ಬೆಂಗಳೂರು: ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ಹಾಗೂ ಹೆಳವನಕಟ್ಟೆ ರಂಗನಾಥ ಭಕ್ತ ವೃಂದದವರು ಜಂಟಿಯಾಗಿ ಗುರುವಾರ (ಆ.28) ಹಿರಿಯ ಮಹಿಳಾ ಹರಿದಾಸರಾದ ಶ್ರೀಮತಿ ಶಕುಂತಲಾ ವೆಂಕಟೇಶಮೂರ್ತಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಗಿರಿಯಮ್ಮ ಅನುಗ್ರಹ ಪ್ರಶಸ್ತಿಯನ್ನು ಅವರ ಸ್ವಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು.
ಅವರ ಅನುಭವಗಳು ಹಾಗೂ ಪಾರಾಯಣದ ವಿಷಯಗಳನ್ನು ಕುರಿತು ಅವರಿಂದಲೇ ಸಂಗ್ರಹ ಮಾಡಲಾಯಿತು. ಶ್ರೀಮತಿ ಶಕುಂತಲಾ ವೆಂಕಟೇಶ್ ಮೂರ್ತಿ ಅವರು 14 ಗ್ರಂಥಗಳನ್ನು ರಚನೆ ಮಾಡಿರುತ್ತಾರೆ ಹಾಗೂ 76 ಬಾರಿ ಭಾಗವತವನ್ನು ಪಾರಾಯಣ ಮಾಡಿದ, 94 ವರ್ಷದ ಮಹಾನ್ ಸಾಧಕ ಜೀವಿ ಇವರು. ಜೀವನದ ಸುಖ-ದುಃಖಗಳ ಸಮ್ಮಿಳಿತದೊಂದಿಗೆ ಯಜಮಾನರ ಅಗಲಿಕೆಯ ಕಠಿಣ ಪರಿಸ್ಥಿತಿಯಲ್ಲಿಯೂ, ಮಕ್ಕಳ ಜವಾಬ್ದಾರಿಯನ್ನು ನಿಭಾಯಿಸುತ್ತಾ, ಸಾಧನೆ ಮಾಡಿದ ಸಾಧಕ ಅಭಿನಂದನಾರ್ಹ ಮಹಿಳೆಯಿವರು. ಇವರಂತೆಯೇ ಸಮಾಜದಲ್ಲಿ ಎಲೆ ಮರೆಯ ಕಾಯಿಯಂತಿದ್ದು, ಸಾಧನೆಗೈದ ಅನೇಕ ಮಾತೆಯರನ್ನು ಗುರುತಿಸಿದ ಮೈತ್ರೇಯಿ ಟ್ರಸ್ಟ್‌ನ ಕಾರ್ಯ ಸ್ತುತ್ಯರ್ಹವಾದುದು ಎಂದು ಸ್ಮರಿಸಿಕೊಳ್ಳಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ, ಇತ್ತೀಚೆಗೆ ನಮ್ಮನ್ನು ಅಗಲಿದ ಮಹಾನ್ ಚೇತನ ಅನಂತಚಾರ್ ಕಟಗೇರಿ ದಾಸರು ಹರಿದಾಸ ಸಾಹಿತ್ಯದ ಪ್ರಸಾರದಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ಮೈತ್ರೇಯಿ ಸಂಘದ ಅಧ್ಯಕ್ಷೆ ಡಾ. ಸುಧಾ ದೇಶಪಾಂಡೆ, ಉಪಾಧ್ಯಕ್ಷೆ ಡಾ. ಶಾಂತಾ ರಘೂತ್ತಮ, ಕೋಶಾಧ್ಯಕ್ಷೆ ಡಾ. ವಿದ್ಯಾಶ್ರೀ ಕುಲಕರ್ಣಿಯವರಲ್ಲದೇ, ಸಂಘದ ಸದಸ್ಯರು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ