ಪುಸ್ತಕ ಪರಿಚಯ: ಎಳೆ ಅಷ್ಟಮೀ ವ್ರತ- ವ್ರತೋಪಾಸಕರಿಗೊಂದು ಪಠ್ಯಪುಸ್ತಕ

Upayuktha
0


 (ಕೇದಾರೇಶ್ವರ, ಮಹಾಲಕ್ಷ್ಮೀ, ಧಾನ್ಯಶಂಕರ ವ್ರತಮ್)


ಎಳೆ ಅಷ್ಟಮೀ ವ್ರತ  

ಸಂಪಾದಕರು: ರವೀಂದ್ರ ಶರ್ಮಾ, ಕೋಣನಕಟ್ಟೆ,  ಡಾ. ಅಭಿಷೇಕ ಭಟ್ಟ, ಹುಳೇಗಾರು.

ಪುಟ 268, ಬೆಲೆ ರೂ:- 300,  ಪ್ರಕಾಶಕರು- ಶ್ರೀನಿಧಿ ಪಬ್ಲಿಕೇಷನ್ಸ್, ಬೆಂಗಳೂರು-53.



ನುದಿನ  ಆರಾಧಿಸುವ- ಆಚರಿಸುವ ನೂರಾರು ವ್ರತಗಳಲ್ಲಿ ಎಳೆಅಷ್ಟಮೀ ವ್ರತವೂ ಒಂದು. ಇದನ್ನು ಕರ್ನಾಟಕದ ಕೆಲವು ಭಾಗಗಳಲ್ಲಿ, ಮಲೆನಾಡಿನ ಹಲವು ಭಾಗಗಳಲ್ಲಿ ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಪ್ರಧಾನವಾಗಿ ಕೇದಾರೇಶ್ವರ, ಮಹಾಲಕ್ಷ್ಮೀ, ಧಾನ್ಯಶಂಕರ ವ್ರತಗಳನ್ನು ಒಟ್ಟಿಗೆ ಆಚರಿಸುವ ಪರಂಪರೆಯು ಇದೆ. ತುಂಬಾ ಹಿಂದೆ ಇಂಥ ವ್ರತಗಳನ್ನು ಆಚರಿಸಲು ಅಗತ್ಯವಾದ ಮಂತ್ರ ಮತ್ತು ತಂತ್ರ, ವಿಧಿ- ವಿಧಾನಗಳನ್ನು ಅರಿತವರು ಹಲವು ಪುರೋಹಿತರೂ ಕೆಲವು ಲೌಕಿಕರೂ ಇದ್ದರು. ಈಗ ಅಂಥವರ ಸಂಖ್ಯೆ ಕಡಿಮೆಯಾಗಿದ್ದರೂ ವ್ರತ ಆಚರಿಸುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಂಥವರ ಅನುಕೂಲಕ್ಕಾಗಿಯೇ ಇರುವ ಈ ಎಳೆ ಅಷ್ಟಮೀ ವ್ರತ ಪುಸ್ತಕವು ವ್ರತೋಪಾಸಕರ ಪಠ್ಯಪುಸ್ತಕದಂತಿದೆ.


ಕೋಣನಕಟ್ಟೆಯ ರವೀಂದ್ರ ಶರ್ಮಾ ಮತ್ತು ಹುಳೇಗಾರಿನ ಡಾ. ಅಭಿಷೇಕ ಭಟ್ಟ ಇವರು ಹಿಂದಿನ ಹಲವು ಮುದ್ರಿತ ಪುಸ್ತಕಗಳು ಹಾಗೂ ಕೈಬರಹದ ಪುಸ್ತಕಗಳು ಮತ್ತು ಸಾಗರ ತಾಲೂಕಿನ ಹುಳೇಗಾರಿನ ಪುಟ್ಟಭಟ್ಟರು ತಮ್ಮ ಕುಟುಂಬದ ಹಿಂದಿನ ತಾಳೇಗರಿ ಪ್ರತಿಯಲ್ಲಿದ್ದ ಎಳೆಅಷ್ಟಮೀ ವ್ರತದ ಮಹಾಲಕ್ಷ್ಮೀ, ಧಾನ್ಯಶಂಕರ, ಕೇದಾರೇಶ್ವರ, ಅಷ್ಟಪುತ್ರ, ಪಶುಪತಿ ಪೃಥಕ್ ಪೂಜಾವಿಧಾನವನ್ನು ಕಾಗದದ ಹಸ್ತಪ್ರತಿಯಲ್ಲಿ ಬರೆಸಿಟ್ಟಿದ್ದು ಇವೆಲ್ಲವನ್ನೂ ಕ್ರೋಢೀಕರಿಸಿ  ಇನ್ನಿತರ ಹಲವು ವಿಷಯಗಳನ್ನು ಸೇರಿಸಿ ಸಂಪಾದಿಸಿದ್ದಾರೆ.


ಈ ಪುಸ್ತಕವು ಎಳೆ ಅಷ್ಟಮೀ ವ್ರತ ಕುರಿತಾದ ಅತ್ಯುತ್ತಮ ಸಂಗ್ರಹವಾಗಿದೆ. ಮೊದಲಿಗೆ 76 ಪುಟಗಳಲ್ಲಿ ಮಹಾಲಕ್ಷ್ಮೀ, ಧಾನ್ಯಶಂಕರ, ಕೇದಾರೇಶ್ವರ, ಅಷ್ಟಪುತ್ರ, ಪಶುಪತಿ ಪೃಥಕ್ ಪೂಜಾ ವಿಧಾನವಿದೆ. ಅನಂತರ 57 ಪುಟಗಳಲ್ಲಿ ಕೇದಾರೇಶ್ವರ, ಮಹಾಲಕ್ಷ್ಮೀ, ಧಾನ್ಯಶಂಕರ ಮಿಶ್ರಪೂಜಾ ವಿಧಿ ಇದೆ. ಅನಂತರ ಜ್ಯೇಷ್ಠಾಲಕ್ಷ್ಮೀ ವ್ರತ, ಶಿವ ಮತ್ತು ಲಕ್ಷ್ಮೀಸಹಸ್ರನಾಮ, ಕನ್ನಡಾನುವಾದ ಸಹಿತ ವ್ರತಕಥೆ, ವ್ರತನಿರ್ಣಯ, ವ್ರತೋದ್ಯಾಪನೆ, ಅಷ್ಟಾವಧಾನ ಸೇವೆ, ಹಾಡುಗಳು ಮತ್ತು ಸಂದರ್ಶನವನ್ನು ಕೊಟ್ಟಿದ್ದಾರೆ. ಹೊಸದಾಗಿ ವ್ರತವನ್ನು ಪ್ರಾರಂಭಿಸುವವರು ನಿಗದಿತ ವರ್ಷಗಳ ವ್ರತಾಚರಣೆ ಬಳಿಕ ಈ ವ್ರತದ ಉದ್ಯಾಪನೆ ಮಾಡುವವರು ಪುಸ್ತಕದ ಪ್ರಾರಂಭದಲ್ಲಿರುವ ‘ವಿಶೇಷ ಸೂಚನೆ ಗಮನಿಸುವುದು ಉತ್ತಮ.


ಪೃಥಕ್ ಪೂಜಾವಿಧಿಯಲ್ಲಿ ಘಂಟಾರ್ಚನ-ಭೂಶುದ್ಧಿ, ಭೂತಶುದ್ಧಿ, ಪ್ರಾಣಪ್ರತಿಷ್ಠೆ, ಶರೀರಶುದ್ಧಿ, ಅಂತರ್ಮಾತೃಕಾನ್ಯಾಸ, ಬಹಿರ್ಮಾತೃಕಾನ್ಯಾಸ ಮುಂತಾದ ಅಂತರ್ಯಾಗ ವಿಧಿಯು ವಿಶಿಷ್ಟವಾಗಿದೆ. ಇದನ್ನು ಭಾವನಾತ್ಮಕವಾಗಿ ಮಾಡಿದಲ್ಲಿ ಆಂತರ್ಯದಲ್ಲಿ ಸಂತೋಷ ಉತ್ಪತ್ತಿಯಾಗುವುದು ನಿಶ್ಚಿತ. ಅನಂತರ ಬಹಿರ್ಯಾಗದ ಶಂಖಾರ್ಚನೆಯ ವೈಶಿಷ್ಟ್ಯತೆ ಗಮನ ಸೆಳೆಯುವಂತಿದೆ. ಅನಂತರ ಮಹಾಲಕ್ಷ್ಮಿಯ ಪೂಜಾಕ್ರಮಗಳನ್ನು ವಿವರಿಸಿದ್ದಾರೆ. ಅಂಗಪೂಜೆ, ಗ್ರಂಥಿಪೂಜೆ ಆವರಣಪೂಜಾ ವಿವರಗಳೂ ಇವೆ. ಧೂಪ, ದೀಪ ನೈವೇದ್ಯಗಳ ನಂತರ ಧಾನ್ಯಶಂಕರ ಪೂಜೆಯ ವಿವರಗಳಿವೆ. ಇಲ್ಲಿಯೂ ಷೋಡಶೋಪಚಾರಪೂಜೆ, ಗ್ರಂಥಿಪೂಜೆ, ಪುಷ್ಪಪೂಜೆ  ಮತ್ತು ದ್ವಾದಶನಾಮ ಪೂಜೆಗಳ ನಂತರ ಧೂಪ, ದೀಪ ನೈವೇದ್ಯ ಮುಂತಾದ ವಿವರಗಳಿವೆ.


ಮುಂದಿನ ಭಾಗದಲ್ಲಿ ಬರುವ ಕೇದಾರೇಶ್ವರ ಪೂಜಾ ಮತ್ತು ಅಷ್ಟಪುತ್ರ, ಪಶುಪತಿ ಪೂಜಾಗಳಲ್ಲಿ ಕೂಡ ವಿವರವಾಗಿ ನಾವೇ ಪೂಜಿಸಲು ಸಾಧ್ಯವಾಗುವಂತೆ ಮಂತ್ರ- ವಿವರಗಳನ್ನು ಸಂಪಾದಿಸಿದ್ದಾರೆ. ಹಾಗೆಯೇ ಉತ್ತರಪೂಜೆಯ ಮಹಾಲಕ್ಷ್ಮೀ ಧೂಪದೀಪಾರಾಧನ ಮತ್ತು ಕೇದಾರೇಶ್ವರ ಧೂಪ ದೀಪಾರ್ಚನ ಮುಂತಾದ ವಿವರಗಳೂ ಇದೇ ಪುಸ್ತಕದಲ್ಲಿವೆ.


ಭಾದ್ರಪದ ಶುಕ್ಲ ಅಷ್ಟಮೀ-ನವಮೀ ತಿಥಿಗಳಲ್ಲಿ ಆಚರಿಸುವ ‘ಕೇದಾರೇಶ್ವರ, ಮಹಾಲಕ್ಷ್ಮೀ, ಧಾನ್ಯಶಂಕರ ಮಿಶ್ರಪೂಜೆಯು ಇರುವುದು ಶ್ರದ್ಧಾವಂತ ಆಸ್ತಿಕರಿಗೆ ಉಪಯುಕ್ತವಾಗಿದೆ. ಈ ಮಿಶ್ರಪೂಜಾವಿಧಿಯನ್ನು ಅನುಸರಿಸುವ ಹಲವು ಕುಟುಂಬಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಪುಟ 79- 80 ರಲ್ಲಿರುವ ‘ಪ್ರಧಾನಸಂಕಲ್ಪ’ ಗಮನಿಸುವಂತಿದೆ. ಮೂರು ಮೂರು ಶ್ಲೋಕಗಳಿಂದ ಷೋಡಶೋಪಚಾರ ಪೂಜೆಗಳು, ಅಂಗಪೂಜೆ, ಆವರಣಪೂಜೆ, ಗ್ರಂಥಿಪೂಜೆ, ಪತ್ರಪೂಜೆ, ಪುಷ್ಪಪೂಜೆಗಳನ್ನು ಕ್ರಮಬದ್ಧವಾಗಿ ಜೋಡಿಸಿ ಕೊಟ್ಟಿರುವುದು ಪೂಜಿಸುವವರಿಗೆ ಸುಲಲಿತವಾಗಿ ವಿಧಾನವು ತಿಳಿಯುವಂತಿದೆ. ಮುಂದಿನ ಪುಟಗಳಲ್ಲಿ ಕೇದಾರೇಶ್ವರ ಅಷ್ಟೋತ್ತರ ಶತನಾಮ, ಶ್ರೀಮಹಾಲಕ್ಷ್ಮೀ ಅಷ್ಟೋತ್ತರಶತನಾಮ ಮತ್ತು ಶ್ರೀಧಾನ್ಯಶಂಕರ ಅಷ್ಟೋತ್ತರ ಶತನಾಮ ಪೂಜಾ ವಿವರಗಳೂ ಇವೆ. ಜ್ಯೇಷ್ಠಾಲಕ್ಷ್ಮೀ ವ್ರತವನ್ನು ಆಚರಿಸುವವರಿಗೆ ಆ ವ್ರತದ ವಿಧಾನವನ್ನೂ ಪ್ರತ್ಯೇಕವಾಗಿ ಕೊಟ್ಟಿದ್ದಾರೆ. ಪುಟ 145 ರಿಂದ || ಅಥ ಶ್ರೀಶಿವಸಹಸ್ರನಾಮಾವಲಿಃ|| ಶ್ರೀಧಾನ್ಯಶಂಕರ, ಶ್ರೀಕೇದಾರೇಶ್ವರ ಪ್ರೀತ್ಯರ್ಥಂ ಸಹಸ್ರನಾಮಪೂಜಾಂ ಕರಿಷ್ಯೇ || ವಿಷ್ಣುರುವಾಚ- ಓಂ ಭವಾಯ ನಮಃ ದಿಂದ  ಓಂ ಸರ್ವಸತ್ತ್ವಾವಲಂಬನಾಯ ನಮಃ ತನಕ ಸಹಸ್ರನಾಮಗಳಿವೆ. ಹಾಗೆಯೇ || ಅಥ ಶ್ರೀಲಕ್ಷ್ಮೀಸಹಸ್ರನಾಮಾವಲಿಃ- ಶ್ರೀಮಹಾಲಕ್ಷ್ಮೀ ಪ್ರಸಾದಸಿದ್ಧ್ಯರ್ಥಂ ಸಹಸ್ರನಾಮಪೂಜಾಂ ಕರಿಷ್ಯೇ ||. ಓಂ ಶ್ರಿಯೈನಮಃ ದಿಂದ ಓಂ ವಿಷ್ಣುವಕ್ಷಸ್ಥಲಗತಾಯೈ ನಮಃ ತನಕ ಸಹಸ್ರನಾಮಗಳಿವೆ.


ಮುಂದಿನ ಪುಟಗಳಲ್ಲಿ ಕ್ರಮವಾಗಿ ಕೇದಾರೇಶ್ವರಕಥಾ, ಗೋಕರ್ಣದ ಶ್ರೀ ಮಹಾದೇವ ಮಹಾಬಲೇಶ್ವರ ಭಟ್ಟರ ಕನ್ನಡ ಅನುವಾದವಿದೆ. ಅನಂತರ ಮಹಾಲಕ್ಷ್ಮೀ ಕಥಾ- ಕನ್ನಡ ಅನುವಾದ ಕೂಡ ಇದೆ. ಅಂತೆಯೇ ಧಾನ್ಯಶಂಕರ ಕಥಾ- ಕನ್ನಡ ಅನುವಾದ ಕೂಡ ಇದೆ. ವಿಶೇಷವೆಂದರೆ ಈ ವ್ರತವನ್ನು ಮಾಡುವ ಕಾಲ ಮತ್ತು ‘ಏಳು ಎಳೆಗಳಿಂದ ಕೂಡಿರುವ ದಾರಕ್ಕೆ ಏಳು ಗಂಟುಗಳನ್ನು ಹಾಕುವ ಕ್ರಮ ಮುಂತಾದ ವಿವರಗಳೂ ಇವೆ. ಯಾವುದೇ ವ್ರತ ಮಾಡುವಾಗ ಆ ವ್ರತವನ್ನು ಯಾವಾಗ, ಹೇಗೆ ಮಾಡಬೇಕೆಂಬುದರ ಬಗ್ಗೆ ಕೆಲವು ಪ್ರಾಥಮಿಕ ತಿಳಿವಳಿಕೆಯಾದರೂ ಇರಬೇಕು. ಈ ಪುಸ್ತಕದ ಸಂಪಾದಕರು ಅದನ್ನೂ ಸೇರಿಸಿರುವುದು ಪ್ರಶಂಸನೀಯವಾಗಿದೆ. ಪುಟ 220 ರಿಂದ 227 ರವರೆಗೆ ಇದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳೂ, ಶಾಸ್ತ್ರಾಧಾರವಾಗಿಯೇ ಇದೆ. ವ್ರತನಿರ್ಣಯ ಮತ್ತು ವ್ರತೋದ್ಯಾಪನ ವಿಧಿಯೂ ಅಡಕವಾಗಿದೆ.


ನಮ್ಮ ಪರಂಪರೆಯಲ್ಲಿ ಯಾವುದೇ ವಿಶೇಷ ಪೂಜೆಯನ್ನು ಮಾಡುವಾಗ ಮಂಗಲಾರತಿ ಸಮಯದಲ್ಲಿ ಅಷ್ಟಾವಧಾನ ಸೇವೆ ಇರುತ್ತದೆ. ಇಲ್ಲಿಯೂ ಕೂಡ ಋಗ್ವೇದದಿಂದ ‘ನಾನಾವಿಧ ವಾದ್ಯ’ ಸೇವೆ ತನಕ ವಿವರವಿದೆ.  ಭಾರತೀಯ ಪರಂಪರೆ ಹೇಗೆಂದರೆ ಒಂದು ಪೂಜೆ ಅಥವಾ ವ್ರತದಲ್ಲಿ ಮನೆಯ ಯಜಮಾನ/ ಪುರುಷರಂತೆ ಯಜಮಾನಿ/ ಮಹಿಳೆಯರೂ ಅಷ್ಟೇ ಸಹಭಾಗಿತ್ವವನ್ನು ಪಡೆದಿರುತ್ತಾರೆ. ಅಂದರೆ ಯಜಮಾನ/ ಪುರೋಹಿತರು ಮಂತ್ರ ಪಠಣ ಮಾಡುತ್ತಾ  ಇಷ್ಟದೇವರನ್ನು ಪೂಜಿಸಿದರೆ ಮಹಿಳೆಯರು ಅಂದಿನ ಪೂಜೆಗೆ ಸಂಬಂಧಿಸಿದ ಹಾಡುಗಳ ಮೂಲಕ ಪಾಲುಗೊಳ್ಳುತ್ತಾರೆ. ಅದರಂತೆ ಈ ಪುಸ್ತಕದಲ್ಲಿ ‘ಫಲಾಹಾರ ಮಾಡಿದ್ದು’ ‘ಮಂಗಲದ ಹಾಡು’ ಮತ್ತು ‘ಕೇದಾರೇಶ್ವರ, ಧಾನ್ಯಶಂಕರ, ಮಹಾಲಕ್ಷ್ಮೀ ವ್ರತಕಥಾ’ ಗಳಿಗೆ  ಸಂಬಂಧಿಸಿದಂತೆ ಒಂದರಿಂದ ಮೂರನೆಯ ಕಥೆ ತನಕ ಹಾಡುಗಳನ್ನೂ ಸಂಪಾದಿಸಿದ್ದಾರೆ. ಪುಸ್ತಕದ ಕೊನೆಯಲ್ಲಿ ಸಾಗರ ತಾ|| ಹುಳೇಗಾರು ಲಕ್ಷ್ಮೀನಾರಾಯಣ ಭಟ್ಟರ ಸಂದರ್ಶನವೂ ಇದೆ. ಇದರಲ್ಲಿ ಅವರ ಕುಟುಂಬದ ಹಿನ್ನೆಲೆಯಿಂದ ವ್ರತವನ್ನು ಆಚರಿಸುವ ದಿನ- ಹತ್ತಿಪೂಜೆಯ ವಿಧಾನ- ಅಷ್ಟಮೀ ದಾರವನ್ನು ತಯಾರಿಸುವ ವಿಧಾನ- ಅಶೌಚ ಬಂದಾಗ- ದಾರ ಸಿಕ್ಕಾಗ ಏನು ಮಾಡಬೇಕು. ಇವೇ ಮುಂತಾದ ಹಲವು ಹತ್ತು ಸಂಗತಿಗಳೂ ಇವೆ. 


ಬೆನ್ನುಡಿಯಲ್ಲಿ ವಿದ್ವಾನ್ ರೇವಣಕಟ್ಟಾ ಗಜಾನನ ಭಟ್ ಇವರು ನಾಡೀನಾಂ ಆಶ್ರಯಃ ಪಿಂಡಃ ದೇಹವೆಂಬುದು ನಾಡೀವ್ಯೂಹ. ಹೃದಯದ ವಾಸನಾರೂಪದ ಗ್ರಂಥಿಯ ಬಿಚ್ಚುವಿಕೆಗೆ ಭಗವದನುಗ್ರಹವೂ ಅಗತ್ಯ. ಈ ನಾಡೀ- ಗ್ರಂಥಿಗಳ ಮರ್ಮವೇ ಎಳೆಗಳ ರೂಪದ ಹೊರ ಆಚರಣೆ. ಇವೆಲ್ಲವೂ ಮಹರ್ಷಿಗಳ ತಪಸ್ಯಾಭೂಮಿಕೆಯಲ್ಲಿ ಗೋಚರವಾದ ತತ್ತ್ವದ ಅನುಸಂಧಾನ ರೂಪವಾದ ಸತ್ಯದ ವಿಷಯವೇ ಆಗಿದೆ ಎಂದು ಈ ಎಳೆಗಳ ಪೂಜೆಯ ಮಹತ್ತ್ವವನ್ನು ವಿವರಿಸಿದ್ದಾರೆ.


ಮುಖಪುಟವೂ ಕೂಡ ಕೇದಾರೇಶ್ವರ ದೇವಸ್ಥಾನ, ಈಶ್ವರನ ಚಿತ್ರ, ಸಮುದ್ರಮಥನದಲ್ಲಿ ಆವಿರ್ಭವಿಸಿದ ಮಹಾಲಕ್ಷ್ಮೀ ಚಿತ್ರಗಳೊಂದಿಗೆ ಆಕರ್ಷಕವಾಗಿ ಮೂಡಿಬಂದಿದೆ.


ಒಟ್ಟಿನಲ್ಲಿ ಈ “ಎಳೆ ಅಷ್ಟಮೀ ವ್ರತ” ಪುಸ್ತಕ ಅಷ್ಟಮೀ ವ್ರತದ ಬಗ್ಗೆ ಒಂದು ಸಮಗ್ರ ಪುಸ್ತಕ. ಪೂಜೆ ಮಾಡುವ ಲೌಕಿಕರೂ, ಮಾಡಿಸುವ ಪುರೋಹಿತರೂ ಅಗತ್ಯವಾಗಿ ಕೊಂಡು ಸಂಗ್ರಹಿಸಿಟ್ಟುಕೊಳ್ಳಬೇಕಾದ ಅಮೂಲ್ಯಕೃತಿ. ಇಂಥದೊಂದು ಪುಸ್ತಕ ಸಂಪಾದಿಸಿದ ರವೀಂದ್ರ ಶರ್ಮಾ ಕೋಣನಕಟ್ಟೆ ಮತ್ತು ಡಾ. ಅಭಿಷೇಕ ಭಟ್ಟರು ಹುಳೇಗಾರು ಅಭಿನಂದನಾರ್ಹರು. 


ಧಾರ್ಮಿಕ-ವೇದಾಂತದ ಹಲವಾರು ಮೌಲಿಕ ಪುಸ್ತಕಗಳನ್ನು ನಿರಂತರ ಪ್ರಕಟಿಸುವ, ಈ ಪುಸ್ತಕವನ್ನೂ ಪ್ರಕಟಿಸಿರುವ ಬೆಂಗಳೂರಿನ ಬಳೇಪೇಟೆಯ ಶ್ರೀನಿಧಿ ಪಬ್ಲಿಕೇಷನ್ಸ್ ನ ಮಾಲಿಕ ನವೀನ್ ಟಿ. ಪುರುಷೋತ್ತಮ್ ರವರಿಗೆ ಎಲ್ಲ ಆಸ್ತಿಕ ಬಂಧುಗಳ ವಿಶೇಷವಾಗಿ ಎಳೆ ಅಷ್ಟಮೀ ವ್ರತ ಆಚರಿಸುವವರ ಪರವಾಗಿ ಹಾರ್ದಿಕ ಧನ್ಯವಾದಗಳು. ಆಸಕ್ತರು ಪ್ರಕಾಶಕರನ್ನು ಸಂಪರ್ಕಿಸಿ ಪುಸ್ತಕ ಕೊಳ್ಳಬಹುದಾಗಿದೆ.  


- ಜಿ.ಟಿ. ಶ್ರೀಧರ ಶರ್ಮಾ,  

“ಅಥರ್ವ” 80 ಅಡಿ ರಸ್ತೆ, ಮೂರನೆಯ ತಿರುವು. ವಿಜಯನಗರ ಬಡಾವಣೆ, ಸಾಗರ- 577401 ದೂರವಾಣಿ:- 9480473568


**********

ಪುಸ್ತಕ ಖರೀದಿಸಲು ಸಂಪರ್ಕಿಸಿ

ಶ್ರೀನಿಧಿ ಪಬ್ಲಿಕೇಷನ್ಸ್. ಬೆಂಗಳೂರು.

ಮೊ: 9972778646 (WhatsApp) / 080 41118646 / 080 40998646/ 9972778646


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top