ಕಥೆ: ಬಂದೇ ಬರುತೈತೆ ಒಳ್ಳೆಯ ದಿನ.... (ಭಾಗ-1)

Upayuktha
0


ಯದೇವ ಆಸ್ಪತ್ರೆಯಿಂದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದ ಯಜಲುಕೊಡಿಗೆ ಯಜ್ಞನಾರಾಯಣ ಅಲ್ಲೊಂದು ಬ್ರೆಂಚ್ ಮೇಲೆ ಪವಡಿಸಿ ಪರ್ಸ್ ತೆಗೆದು ಊರಿಗೆ ಎಂದರೆ ಶೃಂಗೇರಿಗೆ ಹೋಗೋಕೆ ಎಷ್ಟು ದುಡ್ಡು ಉಳಿದಿದೆ ಎಂದು ಎಣಿಸಿದ. ಜೇಬು, ಪರ್ಸ್, ಬ್ಯಾಗಿನ ಇತರ ಅರೆ ಯನ್ನ ಒಂದೂ ಬಿಡದೇ ತಡಕಾಡಿದ. ಮತ್ತೆ ಮತ್ತೆ ಹುಡುಕಿದ... ಯಾವ ಮೂಲೆಯಲ್ಲಾದರೂ ಒಂದು ನೂರು ರೂಪಾಯಿ ಎಂದೋ ಕೈ ತಪ್ಪಿಯಾದರೂ ಇಟ್ಟಿರಬಹುದೇನೋ ಎಂಬಾಸೆಯಿಂದ ಹುಡಿಕಿದ. ಇಲ್ಲ ಸಿಗಲಿಲ್ಲ.

 

ಕೆಎಸ್ ಆರ್ ಟಿ ಸಿ ಕೆಂಪು ಬಸ್‌ ನ ಬಸ್ ಚಾರ್ಜ್‌ಗೆ ಮಿಕ್ಕಿ ಮೂವತ್ತೈದು ರೂಪಾಯಿ ಮಾತ್ರ ಉಳಿದಿರುವುದು... ಅದರಲ್ಲಿ ಮತ್ತೆ ಶೃಂಗೇರಿಯಿಂದ ಯಜಲುಕೊಡಿಗೆಗೆ ಹೋಗಲು ಇಪ್ಪತ್ತು ರೂಪಾಯಿ ಬೇಕು. ಅದಕ್ಕೆ ಮಿಕ್ಕಿ ಉಳಿದಿರುವುದು ಹತ್ತೇ ಹತ್ತು ರೂಪಾಯಿ...!!!!


ಬೆಂಗಳೂರಿನ ರಸ್ತೆಗಳು. ರಸ್ತೆಯಲ್ಲಿ ಸಂಚರಿಸುವ ಐಷಾರಾಮಿ ಕಾರುಗಳು.. ಇಂಗ್ಲಿಷ್ ಮನುಷ್ಯರು, ಐಷಾರಾಮಿ ಮನೆಗಳು. ನಡುವೆ ಯಜ್ಞನಾರಾಯಣನ ತರ ಕಾಸಿಲ್ಲದವರು ಇದ್ದಾರೆ. ಯಥೇಚ್ಛವಾಗಿ ಹಣ್ಣು ಬಿಡುವ ಮರದ ನಡುವೆ ಬಂಜೆ ಮರಗಳ ನಮೂನೆಯಲ್ಲಿ. 

ದುಡ್ಡು ಇರೋರು ಇಲ್ಲದೇ ಇರೋರು... ದುಡ್ಡು ಮಾಡೋಕೆ ಬರದೇ ಇರೋರು... ದುಡ್ಡು ಮಾಡೋಕೆ ಬರೋರು...!! ಇದೆಲ್ಲಾ ಒಂದಕ್ಕೊಂದು ವಿರೋಧಾಭಾಸ ಅಲ್ವಾ..??


ಯಜಲುಕೊಡಿಗೆ ಯಜ್ಞನಾರಾಯಣ ತನ್ನ ತಾಯಿಯ ಹೃದಯ ಸಂಬಂಧಿಸಿದ ಚಿಕಿತ್ಸೆ ಮಾಡಿದ ಜಯದೇವ ಹೃದ್ರೋಗ ಆಸ್ಪತ್ರೆಯ ತಜ್ಞ ವೈದ್ಯರ ನ್ನ ಮಾತ್ರೆ ಬದಲಾವಣೆ ಮತ್ತು ಮುಂದಿನ ಚಿಕಿತ್ಸೆಯ ಬಗ್ಗೆ ಭೇಟಿ ಮಾಡಲು ಶೃಂಗೇರಿಯಿಂದ ಬಂದಿದ್ದ. ಡಾಕ್ಟರು ಅದೇ ಮಾತ್ರೆ ಮುಂದುವರಿಸುತ್ತಾರೆ ಎಂದುಕೊಂಡರೆ ಮಾತ್ರೆ ಬದಲಾವಣೆ ಮಾಡಿದ್ದರು. ಹೊಸ ಮಾತ್ರೆ ಕೊಂಡಾಗ ಉಳಿದಿದ್ದು ಇಷ್ಟೇ ಇಷ್ಟೇ ದುಡ್ಡು...!!


ಈ ಸರ್ತಿ ಬೆಂಗಳೂರಿಗೆ ಬಂದಾಗ ಮುದ್ದಾಂ ಬಾಲ್ಯ ಗೆಳೆಯ ಕಾನುಮನೆ ಗಂಗಾಧರನನ್ನು ಭೇಟಿಯಾಗೇ ಹೋಗುವುದೆಂದುಕೊಂಡಿದ್ದ. ಆದರೆ ಯಾರದ್ದಾದರೂ ಮನೆಗೆ ಮೊದಾಲ್ ಮುಂಚೆ ಹೋಗಬೇಕಾದರೆ ಹಣ್ಣು ಹೂ ಕೊಂಡೊಯ್ಯುವುದು ಒಂದು ಸುಸಂಸ್ಕಾರ. ಹತ್ತು ರೂಪಾಯಿಗೆ ಏನು ಬರುತ್ತದೆ...? ಗೆಳೆಯನ ಮನೆಗೆ ಹೋಗುವ ಬಿಎಂಟಿಸಿ ಬಸ್ ಚಾರ್ಜ್‌ಗೆ ಕೂಡ ಈಗ ಹಣ ಸಾಲಲ್ಲ.‌..!! 


ಆಗ ಮದ್ಯಾನ ಒಂದು ಗಂಟೆ. ಹೊಟ್ಟೆ ಬೇರೆ ತಾಳ ಹಾಕುತ್ತಿದೆ. ಆದರೆ ಹೋಟೆಲ್‌ನಲ್ಲಿ ಏನಾದರೂ ತಿಂದರೆ ಊರಿಗೆ ಹೋಗಲು ಬಸ್ ಚಾರ್ಜ್‌ಗೆ ಹಣ ಕಡಿಮೆ ಆಗುತ್ತದೆ. ಅಲ್ಲದೆ ಯಜ್ಞನ ಕೈಲಿ ಗೂಗಲ್ ಪಾಗಲ್ ಪೇ ಇಲ್ಲ...!! ಮಲೆನಾಡಿನ ಬಡ ವರ್ಗದ ಕುಟುಂಬವೊಂದರ ಯಜಮಾನ. ಸದಾ ಮೂರು ಮತ್ತು ಮೂರರಿಂದ ಸೊನ್ನೆಗೆ ಹೋಗುತ್ತಿರುವ ಬಡವ. ಬೇಸಿಗೆಯಲ್ಲಿ ಅಡಿಗೆ ವೃತ್ತಿ. ಚೂರು ಪಾರು ಕೃಷಿ ಇದೆ. ಕಾಡುಪ್ರಾಣಿಗಳಿಗೆ ಮಿಕ್ಕಿ ಉಳಿದದ್ದು ರೈತರಿಗೆ ಎನ್ನುವ ಎಲ್ಲಾ ಮಲೆನಾಡಿನ ಕೃಷಿಕರ ಅವಸ್ಥೆ.


ಮನೆ ಮಕ್ಕಳು ನಿರ್ವಹಣೆಯ ಜೊತೆಗೆ ಅಮ್ಮನ ಅನಾರೋಗ್ಯ ಈ ಕುಟುಂಬದ ಆರ್ಥಿಕ ಸ್ವಾಸ್ಥ್ಯ ಅಭಿವೃದ್ಧಿಯಾಗಲು ತಡೆ ಮಾಡುತ್ತಿದೆ.

ಮೂವತ್ತೈದು ವರ್ಷಗಳ ಹಿಂದೆ ಕಾಲೇಜು ವಿಧ್ಯಾಭ್ಯಾಸ ಮುಗಿಸಿ ಕೃಷಿಗೆ ಬಂದು ಕೃಷಿಯಲ್ಲೇ ಬದುಕು ಭವಿಷ್ಯ ಕಾಣಲು ಪ್ರಯತ್ನ ಮಾಡಿದವನು ಯಜ್ಞನಾರಾಯಣ. ಆದರೆ ಯಾಕೋ ಯಜ್ಞನಾರಾಯಣನ ಪಾಲಿಗೆ ಕೃಷಿ ಹಾವು ಏಣಿ ಆಟದಂತೆ ಆಗಿ ಇನ್ನೇನು ನೂರಕ್ಕೆ ಹೋಗಿ ಬಚಾವು ಆಗಬೇಕು ಎನ್ನುವಾಗ ತೊಂಬತ್ತೊಂಬತ್ತು ಬಿದ್ದು ಸೋಲಿನ ಸರ್ಪದ ಬಾಯಿಯಿಂದ ನಷ್ಟ ನಿರಾಶೆಯ ಬಾಲ ತುದಿ "ಒಂದಕ್ಕೆ" ಬಿದ್ದಿದ್ದ...!!


ಮನೆ ಹೆಣ್ಣು ಮಕ್ಕಳ ಮದುವೆ, ಯಜ್ಞನಾರಾಯಣನ ಮದುವೆ, ಅಪ್ಪ ನ ಹುಷಾರಿಲ್ಲ. ಅಪ್ಪನ ಸಾವು, ಕರ್ಮಾಂಗಗಳು, ಮತ್ತೆ ಅಮ್ಮನ ಅನಾರೋಗ್ಯ, ಚಿಕಿತ್ಸೆ, ಮಕ್ಕಳ ವಿದ್ಯಾಭ್ಯಾಸ, ಮನೆ ಖರ್ಚು. ವರ್ಷದ ಕೆಲವು ತಿಂಗಳ ಅಡಿಗೆ ವೃತ್ತಿಯ ದುಡಿಮೆಯನ್ನು ವರ್ಷವಿಡೀ ಸಂಭಾಳಿಸುವಾಗ ಯಜ್ಞನಾರಾಯಣನ ಕಣ್ಣಿನಲ್ಲಿ ಗಂಗೆ ಧಾರೆಯಾಗಿ ಹರಿಯುತ್ತಿತ್ತು.


ಹಸಿವು ಹೆಚ್ಚಾಯಿತು. ಯಜ್ಞನಾರಾಯಣ ಬಸ್ ನಿಲ್ದಾಣದಲ್ಲೇ ಇದ್ದ ಕುಡಿಯುವ ನೀರಿನ ನಲ್ಲಿಯಲ್ಲಿ ಎರಡು ಲೋಟ ನೀರು ಕುಡಿದ. ಸ್ವಲ್ಪ ಹಸಿವು ಕಟ್ಟಿತು. ಆದರೆ ಹಣ ಕೊಟ್ಟು ಮೂತ್ರ ಮಾಡಬೇಕು. ಮೂತ್ರ ಮಾಡಲು ಎರಡು ಸರ್ತಿ ಹಣ ಕೊಟ್ಟರೆ ಉಳಿದ ಹತ್ತು ರೂಪಾಯಿನೂ ಕಾಲಿಯಾಗುತ್ತದೆ...!!


ಪರ್ಸ್ ನೊಳಗೆ ಅಮ್ಮ ಗಂಗಾಧರನ ಮನೆಗೆ ಮಾಡಿಕೊಟ್ಟ ಕೋಡು ಬಳೆ ಪೊಟ್ಟಣ ಇತ್ತು. ಅದನ್ನು ತಿಂದು ಬಿಡಲಾ....? ಅಂದುಕೊಂಡ. 

ಹಾಂ ಎಂದು ಅವನ ಮನಸೊಪ್ಪಿಸಿ ಕೋಡಬಳೆ ತಿಂದೇ ಬಿಡುವ ಅಂತ ಕೋಡುಬಳೆ ಪ್ಯಾಕೆಟ್ ಮೇಲೆ ಕೈ ಆಡಿಸುವಾಗಲೇ ಯಜ್ಞನಾರಾಯಣನ ಫೋನ್ ರಿಂಗಾಯಿತು. ಹೌದು, ಅದು ಬಾಲ್ಯ ಗೆಳೆಯ ಗಂಗಾಧರನದ್ದೇ ಆಗಿತ್ತು. ಮೂರು ನಾಲ್ಕು ಬಾರಿ ಗಂಗಾಧರ ಮೇಲಿಂದ ಮೇಲೆ ಯಜ್ಞನಾರಾಯಣನಿಗೆ ಕರೆ ಮಾಡಿದ ಮೇಲೆ ಕರೆ ಸ್ವೀಕರಿಸಿದೇ ಇರಲಾಗಲಿಲ್ಲ.


ಯಜ್ಞನ ಕೈಕಾಲಿ...‌ ಗಂಗಾಧರನ ಮನೆಗೆ ಹೋದರೆ ಊರಿಗೆ ಮರಳಿ ಹೋಗಲು ಯಜ್ಞನ ಬಳಿ ಬಸ್ ಚಾರ್ಜ್‌ಗೆ ಹಣ ಇಲ್ಲ. ಇದನ್ನು ಗೆಳೆಯ ಗಂಗಾಧರನಿಗೆ ಹೇಳೋಕೆ ಆಗುತ್ತದಾ...??


ಈ ಕಾಲದಲ್ಲಿ ಐವತ್ತು ರೂಪಾಯಿ ನೂರು ರೂಪಾಯಿ ಕಮ್ಮಿಯಾಗುತ್ತದೆ ಅದಕ್ಕೆ ನಿಮ್ಮ ಮನೆಗೆ ಈ ಸತಿ ಬರೋಕಾಗೋಲ್ಲ ಎಂದು ಹೇಗೆ ಹೇಳೋದು ...?

ನಿಜ ಕಾರಣ ಹೇಳದೇ ಗೆಳೆಯ ಗಂಗಾಧರನಿಗೆ "ಅಲ್ಲಿ ಆಸ್ಪತ್ರೆಲಿ ಲೇಟಾಯಿತು. ಮುಂದಿನ ತಿಂಗಳು ಮತ್ತೆ ಬೆಂಗಳೂರಿಗೆ ಬಂದಾಗ ನಿಮ್ಮಲ್ಲಿಗೆ ಗ್ಯಾರಂಟಿ ಬರ್ತೀನಿ. ಸಾರಿ ಕಣೋ ಈ ಸರ್ತಿ ನನ್ನ ಊರಿಗೆ ಹೋಗೋಕೆ ಬಿಡೋ ಮುಂದಿನ ಸರ್ತಿ ಬಂದೇ ಬರ್ತೀನಿ..." ಅಂದ.


ಆದರೆ ಗಂಗಾಧರ ಕೇಳಲೇ ಇಲ್ಲ. "ನೀನು ಈ ಸರ್ತಿಯೇ ನಮ್ಮ ಮನೆಗೆ ಬರಬೇಕು. ನಿನ್ನ ಭೇಟಿ ಮಾಡಲೇ ಬೇಕೆಂದು ಮನೆಯಲ್ಲಿ ನಾನು  ನಿನಗಾಗಿಯೇ ಕಾಯುತ್ತಿರುವೆ. ದಯವಿಟ್ಟು ಇಲ್ಲ ಎನ್ನಬೇಡ... ‌ನಿನ್ನ‌ ಮರಳಿ ನಿಮ್ಮ ಊರಿನ ಬಸ್ ಹತ್ತಿಸಿ ಕಳಿಸುವ ಜವಾಬ್ದಾರಿ ನನ್ನದು" ಎಂದು ಅಭಯ ನೀಡುತ್ತಾ ಗಂಗಾಧರ ಯಜ್ಞನಿಗೆ ಮೆಜೆಸ್ಟಿಕ್ ಬಳಿಯ ಅಮರ ಹೋಟೆಲ್ ನ ಬಳಿ ನೀ ವೈಟ್ ಮಾಡು. ಕೂಡಲೇ ಅಲ್ಲಿಗೆ ನನ್ನ ಕಾರು ಕಳಿಸುತ್ತೇನೆ, ನಿನ್ನ ಫೋನ್ ನಂ ನನ್ನ ಡ್ರೈವರ್ ಗೆ ಕೊಟ್ಟು ಕಳಿಸುತ್ತೇನೆ.‌ ಅವ ಕರೆ ಮಾಡಿದಾಗ ನೀ ಕರೆ ಸ್ವೀಕರಿಸಿ ಅವನೊಂದಿಗೆ ನಮ್ಮ ಮನೆಗೆ ದಯವಿಟ್ಟು ಬಾ..." ಎಂದ ಆಗ್ರಹ ಪೂರ್ವಕವಾಗಿ.


ಗಂಗಾಧರ ಯಜ್ಞನಾರಾಯಣನ ಊರಿನ ಬಾಲ್ಯ ಸ್ನೇಹಿತ, ಸಹಪಾಠಿ. ಇದೆಲ್ಲಾ ನಲವತ್ತೈದು ವರ್ಷಗಳ ಹಿಂದಿನ ಕಾಲದ ಶಾಲಾ ದಿನಗಳ ಒಡನಾಟದ ಗೆಳೆತನ. ಸುದೀರ್ಘ ನಾಲ್ಕು ದಶಕಗಳ ನಂತರ ಫೇಸ್ ಬುಕ್ ಮೂಲಕ ಪರಸ್ಪರ ಮರಳಿ ಸ್ನೇಹ ಸಂಗಮವಾಗಿತ್ತು. ಗಂಗಾಧರ ಈಗ ಮುಂಬಯಿ ನಿವಾಸಿಯಾಗಿದ್ದು ಮುಂಬಯಿ ಮತ್ತು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಡೆಸುತ್ತಿದ್ದಾನೆ. ಕರ್ನಾಟಕ ಮೂಲದ ಮುಂಬಯಿ ನಿವಾಸಿ ಕುಟುಂಬದ ಹುಡುಗಿಯನ್ನು ಮದುವೆ ಆಗಿ ಮಕ್ಕಳು ಈಗ ಎಸ್ ಎಸ್ ಎಲ್ ಸಿ, ಪಿಯುಸಿ ಓದುತ್ತಿದ್ದಾರೆ. ಫೇಸ್ ಬುಕ್ ಮೂಲಕ ಮತ್ತೆ ಸಂಪರ್ಕವಾಗಿ "ನಾನು ಈ ವಾರವಿಡೀ ಬೆಂಗಳೂರಿನ ಮನೆಯಲ್ಲಿ ವಾಸ್ತವ್ಯವಿರುತ್ತೇನೆ. ನೀನು ದಯವಿಟ್ಟು ಬೆಂಗಳೂರಿನ ನನ್ನ ಮನೆಗೆ ಬಾ..'" ಎಂದು ಒತ್ತಾಯ ಮಾಡಿ ಕರೆದಿದ್ದ. ಅದಕ್ಕೆ ಯಜ್ಞನಾರಾಯಣ ತಾನು ತನ್ನ ತಾಯಿಯ ಚಿಕಿತ್ಸಕ ವೈದ್ಯರ ಬೇಟಿ ಮಾಡಲು ಇಂತಹ ದಿನ ಬೆಂಗಳೂರಿಗೆ ಬರುತ್ತಿದ್ದೇನೆ ಈ ಸಮಯದಲ್ಲಿ ನಿನ್ನ ಬೇಟಿ ಮಾಡುತ್ತೇನೆ ಎಂದಿದ್ದ. ಈಗ ಅದೇ ಬೇಟಿ ಯಾಗಲು ಕ್ಷಣಗಣನೆಯಾಗುತ್ತಿದೆ.


ಬಗಲ ಚೀಲ ಹೆಗಲಿಗೇರಿಸಿಕೊಂಡು ಮೆಜೆಸ್ಟಿಕ್ ಬಸ್ ನಿಲ್ದಾಣ ದಾಟಿ ಅಮರ್ ಹೋಟೆಲ್ ಎದುರು ನಿಂತು ಯಜ್ಞನಾರಾಯಣ ನಾಲ್ಕು ದಶಕಗಳ ಹಿಂದಿನ ತನ್ನ ಹಾಗೂ ಗಂಗಾಧರನ ಬಾಲ್ಯದ ದಿನಗಳನ್ನು ಜ್ಞಾಪಕ ಮಾಡಿಕೊಂಡ.


ಆ ಕಾಲದಲ್ಲಿ ಯಜ್ಞನಾರಾಯಣನ ಕುಟುಂಬ ಸಾಕಷ್ಟು ಅನುಕೂಲಸ್ಥರೇ ಆಗಿದ್ದರು. ಮನೆ ತುಂಬಾ ದವಸ ಧಾನ್ಯ ತುಂಬಿರುತ್ತಿತ್ತು.‌ ಆ ಕಾಲದಲ್ಲಿ ಊರಿಗೆ ಯಾರೇ ಬಂದರೂ ಯಜ್ಞನಾರಾಯಣನ ಮನೇಲೇ ಊಟ. ಯಜ್ಞನಾರಾಯಣನ ಕುಟುಂಬ ಲೆಕ್ಕವಿಲ್ಲದಷ್ಟು ಜನರಿಗೆ ಊಟ ಹಾಕಿದೆ. ಅನುಕೂಲ ಇದ್ದ ಕಾಲದಲ್ಲಿ ನಾಕಾರು ಜನರಿಗೆ ತನು ಮನ ಧನ ಸಹಾಯವನ್ನೂ ಮಾಡಿದೆ.


ಕೆಳ ಯಜಲುಕೊಡಿಗೆಯ ಕಾನುಕೆರೆ ಊರಿನ ಒಂದು ಬಡ ಕುಟುಂಬದ ರಾಮಕೃಷ್ಣಯ್ಯ ಸರಸ್ವತಿ ದಂಪತಿಗಳ ಏಕೈಕ ಪುತ್ರ ಗಂಗಾಧರ. ಅಪ್ಪ ರಾಮಕೃಷ್ಣಯ್ಯ ರಾಜ ಕುಡುಕ. ತಾಯಿ ಸರಸ್ವತಿ ಮುಗ್ದೆ. ಆಕೆಗೆ ಗಂಡನ ಮನೆಯೂ ಬಲ ಇಲ್ಲ. ‌ತವರು ಮನೆನೂ ಬಲ ಇಲ್ಲ. ‌ದಕ್ಷಿಣ ಕನ್ನಡದ ಕುಂದಾಪುರದ ಸಮೀಪದ ಊರಿನ ತವರಲ್ಲಿ ತಾಯಿ ಮಾತ್ರ ಇರುವುದು.‌ ಅಲ್ಲೂ ಬಡತನ. 


ಯಜಲುಕೊಡಿಗೆಯ ಬಾರ್ಡರ್ ನಲ್ಲಿದ್ದ ಪ್ರಾಥಮಿಕ ಮತ್ತು ಮಾದ್ಯಮಿಕ‌ ಶಾಲೆಯಿತ್ತು. ಯಜ್ಞನಾರಾಯಣ ಮತ್ತು ಗಂಗಾಧರ ಒಂದೇ ಓರಗೆಯವರು.  ಒಂದೇ ಕ್ಲಾಸು ಒಂದೇ ಶಾಲೆ ಒಂದೇ ಊರು ಒಂದೇ ದಾರಿ. ಯಜ್ಞನಾರಾಯಣನ ಮನೆಯಿಂದ ಸ್ವಲ್ಪ ದೂರದ ಕಾನುಮನೆ ಊರಿನಲ್ಲಿ ಗಂಗಾಧರ ನ ಮನೆ. ಒಂದಿನ ಬೆಳಿಗ್ಗೆ ಗಂಗಾಧರನ ತಾಯಿ ಸರಸ್ವತಕ್ಕ ಯಜ್ಞನಾರಾಯಣನ ಮನೆ ತನಕ ಗಂಗಾಧರನನ್ನು ತಂದು ಬಿಟ್ಟು ನಿಮ್ಮ ಮಗನ ಜೊತೆಗೆ ನನ್ನ ಮಗನನ್ನು ಶಾಲೆಗೆ ಕರೆದುಕೊಂಡು ಹೋಗಿ... ಎಂದು ಬೇಡಿಕೊಂಡರು.


ಯಜ್ಞನಾರಾಯಣ ನ ಮನೆಯಿಂದ ಯಜ್ಞನಾರಾಯಣನನ್ನು ಶಾಲೆಗೆ ಕಳಿಸಲು ಕೆಲಸದವನ ವ್ಯವಸ್ಥೆ ಇತ್ತು. ಹೀಗೆ ಗಂಗಾಧರನಿಗೆ ಯಜ್ಞನಾರಾಯಣ ನ ಮನೆಯ ಕನೆಕ್ಷನ್ ಆಗಿತ್ತು. ದಿನಾ ಬೆಳಿಗ್ಗೆ ಒಂಬತ್ತು ಗಂಟೆ ಹೊತ್ತಿಗೆ ಸರಸ್ವತಮ್ಮ ಗಂಗಾಧರನನ್ನು ಯಜ್ಞನಾರಾಯಣ ನ ಮನೆಗೆ ತಂದು ಬಿಡೋದು, ಯಜ್ಞನಾರಾಯಣ ನ ಮನೆಯಿಂದ ಗಂಗಾಧರ ಯಜ್ಞನಾರಾಯಣ ಶಾಲೆಗೆ ಒಟ್ಟಿಗೆ ಹೋಗೋದು ಶುರುವಾಯಿತು.


ಕೆಲ ದಿವಸ ಯಜ್ಞನಾರಾಯಣನದ್ದು ಬೆಳಗಿನ ತಿಂಡಿ ಅಗಿರ್ತಿರಲಿಲ್ಲ. ಯಜ್ಞನಾರಾಯಣನದ್ದು ತಿಂಡಿ ಆಗುವ ತನಕ ಗಂಗಾಧರ ಕಾಯಬೇಕಿತ್ತು. 

ಒಂದಿನ ಯಜ್ಞನಾರಾಯಣನ ಅಮ್ಮ ಬಿಸಿ ಬಿಸಿ ಉದ್ದಿನ ದೋಸೆ ಮಾಡಿ ಒಂದೊಂದೇ ದೋಸೆನ ಯಜ್ಞನಿಗೆ ಹಾಕುವಾಗ ಅಡಿಗೆ ಮನೆಯ ಬಾಗಿಲ ತುದಿಯಲ್ಲಿ ನಿಂತು ಯಜ್ಞನಾರಾಯಣ ದೋಸೆ ತಿನ್ನುವುದನ್ನೇ ನೋಡ್ತಿದ್ದ ಬಾಲಕ ಗಂಗಾಧರನ ಬಾಯಿಯಿಂದ ದೋಸೆ ತಿನ್ನಬೇಕು ಎನ್ನುವ ಆಸೆಯ, ಹಸಿವಿನ ಲಾಲಾರಸ ಅನಿಯಂತ್ರಿತವಾಗಿ ಬಾಯಿಯಿಂದ ಇಳಿದಿತ್ತು.


ಯಜ್ಞ ಕೊನೆಯ ದೋಸೆ ಒಂಚೂರು ತಿಂದು ತಟ್ಟೆ ಸಮೇತ ಬಚ್ಚಲಿಲ್ಲಿ ಇಟ್ಟು ಕೈ ತೊಳೆದು ಬಂದಾಗ ಹಿಂದೆಯೇ ಬಚ್ಚಲು ಮನೆಗೆ ಓಡಿ ಹೋದ ಗಂಗಾಧರ ಯಜ್ಞ ತಟ್ಟೆಯಲ್ಲಿ ಬಿಸಾಡಿದ್ದ ದೋಸೆಯನ್ನು ಎತ್ತಿ ಗಬ ಗಬನೇ ತಿಂದಿದ್ದ. ಇದನ್ನು ಅಕಸ್ಮಾತ್ತಾಗಿ ನೋಡಿದ್ದ ಯಜ್ಞನ ತಾಯಿ ಸಾವಿತ್ರಮ್ಮ  ಕಣ್ಣೀರು ಹಾಕಿ ಅಂದಿನಿಂದ ತನ್ನ ಮಗ ಯಜ್ಞನ ಜೊತೆಗೆ ಗಂಗಾಧರನಿಗೂ ಬೆಳಿಗ್ಗೆ ತಿಂಡಿ ಹಾಕಿ ತಿನ್ನಿಸಿ ಮದ್ಯಾನ ಊಟಕ್ಕೆ ತಮ್ಮ ಮನೆಗೇ ಯಜ್ಞನ ಗಂಗಾಧರನನ್ನೂ ಜೊತೆಗೆ ಬರಲು ಹೇಳಿ ಸಂಜೆ ಗಂಗಾಧರ ಮನೆಗೆ ಹೋಗುವಾಗ ಡಬ್ಬಿಯಲ್ಲಿ ಗಂಗಾಧರ ಮತ್ತು ಸರಸ್ವತಿ ಇಬ್ಬರಿಗೂ ಊಟ ಕೊಟ್ಟು ಕಳಿಸುತ್ತಿದ್ದರು.


ಯಜ್ಞನಾರಾಯಣ ನ ತಂದೆ ಆ ಕಾಲದಲ್ಲಿ ಸಾಕಷ್ಟು ದೊಡ್ಡ ಜಮೀನ್ದಾರರು. ಕೋರ್ಟು ಕಾನೂನು ತಿಳಿದವರು. ಊರಲ್ಲಿ ಆ ಯಜ್ಞನಾರಾಯಣ ನ ಕುಟುಂಬದ ಬಗ್ಗೆ ಭಯ ಗೌರವ ಇತ್ತು. ‌ಈ ಕಾರಣಕ್ಕೆ ಯಜ್ಞನಾರಾಯಣನ ಮನೆಯ ಸಹಕಾರವನ್ನು ಗಂಗಾಧರನ ತಂದೆ ರಾಮಕೃಷ್ಣ ತಕರಾರು ಮಾಡುತ್ತಿರಲಿಲ್ಲ. ಹೀಗಾಗಿ ಒಂದರಿಂದ ಏಳನೇ ತರಗತಿಯ ಸುಮಾರು ಏಳು ವರ್ಷಗಳ ಕಾಲ ಗಂಗಾಧರ ಮತ್ತು ಅವನ ತಾಯಿಗೆ ಹೊಟ್ಟೆ ತುಂಬ ಊಟ ಬಟ್ಟೆ ಬರೆ ಸಿಗ್ತು.


ಗಂಗಾಧರ ಕುಡಕ ತಂದೆ, ಕಿತ್ತು ತಿನ್ನುವ ಬಡತನ, ಹಸಿವಿನ ನಡುವೆ ಯಜ್ಞನಾರಾಯಣನ ಮನೆಯ ಒಂದು ಸಂಪರ್ಕದ ಕಾರಣ ಗಂಗಾಧರನ ಬದುಕಿನ ಅಂಧಕಾರದಲ್ಲೊಂದು ಆಶಾಕಿರಣ ಮೂಡಿತ್ತು. ಸಾವಿತ್ರಮ್ಮ ನ ಅಂತಃಕರಣದ ಮಾತೃಮಯಿ ಔದಾರ್ಯ ಆ ಬಡ ಕುಟುಂಬಕ್ಕೊಂದು ಬೆಳಕಾಗಿತ್ತು.


ಮುಂದೆ ಗಂಗಾಧರ ಏಳನೇ ತರಗತಿಯ ಕೊನೆಯಲ್ಲಿ ಇದ್ದಾಗ ಅವನ ತಾಯಿ ಸರಸ್ವತಿ ಬಸುರಿಯಾಗಿ ಹಡೆಯುವಾಗ ತೀವ್ರ ರಕ್ತ ಸ್ರಾವವಾಗಿ  ಸಮಯಕ್ಕೆ ಸರಿಯಾಗಿ ಸಿಗದ ಚಿಕಿತ್ಸೆಯ ಕಾರಣಕ್ಕೆ ತಾಯಿ ಮಗು ಇಬ್ಬರೂ ತೀರಿಕೊಂಡು ಗಂಗಾಧರನ ನತದೃಷ್ಟತನ ಮತ್ತೊಂದು ಹಂತಕ್ಕೆ ಏರಿತ್ತು.


ಕುಡುಕ ಅಪ್ಪ ನ ಕಾರಣ ಇದೀಗ ಗಂಗಾಧರನಿಗೆ ಯಜ್ಞನ ಮನೆಯೇ ಆವಾಸಸ್ಥಾನವಾಗಿತ್ತು. ಒಂದಿನ ಗಂಗಾಧರ ನ ಅಜ್ಜಿ ಬಂದು ಗಂಗಾಧರ ನನ್ನು ಕರೆದುಕೊಂಡು ಕುಂದಾಪುರಕ್ಕೆ ಹೋದರು. ಆ ನಂತರ ಅಜ್ಜಿ ಗಂಗಾಧರನನ್ನು ಮುಂಬಯಿಯ ಶ್ರೀಮಂತ ಮುದುಕರೊಬ್ಬರನ್ನು ನೋಡಿಕೊಳ್ಳಲು ಕಳಿಸಿದರು. ಮುಂಬಯಿಗೆ ಹೋದ ಮೇಲೆ ಗಂಗಾಧರ ಏನಾದ ಎಂಬ ಮಾಹಿತಿ ಯಜ್ಞನಾರಾಯಣ ನ ಕುಟುಂಬಕ್ಕೆ ಗೊತ್ತಾಗಲಿಲ್ಲ. ಯಜ್ಞನಾರಾಯಣನೂ ಕಾಲಾನಂತರದಲ್ಲಿ ಗಂಗಾಧರನ ಮರೆತ. 


ಒಂದು ಉತ್ತಮ ನೆಮ್ಮದಿ ತೃಪ್ತ ಉತ್ಪತ್ತಿ ನೀಡುತ್ತಿದ್ದ ಯಜ್ಞನಾರಾಯಣನ ಆರ್ಥಿಕ ಮೂಲಾಧಾರ ವಾಗಿದ್ದ ಅಡಿಕೆಗೆ ಮಹಾ ಮಾರಿ ಹಳದಿ ಎಲೆ ರೋಗ ವಕ್ಕರಿಸಿ  ಕುಟುಂಬದ ಆರ್ಥಿಕ ಮೂಲಕ್ಕೆ ಕೊಡಲಿ ಏಟು ನೀಡಿ ಕುಸಿದು ಕೂರವಂತೆ ಮಾಡಿತ್ತು. ಯಜ್ಞನಾರಾಯಣ ಕೃಷಿಯೇ ಬದುಕು ಭವಿಷ್ಯವೆಂದು ನಂಬಿ ಡಿಗ್ರಿ ತನಕ ಓದಿ ಕೃಷಿಗೆ ಮರಳಿದ್ದ‌. ಆದರೆ ಯಜ್ಞನ ಅಪ್ಪನ ಅನಾರೋಗ್ಯ, ತಂಗಿದಿಕ್ಕಳ ಮದುವೆ ಮಾಡಿ ಯಜ್ಞನಾರಾಯಣ ತಾನು ಮದುವೆ ಮಾಡಿಕೊಳ್ಳುವಷ್ಟೊತ್ತಿಗೆ ಯಜ್ಞ ಊಹೆ ಮಾಡಿಕೊಳ್ಳಲಾಗ ದಷ್ಟು ಆರ್ಥಿಕ ಕುಸಿತ ಕಂಡಿದ್ದ. ಜೀವನದ ಅನಿವಾರ್ಯಕ್ಕಾಗಿ "ಅಡಿಗೆ ವೃತ್ತಿ"ಗೆ ಹೋಗುತ್ತಿದ್ದ‌. ಪುಣ್ಯಕ್ಕೆ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವ ಪತ್ನಿ ಯಜ್ಞನ ಕೈ ಹಿಡಿದಿದ್ದಳು. ಅವಳೂ ಬಿಡುವಿದ್ದಾಗ ಮದುವೆ ಸಮಾರಂಭಗಳಿಗೆ ಬಡಿಸಲು ಹೋಗುತ್ತಿದ್ದಳು. ಕೃಷಿ ಮೂರು ಮತ್ತು ಮೂರಕ್ಕಿಂತ ಕೆಳಗೆ ಎನ್ನಬಹುದು.

 

ಈ ಎಲ್ಲಾ ಬದುಕಿನ ಜಂಜಾಟದಲ್ಲಿ ಯಜ್ಞ ಅಕ್ಷರಶಃ ಗಂಗಾಧರನನ್ನು ಮರೆತೇ ಬಿಟ್ಟಿದ್ದ. ಆದರೆ ಈ ಆಂಡ್ರಾಯ್ಡ್ ಫೋನ್ ಯುಗದಲ್ಲಿ ಫೇಸ್ ಬುಕ್ ಮಾಧ್ಯಮದಲ್ಲಿ ಒಂದು ದಿನ ಗಂಗಾಧರ ಯಜಲುಕೊಡಿಗೆ ಎನ್ನುವ ಫ್ರೆಂಡ್ ರಿಕ್ವೆಸ್ಟ್ ನೋಡಿ ಆನಂದ ತುಂದಿಲನಾಗಿ ಅದಕ್ಕೆ ಅಕ್ಸೆಪ್ಟ್ ಕೊಟ್ಟಿದ್ದ. ತದನಂತರ ಮೆಸೆಂಜರ್ ನಲ್ಲಿ ಫೋನ್ ನಂ ಷೇರ್ ಮಾಡಿಕೊಂಡು ಅದು ಇಲ್ಲಿ ತನಕ ಬಂದಿದೆ.

(ಮುಂದುವರಿಯುವುದು)


-ಪ್ರಬಂಧ ಅಂಬುತೀರ್ಥ

9481801869


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top