ವ್ಯಕ್ತಿತ್ವ ನಿರ್ಮಾಣದಲ್ಲಿ ಹಿರಿಯರ ಹೆಜ್ಜೆಯ ಗುರುತು

Upayuktha
0



ನಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ಹಿರಿಯರ ಹೆಜ್ಜೆಯ ಗುರುತುಗಳು ಸಾಕಷ್ಟಿರುತ್ತದೆ. "ಹಿಂದಣ ಹೆಜ್ಜೆಯನರಿತಲ್ಲದೆ ಮುಂದಿನ ಹೆಜ್ಜೆಯನೆಂತರಿವೆ, ಅರಿಯಲೂಬಾರದು, ವೃಥಾ ಪ್ರಯತ್ನವಿದು" ಎಂಬುದು ಸತ್ಯವಾದ ಮಾತು. ಸಂಸ್ಕಾರ, ಆಚಾರ-ವಿಚಾರ ಎಲ್ಲವೂ ಕೊಡುಗೆಯೇ ಆಗಿದೆ. ಅಧ್ಯಾಪಕ ವೃಂದ, ನೆರೆಹೊರೆಯವರು, ಬಂಧುಗಳು, ಸ್ನೇಹಿತರು, ಪರಿಸರ, ಪ್ರಾಣಿ ಪಕ್ಷಿಗಳಿಂದಲೂ ಕಲಿಯುವ ಅಂಶ ಬಹಳಷ್ಟಿದೆ. ಜೊತೆಗೆ ನಮ್ಮದೇ ಆದ ಪ್ರಯತ್ನ ಸೇರಿದಾಗ ನಾವು ಒಳ್ಳೆಯ ಮನುಷ್ಯರೆನಿಸಬಹುದು. 


ಪ್ರಯತ್ನ, ಮನಸ್ಸು ಎರಡೂ ಬೇಕು. ಓರ್ವ ಕವಿ, ಸಾಹಿತಿ, ಬರಹಗಾರ ಎನಿಸಿದರೆ ಸಾಕೇ? ಸಾಲದು. ಅವನದೇ ಆದ ಸೃಜನಶೀಲತೆಯ ಛಾಪುಗಳನ್ನು ಬರೆಹದಲ್ಲಿ ಮೂಡಿಸಬೇಕು. ಮನದ ಭಾವಗಳ ಓಘವಿರಬೇಕು. ಕಂಡದ್ದು, ಕೇಳಿದ್ದಕ್ಕೆ ಸ್ವಂತಿಕೆಯ ಪದಗಳು ಮಿಳಿತವಾಗಿ ಜನಮಾನಸದಲ್ಲಿ ಉಳಿಯುವಂತಿರಬೇಕು, "ಇದು ಹೌದಾಗಿರಬಹುದೇ?" ಚಿಂತಿಸುವಂತಿರಬೇಕು. ಏನೋ ಒಂದು ಗೀಚಿದರಾಯಿತು, ಧೋರಣೆ ಬೇಡ. ಗೀಚಿ, ಗೀಚಿ ಪಾಯಸದ ಸಿಹಿ, ನೋವಿನ ಕಹಿ, ಅನುಭವದ ಭಾಂಡಗಳಲ್ಲಿ ಹುದುಗಿದ ಪಾಕಕ್ಕೆ ಅಕ್ಷರಗಳ ತೋರಣ ಹೊರಹೊಮ್ಮಲಿ. ಯಾರದ್ದೋ, ಯಾವುದೋ, ಇನ್ನಾವುದೋ ಸಾಲುಗಳ ಅರ್ಧಂಬರ್ಧ ಪದಗಳಿಗೆ ಆಚೀಚೆ ಸೇರಿಸಿದ ರಚನೆಗಳು ಬೇಡ. ಅದು ಮನಕೆ ಹಿತವೆನಿಸದು, ನಿಜವಾದ ಓದುಗನಿಗೆ ತಕ್ಷಣ ಗೊತ್ತಾಗುವುದು ಸಹ. ಇಲ್ಲಿಯೂ ಸಾಹಿತಿಯಾದವನ ವ್ಯಕ್ತಿತ್ವ ಹೊರಹೊಮ್ಮುವುದು.


ಆರೋಗ್ಯಕರವಾದ ಪ್ರತಿಭೆ ಹೊರಬರಲಿ, ಎರವಲು ಬೇಡ. ಬರೆಯುವುದು ಸಾಹಿತಿಯ ಧರ್ಮ, ಸತ್ಯಾಸತ್ಯತೆಗಳ ಬಿಂಬಿಸಿ ಮೆರೆಸುವುದು ಆತನ ಸೃಜನಶೀಲತೆ, ಚಾಕಚಕ್ಯತೆ, ಅದಕ್ಕೆ ಧ್ವನಿಯಾಗುವವರು ಇನ್ನಾರೋ ಇರಬಹುದು. ಹಸಿರು ಫಲಭರಿತ ಗಿಡಗಳ ನಾವು ನೆಟ್ಟರೆ, ನಾವೇ ಫಲಗಳ ಕೊಯ್ದು ತಿನ್ನುತ್ತೇವೆ ಎಂಬ ಭ್ರಮೆ ಬೇಡ, ಫಲ ಇನ್ನಾರಿಗೋ ಸಿಗುವುದಲ್ಲವೇ? ಭಗವಂತನ ಕೃಪೆ, ಸರಸ್ವತಿಯ ಆಶೀರ್ವಾದ ಸದಾ ಇರಬೇಕು. ಯಾರನ್ನೋ ಉದಾಹರಣೆಯಾಗಿಟ್ಟು ಬರೆಯುವುದೂ ಇದೆ. ಅದು ಬರೆಯುವಾತನ ಮನಸ್ಥಿತಿಗೆ ಬಿಟ್ಟ ವಿಷಯ. ಸಾಹಿತಿಯೋರ್ವ ಶಿಲ್ಪಿಯಾಗಿರಬೇಕು, ಮೂರ್ತರೂಪ ಹೆಣೆಯುವವನಾಗಿರಬೇಕು. ಅಮೂರ್ತವನ್ನು ಮೂರ್ತಗೊಳಿಸುವ ಸಾಮರ್ಥ್ಯವಂತನಾಗಿರಬೇಕು. ಏನೋ ಒಂದೆರಡು ಬರೆದು, ಯಾರು ಯಾರ ಕೈಕಾಲು ಹಿಡಿದು ಪತ್ರಿಕೆಗಳಲ್ಲಿ ಪ್ರಕಟಿಸಿ, ಒಂದಷ್ಟು ವೇದಿಕೆಯಲ್ಲಿ ಕಾಣಿಸಿಕೊಂಡವರನ್ನೆಲ್ಲ ಸಾಹಿತಿಯೆಂದು ಕರೆಯಲಾಗದು.


'ಮಂಥಿನೊಳು ಮಥಿಸಿ ಮೊಸರಿಂದ ಬೆಣ್ಣೆ ತೆಗೆಯುವಂತೆ' ಸಾಧಿಸಿ, ಅನಂತರ ಸಾಹಿತಿ ಎನಿಸಿದರೆ ಕ್ಷೇಮ. ಬೆನ್ನ ಹಿಂದೆ ಆಡಲು ಅವಕಾಶ ಕೊಡಬಾರದು. ಕಳೆದ ತಿಂಗಳು ಓರ್ವ ಮಹನೀಯರು ಹೀಗೆ ಸಿಕ್ಕಾಗ ಕೇಳಿದೆ "ನೀವು ರಾಷ್ಟ್ರಪುರಸ್ಕಾರ ಪ್ರಶಸ್ತಿ ಎಂದು ಹಾಕುವುದು ಕಾಣ್ತದೆ, ಅದು ಇಲಾಖೆಯಿಂದ ಸಿಕ್ಕಿದ್ದಾ?" ಎಂಬುದಾಗಿ. ಇಲಾಖೆಯಿಂದ ಯಾವುದೇ ಅಭಿನಂದನೆ ಸಿಕ್ಕಿಲ್ಲ ಮಹರಾಯ್ರೆ ಹೇಳಿದರು. ಮತ್ತೆ ಇದು ಎಂದೆ. ಇದು ಸಾಹಿತ್ಯ ಕೂಟದಿಂದ ಹೇಳಬೇಕೇ? ಸಿಕ್ಕಲಿ, ಬೇಡವೆನ್ನಲಾರೆ, ಅವರವರ ತಾಕತ್ತು, ಸಾಹಿತ್ಯ ಕೂಟದಿಂದ ಪಡೆದ ಅಭಿನಂದನೆಗಳನ್ನೆಲ್ಲ ಹಾಕುತ್ತಾ ಹೋದರೆ ಕೆಲವು ಜನರಿಗೆ ಸಾಲು ಸಾಲು ಇರಬಹುದು. ಅದನ್ನು ಓದಲಾದರೂ ಪುರುಸೊತ್ತು ಬೇಕಲ್ಲ? ಎಂದೆ. ಬೆಳ್ಳಗೆ ನಗಾಡಿದ್ದು ಹೊರತು ಉತ್ತರವಿಲ್ಲ. ಮಾನ-ಸಮ್ಮಾನಗಳಿಗೆ ತೂಕವಿರಲಿ, ತೂಕತಪ್ಪಿದ್ದಕ್ಕೆ ಮಣೆ ಯಾಕೆ? ಬರೆದ ಬರೆಹಗಳಲ್ಲಿ ಸಾಧ್ಯವಿದ್ದಷ್ಟೂ ಹುರುಳಿರುವಂತೆ ನೋಡಿಕೊಳ್ಳೋಣ. ಮೊದಲಿಗೆಡವಿದರೂ ಅನಂತರ ಚೇತರಿಸಿಕೊಂಡು ಮುಂದುವರಿಯೋಣ. ವ್ಯಕ್ತಿತ್ವ ನಿರ್ಮಾಣದಲ್ಲೂ ಬರಹಗಾರನ ಪಾತ್ರವಿದೆ, ನೆನಪಿರಲಿ.


ಮನದ ಭಾವಗಳ ಪೂರ್ಣದಿನೊರೆಯಲರಿತ ಕವಿ/

ಇನಿತನುಂ ಬಿಡದೆ ರೂಪಿಸಲರಿತ ಶಿಲ್ಪಿ//

ಅನುರೂಪದಿಂದ ವಾಸ್ತವಗೊಳಿಪ ಕೃತಿಚತುರ/

ಧನಿಯರಿವರೆಲ್ಲಿಹರೊ?--ಮಂಕುತಿಮ್ಮ//


(ಕಗ್ಗ:ಮಾನ್ಯ ಡಿ.ವಿ.ಜಿಯವರ ಮಂಕುತಿಮ್ಮನ ಕಗ್ಗ)

- ರತ್ನಾ ಕೆ ಭಟ್

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top