‘ನಾವೇ ಎಡವಿದ್ದೇವೆ ಎಂದಾದರೆ ಮಗು ಬೀಳದಿರಲು ಸಾಧ್ಯವೇ?’

Upayuktha
0


ಕ್ಕಳ ತೂಕವನ್ನು ಹೆಚ್ಚಿಸುವುದೇ ಒಂದು ದೊಡ್ಡ ತಲೆನೋವು. ಯಾಕೆಂದರೆ ಯಾವ ಉತ್ತಮ ಆಹಾರವನ್ನು ತೆಗೆದುಕೊಳ್ಳುತ್ತಲೇ ಇಲ್ಲ. ಮಗುವಿನ ಆಸೆಗಾಗಿ ಹೊರಗಿನ ಕುರುಂ ಕುರುಂ, ಎಣ್ಣೆ ಖಾದ್ಯಗಳನ್ನು ನೀಡಿದೆವು. ಈಗ ಮನೆ ಆಹಾರ ತಿನ್ನುವುದು ಕಡಿಮೆ ಮಾಡುತ್ತಿದೆ. ದೈಹಿಕವಾಗಿ ಊಟ ಮಾಡುವಂತೆ ಕಾಣುತ್ತದೆ. ಆದರೆ ಮಾನಸಿಕವಾಗಿ ಮೊಬೈಲ್ ಆಹಾರವಾದಂತೆ ತೋರುತ್ತಿದೆ. ಯಾವುದೋ ಸಮಾರಂಭಕ್ಕೆ ಹೋದಾಗಲೋ ಅಥವಾ ಮನೆಯಲ್ಲಿ ಏನೋ ಗಡಿಬಿಡಿ ಇದ್ದಾಗ ಮಗು ಬೇಗನೇ ಆಹಾರವನ್ನು ತಿನ್ನಲಿ ಎಂದು ಮೊಬೈಲ್ ತೋರಿಸುತ್ತಾ ಆಹಾರ ಕೊಟ್ಟೆವು. ಇಂದು ಅದೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದೆಲ್ಲಾ ಸಾಮಾನ್ಯವಾಗಿ ಪಾಲಕರು ಎದುರಿಸುವ ಸಮಸ್ಯೆಗಳು.


ಮೊಬೈಲ್ ಗೀಳು. ಕೊಡದೇ ಇದ್ದರೆ ಊಟವೇ ಸೇರಲ್ಲ. ತಂದೆಯೂ ಬೇಕಿಲ್ಲ. ತಾಯಿಯ ಮಾತನ್ನೂ ಕೇಳಲ್ಲ. ಮೊದ ಮೊದಲು ಮೊಬೈಲ್ ಕೊಟ್ಟಾಗ ಚೆನ್ನಾಗಿಊಟ ಮಾಡತೊಡಗಿದ.ಈಗ ಒಂದು ಕಡೆ ಕುಳಿತುಕೊಂಡು ಊಟ ಮಾಡುವುದು ಬಿಡಿ, ಒಳ್ಳೆಯ ಯಾವ ಆಹಾರವೂ ತಿನ್ನುತ್ತಿಲ್ಲ. ಊಟ ಮಾಡುವಾಗ ಮಾತ್ರವೇ ಕೊಡುತ್ತಿದ್ದ ಮೊಬೈಲ್ ಫೋನಿನ ಬಳಕೆ ಈಗ ಸ್ನಾನ ಮಾಡಲು, ನಿದ್ದೆ ಮಾಡಲು, ಆಟವಾಡಲು ಹೀಗೆ ದಿನವಿಡೀ ಬಳಕೆಯಾಗುತ್ತಲೇ ಇದೆ. ಅದೊಂದು ಚಟವಾಗಿರುತ್ತದೆ. ಸ್ಕ್ರೀನ್ ಟೈಮ್ ಹೆಚ್ಚಾದಂತೆ ಮಗುವಿನ ಮೆದುಳಿನ ಕ್ಷಮತೆ ಕಡಿಮೆಯಾಗುತ್ತದೆ. ಆಹಾರ ಕ್ರಮದಲ್ಲೂ ವ್ಯತ್ಯಾಸಗಳಾಗುತ್ತವೆ.ಮೊಬೈಲ್ ನೀಡುತ್ತಾ ಊಟ ಮಾಡಿಸಿದ್ದಲ್ಲಿ ಮಕ್ಕಳ ಹಸಿವಿನ ಸ್ಪರ್ಶ ಗೊತ್ತಾಗದೆ ಹೋಗುವುದು.ಬೆಳೆಯಬೇಕಿದ್ದ ಹಾರ್ಮೋನಿನ ಬೆಳವಣಿಗೆಯೂ ಕುಂಠಿತವಾಗುತ್ತದೆ. ಈಗ ಅದುವೇ ಒಂದು ಸಮಸ್ಯೆಯಾಗಿ ಪರಿಣಮಿಸಿದೆ. 


ಆರಂಭದಲ್ಲಿ ಈ ಮೊಬೈಲ್ ಚಟವನ್ನು ಹೋಗಲಾಡಿಸಲು ನಿರ್ದಿಷ್ಟ ನಿಯಮಗಳನ್ನು ಸಿದ್ಧಪಡಿಸಿರಿ. ದಿನದಲ್ಲಿ ಎಷ್ಟು ಹೊತ್ತು ಮೊಬೈಲ್ ನೀಡಬೇಕು ಎಂಬುವುದು ಮನೆಮಂದಿಯೊಂದಿಗೆ ಮಾತನಾಡಿರಿ. ದಿನದಲ್ಲಿ ಮಗುವಿನ ಹತ್ತು ಒಳ್ಳೆಯ ಕೆಲಸಗಳಿಗಾಗಿ ಬಹಳಷ್ಟು ಹೊಗಳಿ ಬಹುಮುಖ್ಯವಾದ ತಪ್ಪುಗಳಿಗೆ, ಕೆಟ್ಟ ಅಭ್ಯಾಸಗಳಿಗೆ ಮಾತ್ರವೇ ತಿದ್ದುವ ಪ್ರಯತ್ನ ಮಾಡಿ. ಮಗು ಹೋದಲ್ಲಿ, ಬಂದಲ್ಲಿ ಎಲ್ಲಾ ಕಡೆಯಲ್ಲೂ ಒಂದೇ ಧ್ವನಿಯಲ್ಲಿ ಮಾತನಾಡುವ ಬದಲು ಹೊಗಳಿಕೆ, ತೆಗಳಿಕೆ, ಯೋಚನೆಗೆ ಅವಕಾಶ, ನಿರ್ಧಾರಕ್ಕೆ ಸ್ವಾಗತವನ್ನು ಕೋರಿ.


ಸರಿ ಇದೀಗ ಮಕ್ಕಳ ಆಹಾರ ಕ್ರಮಕ್ಕೆ ಬರೋಣ.ಮಕ್ಕಳ ಹೊಟ್ಟೆಯ ಸಾಮರ್ಥ್ಯ ಇರುವುದೇ ಅವರ ಎರಡು ಕೈಗಳ ಅಂಗೈ ಬೊಗಸೆಯಷ್ಟು ಮಾತ್ರ. ಹಾಗಾಗಿ ಅವರಿಗೆ ಹೆಚ್ಚು ತಿನ್ನಿಸುವುದರ ಮೂಲಕ ತೂಕವನ್ನು ಹೆಚ್ಚಿಸಲು ಸಾಧ್ಯವೇ ಇಲ್ಲ. ಆದರೆ ಮಕ್ಕಳು ಎಷ್ಟು ಪ್ರಮಾಣದ ಆಹಾರವನ್ನು ಸೇವಿಸುತ್ತಿದ್ದಾರೋ ಅದೇ ಆಹಾರವನ್ನು ಹೆಚ್ಚು ಪೌಷ್ಟಿಕಾಂಶಯುಕ್ತ ಆಹಾರವನ್ನಾಗಿ ಮಾರ್ಪಾಡು ಮಾಡಬಹುದು.ಆಹಾರದ ಮೊದಲು ತುಪ್ಪವನ್ನು ಬಳಕೆ ಮಾಡೋಣ.


ಪಾಲಕರು ಮಾಡುವ ಮೊದಲ ತಪ್ಪು ಯಾವುದು ಗೊತ್ತೇ? ಮಕ್ಕಳಿಗೆ ಉಪಯುಕ್ತವಾದ ಆಹಾರವನ್ನು ಕೊಡುವಾಗ ಮಕ್ಕಳ ಅನುಮತಿ ತೆಗೆದುಕೊಳ್ಳುವುದು ಮತ್ತು ಅವರ ಗಮನಕ್ಕೆ ಬರುವಂತೆ ಆಹಾರದಲ್ಲಿ ತುಪ್ಪವನ್ನು ಹಾಗೂ ಇನ್ನಿತರ ಪೌಷ್ಟಿಕಾಂಶ ಪದಾರ್ಥಗಳನ್ನು ಬಳಕೆ ಮಾಡುವುದು. ದಯವಿಟ್ಟು ಈ ತಪ್ಪನ್ನು ಮಾಡದಿರಿ. ಮಗುವಿಗೆ ನೀಡುವ ಆಹಾರ ಉತ್ತಮವಾದುದು ಎಂಬ ನಂಬಿಕೆಯೊಂದಿಗೆ ಧೈರ್ಯದಿಂದ ಮಗುವಿಗೆ ನೀಡಿ. ಇಲ್ಲಿ ಮಗುವಿನ ಅನುಮತಿ ಪಡೆಯುವುದು ಅಷ್ಟು ಸಮಂಜಸವಲ್ಲ. ತಿಳಿದಿರಲಿ.


ಯಾವ ಆಹಾರ ಉತ್ತಮ ಮತ್ತು ಉತ್ತಮವಲ್ಲ ಎಂಬ ನಿರ್ಧಾರ ತೆಗೆದುಕೊಳ್ಳಲು ಮಗುವಿಗೆ ಸಾಧ್ಯವಾಗದು. ವಿವಿಧ ಡ್ರೈಫ್ರೂಟ್ಸ್ ಮತ್ತು ಹಣ್ಣಿನ ಭಾಗವನ್ನು ಆದಷ್ಟು ನುಣ್ಣಗೆ ರುಬ್ಬಿ ಬೇಯಿಸದೆ ರಸ ರೂಪದಲ್ಲಿ ದಿನಕ್ಕೆ ಎರಡು ಬಾರಿಯಾದರೂ ಕೊಡುವುದು ಬಹಳ ಒಳ್ಳೆಯದು. ಈಗಿನ ಮಾರುಕಟ್ಟೆಯ ಬೆಳವಣಿಗೆಯ ಅಂದಾಜಿನಲ್ಲಿ ಕೆಲವು ನಿರ್ದಿಷ್ಟ ಹಣ್ಣಿನ ಸಿಪ್ಪೆಗಳನ್ನು ಕೊಡದೇ ಇರುವುದು ಒಳ್ಳೆಯದು. ವಿಷಕಾರಿ ಸಿಪ್ಪೆಯು ಮಕ್ಕಳ ಹೊಟ್ಟೆ ತಲುಪುವುದನ್ನು ತಡೆಯೋಣ. ಹಣ್ಣಿನ ಒಳ ಭಾಗವನ್ನು ಹೆಚ್ಚಾಗಿ ನೀಡೋಣ. ಮಗುವಿನ ಬೆಳವಣಿಗೆಯಲ್ಲಿ ಮೊದಲ ಆರು ತಿಂಗಳಾದ ಬಳಿಕ ರಸ ರೂಪದ ಆಹಾರದ ಬದಲಿಗೆ ಚೆನ್ನಾಗಿ ರುಬ್ಬಿದ ಅಥವಾ ಸ್ಮ್ಯಾಶ್ ಮಾಡಿದ ಆಹಾರವನ್ನು ಹಾಗೂ ಬೇಯಿಸಿದ ತರಕಾರಿಯನ್ನು ನೀಡಬೇಕು. ಒಂದು ವೇಳೆ ಹಾಲಿನ ಬಳಕೆ ಮಾಡುತ್ತಿದ್ದರೆ ಪೂರ್ಣ ಪ್ರಮಾಣದ ಕೊಬ್ಬಿನ ಅಂಶವಿರುವ ಹಾಲನ್ನು ನೀಡಿ. ಇನ್ನು ಪ್ರೋಟೀನ್ ಹುಡಿಗಳ ಬಳಕೆ ಮಾಡುವಾಗ ಆದಷ್ಟು ಧಾನ್ಯಗಳನ್ನು ಚೆನ್ನಾಗಿ ತೊಳೆದು ಮೊಳಕೆ ಬರಿಸಿ, ಬಿಸಿಲಲ್ಲಿ ಒಣಗಿಸಿ ಪುಡಿಮಾಡಿ ಕೊಡಿ. ಮಗುವಿಗೆ ನೀಡುವ ಯಾವುದೇ ಆಹಾರವಾದರೂ ಸರಿ, ಅದನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಿರಿ. ಎಳೆ ಮಕ್ಕಳಿಗೆ ರೋಗಾಣುಗಳು ಬೇಗನೆ ತಗುಲುವುದರಿಂದ ಎಚ್ಚರಿಕೆ ವಹಿಸಿರಿ.


ಬಾಳೆಹಣ್ಣಿನಲ್ಲಿ ಹೆಚ್ಚಿನ ಕ್ಯಾಲೋರಿ ಇರುವುದರಿಂದ ಬಾಳೆಹಣ್ಣಿನ ಪ್ರಯೋಗ ಉತ್ತಮ. ನೆಲಗಡಲೆ, ಜೇನುತುಪ್ಪ, ಓಟ್ಸ್, ಎಲ್ಲಾ ರೀತಿಯ ಡ್ರೈಫ್ರೂಟ್ಸ್ ತೊಳೆದು ಹಾಲಿನೊಂದಿಗೆ ನೀಡಿ.ಬೇಯಿಸಿದ ಮೊಟ್ಟೆ, ಹಾಗೂ ಮಾಂಸವನ್ನು ಶುದ್ಧತೆಯೊಂದಿಗೆ ನೀಡಬಹುದು.ನಾವು ಆಹಾರವನ್ನು ತಿನ್ನಿಸುವ ಮುನ್ನ ಬಹಳಷ್ಟು ತಪ್ಪುಗಳನ್ನು ಮಾಡುತ್ತಿದ್ದೇವೆ. ಈ ಮೇಲಿನ ಎಲ್ಲಾ ರೀತಿಯ ಆಹಾರವನ್ನು ಕೊಡುವ ಮೊದಲು ಟೇಸ್ಟ್ ಮೇಕರ್ ಬಳಸಿರುವಂತಹ ಜಂಕ್ ಫುಡ್, ಎಣ್ಣೆ ಖಾದ್ಯ, ಮ್ಯಾಗಿ ಮುಂತಾದ ಹೊರಗಿನ ಆಹಾರವನ್ನು ನೀಡುವುದು ನಿಲ್ಲಿಸಿ.ಮಗುವಿಗೆ ಆಹಾರ ಕೊಡುವ ಸಮಯವು ನಿರ್ದಿಷ್ಟವಾಗಿರಬೇಕು. ಯಾವ ಸಮಯದಲ್ಲಾದರೂ ಆಹಾರವನ್ನು ನೀಡುತ್ತಾ ಇದ್ದರೆ ಮಗುವಿನ ಜೀರ್ಣಶಕ್ತಿಯಲ್ಲಿ ತೊಂದರೆ ಉಂಟಾಗುವುದು. ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದು.


ಸಣ್ಣ ಸಣ್ಣ ಮಕ್ಕಳ ಗುಂಪು ಒಂದು ವೇಳೆ ಇದ್ದಲ್ಲಿ ಸ್ವಾವಲಂಬಿಯಾಗಿ ಊಟ ಮಾಡಲು ಆ ಮಕ್ಕಳ ಗುಂಪಿನಲ್ಲಿ ಕೂರಿಸಿ. ಮನೆಯಲ್ಲಿಯೂ ಮಗುವಿಗೆ ಸ್ವಾವಲಂಬಿಯಾಗಿ ಊಟ ಮಾಡಲು ವಾತಾವರಣ ವನ್ನು ನಿರ್ಮಿಸಿ. ಮಗು ಅನ್ನವನ್ನು ಚೆಲ್ಲುವ ಕಾರಣಕ್ಕಾಗಿ ಅದರ ಊಟ ಮಾಡುವ ಸ್ವಾತಂತ್ರವನ್ನು ಕಸಿಯದಿರಿ. ಹಾಗೆಯೇ ವಿಪರೀತ ಬೈಯುವುದನ್ನು ಬಿಟ್ಟು ಊಟ ಮಾಡಲು ತಿಳಿಸಿಕೊಡಿ. ಹೆಚ್ಚಿನ ನಿರೀಕ್ಷೆ ಬೇಡ. ಮಕ್ಕಳ ವಯಸ್ಸಿಗೆ ಹಾಗೂ ಹಸಿವಿಗೆ ಅನುಗುಣವಾಗಿ ಆಹಾರವನ್ನು ತೆಗೆದುಕೊಳ್ಳಲು ಅವಕಾಶ ನೀಡಿ.


ಸಂಜೆಯ ವೇಳೆಯ ವಾತಾವರಣ ಆಡಲು ಯೋಗ್ಯವಾದ್ದರಿಂದ ಹೊರಾಂಗಣದ ಆಟಕ್ಕೆ ಹೆಚ್ಚಿನ ಒತ್ತು ನೀಡಿ. ದೇಹಕ್ಕೆ ವ್ಯಾಯಾಮ ಸಿಕ್ಕಷ್ಟು ಮಗುವಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಸರಿಯಾದ ಆಹಾರ ಕ್ರಮದ ಮೂಲಕ ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಮಕ್ಕಳ ತೂಕ 6 ತಿಂಗಳಲ್ಲಿ ಹುಟ್ಟಿದಾಗ ಎಷ್ಟು ತೂಕವಿತ್ತೋ ಅದು ಎರಡು ಪಟ್ಟಾಗುತ್ತದೆ. ಒಂದು ವರ್ಷದ ಮಗುವಿನಲ್ಲಿ ಮೂರು ಪಟ್ಟು ಬೆಳವಣಿಗೆಯಾಗಿರಬೇಕು. ನಂತರದ ದಿನಗಳಲ್ಲಿ ಪ್ರತಿ ವರ್ಷಕ್ಕೆ ಎರಡು ಕೆ.ಜಿ ತೂಕ ಹೆಚ್ಚಳವಾಗಬೇಕು. ವಿಪರೀತ ತೂಕ ಹೆಚ್ಚಾಗುವ ಸಾಧ್ಯತೆ ಇದ್ದಲ್ಲಿ ಅಗತ್ಯವಾಗಿ ಮಕ್ಕಳ ವೈದ್ಯರನ್ನು ಸಂಪರ್ಕಿಸಲೇ ಬೇಕು. ಆಹಾರದಲ್ಲಿ ಹೆಚ್ಚಿನ ಪ್ರಗತಿ ಕಾಣುತ್ತಿಲ್ಲ ಎಂದಾದಾಗ ವೈದ್ಯರ ಸಲಹೆಯ ಅನುಸಾರ ಕೆಲವೊಂದು ಕ್ಯಾಲ್ಸಿಯಂ ಮಾತ್ರೆಗಳು, ಐರನ್ ಮಾತ್ರೆಗಳು, ಪ್ರೋಟೀನ್ ಪೌಡರ್ ಗಳನ್ನು ಬಳಸಬಹುದು. ಆದರೆ ಇದು ದೀರ್ಘಕಾಲಿಕವಾದ ಸರಿಯಾದ ನಿರ್ಧಾರವಲ್ಲ.


- ದುರ್ಗಾಪರಮೇಶ್ವರ ಭಟ್ 

ಮನಶಾಸ್ತ್ರಜ್ಞ ಹಾಗೂ ಶಿಶು ಶಿಕ್ಷಣ ತಜ್ಞರು. 

ಎಕ್ಸೆಲ್ ಪದವಿ ಪೂರ್ವ ಕಾಲೇಜು, ಗುರುವಾಯನಕೆರೆ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top