ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ
ಉಜಿರೆ: ಪ್ರಸ್ತುತ ಸಂದರ್ಭದಲ್ಲಿ ಪುಸ್ತಕ ರಚಿಸಿ ಪ್ರಕಟಣದ ಹಂತಕ್ಕೆ ತರುವುದು ತುಸು ಕಷ್ಟ, ಪ್ರಕಟಗೊಂಡರೂ ಬಳಿಕ ಕಾಡುವ ಪ್ರಶ್ನೆಯೆಂದರೆ ಓದುವ ಸಮೂಹ ಯಾವುದೆಂದು. ಪುಸ್ತಕಗಳಿಂದ ದೊರಕುವ ಅಧಿಕೃತ ಜ್ಞಾನಕ್ಕೆ ಯಾವುದೇ ಪರ್ಯಾಯ ಮಾರ್ಗಗಳಿಲ್ಲ. ಆದ್ದರಿಂದ ಪುಸ್ತಕದಿಂದ ದೊರಕುವ ವಿಚಾರವು ಅತ್ಯಂತ ಅಮೂಲ್ಯ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್ ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಅರ್ಥಶಾಸ್ತ್ರ ಮತ್ತು ಗ್ರಾಮೀಣಾಭಿವೃದ್ಧಿ ವಿಭಾಗ ಹಾಗೂ ಸುಬ್ರಹ್ಮಣ್ಯದ ಕುಕ್ಕೆಶ್ರೀ ಸುಬ್ರಮಣ್ಯೇಶ್ವರ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಹಾಗೂ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿರುವ ಸಮಗ್ರ ಬೆಳವಣಿಗೆ ಕುರಿತು ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಜಿ. ವಿ. ಜೋಶಿ ಹಾಗೂ ಪ್ರೊ. ರಮೇಶ್ ಸಾಲಿಯಾನ್ ಅವರು ಬರೆದಿರುವ "ಎ ಸರ್ಚ್ ಫಾರ್ ಇನ್ ಕ್ಲೂಸಿವ್ ಗ್ರೋಥ್ ಇನ್ ಅರ್ಥಶಾಸ್ತ್ರ" ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಅರ್ಥಶಾಸ್ತ್ರ ವಿಭಾಗದಿಂದ ಸಂಪಾದಿಸಲಾದ ಮುಖ್ಯ ಸಂಕಲನಕಾರ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್ ಮತ್ತು ಸಹ ಸಂಕಲನಕಾರ ಡಾ. ಗಣರಾಜ ಕೆ. ರವರಿಂದ ಮೂಡಿದ "ರೂರಲ್ ಡೆವಲಪ್ಮೆಂಟ್ ಫಾರ್ ಜಾಬ್ ಕ್ರಿಯೇಶನ್ ಅಂಡ್ ಪಾವರ್ಟಿ ಅಲಿವೇಶನ್ ಇನ್ ಎಮರ್ಜಿಂಗ್ ಎಕನಾಮೀಸ್" ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಬಿಡುಗಡೆಗೊಳಿಸಿ ಮಾತನಾಡಿದ ಡಾ. ಸತೀಶ್ಚಂದ್ರ ಎಸ್. ಅವರು ಸಾವಿರ ಎರಡು ಸಾವಿರ ವರ್ಷಗಳ ಹಿಂದೆಯೇ ದೂರದೃಷ್ಟಿಯನ್ನು ಹಾಯಿಸಿ ಒಂದು ರಾಷ್ಟ್ರ ಅಭಿವೃದ್ಧಿ ಆಗಬೇಕಾದರೆ ಏನೆಲ್ಲಾ ಮಾಡಬೇಕು ಹಾಗೂ ಆರ್ಥಿಕವಾಗಿ ಎಷ್ಟು ಬಲಿಷ್ಠರಾಗಿರಬೇಕು ಎಂಬ ಮಾಹಿತಿಯನ್ನು ಕೌಟಿಲ್ಯನು ಅಂದಿನ ಕಾಲದಲ್ಲಿ ಈ ಅರ್ಥಶಾಸ್ತ್ರದಲ್ಲಿ ಒಳಗೊಡಿಸಿಕೊಂಡಿದ್ದನು. ಪುಸ್ತಕಗಳನ್ನು ಓದುವವರು ಕಡಿಮೆಯಾಗಿರುವ ಈ ಕಾಲಘಟ್ಟದಲ್ಲಿ ಈ ರೀತಿಯ ಮಾಹಿತಿ ಕಾರ್ಯಗಾರಗಳು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗುತ್ತದೆ. ಕಾಲೇಜಿನಲ್ಲಿ ಹಲವಾರು ಮಾಹಿತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಲ್ಲಾ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಬಳಿಕ ಡಾ. ಜಿ. ವಿ.ಜೋಶಿ, ತಾವು ಬರೆದ ಪುಸ್ತಕದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿ, ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉದ್ದೇಶಿಸಲಾದ 'ಒಳಗೊಳ್ಳುವಿಕೆಯ ಮೂಲಕ ಅಭಿವೃದ್ಧಿ' ಎಂಬ ವಿಷಯದ ಮೇಲೆ ವಿಚಾರ ಮಂಡನೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಮಾತನಾಡಿ, ಈಗಿನ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಮುಂದುವರೆಯುವ ಆಸಕ್ತಿ ಇರುತ್ತದೆ. ಕೆಲವರಿಗೆ ಮುಂದೇನು ಮಾಡಬೇಕು ಎನ್ನುವ ಖಚಿತತೆ ಇರುವುದಿಲ್ಲ. ಸಾಹಿತ್ಯಾಸಕ್ತರು ಕಾಲೇಜು ಜೀವನದಿಂದಲೇ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಕಾಲೇಜು ಉತ್ತಮ ವೇದಿಕೆ. ತಮ್ಮ ಆಯ್ಕೆಯ ವಿಷಯದ ಜೊತೆಗೆ ಪುಸ್ತಕಗಳ ಒಲವನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ನವದೆಹಲಿಯ ಜೆ.ಎನ್. ಯು. ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಪ್ರೊಫೆಸರ್ ರಮೇಶ್ ಸಾಲಿಯನ್ ಸೇರಿದಂತೆ. ಕಾರ್ಯಕ್ರಮ ಸಂಯೋಜಕರಾದ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್., ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಗಣರಾಜ ಕೆ. ಹಾಗೂ ಸುಬ್ರಹ್ಮಣ್ಯ ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ.ಟಿ. ಹಾಗೂ ಪ್ರಾಧ್ಯಾಪಕ ವರ್ಗ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಗಣರಾಜ ಕೆ. ಸ್ವಾಗತಿಸಿ, ರಕ್ಷಾ ಆರ್. ದೇವಾಡಿಗ ವಂದಿಸಿದರು. ವಿದ್ಯಾರ್ಥಿನಿ ಮಾನ್ಯ ಕೆ.ಅರ್. ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ