ವಾಸ್ತವ: ಅಪ್ಪನ ಸಾಲ- ತೀರದ ಋಣ

Chandrashekhara Kulamarva
0


ಗು ಜನಿಸಿದ ಕ್ಷಣದಲ್ಲೇ ಹುಟ್ಟಿದ ಪಾತ್ರ ಅಪ್ಪ. ಆದರೆ, ಅಮ್ಮನ ಪಾತ್ರಕ್ಕೆ ಹುಟ್ಟಿಲ್ಲ. ಅಮ್ಮ ಮಗುವನ್ನು ಹೊತ್ತರೂ, ಹೆತ್ತರೂ, ಹೊರದಿದ್ದರೂ, ಹೆರದಿದ್ದರೂ ಅವಳಿಗೆ ಅಮ್ಮನ ಗುಣ ಇದ್ದೇ ಇರುತ್ತದೆ. ಇದು ಒಂದು ಹೆಣ್ಣಿಗೆ ದೈವ ಮತ್ತು ಪ್ರಕೃತಿದತ್ತವಾಗಿ ಬರುವ ಬಳುವಳಿ ಎನ್ನುವುದು ನನ್ನ ಅಭಿಪ್ರಾಯ. ಹುಟ್ಟಿದ ಮಗುವಿನ ಆರೈಕೆ ಅಮ್ಮನಿಗೆ ಇದೆ. ಬೆಳೆಸುವ ಜವಾಬ್ದಾರಿ ಅಪ್ಪಂದು. ಬೇಕಷ್ಟು ಹಣ ಗಳಿಸಿ ಮದುವೆ ಮಾಡಿಕೊಳ್ಳುವುದು, ಮಕ್ಕಳ ಪಡೆಯುವುದು ಇತ್ತೀಚಿನ ಟ್ರೆಂಡ್ ಆದರೂ, ಕಾಲಕಾಲಕ್ಕೆ ಏನೇನು ಆಗಬೇಕು, ಅದು ಆದರೇನೆ ಚೆನ್ನ, ಇದು ಪದ್ಧತಿ ಎಂದು ನಂಬಿ, ನಂಬಿಸಿರುವ, ನಂಬುತ್ತಿರುವವರ ಸಂಖ್ಯೆ ಬಹಳಷ್ಟಿದೆ. ಇದಕ್ಕೆ, ಧರ್ಮ, ಜಾತಿ, ವೃತ್ತಿ ಅಡ್ಡ ಬರಲಾರದು ಎಂಬುದು ಅಷ್ಟೇ ಸತ್ಯ. ಇದಕ್ಕೊಳಗಾಗಿ ಬದುಕು ಕಟ್ಟುವ ಹೋರಾಟಕ್ಕೆ ನಿಲ್ಲುವವನು ಅಪ್ಪ. ಪಿತ್ರಾರ್ಜಿತ ಆಸ್ತಿ ಇಲ್ಲದ ಎಷ್ಟೋ ತಂದೆಗೆ ಸಂಸಾರ ಕಟ್ಟುವ ಕೆಲಸ ಒಂದು ತಪಸ್ಸೇ ಸರಿ. 


ಸಮಾಜದೊಳಗೆ ಸರಿಸಮವಾಗಿ ಬಾಳುವ ಆಸೆ ಅಪ್ಪನದು. ಅದಾಗದಿದ್ದರೆ ಉಳಿದವರಿಗೆ ಕಮ್ಮಿಯೇನಿಲ್ಲ ಎಂದು ತೋರಿಸಿಕೊಳ್ಳುವ ಹಠ ಈ ಅಪ್ಪನಿಗೆ ಹೆಚ್ಚು. ಉಳ್ಳವರು ಹುಟ್ಟು ಹಬ್ಬಕ್ಕೆ ಕತ್ತರಿಸುವ ಕೇಕ್ 10 ಕೇಜಿಯದಾದರೆ, ಒಂದು ಪೀಸ್ ಹನಿ ಕೇಕ್ ಕತ್ತರಿಸಿ, ಗೆಲ್ಲುವ ಅಪ್ಪನಿಗೆ ಮಗನ ಖುಷಿ ತೂಗಲಾರದ ಸಂಪತ್ತಾಗಿರುತ್ತದೆ. ಹುಟ್ಟು ಹಬ್ಬಕ್ಕಾಗಲಿ, ಇತರೆ ಹಬ್ಬಕ್ಕಾಗಲಿ ತರುವ ಬಟ್ಟೆಗೆ ಮಾಡಿದ ಸಣ್ಣ ಸಾಲದಿಂದ ಪ್ರಾರಂಭಿಸಿ, ತನಗರಿವಿಲ್ಲದೇ ಸಮಾಜದೆದುರು ಬೆತ್ತಲಾಗುವಷ್ಟು ಬೃಹತ್ ಸಾಲಗಾರನಾಗಿ ಅಪ್ಪ ಬೆಳೆಯುತ್ತಾನೆ. ಅವಶ್ಯಕತೆಗೆ ತಕ್ಕಂತೆ ಬದುಕಲು ಮನಸ್ಸು ಹೇಳಿದರೂ, ತನಗೆ ಮತ್ತು ತನ್ನವರಿಗೆ ಉಳ್ಳವರು ಪಡುವ ಸುಖವನ್ನು ಗಳಿಸಿಕೊಡುವ ಹೋರಾಟದಲ್ಲಿ ಸಾಲದ ಶೂಲಕ್ಕೆ ಬೀಳುವುದು ಅಪ್ಪನಿಗೆ ಗೊತ್ತೇ ಆಗುವುದಿಲ್ಲ. ಸಾಲ ಕೊಡುವ ಜನ, ಜಾಗವನ್ನು ಪತ್ತೆಮಾಡುವಲ್ಲಿ ಅಪ್ಪ ಸಂಶೋಧಕನಿಗೂ ಮೀರಿದ ನಿಪುಣನಾಗಿರುತ್ತಾನೆ. ಅಷ್ಟೇ ಅಲ್ಲ ಸಾಲಗಾರನಿಂದ ತಪ್ಪಿಸಿಕೊಳ್ಳುವ ರೀತಿ ಮತ್ತು ಅವನಿಗೆ ನೀಡುವ ಆಶ್ವಾಸನೆಗಳು ಯಾವ ಸಿನಿಮಾ ನಿರ್ದೇಶಕನಿಗೂ ಹೊಳೆಯದ ಮತ್ತು ಯಾವ ಗ್ರಂಥಾಲಯದಲ್ಲೂ ಸಿಗದ ಗ್ರಂಥಶ್ರೇಷ್ಠವಾಗಿರುತ್ತವೆ. 


ಅಪ್ಪನ ಆಶ್ರಯದಲ್ಲಿ ಬೆಳೆಯುವ ನಮಗೆ ಅವನ ತುಡಿತಗಳು ಅರ್ಥವಾಗುವುದಿಲ್ಲ. ಅವನಿಗಿಂತ ಹೆಚ್ಚು ವಿದ್ಯಾಭ್ಯಾಸ ಮಾಡಿದ ಮಕ್ಕಳಿಗೆ ಅವನು ಮೋಸಗಾರನಾಗಿ, ಸುಳ್ಳಿನ ಒಡೆಯನಾಗಿ ಕಾಣುತ್ತಾನೆ. ಆದರೆ ಆ ಮೋಸದ ಹಿಂದೆ ಅವನಿಗಿದ್ದ ನಮ್ಮ ಸಂತೋಷದ ಹುಡುಕಾಟ ನಮಗೆ ಕಾಣುವುದು ಅವನು ನಮ್ಮಿಂದ ಕಣ್ಮರೆಯಾದಾಗ. ಇಂದು ಇಷ್ಟೆಲ್ಲಾ ಅನುಕೂಲಗಳಿದ್ದೂ ಕೇವಲ ಒಂದು ಅಥವಾ ಎರಡು ಮಕ್ಕಳ ವಿದ್ಯಾಭ್ಯಾಸ, ಬೇಕುಗಳ ಈಡೇರಿಸಲಾಗದೆ ಬಟ್ಟೆ ಹರಿದುಕೊಳ್ಳುತ್ತಿರುವ ಈಗೀಗ ಅಪ್ಪಂದಿರು ಮಾಡುವುದು ಸಾಲವಲ್ಲದೆ ಮತ್ತೇನು? ವ್ಯತ್ಯಾಸವೇನೆಂದರೆ, ಅಂದು ಅಪ್ಪ ಸಾಲಗಾರನ ಕಣ್ತಪ್ಪಿಸಿ ಹಿತ್ತಲ ಬಾಗಿಲು ಮೊರೆ ಹೋದರೆ, ಇಂದು ಮೊಬೈಲ್ ಸೆಟ್‌ನ ಏರೋಪ್ಲೇನ್ ಮೋಡ್ ಮೊರೆ ಹೋಗುತ್ತಾನೆ. ಅಂದು ಅಪ್ಪ ಮಾಡಿದ ಕೈೆ ಸಾಲ, ಅರು ಕಾಸು ಮೂರು ಕಾಸಿಗೆ ಅಡವಿಟ್ಟ ಜಮೀನು ಮತ್ತು ಮನೆಯನ್ನು ವಾಪಸು ಪಡೆಯಲಾಗದೆ ಕಳೆದುಕೊಂಡ ದುಃಖ ಅವನೊಬ್ಬನಿಗೇ ಗೊತ್ತು. ಇಂದು ಮನೆಯನ್ನೇ ಅಡವಿಟ್ಟು ಬ್ಯಾಂಕ್ ನಲ್ಲಿ ಪಡೆದ ಗೃಹಸಾಲ ಇತ್ತೀಚಿನವರೆಗೆ ಒಂದು ಸ್ಟೇಟಸ್ ಆಗಿ ಕಾಣುತ್ತದೆ. ಸಂಬಳದ ಸ್ಲಿಪ್ ನೀಡಿ ಪಡೆದ ಪರ್ಸನಲ್ ಲೋನ್ ಜಮೀನು ಅಡವಿಟ್ಟ ಪತ್ರಕ್ಕೆ ಸಮವಲ್ಲವೇನು?


ತನಗಿಷ್ಟು, ತನ್ನವರಿಗೆ ಅಷ್ಟು ಮಾಡುವ ಭರದಲ್ಲಿ ಲೋಕದ ಕಣ್ಣಿಗೆ ಸಾಲಗಾರನಾಗಿ ಕಂಡ ಅಪ್ಪ, ಅವನಿಗದು ತಂದೆಯ ಜನನದ ಜವಾಬ್ದಾರಿಯಾಗಿರುತ್ತದೆ. ಮಕ್ಕಳ ಓದು, ಮಗಳ ಮದುವೆ, ಹೆತ್ತವರ ಆರೋಗ್ಯ ಕ್ಷೇಮ, ಮಗನಿಗಾಗಿ ಉಳಿಸಿಯೋ, ಗಳಿಸಿಯೋ ಮಾಡಿಟ್ಟ ಆಸ್ತಿ ಎಲ್ಲವೂ ಈ ಸಾಲದಿಂದಲೇ ಬಂದವು ಎಂಬುದು ನಮಗೀಗ ಅರಿವಾಗುತ್ತಿದೆ. ಅಂದು ಅಪ್ಪ ಹೇಳದೇ ಮಾಡಿದ ಸಾಲದಿಂದಲೆ ಇಂದು ಹೇಳಿಕೊಳ್ಳುವಷ್ಟು ಪಡೆದ ವಿದ್ಯೆ, ಆಸ್ತಿ, ನೌಕರಿ ಮತ್ತು ಸೂರು ನಾವಿಂದು ಜನರೊಳಗೆ ಬದುಕಲು ಅರ್ಹರಾಗಿದೇವೆ. ಇದೆಲ್ಲವನ್ನೂ ಅಪ್ಪನೆದುರು ಹೇಳಿ ಒಂದು ಥ್ಯಾಂಕ್ಸ್ ಹಾಗೆ sorry ಕೇಳುವ ಮನಸ್ಸಿದ್ದರೂ ಹೇಳಲಾಗದ ಬಿಗುಮಾನ ಎಷ್ಟೋ ಮಕ್ಕಳಿಗಿದೆ. ನೀನಂದು ಮಾಡಿದ ಸಾಲ, ನಾನಿಂದು ಮಾಡುತ್ತಿರುವ ಸಾಲ, ಬದಲಾದ ಕಾಲದಲ್ಲಿ ಬೇರೆ. ಆದರೆ ಉದ್ದೇಶದ ಬೇರು ಒಂದೇ ಎಂದು ಹೇಳಿಕೊಳ್ಳಲು ನಮ್ಮೆದುರಿಗೆ ಅಪ್ಪ ಇಂದಿಲ್ಲ ಎನ್ನುವರ ಸಂಖ್ಯೆ ಅಷ್ಟೇ ಇದೆ. ಬದುಕು ಕಟ್ಟಲು ಬದುಕುತ್ತಿರುವ, ಬದುಕಲೇ ಬೇಕೆನ್ನುತ್ತಿರುವ, ಸಾಲದಲ್ಲಿ ಬಂಧಿಯಾಗಿರುವ, ಬಂಧಿಯಾಗುತ್ತಿರುವ ಎಲ್ಲಾ ಸಾಲಗಾರರಿಗೆ ಅಪ್ಪನ  ನೆನಪಾಗಲಿ. ಅಪ್ಪನ ತ್ಯಾಗ ಮತ್ತು ಪ್ರೀತಿ ಬರಿದಾಗದ ಖಾತೆ ನೆನಪಿರಲಿ.


- ಡಾ. ಭುವನಹಳ್ಳಿ ಭಾನುಪ್ರಕಾಶ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top