ಗೋಕರ್ಣ: ಕನ್ನಡ ತೋಟದಲ್ಲಿ ಬೆಳೆದ ಅನ್ಯಭಾಷಾ ಪದಗಳೆಂಬ ಕಳೆಗಳನ್ನು ಕಿತ್ತು ಹಾಕುವ ಸಂಕಲ್ಪ ತೊಡುವಂತೆ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 43ನೇ ದಿನವಾದ ಗುರುವಾರ ಕಬಕ, ಉಜಿರೆ, ಉರುವಾಲು, ವೇಣೂರು, ಉಪ್ಪಿನಂಗಡಿ ಮತ್ತು ಮಾಣಿ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.
ನಮ್ಮ ಭಾಷೆ ಇಟ್ಟುಕೊಳ್ಳೋಣ; ತಲೆತಲಾಂತರದಿಂದ ಬಂದ ಈ ಮಣ್ಣಿನ ಸೊಗಡು ಇರುವ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಳ್ಳೋಣ. ಅನಿವಾರ್ಯವಾಗಿ ಇತರ ಭಾಷೆ ಮಾತನಾಡಬೇಕಾದರೆ ಮಾತನಾಡೋಣ; ಆದರೆ ಕನ್ನಡ ಮಾತನಾಡುವಾಗ ಶುದ್ಧತೆ ಕಾಪಾಡಿಕೊಳ್ಳೋಣ. ಸ್ವಭಾಷೆ ಬಗ್ಗೆ ಕೀಳರಿಮೆ, ತಾತ್ಸಾರ ಸಲ್ಲದು ಎಂದು ಸ್ಪಷ್ಟಪಡಿಸಿದರು.
ಜೀವನದಲ್ಲಿ ಇಟ್ಟುಕೊಳ್ಳುವಂಥದ್ದು ಬಹಳಷ್ಟಿವೆ; ಅವುಗಳನ್ನು ಕಳೆದುಕೊಳ್ಳಬಾರದು. ಒಳ್ಳೆಯ ಬಹಳಷ್ಟು ಅಂಶಗಳನ್ನು ನಾವು ಕಳೆದುಕೊಂಡಿದ್ದೇವೆ. ಬೆಳೆಯಲ್ಲಿ ಕಳೆ ಸೇರಿರುವಂತೆ ಕನ್ನಡದಲ್ಲಿ ಸೇರಿದ ಆಂಗ್ಲಪದಗಳೆಂಬ ಕಳೆಗಳನ್ನು ಕಿತ್ತೆಸೆದರೆ ಮಾತ್ರ ಭಾಷೆ ಉಳಿಯುತ್ತದೆ ಎಂದರು.
ನಮ್ಮದಲ್ಲದ್ದನ್ನು ಬಿಡಬೇಕು; ನಮ್ಮ ಭಾಷೆಯಲ್ಲಿ ತುಂಬಿರುವ ನಮ್ಮದಲ್ಲದ ಶಬ್ದಗಳನ್ನು ಬಿಡುವಂತೆ ಸೂಚಿಸಲಾಗುತ್ತಿದೆ. ದಿನಬಳಕೆಯ ಶಬ್ದಗಳನ್ನು, ಜೀವನದಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿರುವ ಆಂಗ್ಲ ಪದಗಳನ್ನು ಬಿಡಿ ಎಂದು ಕರೆ ನೀಡಿದರು. ದಿನಕ್ಕೊಂದು ಆಂಗ್ಲಪದ ತ್ಯಜಿಸುವ ಅಭಿಯಾನದಲ್ಲಿ, 'ಸೇವ್' ಪದ ಬಿಡುವಂತೆ ಕರೆ ನೀಡಿದರು. ಚರವಾಣಿ ಬಳಕೆಯಲ್ಲಿ 'ಸೇವ್' ಎಂಬ ಪದ ವ್ಯಾಪಕವಾಗಿ ಚಾಲ್ತಿಯಲ್ಲಿದೆ. ಉಳಿಸು ಎಂಬ ಪದವನ್ನು ನಾವು ಬಳಸುತ್ತಿಲ್ಲ. ಇಟ್ಟುಕೊ, ಕಾಪಿಟ್ಟುಕೊ, ಸಂಸ್ಕೃತದ ಗೋಪನ ಮಾಡು ಎಂಬ ಪದಗಳನ್ನು ಬಳಸಬಹುದು ಎಂದು ಸಲಹೆ ಮಾಡಿದರು.
ಉಪ್ಪಿನಂಗಡಿ ಮಂಡಲದ ಶಿಷ್ಯರನ್ನು ಉದ್ದೇಶಿಸಿ, ಮಂಡಲ ಎಂದರೆ ವೃತ್ತ ಎಂಬ ಅರ್ಥ. ನಮ್ಮ ಸಂಘಟನೆಯ ವ್ಯವಸ್ಥೆಯಡಿ ಗುರು ಮತ್ತು ರಾಮನ ಪರಿದಿಯಲ್ಲಿರುವ ಶಿಷ್ಯವರ್ಗದ ಸಮೂಹ ಒಂದು ಮಂಡಲ. ಪೀಠದ ಪ್ರಭಾವಲಯ ಇಡೀ ಶಿಷ್ಯರ ಬದುಕಿಗೆ ಬೆಳಕು ನೀಡುವಂಥದ್ದು. ಶಿಷ್ಯ ಸಮೂಹವನ್ನು ಆ ವಿಶೇಷ ಶಕ್ತಿ ಹಿಡಿದಿಟ್ಟುಕೊಂಡಿದೆ. ಶಿಷ್ಯರೆಲ್ಲರೂ ಈ ಮಂಡಲದೊಳಗೆ ಬರಬೇಕು ಎಂದು ಸೂಚಿಸಿದರು.
ವೈಯಕ್ತಿಕ, ಸಂಘಟನಾತ್ಮಕ ಮತ್ತು ಆಧ್ಯಾತ್ಮಿಕವಾಗಿ ಸಂಘಟನೆಯಿಂದ ಹಲವು ಪ್ರಯೋಜನಗಳಿವೆ. ಗುರುಮಂಡಲ ಇಡೀ ಸಮಾಜಕ್ಕೆ ಮಾರ್ಗದರ್ಶನ ನೀಡಿ ಮುನ್ನಡೆಸುತ್ತಿದೆ. ಈ ಮಂಡಲದಿಂದ ಯಾರೂ ಹೊರಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಘಟನೆಯ ಮೇಲಿದೆ ಎಂದರು.
ಸಮಾಜದ ಭವಿಷ್ಯತ್ತನ್ನು ಗಮನದಲ್ಲಿಟ್ಟುಕೊಂಡು ಸಮಾಜ ಬೆಳೆಯಲು, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಶ್ರಮಿಸಿ ಎಂದು ಕರೆ ನೀಡಿದರು. ಮಹಾವಿಷ್ಣುವಿನ ಸ್ವರೂಪದಂತಿರುವ ಗುರುವಿಗೆ ತುಳಸಿ ಅರ್ಚನೆ ನಡೆದಂತೆ, ಗುರುಪೀಠಕ್ಕೆ ಒಂದೊಂದು ತುಳಸಿದಳದಂತೆ ಕಾರ್ಯಕರ್ತರು ಸಮರ್ಪಿಸಿಕೊಳ್ಳಬೇಕು ಎಂದು ಆಶಿಸಿದರು.
ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಮಾತೃಪ್ರಧಾನೆ ದೇವಿಕಾ ಶಾಸ್ತ್ರಿ, ಉಪ್ಪಿನಂಗಡಿ ಮಂಡಲ ನಿಕಟಪೂರ್ವ ಅಧ್ಯಕ್ಷ ಈಶ್ವರಪ್ರಸನ್ನ ಪೆರ್ನೆಕೋಡಿ, ಅಧ್ಯಕ್ಷ ಅರವಿಂದ ಧರ್ಬೆ, ಕಾರ್ಯದರ್ಶಿ ಮಹೇಶ್ ಕುದುಪುಲ, ಚಾತುರ್ಮಾಸ ತಂಡದ ಸಂಯೋಜಕ ಮಂಜುನಾಥ ಸುವರ್ಣಗದ್ದೆ, ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ನಾಯ್ಕ, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜೆ.ಪ್ರಸನ್ನ ಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಅಭಿಯಂತರ ವಿಷ್ಣು ಬನಾರಿ, ಚಾತುರ್ಮಾಸ್ಯ ತಂಡದ ಶ್ರೀಕಾಂತ ಪಂಡಿತ, ರಾಘವೇಂದ್ರ, ಅಜಿತ ಗುಡ್ಗೆ, ಅರುಣ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಗುರುಪರಂಪರಾ ಪ್ರೀತ್ಯರ್ಥ ಲಕ್ಷ ತುಳಸಿ ಅರ್ಚನೆ ಮತ್ತು ಚತುಃಸಂಹಿತಾ ಯಾಗ, ರಾಜರಾಜೇಶ್ವರಿ ಹವನ ನೆರವೇರಿತು. ನಮ್ಮ ಮನೆ ಹವ್ಯಕ ಭವನ, ಶ್ರೀಭಾರತಿ ವಿದ್ಯಾಪೀಠ ಉರುವಾಲು, ರಾಮಚಂದ್ರಾಪುರ ಮಠ ಮಾಣಿ ವತಿಯಿಂದ ಪಾದುಕಾ ಪೂಜೆ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

