ಭಾರತ ಮಾತೆ ಸ್ವತಂತ್ರ್ಯವ ಪಡೆದಳು
ಮಾರ ವಿದೇಶದ ಪಡೆಯಿಂದ
ಹೇರಿಕೆಯೆನಿಸದೆ ಹೆದರಿಕೆಯೆಲ್ಲವ
ದೂರೀಕರಿಸುವ ಛಲದಿಂದ
ಅಂದಿಗೆ ಬಂದಿತು ನಮ್ಮಯ ದೇಶಕೆ
ಸುಂದರ ಬಾಳುವೆ ಎಂದೆನಿಸಿ
ಚಂದಿರನಂದವ ದೇಶದ ಬೊಗಸೆಗೆ
ತಂದವರೆನ್ನುತ ಪರಿಗಣಿಸಿ
ರಾಜರ ಮನೆತನದಾಳ್ವಿಕೆ ಮುಗಿಸಲು
ಯಾಜವು ಜನ್ಮವ ತಳೆದಿತ್ತು
ಯೋಜನೆ ರೂಪಿಸಿ ದೇಶವನಾಳಲು
ಗೋಜಲು ಹಿರಿಯರ ಕೆಣಕಿತ್ತು
ಯಾರಿಗೆ ಗದ್ದುಗೆ ನೀಡವುದೆನ್ನುವ
ಮಾರಿಯು ಜನಿಸಿತು ದೇಶದೊಳು
ಯಾರದೊ ಮಾತಿಗೆ ತಲೆದೂಗಿದರೈ
ಭಾರಿ ಸಮಾನತೆ ಪೆಸರಿನೊಳು
ಮಂದಿಯ ಸ್ವಾರ್ಥದ ಬೇಡಿಕೆ ಹೆಚ್ಚಿರೆ
ಮುಂದಿನ ಭವಿತವ್ಯವು ಇಲ್ಲ
ಚೆಂದದ ಆಶ್ವಾಸನೆಗಳ ನೀಡುವ
ಕಂದಾಚಾರಕೆ ಅಳಿವಿಲ್ಲ
ದೇಶವು ಅಳಿದರೆ ನಮಗೇನೆನ್ನುವ
ಮೋಸದ ಮಂದಿಗೆ ತಲೆಯಿಲ್ಲ
ವೇಷವ ತೊಲಗಿಸಿ ಕ್ಲೇಶವ ಕಳೆಯುವ
ದೇಶಾಭಿಮಾನಿಗೆ ಬೆಲೆಯಿಲ್ಲ
- ಶಿ.ವೈ.
ವೈಲೇಶ.ಪಿ.ಎಸ್. ಕೊಡಗು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ