬೆರೆಸಲಾರರೇನೋ! ಆದರೆ ನಿಮಗೆ ಕಸ್ತೂರಿ ಕನ್ನಡವೂ ಅರಿಶಿನ ಕುಂಕುಮವಾಗುತ್ತದೆ. ಇಂಥ ಸಂಕುಚಿತ ಮನೋಭಾವನೆಯಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಮಾತು ನಿಮ್ಮ ಒಟ್ಟೂ ಅಭಿವ್ಯಕ್ತಿಯಲ್ಲಿ ಕೇವಲ ಬೂಟಾಟಿಕೆ ಅಂತ ಅನಿಸುವುದಿಲ್ಲವೆ?
16. ಬೂಕರ್ ಪ್ರಶಸ್ತಿ ಪಡೆದುದರಿಂದಾಗಿ ನೀವೀಗ ಬಹು ಔದಾರ್ಯವನ್ನು ಹೊಂದಿದ್ದೀರಿ ಎಂದು ಅನಿಸತೊಡಗಿದೆ. ಗಟ್ಟಿಯಾಗಿ ಬಿಚ್ಚು ಮನಸ್ಸಿನಿಂದ ಜೈ ಕನ್ನಡಾಂಬೆ, ಜೈ ಭುವನೇಶ್ವರಿ ದೇವಿ ಅಂತ ಹಣೆಗೆ ಸಿಂಧೂರವನ್ನು ಹಚ್ಚಿಕೊಂಡು ಉದ್ಘಾಟನೆ ಮಾಡುವಿರೆ? ಭಾರತ್ ಮಾತಾ ಕಿ ಜೈ,, ವಂದೇ ಮಾತರಂ ಅಂತ ರಾಜಾರೋಷವಾಗಿ ಹೇಳಿಬಿಡಿ. ಹಾಗೆ ಹೇಳುವ ಮೂಲಕ ನಿಮ್ಮ ಮತ-ಧರ್ಮ ನಿರಪೇಕ್ಷತೆಯನ್ನು ಜಗಜ್ಜಾಹೀರು ಮಾಡುವಿರೆ? ಷರಿಯಾಕ್ಕಿಂತ ಭಾರತದ ಸಂವಿಧಾನವೇ ನನಗೆ ಆತ್ಯಂತಿಕವಾದುದು ಅಂತ ಘಂಟಾಘೋಷವಾಗಿ ಸಾರಿ ಸಾರಿ ಹೇಳಿಬಿಡಿ ನೋಡೋಣ.
17. ನಿಮ್ಮ ಮೇಲಿನ ಆರೋಪಗಳು ಮುಖ್ಯವಾಗಿ ಕನ್ನಡಾಂಬೆಯ ಮೇಲೆ ನೀವು ಮಾಡಿದ ದೂಷಣೆಗಳ ಬಗ್ಗೆ, ಕನ್ನಡ ಸಂಸ್ಕೃತಿಯ ಬಗ್ಗೆ ಆಡಿದ ಅಪದ್ಧಗಳ ಬಗ್ಗೆ ಪ್ರತಿಕ್ರಿಯೆಯಾಗಿ ಹುಟ್ಟಿದ ಆರೋಪಗಳೇ ಹೊರತು ಯಾವುದೇ ಮತೀಯ ನಂಜಿನಿಂದಲ್ಲ. ಅಥವಾ ಆ ಭಾವದಿಂದಲೂ ಅಲ್ಲ. ಆಫ್ ಕೋರ್ಸ್ ಹಿಂದೂ ಧಾರ್ಮಿಕ ಉತ್ಸವದ ಚಾಲನೆಗೆ ನಾನು ಹೋಗಬೇಕೋ ಬೇಡವೋ ಅಂತ ತರ್ಕಿಸಿಕೊಳ್ಳಬೇಕಾದವರು ನೀವು.
18. ಅರಿಶಿನ, ಕುಂಕುಮವನ್ನು ಧಾರಣೆ ಮಾಡಿದ ಚಾಮುಂಡೇಶ್ವರಿಯ ನವವೈವಿಧ್ಯ ರೂಪಗಳನ್ನು ಆರಾಧಿಸುವ ದಸರಾವು ಹಿಂದೂ ಸನಾತನ ಸಂಸ್ಕೃತಿಯ ಅಪ್ರತಿಮ ಅನುಪಮವಾದ ಅನನ್ಯವಾದ ನಾಡಹಬ್ಬ ಎಂಬುದು ನಿಮಗೆ ಅರಿವಿಲ್ಲದೇನಲ್ಲ. ಈಗ ಸರ್ಕಾರ ನಿಮ್ಮನ್ನು ಆಹ್ವಾನಿಸಿದ್ದಕ್ಕೆ, ಚಾಮುಂಡೇಶ್ವರಿ ತಾಯಿ ನನ್ನನ್ನು ಕರೆಸಿಕೊಳ್ಳುತ್ತಿದ್ದಾಳೆ ಎಂದು ಹೇಳಿದ್ದರ ಮರ್ಮವೇನು? ಹಾಗಾದರೆ, ಚಾಮುಂಡೇಶ್ವರಿ ತಾಯಿ ಇಷ್ಟು ವರ್ಷಗಳ ಕಾಲ ನಿಮಗೆ ನೆನಪೇ ಆಗಲಿಲ್ಲವೆ? ಬೂಕರ್ ಪಡೆದ ಕಾರಣಕ್ಕೆ ಸರ್ಕಾರ ದಸರಾ ಆಹ್ವಾನ ನೀಡಿದಾಕ್ಷಣ ತಾಯಿ ಚಾಮುಂಡಿ ನೆನಪಾಗಿ ನಿಮ್ಮನ್ನು ಕರೆಸಿಕೊಂಡುಬಿಟ್ಟಳೆ? ಎಂಥಾ ಹಾಸ್ಯಾಸ್ಪದವಲ್ಲವೆ ಇದು?
19. ಅರಿಶಿನ ಕುಂಕುಮ ಧಾರಿಣಿ ನಾಡತಾಯಿ ಚಾಮುಂಡೇಶ್ವರಿಯ ವಿಗ್ರಹವನ್ನು ನೀವು ಶ್ರದ್ಧೆ ಮತ್ತು ಭಕ್ತಿಯಿಂದ ಹೂವು ಹಾಕಿ ಪೂಜಿಸುತ್ತೀರೆ? ನಿಮ್ಮ ಧರ್ಮ ಇದನ್ನೊಪ್ಪುತ್ತದೆಯೇ ? ಎಲ್ಲಕ್ಕಿಂತ ಮುಖ್ಯವಾಗಿ, ನೀವು ಆಂತರ್ಯದಲ್ಲಿ ಒಪ್ಪಿದ್ದೀರೆ? ಅಥವಾ ಸರ್ಕಾರದ ಮಟ್ಟದಲ್ಲಿ ಇದೊಂದು ದೊಡ್ದ ಗೌರವ ಅಂತ ಮಾತ್ರ ಒಪ್ಪಿಕೊಂಡಿದ್ದಿರಾ? ಪ್ರತಿಷ್ಠೆ ಬಿಟ್ಟು ಬೇರೆ ಏನಾದರೂ ಸಕಾರಣವಿದೆಯಾ?
20. ಕನ್ನಡ ಸಾಹಿತ್ಯದ ನಿತ್ಯೋತ್ಸವದ ಕವಿ ಕೆ.ಎಸ್.ನಿಸಾರ್ ಅಹಮ್ಮದ್ ಅವರಿಗೂ ನಿಮಗೂ ಭಾಷೆ ಮತ್ತು ಭಾವದಲ್ಲಿ ಆಕಾಶ ಭೂಮಿಯಷ್ಟು ಅಂತರವಿದೆ. ಕನ್ನಡ ಸಂಸ್ಕೃತಿಯ ಆರಾಧನೆಯಲ್ಲಿ ಕವಿ ಕೆ.ಎಸ್.ನಿಸಾರ್ ಅಹಮ್ಮದ್ ಅವರ ಭಾವ ಮತ್ತು ಭಕ್ತಿಯಲ್ಲಿ ಯಾವ ನ್ಯೂನತೆಯನ್ನು ಯಾರೂ ಕಾಣುವುದಕ್ಕೆ ಸಾಧ್ಯವೇ ಇಲ್ಲ. ಅವರು ಯಾವ ಸಂದರ್ಭದಲ್ಲೂ ತಾನೊಬ್ಬ ಮುಸ್ಲಿಂ ಎಂಬ ಪ್ಲೇ ಕಾರ್ಡನ್ನು ವಿನಿಯೋಗಿಸುವ ಸಾಹಸವನ್ನು ಎಂದಿಗೂ ಎಲ್ಲಿಯೂ ಮಾಡಲಿಲ್ಲ. ಯಾರನ್ನೂ ದೂಷಿಸಲಿಲ್ಲ. ಯಾರನ್ನೂ ಅವಮಾನಿಸಲಿಲ್ಲ ಎಂಬುದು ನಿಮಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಅದಕ್ಕಾಗಿ ಅವರು ದಸರಾ ಉದ್ಘಾಟನೆ ಮಾಡಿದಾಗ ಯಾವ ಆಕ್ಷೇಪ, ಖಂಡನೆಗಳು ಹುಟ್ಟಲಿಲ್ಲ. ಅಷ್ಟಕ್ಕೂ ಅವರೊಬ್ಬ ಮುಸ್ಲಿಂ ಸಮುದಾಯದ ಕವಿ ಅಂತ ಕನ್ನಡಿಗರಿಗೆ ಈ ಹೊತ್ತಿನವರೆಗೂ ಅನಿಸಿಯೇ ಇಲ್ಲವೆಂದರೂ ಅಚ್ಚರಿಯೇನಲ್ಲ!
21. ಭಾರತೀಯ ಪರಂಪರೆಯಲ್ಲಿ ಸಹಜವಾಗೇ ಇರುವ ಸೆಕ್ಯುಲರಿಸಂ ಬಗ್ಗೆ ನಿಮಗಿರುವ ಅರಿವಿನ ಬಗ್ಗೆ ಗೊಂದಲವಾಗಲು ಕಾರಣ ನಿಮ್ಮ ಹೇಳಿಕೆಗಳು. ಬಹುತ್ವದ ಸನಾತನ ಹಿಂದೂ ಪರಿಕಲ್ಪನೆಯಲ್ಲಿ ನಿಮ್ಮ ಏಕತ್ವದ ವಾದವನ್ನು ನೀವು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?
22. ನಿಮಗೆ, ನಿಮ್ಮಂಥ ಸ್ವಾತಂತ್ರ್ಯೋತ್ತರ ಭಾರತದ ರಿಲಿಜಿಯನ್ ಸೆಕ್ಯುಲರಿಸಂ ವಕ್ತಾರರು ಎನಿಸಿಕೊಂಡವರಿಗೆ ಎಲ್ಲ ಬಗೆಯ ಸರ್ಕಾರಿ ಗೌರವ, ಪದವಿ ಬೇಕು. ಕನ್ನಡ ಭಾಷೆ, ಸಾಹಿತ್ಯ ಬೇಕು. ಆದರೆ ಕನ್ನಡದ ನೆಲವನ್ನು ಭಾಷೆಯನ್ನು ತಾಯಿ ಎಂದು ದೈವೀ ಸ್ವರೂಪವನ್ನು ನೀಡಿ ಗೌರವಿಸುವುದು ಮಾತ್ರ ನಿಮಗೆ ಅಲರ್ಜಿಯಾಗುತ್ತದೆ. ಅಂದರೆ ನೆಲ, ಜಲ, ಭಾಷೆ, ನದಿ, ಪರ್ವತ, ಪಂಚಭೂತಗಳನ್ನು ಶತಶತಮಾನಗಳಿಂದ ದೈವೀ ಸ್ವರೂಪದಲ್ಲಿ ಭಾರತದಲ್ಲಿ ಕಾಣಲಾಗುತ್ತದೆಂಬ ಸಾಮಾನ್ಯ ಜ್ಞಾನವೂ ನಿಮಗಿಲ್ಲವೆ ಎಂಬ ಸಂದೇಹ ಬರುತ್ತಿದೆ…! ಹೀಗಿರುವಾಗ ನೀವು ರಕ್ಕಸರ ರಕ್ಕಸ ದುಷ್ಟ ಮಹಿಷನನ್ನು ಸಂಹರಿಸಿದ ಚಾಮುಂಡಿದೇವಿಯ ನವವೈವಿಧ್ಯವನ್ನು ಆರಾಧಿಸುವ ಹಿಂದೂ ಸನಾತನ ಧರ್ಮದ ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನೆಯನ್ನು ಯಾವ ಮನಃಸ್ಥಿತಿಯಲ್ಲಿ ಮಾಡುತ್ತೀರಿ? ಸಂದೇಹ ಬರುವುದಿಲ್ಲವೆ?
23. ಬೂಕರ್ ಪ್ರಶಸ್ತಿ ಪಡೆದ ಮಾತ್ರಕ್ಕೆ ದಸರಾ ಉದ್ಘಾಟನೆಗೆ ನಿಮ್ಮನ್ನು ಆಹ್ವಾನಿಸಲಾಗಿದೆ ಎಂದು ನೀವು ಭಾವಿಸುತ್ತೀರಾ? ನೋ ವೇ. ಅದೊಂದೇ ಮಾನದಂಡ ಅಂಥ ಸರ್ಕಾರ ಗುರುತಿಸುವುದು ಅದೆಷ್ಟರ ಮಟ್ಟಿಗೆ ಸಮರ್ಥನೀಯ ಅಂತ ನಿಮಗೆ ಅನಿಸಿಲ್ಲವೆ? ಕನ್ನಡ ನಾಡು ಮಾತ್ರವಲ್ಲ, ದೇಶವೇ ಗುರುತಿಸಿದ ಹಿರಿಯರಿದ್ದಾರೆ. ಬದುಕಿನುದ್ದಕ್ಕೂ ಕನ್ನಡ ಸೇವೆ ಮಾಡಿದ 92 ವರ್ಷ ಪ್ರಾಯದ ವಿದ್ವದ್ಮಣಿ ಮೈಸೂರಿನ ಡಾ. ಟಿ.ವಿ.ವೆಂಕಟಾಚಲಶಾಸ್ತ್ರಿ, 87 ವರ್ಷ ಪ್ರಾಯದ ಹಿರಿಯ ವಿದ್ವಾಂಸ ನಾಡೋಜ ಎಸ್.ಆರ್.ರಾಮಸ್ವಾಮಿ, ಪದ್ಮಭೂಷಣ, ಪದ್ಮವಿಭೂಷಣ ಪುರಸ್ಕೃತ ಅಂತಾರಾಷ್ಟ್ರೀಯ ಖ್ಯಾತಿಯ ವೈದ್ಯ ಡಾ.ಬಿ.ಎಂ. ಹೆಗ್ಡೆಯವರಿದ್ದಾರೆ. ಇವರೆಲ್ಲರ ಅರ್ಹತೆ ಯಾವ ಮಾನದಂಡಕ್ಕೂ ಸಿಗದೆ ಇದ್ದುದು ಅನುಮಾನ ಹುಟ್ಟದೆ ನಿಮಗೆ?
ಕೊನೆಯ ಮಾತು:
ಯಾವ ಸಂದರ್ಭದಲ್ಲೂ ದಸರಾ ಮಹೋತ್ಸವದ ಉದ್ಘಾಟನೆಯ ಕುರಿತಾಗಿ ಇಷ್ಟೊಂದು ಖಂಡನೆ, ವಿರೋಧಗಳು ಹುಟ್ಟಿಲ್ಲ ಅಂತನಿಸುತ್ತದೆ. ಆದರೆ ಈ ವರ್ಷ ತಿಂಗಳ ಹಿಂದೆಯೇ ವಿರೋಧದ ಅಲೆಯೆದ್ದಿದೆ. ಸಂಸದ ಪ್ರತಾಪಸಿಂಹ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇಷ್ಟೆಲ್ಲ ವೈರುದ್ಧ್ಯಗಳ ನಡುವೆ ನೀವು ದಸರಾ ಮಹೋತ್ಸವದ ಉದ್ಘಾಟನೆಯನ್ನು ಮಾಡಿ ಅದೇನನ್ನೋ ಸಾಧಿಸಿದಂತಾಗುತ್ತದೆ ಅಂತ ಆ ಚಾಮುಂಡಿ ತಾಯಿ ನಿಮಗೆ ಹೇಳಿರಬೇಕು. ಯಾಕೆಂದರೆ, ಚಾಮುಂಡೇಶ್ವರಿ ತಾಯಿಯೇ ನನ್ನನ್ನು ಕರೆಸಿಕೊಳ್ಳುತ್ತಿದ್ದಾಳೆಂದು ಅಂತ ನೀವೇ ಹೇಳಿಕೊಂಡಿದ್ದೀರಿ. ಅಂತೂ ಬಹುಸಂಖ್ಯಾತ ಹಿಂದೂಗಳ ಆರಾಧ್ಯದೈವ ನಾಡದೇವತೆ ಚಾಮುಂಡೇಶ್ವರಿಯ ಆರಾಧನೆಯನ್ನು ನೀವು ಮಾಡಲು ಉತ್ಸುಕರಾಗಿದ್ದೀರಿ. ಯಾರಿಗೆ ನೋವಾದರೂ, ಯಾರೂ ವಿರೋಧಿಸಿದರೂ, ಯಾರೂ ಏನೇ ಮಾಡಿದರೂ ನಿಮಗೀಗ ಕನ್ನಡ ಭಾಷೆ, ಭುವನೇಶ್ವರಿ ದೇವಿ, ಮಂದಾಸನ, ಅರಿಶಿನ ಕುಂಕುಮ, ನಿಮ್ಮ ಮತ– ಇದ್ಯಾವುದೂ ಅಡ್ಡಿ ಆತಂಕವನ್ನು ಹುಟ್ಟಿಸುತ್ತಿಲ್ಲ!
ಎಲ್ಲಿ ಸ್ತ್ರೀಯರಿಗೆ ಗೌರವ ಸನ್ಮಾನಗಳು ದೊರೆಯುತ್ತವೆಯೋ ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


