ತೆಂಕನಿಡಿಯೂರು ಕಾಲೇಜಿನಲ್ಲಿ ಅಭಿವಿನ್ಯಾಸ ಕಾರ್ಯಕ್ರಮ
ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು & ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿನ ಪ್ರಥಮ ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ, ಬಿ.ಎಸ್.ಸಿ, ಬಿ.ಎ ಮತ್ತು ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳಿಗಾಗಿ ಅಭಿವಿನ್ಯಾಸ ಕಾರ್ಯಕ್ರಮ ಆಯೋಜಿಸಲಾಯಿತು.
ಕಾಲೇಜಿನ ಐಕ್ಯೂಎಸಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕುಂದಾಪುರ ಮಾತಾ ಆಸ್ಪತ್ರೆಯ ಮನೋವೈದ್ಯರಾದ ಡಾ. ಪ್ರಕಾಶ್ ತೋಳಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಸಾಧಿಸುವ ಛಲ, ಕಠಿಣ ಪರಿಶ್ರಮ, ಸನ್ನಡತೆ ಮತ್ತು ಮನೋಸ್ಥೈರ್ಯ ವಿದ್ದಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಇಂದಿನ ಶೋಕಿ ಜಗತ್ತಿನಲ್ಲಿ ಯುವಜನತೆಯನ್ನು ತಪ್ಪುದಾರಿಗೆಳೆವ ಹಲವಾರು ವಿದ್ಯಮಾನಗಳು ಬೆಳೆಯುತ್ತಿದ್ದು ವಿದ್ಯಾರ್ಥಿಗಳು ಅಧ್ಯಯನದಲ್ಲಿಯ ಏಕಾಗ್ರತೆ ಕಳೆದುಕೊಳ್ಳದೇ ಗುರಿ ತಲುಪುವಂತಾಗಬೇಕು. ಮಾದಕ ವ್ಯಸನ, ಸಾಮಾಜಿಕ ಅಪರಾಧಗಳು ಮುಂತಾದ ಕಲಹಗಳಲ್ಲಿ ತೊಡಗಿಕೊಳ್ಳದೇ ವಿದ್ಯೆ, ಉದ್ಯೋಗ, ಸಾಮಾಜಿಕ ಕಳಕಳಿಗಳಿಗೆ ಬದ್ಧರಾಗಿದ್ದಲ್ಲಿ ತಾವು ಬೆಳಗುವುದರ ಜೊತೆಗೆ ತಮ್ಮ ಕುಟುಂಬಕ್ಕೂ- ಸಮಾಜಕ್ಕೂ ಆಧಾರವಾಗಬಲ್ಲರೆಂದರು.
ಪ್ರಾಂಶುಪಾಲರಾದ ನಿತ್ಯಾನಂದ ಗಾಂವ್ಕರ್ ಯುವಜನತೆ ವಿದ್ಯೆಯ ಜೊತೆ ತಮ್ಮ ಬದುಕು ರೂಪಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವಂತೆ ಸೂಚಿಸುತ್ತಾ ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆಯಿತ್ತರು.
ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರಶಾಂತ್ ನೀಲಾವರ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿ ಸ್ವಾಗತಿಸಿದರೆ, ಸಂಖ್ಯಾಶಾಸ್ತ್ರ ಸಹಪ್ರಾಧ್ಯಾಪಕ ಉಮೇಶ್ ಪೈ ವಂದಿಸಿದರು. ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಗ್ರಂಥಪಾಲಕ ಕ್ರಷ್ಣ ಸಾಸ್ತಾನ, ಡಾ. ಹಮಿದಾ ಭಾನು ಹಾಗೂ ಎಲ್ಲಾ ಬೋಧಕ- ಬೋಧಕೇತರ ವೃಂದದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


