ಗೌರವಾನ್ವಿತರಾದ ಡಾ. ಎಲ್.ಎಸ್. ಭೈರಪ್ಪನವರ ಅಗಲಿಯಿಂದ ಕನ್ನಡ ಸಾಹಿತ್ಯ ಲೋಕ ಮಾತ್ರವಲ್ಲ ಸಮಸ್ತ ಸಾಹಿತ್ಯಲೋಕವೂ ಬಡವಾಗಿದೆ. ಅವರ ಸಾಧನೆಗೆಣೆಯಿಲ್ಲ. ಅವರು ಹೊಗಳಿಕೆಗೆ ಉಬ್ಬದ ಮೇರು ಸಾಧಕ ತಪಸ್ವಿ. "ಸಾಗರೋ ಸಾಗರೋಪಮ" ಎಂಬಂತೆ ಭೈರಪ್ಪನವರಿಗೆ ಭೈರಪ್ಪನವರೇ ಸಾಟಿ!
ನಾನು ಎರಡು ಬಾರಿ ಅವರನ್ನು ಭೇಟಿ ಮಾಡಿ ಮಾತಾಡಿದ್ದೆ. ಡಾ|ಭೈರಪ್ಪನವರ ಆತ್ಮೀಯ ಮಿತ್ರರಾಗಿದ್ದ ದಿ|ಎಂ.ಎಸ್. ವೆಂಕಟರಾಮಯ್ಯನವರು ನನಗೂ ಆತ್ಮೀಯ ಮಿತ್ರರು. ಎಂ.ಎಸ್.ವಿ. ಅವರ ಮಗನ ಮದುವೆಗೆ ಭೈರಪ್ಪನವರು ಬಂದಿದ್ದರು. ಅಲ್ಲಿ ಎಂ.ಎಸ್.ವಿ.ಅವರು ಭೈರಪ್ಪನವರಿಗೆ ನನ್ನ ಪರಿಚಯ ಮಾಡಿದರು. ಭೈರಪ್ಪನವರು ಸುಮಾರು ಒಂದು ಗಂಟೆಯ ಕಾಲ ನನ್ನೊಡನೆ ಸಾಹಿತ್ಯದ ಕುರಿತು ಆತ್ಮೀಯವಾಗಿ ಮಾತನಾಡಿದರು.
ಕಾಸರಗೋಡಿನ ಕನ್ನಡದ ಬಗ್ಗೆ ಬಹಳಷ್ಟು ವಿಚಾರಿಸಿದರು. ಪ್ರೋತ್ಸಾಹದ ಮಾತುಗಳನ್ನಾಡಿದರು. ನನ್ನ ಮನೆಗೂ ನಾನು ಅವರನ್ನು ಆಹ್ವಾನಿಸಿದ್ದೆ. ಮಿತ್ರರಾದ ಎಂ.ಎಸ್.ವಿ.ಅವರ ಜತೆಯಲ್ಲಿ ಬರಲು ಪ್ರಯತ್ನಿಸುವೆನೆಂದೂ ಹೇಳಿದ್ದರು. ನಾನೂ ಅವರ ನಿರೀಕ್ಷೆಯಲ್ಲಿದ್ದೆ. ಆದರೆ ಎಂ.ಎಸ್.ವಿ. ಅವರು ಅಲ್ಪಕಾಲದ ಅಸೌಖ್ಯದಿಂದ ತೀರಿಕೊಂಡ ಕಾರಣ ನನ್ನ ನಿರೀಕ್ಷೆ ಈಡೇರಲಿಲ್ಲ! ಆದರೂ ನನಗೆ ಭೈರಪ್ಪನವರಂತಹ ಮಹಾನ್ ವ್ಯಕ್ತಿಗಳ ಒಡನಾಟವನ್ನು ಎಂ.ಎಸ್.ವಿ. ಅವರು ದೊರಕಿಸಿಕೊಟ್ಟದ್ದೇ ನನ್ನ ಭಾಗ್ಯ. ಎರಡು ಬಾರಿ ಭೇಟಿಯಾಗುವ ಭಾಗ್ಯ ನನಗೆ ದೊರಕಿತ್ತು.
ಅನಂತರ ನಾನು ಹವಿ-ಸವಿ ಕೋಶ ಎಂಬ ಪ್ರಪ್ರಥಮ ಹವ್ಯಕ- ಕನ್ನಡ ಬೃಹತ್ ನಿಘಂಟನ್ನು ರಚಿಸಿದಾಗ ಭೈರಪ್ಪನವರು ನನಗೆ ಕರೆ ಮಾಡಿ ಅಭಿನಂದನೆಗಳನ್ನು ಹೇಳಿದ್ದರು.
ಅವರೊಂದು ತುಂಬಿದ ಕೊಡ. ಅವರ ಒಡನಾಟದ ದಿವ್ಯ ನೆನಪು ಮಾತ್ರ ಶಾಶ್ವತ. ನಿಘಂಟುತಜ್ಞ ಶತಾಯುಷಿ ದಿ| ಪ್ರೊ| ವೆಂಕಟಸುಬ್ಬಯ್ಯನವರೂ ಆಗಲೇ ನನ್ನ ನಿಘಂಟಿನ ಬಗ್ಗೆ ಮೆಚ್ಚಿಕೊಂಡು ಆಶೀರ್ವದಿಸಿದ್ದರು. ಭೈರಪ್ಪನವರಂತಹ ಸಮರ್ಥ ಧೈರ್ಯಶಾಲಿ ಲೇಖಕರು ಇನ್ನು ಯಾರಿದ್ದಾರೆ!? "ಕಾಯವಳಿದರೂ ಕೀರ್ತಿ ಉಳಿಯುವುದು". ಅವರ ದಿವ್ಯಾತ್ಮಕ್ಕೆ ಶ್ರೀ ಮಹಾವಿಷ್ಣು ಸಾಯುಜ್ಯ ಪ್ರಾಪ್ತವಾಗಲಿ. ಓಂ ಶಾಂತಿಃ
- ವಿ.ಬಿ. ಕುಳಮರ್ವ, ಕುಂಬ್ಳೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ