ಉಡುಪಿ: ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕ ರಂಗಕರ್ಮಿ, ಧಾರ್ಮಿಕ ಮುಂದಾಳು ಪ್ರೊ ಕೆ. ಸೀತಾರಾಮ ಭಟ್ಟರು (92 ವರ್ಷ) ಮಂಗಳವಾರ ರಾತ್ರಿ ಉಡುಪಿ ಅಂಬಲಪಾಡಿಯ ಸ್ವಗೃಹದಲ್ಲಿ ವೃದ್ಧಾಪ್ಯದ ಕಾರಣದಿಂದ ಕೊನೆಯುಸಿರೆಳೆದರು.
ಉಡುಪಿ ಉದ್ಯಾವರದ ಆಯುರ್ವೇದ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥರಾಗಿ ಸುದೀರ್ಘ ಅವಧಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು ನಾಟಕ ಕಲಾವಿದ, ನಿರ್ದೇಶಕರೂ ಆಗಿ ಚಿರಪರಿಚಿತರಾಗಿದ್ದರು. ಶ್ರೀ ಪೇಜಾವರ ಮಠದ ವಿಶೇಷ ಪರಿಚಾರಕರಾಗಿ ಹಾಗೂ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪರ್ಯಾಯಾವಧಿಗಳಲ್ಲಿ ಕೃಷ್ಣಮಠದ ಕಲಾ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿ ಅನೇಕ ವರ್ಷ ಸೇವೆ ಸಲ್ಲಿಸಿ ಶ್ರೀಗಳ ಅಭಿಮಾನಕ್ಕೆ ಪಾತ್ರರಾಗಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಶ್ರೀ ಪೇಜಾವರ ಶ್ರೀಗಳ ಸಂತಾಪ
ಸೀತಾರಾಮ ಭಟ್ಟರ ನಿಧನಕ್ಕೆ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು ಅವರು ಶ್ರೀ ಮಠಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಅವರಿಗೆ ಸದ್ಗತಿಯನ್ನು ಪ್ರಾರ್ಥಿಸಿದ್ದಾರೆ. ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ, ಅಂಬಲಪಾಡಿ ವಲಯ ಬ್ರಾಹ್ಮಣ ಸಮಿತಿಗಳು ಶ್ರದ್ಧಾಂಜಲಿ ಸಲ್ಲಿಸಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ