‘ಇನ್ನಿಲ್ಲ’ ಎಂಬುದು ನಮ್ಮ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಅನಿವಾರ್ಯವಾಗಿ ಎದುರಾಗುವ ಸತ್ಯ. ಸಿಹಿಯಾದ ಮಿಠಾಯಿಯನ್ನು ಚೀಪುತ್ತಿರುವ ಮಗು ಅದು ಕರಗಿ ಇನ್ನಿಲ್ಲವಾಗುವುದು ಎಂಬ ಆತಂಕದಿಂದ ಚೀಪುವಿಕೆಯನ್ನು ನಿಧಾನ ಮಾಡುವಂತೆ, ನಾವು ಎಲ್ಲರೂ ಜೀವನದ ಸುಖ ನೋವಿನ ಮಧ್ಯೆ ಆ “ಇನ್ನಿಲ್ಲ” ಎನ್ನುವ ಕ್ಷಣವನ್ನು ತಪ್ಪಿಸಿಕೊಳ್ಳಲು ಬಯಸುತ್ತೇವೆ. ನೋವು, ಅಸಮಾಧಾನ, ಮಾನಸಿಕ ಒತ್ತಡ ಇನ್ನಿಲ್ಲವಾದರೆ ಬದುಕು ಹಸನಾಗುತ್ತದೆ. ನಳ್ಳಿ ನೀರು ಅಪರೂಪವಾಗಿ ಬರುವಾಗ ಅದು ಇನ್ನಿಲ್ಲವಾಗಬಹುದು ಎನ್ನುವ ಆತಂಕದಲ್ಲಿ ಬಡಾವಣೆ ಜನರು ಹೇಗೆ ಗಡಿಬಿಡಿಯಾಗಿ ಪಾತ್ರೆಗಳನ್ನು ತುಂಬಲು ಧಾವಿಸುತ್ತಾರೋ, ಹಾಗೆಯೇ ಮನುಷ್ಯನು ಬದುಕಿನ ಪ್ರತಿಯೊಂದು ಸಿಹಿ ಕ್ಷಣವನ್ನು ಹಿಡಿದುಕೊಳ್ಳಲು ಬಯಸುತ್ತಾನೆ. ಆದರೆ ಕಾಲ ತನ್ನ ನಿಯಮದಿಂದ ಎಲ್ಲವನ್ನೂ ಇನ್ನಿಲ್ಲ ಮಾಡುತ್ತದೆ. ಹಾಸಿಗೆಯಲ್ಲಿದ್ದ ವೃದ್ಧನು, ದೀರ್ಘಕಾಲದ ಕಾಯಿಲೆಯಿಂದ ನರಳುತ್ತಿರುವಾಗ, ಮನೆಮಂದಿಯೂ ಆತನ ಇನ್ನಿಲ್ಲವಾಗುವ ದಿನಕ್ಕಾಗಿ ಕಾಯುವಂತಾಗುತ್ತದೆ. ಪ್ರೀತಿಯ ವಿಯೋಗದ ಭಯ ತಾಯಿಗೆ. ಮಗ ಸೇನೆಗೆ ಮರಳುವಾಗ ಕಾಡುವಂತೆ, “ಇನ್ನಿಲ್ಲ” ಎನ್ನುವ ಆತಂಕ ಪ್ರೀತಿಯ ಸಂಬಂಧಗಳಲ್ಲಿಯೂ ಬೀಡುಬಿಡುತ್ತದೆ.
ಸಾವಿರಾರು ವರ್ಷಗಳ ಪರಂಪರೆ, ಆಚರಣೆ, ಹಬ್ಬಗಳು ಇಂದು ಭೌತಿಕ ಸುಖದ ಒತ್ತಡದಲ್ಲಿ ಇನ್ನಿಲ್ಲವಾಗುತ್ತಿವೆ; ಆ ಮೂಲಕ ಸಂಸ್ಕೃತಿ, ನಂಬಿಕೆ, ಮೌಲ್ಯಗಳು ಅಸ್ತಂಗವಾಗುವ ಭಯ ನಮ್ಮನ್ನು ತಲುಪುತ್ತಿದೆ. ಪ್ರಕೃತಿಯ ಸಂಪತ್ತು ನಾಶವಾಗುತ್ತಾ ಹೋಗುತ್ತಿರುವುದು “ಇನ್ನಿಲ್ಲ” ಎನ್ನುವ ಹಾದಿಯಲ್ಲಿ ಸಾಗುವ ದೊಡ್ಡ ದುರಂತ. ಜೀವನ ಮತ್ತು ಮರಣ ಎರಡೂ ಸಹಜವಾದವು; ಹುಟ್ಟಿದವನಿಗೆ ಸಾವು ಅನಿವಾರ್ಯ. ಆದರೆ ಸಾವು ಯಾವಾಗ, ಎಲ್ಲಿ ಎನ್ನುವುದು ಯಾರಿಗೂ ತಿಳಿದಿಲ್ಲದ ಅಜ್ಞಾತ ಸತ್ಯ. ಮರಣದ ನಂತರ ದೇಹ ಇನ್ನಿಲ್ಲವಾಗಬಹುದು, ಆದರೆ ಸಂಬಂಧಗಳು, ನೆನಪುಗಳು ಇನ್ನಿಲ್ಲವಾಗುವುದಿಲ್ಲ.
ಸಂಬಂಧಗಳು ವಿದ್ಯುತ್ ಶಕ್ತಿಯಂತೆ ನಮಗೆ ಬಲವಾದ ಆಕರ್ಷಣೆಯನ್ನು ಉಂಟುಮಾಡುತ್ತವೆ; ಆದರೂ ಅವುಗಳ ತೀವ್ರತೆ, ನಂಟು, ಹತ್ತಿರತನ ಎಲ್ಲರಲ್ಲೂ ಒಂದೇ ತರಹ ಇರಲಾರವು. ಕೆಲವರಿಗೆ ಇನ್ನಿಲ್ಲವು ಸಮಾಧಾನ ತರುತ್ತದೆ, ಕೆಲವರಿಗೆ ಅದೇ ನೋವಿನ ಭಾರವನ್ನು ನೀಡುತ್ತದೆ. ಆದರೂ ಕೆಲವರು ಇನ್ನಿಲ್ಲದ ವಾಸ್ತವವನ್ನು ಒಪ್ಪಿಕೊಂಡು, ಬದುಕನ್ನು ನೂತನವಾಗಿ ರೂಪಿಸಿಕೊಂಡು ಮುಂದುವರಿಯುತ್ತಾರೆ. ಇಂತಹವರು ಅಚಲ ಹೋರಾಟಗಾರರಂತೆ ಬದುಕನ್ನು ಅರ್ಥಪೂರ್ಣವಾಗಿಸುತ್ತಾರೆ.
ಜೀವನವು ಫಲಿತಾಂಶವಲ್ಲ, ಅದು ಪ್ರತಿಯೊಂದು ಹೆಜ್ಜೆಯಲ್ಲಿ ಪಾಠಗಳನ್ನು ಕಲಿಸುವ ಅನುಭವ. ಕೆಲವೊಮ್ಮೆ ಪ್ರೇಮಿಗಳ ಜೀವನವೇ ಕ್ಷಣಾರ್ಧದಲ್ಲಿ ಇನ್ನಿಲ್ಲವಾಗುವ ದುರಂತವನ್ನು ತೋರಿಸುತ್ತದೆ, ಆದರೆ ಉಳಿದವರ ಧೈರ್ಯ, ವಿಶ್ವಾಸ ಇನ್ನಿಲ್ಲವಾದವರನ್ನು ಮನಸ್ಸಿನಲ್ಲಿ ಅಮರರನ್ನಾಗಿಸುತ್ತದೆ. ಮರಣ ಎಂದರೆ ಕೇವಲ ದೇಹದ ಅಂತ್ಯವಲ್ಲ; ಅದು ಅಹಂಕಾರದ ನಾಶವೂ ಹೌದು. ಅಹಂ ಇಲ್ಲದ ದೃಷ್ಟಿಯಿಂದ ಬದುಕನ್ನು ನೋಡುವಾಗ ಸಮಭಾವ, ನಿರ್ಲಿಪ್ತ ಮನೋಭಾವ ಮೂಡುತ್ತದೆ. ತತ್ತ್ವಶಾಸ್ತ್ರಗಳು “ಇನ್ನಿಲ್ಲ”ವನ್ನು ಶೂನ್ಯತೆ ಎಂದು ನೋಡುವುದಿಲ್ಲ; ಅದು ಪರಿಪೂರ್ಣ ಶಾಂತಿಯ ಸ್ಥಿತಿ. ನಮ್ಮ ಪುರೋಹಿತರು, ತತ್ವಜ್ಞಾನಿಗಳು ಈ ಅನುಭವವನ್ನು ಬದುಕಿ ತೋರಿಸಿದ್ದಾರೆ.
ವ್ಯಕ್ತಿ ಇನ್ನಿಲ್ಲವಾದಾಗ ಆತನ ನೆನಪುಗಳನ್ನು ನಮ್ಮ ಮೆದುಳಿನಿಂದ ಅಳಿಸಿಬಿಡುವುದು ಸುಲಭವಲ್ಲ; ವರ್ಷಗಳ ಕಾಲ ಅವು ನಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತವೆ. ಆದರೆ ಹೋದವನು ಹಿಂತಿರುಗಿ ಬರಲಾರನೆಂಬ ಸತ್ಯವನ್ನು ಒಪ್ಪಿಕೊಂಡಾಗ ಮಾತ್ರ ಬದುಕಿಗೆ ಹೊಸ ಅರ್ಥ ದೊರೆಯುತ್ತದೆ. ದುಃಖ, ನೋವು, ವಿಯೋಗ ಎಲ್ಲವೂ ಕ್ಷಣಿಕ; ಅವುಗಳನ್ನೂ ಇನ್ನಿಲ್ಲ ಮಾಡುವುದು ಕಾಲವೇ. ಭರವಸೆಯ ನಾಳೆಗಳು, ಬದಲಾವಣೆ ತರುವ ಭವಿಷ್ಯ, ಹೊಸ ಚೈತನ್ಯ—ಇವೆಲ್ಲ ನಮ್ಮ ಜೀವನಕ್ಕೆ ಹಸಿರು ಬೆಳಕಾಗುತ್ತವೆ. ಹೀಗಾಗಿ “ಇನ್ನಿಲ್ಲ” ಎನ್ನುವುದು ಕೇವಲ ನಾಶವಲ್ಲ, ಅದು ಹೊಸ ಬದುಕಿನ ದಾರಿ. ಇನ್ನಿಲ್ಲವಾದವರ ನೆನಪುಗಳು ನಮ್ಮೊಳಗೆ ಚಿರಂಜೀವಿಗಳಂತೆ ಉಳಿಯುತ್ತವೆ, ಅವರು ನಮ್ಮೊಂದಿಗಿಲ್ಲವೆಂಬ ಕಟು ಸತ್ಯ ಇದ್ದರೂ ನಮ್ಮ ಜೀವನದಲ್ಲಿ ಅವರಿದ್ದಾರೆಯೆಂಬ ವಿಶ್ವಾಸವೇ ನಮಗೆ ಬಲ, ಭರವಸೆ, ಮುನ್ನಡೆಗೆ ಚೈತನ್ಯವನ್ನು ನೀಡುತ್ತದೆ.
- ಎಸ್. ಎನ್. ಭಟ್. ಸೈಪಂಗಲ್ಲು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ