ಭವಿಷ್ಯದ ಬದುಕನ್ನೇ ಬದಲಾಯಿಸಬಲ್ಲ ಎನ್‌ಟಿ, ಬಿಟಿ, ಎಐಗಳು: ಡಾ. ಎಸ್‌.ಎಂ ಶಿವಪ್ರಸಾದ್

Upayuktha
0

ಎನ್‌ಎಂಐಟಿ ನಿಷ್ಕ್ರಮಿತ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ





ಯಲಹಂಕ, ಬೆಂಗಳೂರು: ‘ವಿಜ್ಞಾನ ಕಂಡಂತಹ ಸತ್ಯಗಳು ದೈನಂದಿನ ಜೀವನವನ್ನು ಹಸನುಗೊಳಿಸಲು, ಅವು ರೂಪಾಂತರಗೊಂಡು ತಂತ್ರಜ್ಞಾನದ ಕಕ್ಷೆಗೆ ಒಳಪಡಬೇಕು. ಹಿಂದೆ ಈ ಪ್ರಕ್ರಿಯೆ ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿತ್ತು. ಈಗ ಹಾಗಲ್ಲ. ಕ್ಷಣಕ್ಷಣಕ್ಕೂ ಬದಲಾವಣೆಗಳನ್ನು ಕಾಣುವಂತಹ ಹಾಗೂ ತಂತ್ರಜ್ಞಾನದ ವಿಸ್ಮಯಗಳನ್ನು ಸಾಕ್ಷಾತ್ಕರಿಸಿಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ಕಲಿಕೆಯನ್ನು ಜ್ಞಾನವಾಗಿ, ಜ್ಞಾನವನ್ನು ಕೌಶಲ್ಯವಾಗಿ ವೇಗದಿಂದ ಪರಿವರ್ತಿಸಿಕೊಳ್ಳುವ ಶಕ್ತಿ ಈ ತಲೆಮಾರಿಗೆ ಲಭ್ಯವಿದೆ. ನ್ಯಾನೋ ಟೆಕ್ನಾಲಜಿ, ಬಯೋ ಟೆಕ್ನಾಲಜಿ ಹಾಗೂ ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ನಮ್ಮ ಭವಿಷ್ಯದ ಬದುಕನ್ನೇ ಬದಲಾಯಿಸಬಲ್ಲವು ಎಂಬುದನ್ನು ನಾವು ಅರಿತಿದ್ದೇವೆ ಎಂದು ಧಾರವಾಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿಯ ಡೀನ್ ಹಾಗೂ ಪ್ರಾಧ್ಯಾಪಕ ಡಾ. ಎಸ್.ಎಂ. ಶಿವಪ್ರಸಾದ್ ನುಡಿದರು.



ಅವರು ಬೆಂಗಳೂರಿನ ಯಲಹಂಕದಲ್ಲಿರುವ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜನೆಗೊಂಡಿದ್ದ 2025ರ ನಿಷ್ಕ್ರಮಿತ ವಿದ್ಯಾರ್ಥಿ ತಂಡದ ಸ್ನಾತಕ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.


ಬ್ಲಾಕ್‌ಚೈನ್ ಟೆಕ್ನಾಲಜಿ ಬಂದರೆ ಬ್ಯಾಂಕ್‌ಗಳ ಅವಶ್ಯಕತೆಯಿಲ್ಲ, ಡ್ರೈವರ್-ರಹಿತ ಕಾರ್‌ಗಳು ಬಂದರೆ ಡ್ರೈವರ್‌ಗಳ ಅಗತ್ಯವಿಲ್ಲ, ರೋಗ ವಿಶ್ಲೇಷಣೆ ಹಾಗೂ ಶಸ್ತ್ರಚಿಕಿತ್ಸೆಗಳನ್ನು ರೋಬೋಟ್ ತಂತ್ರಜ್ಞಾನ ನಿರ್ವಹಿಸಿದರೆ ವೈದ್ಯರ ಅಗತ್ಯವಿಲ್ಲ ಎಂಬುದು ಕೇವಲ ಕನಸಲ್ಲ, ನನಸಾಗುವ ಸಮಯ ಸನ್ನಿಹಿತವಾಗಿದೆ. ಏಕೆಂದರೆ ಯಂತ್ರಗಳು ಮನುಷ್ಯ ಮಾಡುತ್ತಿರುವ ಅನೇಕ ಕಾರ್ಯಗಳನ್ನು ತಾವೇ ಮಾಡಲಿವೆ. ಅದರಿಂದ ಯುವ ತಂತ್ರಜ್ಞರು ವಿಭಿನ್ನವಾಗಿ ಈ ತಂತ್ರಜ್ಞಾನವನ್ನು ಮತ್ತಷ್ಟು ವಿಸ್ತರಿಸುವತ್ತ ಕೊಂಡೊಯ್ಯಬೇಕಿದೆ. ಇದು ತೀವ್ರ ಬದ್ಧತೆ ಹಾಗೂ ನಿರಂತರ ಕಲಿಕೆಯಿಂದ ಮಾತ್ರ ಸಾಧ್ಯ. ಈ ಕಲಿಕೆಯಿಂದ ಗಳಿಸಿದ ಜ್ಞಾನ ಸಂಪತ್ತನ್ನು ಬದ್ಧತೆ ಮತ್ತು ಅನುರಾಗದಿಂದ ನಮ್ಮ ವೃತ್ತಿಬದುಕಿನಲ್ಲಿ ಬಳಸಿಕೊಳ್ಳಬೇಕು. ಈ ಹಿಂದೆ ನೂರಾರು ವರ್ಷಗಳಲ್ಲಿ ಕಾಣಬಹುದಾಗಿದ್ದ ಬದಲಾವಣೆಗಳನ್ನು ಕೇವಲ ಹತ್ತಾರು ವರ್ಷಗಳಲ್ಲಿ ಕಾಣುವ ಹಾಗೂ ಅನುಭವಿಸುವ ಭಾಗ್ಯ ಈ ತಲೆಮಾರಿನ ತಂತ್ರಜ್ಞರು ಹಾಗೂ ಯುವ ವಿಜ್ಞಾನಿಗಳಿಗೆ ಒದಗಿಬಂದಿದೆ ಎಂದು ಅವರು ಹೇಳಿದರು. 


ಸಹಯೋಗ-ಸಹಬಾಳ್ವೆಯಿಂದ ಮುನ್ನಡೆ:

‘ನಮ್ಮ ವಿಜ್ಞಾನ, ತಂತ್ರಜ್ಞಾನ, ನಮ್ಮನ್ನು ಎಷ್ಟೇ ಸಶಕ್ತರನ್ನಾಗಿಸಲಿ, ನಾವು ಪರಸ್ಪರ ಪ್ರೀತಿಸುವ ಹಾಗೂ ಗೌರವಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಜೀವನದ ಪ್ರತಿ ಹಂತದಲ್ಲೂ ಮಾನವೀಯತೆಯನ್ನು ಅತ್ಯಂತ ನಮ್ರತೆಯಿಂದ ತೋರಿಸಬೇಕು. ಶಿಕ್ಷಣ ಯಾವಾಗಲೂ ಪ್ರೀತಿಯ ಅಡಿಗಲ್ಲಿನ ಮೇಲೆ ನಿಂತಿರುತ್ತದೆಯೇ ಹೊರತು ದ್ವೇಷ ಭಾವನೆಯನ್ನು ಎಂದಿಗೂ ಪ್ರಚೋದಿಸುವುದಿಲ್ಲ. ಹಾಗಾಗಿ ನಾವು ಎಲ್ಲರೊಡಗೂಡಿ ದೇಶವನ್ನು ಹೊಸ ತಂತ್ರಜ್ಞಾನಗಳ ಆವಿಷ್ಕಾರಗಳ ಹಿನ್ನೆಲೆಯಲ್ಲಿ ಅಭಿವೃದ್ಧಿಪಡಿಸಬೇಕು. ಸಹಯೋಗ ಹಾಗೂ ಸಹಬಾಳ್ವೆಯಿಂದ ಮಾತ್ರ ನಾವು ಈ ದೇಶವನ್ನು ಮುನ್ನೆಲೆಗೆ ತರಬಲ್ಲೆವು’ ಎಂದರು.


ನಂತರದಲ್ಲಿ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ. ಜೆ. ಸುಧೀರ್ ರೆಡ್ಡಿ, ಇಂಜಿನಿಯರಿಂಗ್ ಪದವಿಗಳಿಗೆ ಅರ್ಹರಾದ ವಿದ್ಯಾರ್ಥಿಗಳ ಪಟ್ಟಿಯನ್ನು ಸಲ್ಲಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲು ವಿನಂತಿಸಿದರು. ಅದರಂತೆ ಒಟ್ಟು 998 ಅರ್ಹ ವಿದ್ಯಾರ್ಥಿಗಳು ಸ್ನಾತಕ ಪದವಿಗಳನ್ನು ಸ್ವೀಕರಿಸಿದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್‌ನ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ ನೂತನ ಪದವೀಧರರಿಗೆ ತೈತ್ತರೀಯೋಪನಿಷತ್ತಿನಲ್ಲಿ ವಿಧಿತವಾಗಿರುವ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.



ಪ್ರತಿ ವರ್ಷದಂತೆ ಈ ವರ್ಷವೂ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಿಸಲಾಯಿತು. ಅತ್ಯುತ್ತಮ ಶೈಕ್ಷಣಿಕ ಕ್ಷಮತೆ ದಾಖಲಿಸಿ ತಲಾ 9.73 ಸಿ.ಜಿ.ಪಿ.ಎ ಅಂಕಗಳನ್ನು ಗಳಿಸಿದ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ನಿವೇದಿತ ಜಿ ಹಾಗೂ ಇನ್‌ಫರ್ಮೇಶನ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಅಭಿನಂಧನ್ ಎಸ್. ವಿಶ್ವರೂಪ್ ಪ್ರತಿಷ್ಠಿತ ನಿಟ್ಟೆ ಗುಲಾಬಿಶೆಟ್ಟಿ ಸ್ಮರಣಾರ್ಥ ಚಿನ್ನದ ಪದಕಗಳನ್ನು ಸ್ವೀಕರಿಸಿದರು.


ಅತ್ಯುತ್ತಮ ವಿದ್ಯಾರ್ಥಿನಿಗೆ ಸಲ್ಲುವ ನಿಟ್ಟೆ ಮೀನಾಕ್ಷಿ ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕ ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದ ಖುಷಿ ಚಂದ್ರಶೇಖರ್ ಅರಗನ್ಜಿ ಅವರಿಗೆ ಲಭಿಸಿತು. ಅತ್ಯುತ್ತಮ ವಿದ್ಯಾರ್ಥಿಗೆ ಮೀಸಲಿರುವ ಜಸ್ಟಿಸ್ ಕೆ.ಎಸ್. ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕವನ್ನು ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಕಾರ್ತಿಕ್ ಪಡೆದರು. ಪ್ರತಿ 9 ಇಂಜಿನಿಯರಿಂಗ್ ವಿಭಾಗಗಳಲ್ಲಿ ಒಟ್ಟು 9 ಸ್ನಾತಕ ಪ್ರತಿಭಾನ್ವಿತರಿಗೆ ಚಿನ್ನದ ಪದಕಗಳನ್ನು ವಿತರಿಸಲಾಯಿತು. ಒಟ್ಟು 81 ರ‍್ಯಾಂಕ್ ಪಡೆದ ಇಂಜಿನಿಯರಿಂಗ್ ಪದವೀಧರರಲ್ಲಿ ವಿದ್ಯಾರ್ಥಿಗಳ ಸಂಖ್ಯೆ 36 ಹಾಗೂ ವಿದ್ಯಾರ್ಥಿನಿಯರ ಸಂಖ್ಯೆ 45.


ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ಮಾತನಾಡಿ, ‘ನೂತನ ಪದವೀಧರರು ತಮ್ಮ ಜ್ಞಾನಾರ್ಜನೆಗೆ ಅವಕಾಶ ಮಾಡಿಕೊಟ್ಟ ಶಿಕ್ಷಣ ಸಂಸ್ಥೆಯನ್ನು ಮರೆಯಬಾರದು. ಅವರು ಆಗಾಗ್ಗೆ ತಾವು ಕಲಿತ ವಿದ್ಯಾಸಂಸ್ಥೆಗೆ ಬಂದು ಕಿರಿಯ ವಿದ್ಯಾರ್ಥಿಗಳು ಸದೃಢ ಹೆಜ್ಜೆಗಳನ್ನಿಡು ವಂತೆ ಪ್ರೇರೇಪಿಸುತ್ತಿರಬೇಕು’ ಎಂದು ನುಡಿದರು.


ಪ್ರಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಸರ್ವರನ್ನೂ ಸ್ವಾಗತಿಸಿದರು. ನಿಟ್ಟೆ ಶಿಕ್ಷಣ ಸಂಸ್ಥೆಯ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೆರಾಯ, ಆಡಳಿತ ಮಂಡಳಿ ಸದಸ್ಯರು, ಸಂಸ್ಥೆಯ ಪರೀಕ್ಷಾ ನಿಯಂತ್ರಕ ಡಾ. ಪ್ರಶಾಂತ್ ವಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top