ಈ ಬಾರಿ ಶೇ.50 ಕ್ಕಿಂತ ಅಧಿಕ ಪ್ರಮಾಣದ ಅಡಿಕೆ ಕೊಳೆರೋಗದಿಂದ ಹಾನಿ

Chandrashekhara Kulamarva
0

ಅಡಿಕೆ ಕೊಳೆರೋಗ ವ್ಯಾಪಕವಾಗಿದೆ | ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸಮೀಕ್ಷೆ |  ಸೂಕ್ತ ಪರಿಹಾರಕ್ಕೆ ಒತ್ತಾಯ



ಪುತ್ತೂರು: ಈ ಬಾರಿಯ ಮಳೆಯ ಕಾರಣದಿಂದ ಅಡಿಕೆ ಕೊಳೆರೋಗ ವ್ಯಾಪಕವಾಗಿದೆ. ಆದರೆ ಎಷ್ಟು ನಷ್ಟವಾಗಿದೆ ಹಾಗೂ ಅಡಿಕೆ ಹಾನಿಗೆ ಕಾರಣವೇನು ಎಂಬುದರ ಬಗ್ಗೆ "ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ" ವು ಕೊಳೆರೋಗದ ಸಮೀಕ್ಷೆ ಆನ್‌ಲೈನ್‌ ಮೂಲಕ ನಡೆಸಿತ್ತು. ಈ ವರದಿಯ ಪ್ರಕಾರ ರಾಜ್ಯದಲ್ಲಿ ಅಡಿಕೆ ಬೆಳೆಗಾರರಿಗೆ ಈ ಬಾರಿ ಶೇ.50 ಕ್ಕಿಂತ ಅಧಿಕ ಪ್ರಮಾಣದಲ್ಲಿ ಅಡಿಕೆ ನಷ್ಟವಾಗಿದೆ. ಹೀಗಾಗಿ ಸರ್ಕಾರವು ಈ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಒತ್ತಾಯಿಸಿದೆ.


ಸಮೀಕ್ಷೆಯಲ್ಲಿ ರಾಜ್ಯದ ಅಡಿಕೆ ಬೆಳೆಯುವ ಪ್ರದೇಶಗಳಿಂದ ಕೃಷಿಕರು ಭಾಗವಹಿಸಿದ್ದರು. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು, ದಾವಣಗೆರೆ, ತುಮಕೂರು,ಕೊಡಗು ಹಾಗೂ ಕಾಸರಗೋಡು ಜಿಲ್ಲೆಯ ಕೃಷಿಕರು ಕೊಳೆರೋಗದ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟು 503 ಕೃಷಿಕರ ಪ್ರತಿಕ್ರಿಯೆ ಲಭ್ಯವಾಗಿದೆ. ಕೃಷಿಕರು ನೀಡಿದ ಮಾಹಿತಿ ಪ್ರಕಾರ, ಶೇ.95 ಕೃಷಿಕರ ಅಡಿಕೆ ತೋಟದಲ್ಲಿ ಕೊಳೆರೋಗ ಕಂಡು ಬಂದಿದ್ದು ಶೇ. 50 ಕ್ಕಿಂತ ಅಧಿಕ ಪ್ರಮಾಣದಲ್ಲಿ ಅಡಿಕೆ ನಷ್ಟವಾಗಿದೆ. ಮಳೆಯ ಕಾರಣದಿಂದಲೇ ಶೇ.84 ರಷ್ಟು ಕೃಷಿಕರಿಗೆ ಔಷಧಿ ಸಿಂಪಡಣೆ ಸಾಧ್ಯವಾಗಿಲ್ಲ.  ಶೇ.47 ರಷ್ಟು ಕೃಷಿಕರಿಗೆ ಒಂದು ಬಾರಿ ಕೊಳೆರೋಗ ಮುಂಜಾಗ್ರತಾ ಕ್ರಮವಾಗಿ ಔಷಧಿ ಸಿಂಪಡಣೆ ಸಾಧ್ಯವಾಗಿದೆ. ಶೇ.40 ರಷ್ಟು ಕೃಷಿಕರಿಗೆ ಮಾತ್ರಾ ಎರಡು ಬಾರಿ ಔಷಧಿ ಸಿಂಪಡಣೆ ಆಗಿದೆ.


ಬಹುತೇಕ ಕೃಷಿಕರು ಕೊಳೆರೋಗ ನಿಯಂತ್ರಣಕ್ಕೆ ಬೋರ್ಡೋ ಸಿಂಪಡಣೆ ಮಾಡಿದ್ದಾರೆ.ಹಾಗಿದ್ದರೂ ಶೇ.30 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿನ ಕೃಷಿಕರಿಗೆ ಅಡಿಕೆ ನಷ್ಟವಾಗಿದೆ.  ಕೊಳೆರೋಗ ನಿಯಂತ್ರಣಕ್ಕೆ ಕೃಷಿಕರು ಇನ್ನಿಲ್ಲದ ಪ್ರಯತ್ನ ಮಾಡಿದ್ದಾರೆ. ಶೇ.20 ರಷ್ಟು ಕೃಷಿಕರು ಬೋರ್ಡೋ ಜೊತೆ ಈ ಬಾರಿ ಮೆಟಲಾಕ್ಸಿಲ್‌ ಸಿಂಪಡಣೆ ಮಾಡಿದ್ದಾರೆ.  ಈ ಬಾರಿ ಬೇಸಗೆಯಲ್ಲಿ ಶೇ.49 ರಷ್ಟು ಮಂದಿ ಅಡಿಕೆ ನಳ್ಳಿಗೆ ಔಷಧಿ ಸಿಂಪಡಣೆ ಮಾಡಿದ್ದಾರೆ. ಅಂತಹವರ ತೋಟದಲ್ಲಿ ಕೂಡಾ ಕೊಳೆರೋಗ ಬಾಧಿಸಿದೆ. ಅಚ್ಚರಿ ಎಂದರೆ ಶೇ.59 ರಷ್ಟು ಕೃಷಿಕರು ತೋಟಗಾರಿಕಾ ಇಲಾಖೆಯ ಮಾಹಿತಿ ಸರಿಯಾಗಿ ಲಭ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.


ಇಡೀ ಸಮೀಕ್ಷೆಯನ್ನು ಗಮನಿಸಿದಾಗ, ಅಡಿಕೆ ಬೆಳೆಗಾರರಿಗೆ ಈ ಬಾರಿ ಒಟ್ಟಾಗಿ ಶೇ.50 ಕ್ಕಿಂತ ಅಧಿಕ ಪ್ರಮಾಣದಲ್ಲಿ ಕೊಳೆರೋಗದಿಂದ ನಷ್ಟವಾಗಿದೆ. ಬೇರೆ ಯಾವುದೇ ನೆರವು ಸದ್ಯ ಅಡಿಕೆ ಬೆಳೆಗಾರರಿಗೆ ಇಲ್ಲದೇ ಇರುವುದರಿಂದ ತಕ್ಷಣವೇ ಸರ್ಕಾರವು ಈ ಬಗ್ಗೆ ಗಮನಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಅಡಿಕೆ ಬೆಳೆಗಾರರ ಹಿತ ಕಾಪಾಡಲು ದಕ್ಷಿಣ ಕನ್ನಡ ಹಾಗೂ ಅಡಿಕೆ ಬೆಳೆಯುವ ಪ್ರದೇಶದ ಶಾಸಕರು, ಸಂಸದರು ಅಡಿಕೆ ಬೆಳೆಗಾರರ ಧ್ವನಿಯಾಗಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಒತ್ತಾಯಿಸಿದೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top