ಸಂಪ್ರದಾಯ: ಸೋಣೆ ಸಂಕ್ರಾಂತಿ ದಿನ ಹೊಸ್ತಿಲಿಂಗೆ ಹೊಡಾಡುದು ಎಂತಕೆ...? (ಹವ್ಯಕ ಲೇಖನ)

Upayuktha
0


ಡಿಗುಟ್ಟಿ ಸುರಿವ ಮಳೆಯ ಆಟಿ ತಿಂಗಳು ಕಳುದು ಸೋಣೆ ತಿಂಗಳು ಹತ್ತರೆ ಬಪ್ಪಗ ಸೋಣೆ ಸಂಕ್ರಾಂತಿ ದಿನದ ವಿಶೇಷದ ಬಗ್ಗೆ ರಜಾ ಬರವನಾ ಕಂಡತ್ತು.

 

ಸೋಣೆ ಸಂಕ್ರಾಂತಿಯ ವಿಶೇಶ ಎಂತರ ಗೊಂತಿದ್ದಾ, ಸೋಣೆ ಅಜ್ಜಿ ಮನೆಗೆ ಬಪ್ಪದು. ಇದು ಯೇವ ಅಜ್ಜಿ ಕೇಳೆಡಿ. ಈಗಾಣ ಮಕ್ಕೊಗೆ ಈ ಅಜ್ಜಿಯ ಗುರ್ತಯಿದ್ದೋ, ಇಲ್ಲೆಯೋ ಗೊಂತಿಲ್ಲೆ. ಆದರೆ ಹಿರಿಯರಿಂಗೆ ಗೊಂತಿಕ್ಕು.


ಸೋಣೆ ಸಂಕ್ರಾಂತಿ ದಿನ ಹೊಸ್ತಿಲಿಂಗೆ ಸೇಡಿ ಬರದು, ಬೀಜಬೊಂಡು, ಬೇಳೆ, ಸೋಣೆ ಹೂಗು ಎಲ್ಲ ಹಾಕಿ ಹೊಡಾಡಿ ಹೆಮ್ಮಕ್ಕೊ ಸೋಣೆ ಅಜ್ಜಿಯ ಎದುರುಗೊಂಬದು ಪ್ರಾಕಿಂದ ಬಂದ ಕ್ರಮ. ಹಳೇ ನೆಂಪುಗಳ ಹೇಮಾರಿಕೆಯ ಪೆಟ್ಟಿಗೆಯ ಮುಚ್ಚಲು ತೆಗದರೆ ಮನಸ್ಸು ಬಾಲ್ಯದ ಕಡೆಂಗೆ ಓಡ್ತು. 


ಈ ಆಚರಣೆ ಯೇವಗ, ಆರು ಎಲ್ಲಿ ಸುರು ಮಾಡಿದ್ದೂಳಿ ನಿಜಕ್ಕೂ ಗೊಂತಿಲ್ಲೆ. ಸಣ್ಣಾದಿಪ್ಪಗ ಜೋರು ಮಳೆ ಬಪ್ಪ ಸಮಯಲ್ಲಿ ಅಜ್ಜಿ ಬೀಜ, ಹಲಸಿನ ಬೇಳೆ ಸುಟ್ಟಾಕಲೆ ಹೆರಟವು ಹೇಳಿ ಆದರೆ ಮಕ್ಕಳ ಸಂಭ್ರಮ ಹೇಳ್ಲೆಡಿಯ. ಅಜ್ಜಿಯ ಹಿಂದೆ ಮುಂದೆ ಸುಳುದು, ಅಜ್ಜಿಯ ಕೈಂದ "ಎಲ್ಲಿಗೆ ಸೊಣಙುದು ಮಕ್ಕಳೇ, ಎಂತ ಅಂಗಲ್ಪು ನಿಂಗೊಗೆ, ನಾಳಂಗೆ ಹೊಸ್ತಿಲಿಂಗೆ ಹೊಡಾಡಿದ ಮತ್ತೆ ನಿಂಗೊಗೆ ಕೊಡುದು ಇದರ. ಅಲ್ಲಿ ವರೆಗೆ ತಳಿಯದ್ದೆ ಕೂರಿ ನೋಡ° " ಹೇಳಿ ಎರಡು ಬೈಗಳೆಲ್ಲ ತಿಂದರೂ ಆ ಕೊದಿಗೆ ಅದೆಲ್ಲ ಎಲ್ಲಿ ನಾಟುಗು? 


'ಅಜ್ಜಿ ಸುಟ್ಟಾಕಿದ್ದರ್ಲಿ ಎಷ್ಟು ಬೀಜಬೊಂಡು ಇಡೀ ಸಿಕ್ಕಿದ್ದು, ಎಷ್ಟು ತುಂಡಾಯಿದು, ಸುಟ್ಟಾಕಿದ ಬೇಳೆ ಕಪ್ಪಾಯಿದೋ....ಹೀಂಗಿದ್ದ ಆಲೋಚನೆಗೊ ಮಾತ್ರ ಅಂಬಗ ಇಪ್ಪದು. 


ಸುಟ್ಟಾಕಿದ ಬೀಜಬೊಂಡು, ಬೇಳೆಯ ಚೋಲಿ ತೆಗದು ಅಜ್ಜಿ ಲಾಯ್ಕದ ಕುಡಿಕೆಲಿ‌ ಮಡುಗಿ ಬಾಯಿಕಟ್ಟಿ ಅಡಿಗೊಳ ಜೆಂಗಲ್ಲಿ ಮಡುಗ್ಗು.


ಮರುದಿನ ಉದಿಯಪ್ಪಗ ಮಕ್ಕೊ ಏಳೆಕಾರೆ ಅಜ್ಜಿಗೆ ತಲೆಗೆ ಮೈಯಿಗೆ ಮಿಂದಕ್ಕು. ತಲೆಗೊಂದು ಚೆಂಡಿಹರ್ಕು ಕಟ್ಟಿಂಡು ಕುಂಕುಮದ ಅಡ್ಡನಾಮ ಹಾಕಿಂಡು, ಪೆರ್ಲ ಮಗ್ಗದ ಸೀರೆ ಸುತ್ತಿಂಡಿಪ್ಪ ಅಜ್ಜಿಯತ್ರೆ ಆ ದಿನ ಮಕ್ಕೊಗೆಲ್ಲ ವಿಶೇಷ ಪ್ರೀತಿ. ಎಂತಕೇಳಿ ಪುನಾ ಹೇಳೆಡನ್ನೇ.


ಬೇಗ ಹಲ್ಲುತಿಕ್ಕಿ, ಮೋರೆ ತೊಳದು ಬಂದಿಕ್ಕಿ ಅಜ್ಜಿಗೆ ಹೊಸ್ತಿಲಿಂಗೆ ಹೊಡಾಡಿ ಅಪ್ಪನ್ನಾರ ತಳಿಯದ್ದೆ ಕೂರೆಕು ಹೇಳಿ ಲೆಕ್ಕ, ತಳಿಯದ್ದೆ ಕೂದರೆ ಮಕ್ಕೊ‌ಅಪ್ಪದೇಂಗೆ..!!!!


"ಅಜ್ಜೀ..ಎನಗೆ ದೊಡ್ಡ ತುಂಡು ಬೇಳೆ ಬೇಕಾತ, ಕಪ್ಪಾಗದ್ದ ಬೀಜಬೊಂಡು ಕೊಡೆಕು..ಅದೂ..ಇದೂ ಚಯಿ° ಚುಯಿ° ಹೇಳಿಂಡು ಅಜ್ಜಿಯ ಬೆನ್ನಾರೇ ತಿರುಗ್ಗು ಈ ಮಕ್ಕೊ.


"ಎಲ್ಲ ಕೊಡ್ತೆ, ಅಂಬ್ರೆಪ್ಪು ಮಾಡೆಡಿ" ಹೇಳಿ ಅಜ್ಜಿಯ ಅಭಯವಾಕ್ಯ ಕೇಳಿಯಪ್ಪಗ ಮನಸ್ಸಿಂಗೆಂತೋ ಸಮದಾನ!


ಬಾಕಿದ್ದ ದಿನ ನಾಲ್ಕು ಬೆಳಿ ಹೂಗು ತಂದು ಹೊಸ್ತಿಲಿಂಗೆ ಹೊಡಾಡುವ ಅಜ್ಜಿ ಸೋಣೆ ಸಂಕ್ರಾಂತಿ ದಿನ ಹಾಂಗಲ್ಲ.


ಸೋಣೆ ಹೂಗು, ಕೆರೆಮಣೆ ಹೂಗು, ಕೊಡೆ ಹೂಗು ಎಲ್ಲ ಒಂದು ಬಾಳೆಕೀತಿಲ್ಲಿ ಅಲ್ಲದ್ರೆ  ಉಪ್ಪಳಿಗನ ಸೊಪ್ಪಿಲ್ಲೋ ಮಣ್ಣೋ ಕೊಯ್ಕೊಂಡು ಬಂದು, ದೇವರೊಳಾಣ ಹೊಸ್ತಿಲು ತೊಳದು, ಸೇಡಿಹೊಡಿಯ ನೀರು ಮಾಡಿ, ನೆಣೆ ಹರ್ಕಿನ ತಿರ್ಪಿ ಸೇಡಿಹೊಡಿಲಿ ಅದ್ದಿ, ಹೊಸ್ತಿಲಿನ ಮೇಗಂಗೆ ಅದರ್ಲಿ ಎರಡೆರಡು ಗೀಟು ಹಾಕಿ, ಚಂದ್ರಕಲೆಯ ಹಾಂಗೊಂದು ಚಿತ್ರ ಬಿಡುಸುಗು. ಅದರ ಕರೆ ಕರೇಲಿ ಸಣ್ಣ ಸಣ್ಣ ಬೊಟ್ಟು ಹಾಕುಗು. ಅದಾದ ಮತ್ತೆ ಮದಲೇ ತೆಗದು ಮಡುಗಿದ ಅಕ್ಕಿಕಾಳು, ತಳದು ಮಡುಗಿದ ಗಂಧದ ಬೊಟ್ಟು ಹಾಕಿ, ಚೆಂಬಿನ ಕೊಡಪ್ಪಾನಲ್ಲಿ ಬಾವಿಂದ ಎಳದು ತಂದ ನೀರಿನ ಕೊಂಬುಗಿಂಡಿಗೆ ತುಂಬುಸಿ ಹೊಸ್ತಿಲಿಲ್ಲಿ ಮಡುಗಿ, ಮುನ್ನಾಣ ದಿನ ಸುಟ್ಟಾಕಿ ಮಡುಗಿದ ಬೀಜಬೊಂಡು, ಬೇಳೆಯೊಟ್ಟಿಂಗೆ ಇಂದು ಕೊಯ್ದ ಹೂಗುಗಳನ್ನೂ ಸೇರ್ಸಿ ಹೊಸ್ತಿಲಿನ ಮೇಗೆ ಮಡುಗಿ ಹೊಡಾಡುಗು.


ಹಾಂಗೆ ಹೊಡಾಡುಗ ಅಂತೇ ಹೊಡಾಡುದಲ್ಲ. ಚೆಂದಕೆ ಒಂದು ಸ್ತೋತ್ರ ಅಲ್ಲ, ಪದ್ಯವೋ, ಎಂತೋ ಒಂದು.. ಅದರ ರಜ ರಾಗಲ್ಲಿ, ಶ್ರದ್ಧಾಭಕ್ತಿಲಿ ಹೇಳುಗು.


ಹೊಸ್ತಿಲೆ ಹೊಸ್ತಿಲೆ ಹೊನ್ನ ಹೊಸ್ತಿಲೇ

ಚಿನ್ನದ ಗಿಂಡೀಲಿ ನೀರು ತತ್ತೆ

ಬೆಳ್ಳಿಯ ತಟ್ಟೇಲಿ ಹೂಗು ಕೊಯ್ತೆ

ಗಂಗಾದೇವಿಗೆ ಮಗಳಪ್ಪೆ

ಗೌರೀದೇವಿಗೆ ಸೊಸೆಯಪ್ಪೆ

ಓಲೆ ಭಾಗ್ಯವ ಒಳುಶಿಕೊಡು'


ಇದರ ಪ್ರತಿದಿನವು ಹೊಸ್ತಿಲಿಂಗೆ ಹೊಡಾಡುವ ಹೆಮ್ಮಕ್ಕೊ ಹೇಳ್ತವು. ಕೆಲವು ಕಡೆಲಿ ರಜ ಹೆಚ್ಚುಕಮ್ಮಿ ಇಪ್ಪಲೂ ಸಾಕು. ಗೊಂತಿಲ್ಲೆ. ಆದರೆ ಹೊಸ್ತಿಲಿಂಗೆ ಹೊಡಾಡುವ ಎಲ್ಲಾ ಹೆಮ್ಮಕ್ಕಳ ಮುಖ್ಯ ಉದ್ಧೇಶವೇ ಓಲೆ ಸೌಭಾಗ್ಯ ಸ್ಥಿರವಾಗಿ ಇರೆಕು ಹೇಳುವ ಅಭಿಲಾಷೆ.


ಹೊಸ್ತಿಲಿಂಗೆ ಹೊಡಾಡಿ ಎದ್ದಿಕ್ಕಿ ಕೊಂಬುಗಿಂಡಿಂದ ರಜ ತೀರ್ಥ ತೆಕೊಂಡು, ಹೊಸ್ತಿಲಿಲ್ಲಿ ಮಡುಗಿದ ಹೂಗಿನ ಪ್ರಸಾದದ ಹಾಂಗೆ ತಲೆಗೆ ಸೂಡಿಕ್ಕಿ, ಗಿಂಡಿಲಿಪ್ಪ ನೀರಿನ ತೆಂಗಿನಮರದ ಬುಡಕ್ಕೆ ಎರದಿಕ್ಕಿ ಬಕ್ಕು. ಕೆಲವು ದಿಕೆ ತುಳಸೀಕಟ್ಟೆಗು ಎರವ ಕ್ರಮ ಇದ್ದಾಡ.


ಅದಾಗಿ ಬಂದ ಮತ್ತೆ ಹೊಸ್ತಿಲಿಲ್ಲಿಪ್ಪ ಬೀಜಬೊಂಡು, ಬೇಳೆ ತೆಗದು ಮಕ್ಕೊಗೆಲ್ಲ ಪ್ರಸಾದ ಹಂಚುದು. ಆ ಪ್ರಸಾದದ ರುಚಿ ಈಗಲೂ ನಾಲಗೆ ಕೊಡೀಲಿ ಇಪ್ಪ ಹಾಂಗಾವ್ತು. 


'ಹೆಮ್ಮಕ್ಕೊ ಹಿರಿಯರ ಕಾಲಿಂಗೆ ಹೊಡಾಡಿ ಆಶೀರ್ವಾದ ತೆಕ್ಕೊಂಬ ಕ್ರಮವು ಕೆಲವುದಿಕೆ ಇದ್ದಾಡ. ಗೆಂಡಂಗೆ ಹೊಡಾಡ್ತರೆ 'ಹೊಡಾಡ್ತೆ' ಹೇಳಿ ಹೇಳುವ ಕ್ರಮ ಇಲ್ಲೇಳಿ ಅಜ್ಜಿ ಹೇಳುಗು. 


ಅಜ್ಜಿಯಕ್ಕೊ ಹೇಳಿಕೊಟ್ಟ ಹಳೇ ಕ್ರಮಂಗಳ ಎಲ್ಲ ಮುಂದುವರಿಸೆಕೂಳಿ ಆಶೆಯಿದ್ದರೂ ಎಷ್ಟೋ ಜನಕ್ಕೆ ಈಗೀಗ ಹಾಂಗಿದ್ದ ಕ್ರಮಂಗಳ ಒಳಿಶಿಕೊಂಬಲೆ ಎಡಿತ್ತಿಲ್ಲೆ. ಗಡಿಬಿಡಿಯ ಜೀವನದ ಎಡೇಲಿ ಕೆಲವು ಹಳೆಯ ಆಚರಣೆಗೊ ಮೂಲೆಪಾಲಾವ್ತಾಯಿದ್ದು. ಅಂದರೂ ನಮಗೆ ಎಡಿಗಾದಷ್ಟು ಆಚರಣೆಗಳ ಒಳಿಶಿಕೊಂಬ°. ನಮ್ಮ ಮುಂದಾಣ ತಲೆಮಾರಿಂಗೆ ಅದರ ಮಹತ್ವವ ತಿಳಿಸುವ°. 


ಆನು ಇಂದು ಹೊಸ್ತಿಲಿಂಗೆ ಹೊಡಾಡಿ ಸೋಣೆ ಅಜ್ಜಿಯ ಕರಕೊಂಡು ಬಯಿಂದೆ. ನಿಂಗಳೂ ಕರಕೊಂಡು ಬಯಿಂದಿ ಅಲ್ಲದಾ....!


- ಪ್ರಸನ್ನಾ ವಿ. ಚೆಕ್ಕೆಮನೆ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top