ಹಬ್ಬಗಳ ತವರೂರಾದ ನಮ್ಮ ದೇಶದಲ್ಲಿ ಶ್ರಾವಣಮಾಸಕ್ಕೆ ವಿಶೇಷ ಮಹತ್ವ. ಪರಂಪರಾಗತವಾಗಿ ಬರುವ ಹಬ್ಬದ ಸಾಲಿನಲ್ಲೇ ಬರುವ ನೂಲುಹುಣ್ಣಿಮೆ ಅಥವಾ ರಕ್ಷಾಬಂಧನ ಪ್ರಮುಖ ಹಬ್ಬಗಳಲ್ಲಿ ಒಂದು.
ರಕ್ಷಾಬಂಧನದಲ್ಲಿ ಎರಡು ಪದ ರಕ್ಷಾ ಮತ್ತು ಬಂಧನ. ರಕ್ಷಾ ಎಂದರೆ ರಕ್ಷಣೆ ಬಂಧನ ಎಂದರೆ ಬಂಧನ ಎಂದರ್ಥ. ಸೋದರ ಸೋದರಿಯರು ತಮ್ಮೊಳಗಿನ ಯಾವತ್ತೂ ಕೊನೆಗೊಳ್ಳದ ಪ್ರೀತಿಯನ್ನು ವ್ಯಕ್ತಪಡಿಸುವ ಸಂಗತಿಯೇ ರಕ್ಷಾಬಂಧನ. ಭ್ರಾತೃತ್ವದ ಸಂಕೇತವಾಗಿ ರಕ್ಷಾಬಂಧನ ಮಹತ್ವದ ಸ್ಥಾನ ಪಡೆದಿದೆ.
ರಕ್ಷಾಬಂಧನಕ್ಕೆ ಎಲ್ಲಿಲ್ಲದ ಮಹತ್ವವಿದೆ. ಈಗಿನ ಕಾಲದಲ್ಲಿ ಕಟ್ಟುವ ದುಬಾರಿ ರಾಖಿಗಿಂತಲೂ ಶುದ್ಧ ಮನಸ್ಸು,ಪ್ರೀತಿ ಮತ್ತು ಬಾಂಧವ್ಯದ ಪ್ರತೀಕವಾಗಿ ಕಟ್ಟುವ ಒಂದೇ ಒಂದು ದಾರದ ಎಳೆಗೂ ಇರುವ ಮಹತ್ವ ವರ್ಣಿಸಲಾಸಾಧ್ಯ. ಸಹೋದರನಿಗೆ ಆರತಿ ಎತ್ತಿ, ಬಾಯಲ್ಲಿ ಸಿಹಿಇಟ್ಟು, ನಿಷ್ಕಲ್ಮಷ ಮನಸ್ಸಿನಿಂದ ರಾಖಿ ಕಟ್ಟುವದು. ಹಾಗೆಯೇ ಸಹೋದರನಿಗೆ ದೀರ್ಘಾಯುರಾರೋಗ್ಯ ಕರುಣಿಸುವಂತೆ ದೇವರಲ್ಲಿ ಪ್ರಾರ್ಥಿಸುವದರೊಂದಿಗೆ ತನ್ನನ್ನು ಸದಾ ರಕ್ಷಣೆಗೈಯುವಂತೆ ಕೋರುವ ಸಂಕೇತ ಆಚರಣೆಯೇ ರಕ್ಷಾಬಂಧನ.
ರಕ್ಷಾಬಂಧನ ದಿನದಂದೇ ಜನಿವಾರ ಬದಲಿಸಿ ಹೊಸ ಜನಿವಾರ ಧರಿಸುವ ಸಂಪ್ರದಾಯ ರೂಢಿಯಲ್ಲಿದೆ. ರಕ್ಷಾಬಂಧನ ಕೇವಲ ಸಹೋದರ ಸಹೋದರಿಯರಿಗಸ್ಟೇ ಸೀಮಿತವಲ್ಲ. ಸ್ತ್ರೀ ಪುರುಷರ ನಡುವಿನ ಪ್ರೀತಿ, ವಾತ್ಸಲ್ಯ, ಜವಾಬ್ದಾರಿ, ಕರ್ತವ್ಯದ ಪ್ರತೀಕ.
ರಕ್ಷಾಬಂಧನದ ಇತಿಹಾಸ- ಶಿಶುಪಾಲನನ್ನು ಕೊಲ್ಲಲ್ಲೆಂದು ಸುದರ್ಶನ ಚಕ್ರ ಪ್ರಯೋಗಿಸಿದ ಕೃಷ್ಣನಿಗೆ ಬೆರಳಿಗೆ ಗಾಯವಾಗುತ್ತದೆ. ಆಗ ದ್ರೌಪತಿ ತನ್ನ ಸೀರೆಯನ್ನೇ ಹರಿದು ಕೃಷ್ಣನ ಬೆರಳಿಗೆ ಕಟ್ಟುತ್ತಾಳೆ. ಅದಕ್ಕೆ ಪ್ರತಿಯಾಗಿ ದುಶ್ಯಾಸನ ದ್ರೌಪತಿಯ ಸೀರೆ ಸೆಳೆದಾಗ ಕೃಷ್ಣ ದ್ರೌಪತಿಗೆ ಸೀರೆಯನ್ನು ದಯಪಾಲಿಸಿ ರಕ್ಷಿಸುತ್ತಾನೆ. ದೇವಾನುದೇವತೆಗಳು ಮತ್ತು ಅಸುರರ ನಡುವಿನ ಯುದ್ಧದಲ್ಲಿ ಇಂದ್ರ ಸೋಲನೊಪ್ಪುತ್ತಾನೆ. ಆಗ ಆತನ ಪತ್ನಿಯು ತನಗೆ ವಿಷ್ಣು ನೀಡಿದ್ದ ಕಂಕಣವನ್ನು ಇಂದ್ರನ ಕೈಗೆ ಕಟ್ಟಿ ಜಯಶೀಲನಾಗು ಎಂದು ಹಾರೈಸುತ್ತಾಳೆ. ತದನಂತರ ಇಂದ್ರ ಏಕಾಂಗಿಯಾಗಿ ಯುದ್ಧಭೂಮಿಗೆ ಧುಮುಕಿ ಅಸುರರ ದೊರೆ ದೈತ್ಯ ಬಲಿಯನ್ನು ಸೋಲಿಸಿ ಅಮರಾವತಿ ರಾಜ್ಯವನ್ನು ಹಿಂದಕ್ಕೆ ಪಡೆದುಕೊಂಡ ಸಂಗತಿ ಪುರಾಣಗಳಿಂದ ತಿಳಿದುಬರುತ್ತದೆ.
ವಿಷ್ಣು ಬಲಿಚಕ್ರವರ್ತಿಯ ಮೇಲೆ ವಿಜಯ ಸಾಧಿಸಿ ಮೂರು ಲೋಕದ ಒಡೆಯನಾಗುತ್ತಾನೆ. ಆಗ ಬಲಿಯು ಶರಣಾಗಿ ವಿಷ್ಣುವಿಗೆ ತನ್ನ ಅರಮನೆಯಲ್ಲೇ ವಾಸ್ತವ್ಯ ಹೂಡುವಂತೆ ಕೋರುತ್ತಾನೆ. ಆದರೆ ಲಕ್ಷ್ಮಿಗೆ ಇಸ್ಟವಿರುವದಿಲ್ಲ. ಆಗ ಬಲಿ ಚಕ್ರವರ್ತಿಗೆ ರಾಖಿ ಕಟ್ಟಿ ಸಹೋದರನನ್ನಾಗಿ ಪರಿಗಣಿಸಿ ಆತನಿಗೆ ತಾವು ವೈಕುಂಠಕ್ಕೆ ಮರಳಬೇಕೆಂದು ಹೇಳಿ ಆತನ ಮನ ಒಲಿಸಿ ವೈಕುಂಠಕ್ಕೆ ಮರಳಿದರೆಂದು ಪುರಾಣಗಳಲ್ಲಿ ಹೇಳಲಾಗಿದೆ.
ಹಿಂದೆ ಯುದ್ಧಕ್ಕೆ ಹೋಗುವಾಗ ಸೈನಿಕರಿಗೆ ಕಂಕಣ ಕಟ್ಟುವ ಪದ್ಧತಿ ಇತ್ತು. ಹಾಗಾಗಿ ರಕ್ಷಣೆಯು ಸಹೋದರ ಸಹೋದರಿಯರಿಗೆ ಮಾತ್ರವಲ್ಲದೇ ವಿಶ್ವದ ನರನಾರಿಯರಿಗೆ ಅವಶ್ಯಕವಾದ ಪವಿತ್ರ ಬಂಧನವಾಗಿದೆ. ಇದೇ ರೀತಿ ಭಾರತದ ಮೇಲೆ ದಂಡೆತ್ತಿ ಬಂದ ಅಲೆಗ್ಸಾಂಡರನ ಜೊತೆ ದೊರೆ ಪೋರಸ್ ಯುದ್ಧಕ್ಕಿಳಿದಾಗ ಅಲೆಕ್ಝಾಂಡರನ ಪತ್ನಿ ರೋತ್ಸಾನಾ ಪೋರಸ್ ನಿಗೆ ರಾಖಿ ಕಳಿಸುವ ಮೂಲಕ ತನ್ನ ಪತಿಯ ಪ್ರಾಣ ಉಳಿಸುವಂತೆ ಸಂದೇಶ ರವಾನಿಸಿದ ಸಂಗತಿಯು ಉಲ್ಲೇಖವಾಗಿದೆ.
ರಾಜಸ್ಥಾನದ ಚಿತ್ತೂರಗಢದ ರಾಣಿ ಕರ್ಣಾವತಿ ಪದೇ ಪದೇ ಕಿರುಕುಳ ನೀಡುತ್ತಿದ್ದು ಸುಲ್ತಾನನಿಂದ ರಕ್ಷಣೆ ಒದಗಿಸುವಂತೆ ಕೋರಿ ಮೊಘಲ ದೊರೆ ಹುಮಾಯೂನಗೆ ರಾಖೀ ಕಳಿಸಿದ ಸಂಗತಿ ಜನಜನಿತ. 1905 ರಲ್ಲಿ ಬಂಗಾಳ ವಿಭಜನೆ ಸಂಧರ್ಭದಲ್ಲಿ ಹಿಂದೂ- ಮುಸ್ಲಿಮ್ ನಡುವೆ ಬಾಂಧವ್ಯ ಬೆಸೆಯಲು ಹಾಗೆಯೇ ಬ್ರಿಟಿಶರ ವಿರುದ್ಧ ವಗ್ಗಟ್ಡು ಕಾಯ್ದುಕೊಳ್ಳಲು ಖ್ಯಾತ ಕವಿ ರವೀಂದ್ರನಾಥ ಟಾಗೋರ್ ರಕ್ಷಾಬಂಧನ ಸಮಾರಂಭ ಏರ್ಪಡಿಸಿದ್ದರು.
ಇಷ್ಟೆಲ್ಲಾ ಪೌರಾಣಿಕ ಇತಿಹಾಸಗಳ ಉದಾಹರಣೆಯಿಂದ ಪ್ರಸಿದ್ಧ ಪಡೆದ ರಕ್ಷಾಬಂಧನ ಇತ್ತೀಚೆಗೆ ಶೋಕೀ ಆಚರಣೆಯಾಗಿ ಮಾರ್ಪಟ್ಟಿದೆ. ಆಚರಣೆಯ ಮೇಲೋದ್ದೇಶದಲ್ಲಿರುವ ತ್ಯಾಗ- ಬಲಿದಾನ, ಕರುಣೆ, ಭ್ರಾತೃತ್ವದ ಮೌಲ್ಯ ಕಳೆದುಕೊಂಡು ತೋರಿಕೆಯ ಆಚರಣೆಯಾಗಿ ಬದಲಾಗಿದೆ. ರಕ್ಷಾಬಂಧನ ಬರೀ ಆಚರಣೆಯಲ್ಲ, ಸಂಬಂಧಗಳನ್ನು ಬೆಸೆಯುವ ಕೊಂಡಿ, ಭರವಸೆಯ ಆಶಾಕಿರಣ, ಹೆಣ್ಣಿನ ರಕ್ಷಣೆಗೆ ಸಹೋದರನಾದವರು ಕಂಕಣಬದ್ಧನಾಗಿರಬೇಕೆಂದು ರೂಢಿಗತವಾಗಿ ವಹಿಸಿಕೊಟ್ಟಿರುವ ಜವಾಬ್ದಾರಿ. ಅಣ್ಣ, ತಮ್ಮರ ಶ್ರೇಯಸ್ಸಲ್ಲೇ ತನ್ನ ಜೀವವಿದೆಯೆಂದು ನಂಬಿ ಕಟ್ಟುವ ರಾಖಿಗೆ ಬೆಲೆಯೇ ಕಟ್ಟಲಾಗದ ಬೆಲೆಯಿದೆ. ಭಾವಾತೀತ ಅನುಸಂಬಂಧಗಳೇ ರಾಖಿ ಹಬ್ಬಕ್ಕೆ ಉಡುಗೊರೆ. ನಾಡಿನ ಜನತೆಗೆ ರಕ್ಷಾಬಂಧನದ ಶುಭಾಶಯಗಳು.
- ಗಿರಿಜಾ.ಎಸ್.ದೇಶಪಾಂಡೆ, ಬೆಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ