ಎನ್ನೆಸ್ಸೆಸ್ ಘಟಕದ ಬೆಳ್ಳಿ ಹಬ್ಬವನ್ನು ಅರ್ಥಪೂರ್ಣವಾಗಿಸುವತ್ತ ವಿದ್ಯಾರ್ಥಿಗಳು
- ಗಣೇಶ್ ಕಾಮತ್
ಮೂಡುಬಿದಿರೆ: ತಾವು ಮಾಡುವ ಸೇವೆ ಅರ್ಥಪೂರ್ಣ ಮಾತ್ರವಲ್ಲ ಸಾರ್ಥಕ ವಾಗಬೇಕು. ಅಲ್ಲೊಂದು ಧನ್ಯತಾ ಭಾವ ಕಾಣ ಬೇಕು ಎಂದು ಕನಸು ಕಂಡ ವಿದ್ಯಾರ್ಥಿಗಳು ಈ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಯಶಸ್ಸಿನ ಹೆಜ್ಜೆಗಳನ್ನೂ ಇಟ್ಟಾಗಿದೆ. ಹೌದು. ಮೂಡುಬಿದಿರೆ ಎಸ್.ಎನ್. ಎಂ. ಪಾಲಿಟೆಕ್ನಿಕ್ ನ ಎನ್ನೆಸ್ಸೆಸ್ ಘಟಕ ಇದೀಗ ರಜತ ಸಂಭ್ರಮಕ್ಕೆ ಸಜ್ಜಾಗುತ್ತಿದೆ. ಅದನ್ನು ಅರ್ಥಪೂರ್ಣವಾಗಿ ಆಚರಿಸಲು ಅವರು ಹಾಕಿಕೊಂಡ ವಿಶಿಷ್ಠ ಯೋಜನೆಯೇ ಸರಕಾರಿ ಶಾಲೆಗಳ ಸೇವೆ.
ಹೌದು.. ಇವರೆಲ್ಲರೂ ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳು ಮೂಡುಬಿದಿರೆ ಗ್ರಾಮಾಂತರ ಸಹಿತ ಸುತ್ತಮುತ್ತಲಿನ 47 ಸರಕಾರಿ ಶಾಲೆಗಳಿಗೆ ಒಂಭತ್ತು ತಂಡಗಳಾಗಿ ಹೊರಟ 35 ವಿದ್ಯಾರ್ಥಿಗಳು ಅಲ್ಲಿನ ಅಗತ್ಯತೆಗಳ ಪಟ್ಟಿ ಮಾಡಿ್ದ್ದಾರೆ. ಶಿರ್ತಾಡಿ, ಬೆಳುವಾಯಿ, ಇರುವೈಲು, ಮಾರೂರು, ಗಾಂಧೀನಗರ ಮೂಡುಬಿದಿರೆ ಗ್ರಾಮಾಂತರ ಹೀಗೆ ಸುತ್ತ ಮುತ್ತ ಸರಕಾರಿ ಶಾಲೆಗಳಿಗೆ ಅಗತ್ಯವಿರುವ ತಾಂತ್ರಿಕ ನೆರವು ಪಟ್ಟಿಮಾಡಿಕೊಂಡಿದ್ದಾರೆ. ಮೊದಲು ಆದ್ಯತೆಯಲ್ಲಿ 25 ಶಾಲೆಗಳಿಗೆ ಸಮಯಾವಕಾಶವಿದ್ದರೆ ಎಲ್ಲ ಕಡೆ ಸೇವೆ ವಿಸ್ತರಿಸುವ ಉದ್ದೇಶ ಈ ತಂಡದ್ದು.
ವೈರಿಂಗ್, ಸ್ಚಿಚ್ ಬೋರ್ಡ್, ಅರ್ತಿಂಗ್, ಫ್ಯಾನ್, ಕಂಪ್ಯೂಟರ್ ರಿಪೇರಿ, ಕರಿ ಹಲಗೆ ಪೈಂಟಿಂಗ್ ಹೀಗೆ ಆದ್ಯತೆಯ ಕೆಲಸಗಳಲ್ಲಿ ನುರಿತ ವಿದ್ಯಾರ್ಥಿಗಳು ಅವುಗಳ ರಿಪೇರಿ, ನವೀಕರಣ ನಡೆಸಿದ್ದಾರೆ. ಶಾಲೆಯವರು ಒದಗಿಸಿದ ಸೊತ್ತುಗಳಿಗೆ ಶ್ರಮಿಕರಾಗಿ ಸೇವೆ ಸಲ್ಲಿಸಿದ್ದಾರೆ. ಕೆಲವೆಡೆ ದಾನಿಗಳು ಕೊಟ್ಟಿದ್ದನ್ನೂ ಫಿಟ್ಟಿಂಗ್ ಮಾಡಿದ್ದಾರೆ. ಅನಿವಾರ್ಯವಾದ ಕಡೆ ತಾವೇ ಒದಗಿಸಿದ್ದಾರೆ.
ಹಳೆ ವಿದ್ಯಾರ್ಥಿಗಳಾದ ಪ್ರಮೋದ್, ಸಮ್ಯಕ್ ತಮ್ಮ ಉದ್ಯೋಗದ ನಡುವೆಯೂ ಸಂಸ್ಥೆಯ ಸೇವಾ ಕಾರ್ಯಕ್ಕೆ ನೆರವಾಗುತ್ತಿದ್ದಾರೆ. ಈಗಾಗಲೇ ಆರು ಶಾಲೆಗಳಲ್ಲಿ ಕೆಲಸ ಪೂರ್ಣವಾಗಿದೆ. ಅಗಸ್ಟ್ 2 ರಿಂದ ಆರಂಭವಾಗಿರುವ ಈ ಅಭಿಯಾನ ಸೆ 24ರ ಎನ್ಸೆಸ್ಸೆಸ್ ಡೇ ಮೊದಲು ಮುಗಿಸಿ ರಜತ ಸಂಭ್ರಮ ಆಚರಿಸುವ ಇರಾದೆ ತಂಡದ್ದು ಎಂದು ಘಟಕ ಅಧಿಕಾರಿ ರಾಮ್ ಪ್ರಸಾದ್ ಎಂ. ಮತ್ತು ಗೋಪಾಲಕೃಷ್ಣ ಮಾಧ್ಯಮದ ಜತೆ ಸಂತಸ ಹಂಚಿಕೊಂಡಿದ್ದಾರೆ.
ಈ ಅಭಿಯಾನದ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ನೊರೋನಾ ತರೀನಾ ಪಿಂಟೋ ಸಹಿತ ಆಡಳಿತ ಮಂಡಳಿಯ ಮಾರ್ಗದರ್ಶನ, ಸಹಕಾರವೂ ಕಾರಣ ಎನ್ನುವ ಅನಿಸಿಕೆ ಅವರದ್ದು. ಈಗಾಗಲೇ ಐವರು ಸ್ವಯಂ ಸೇವಕರು ಈ ಘಟಕದಿಂದ ಉತ್ತಮ ಸ್ವಯಂ ಸೇವಕರಾಗಿ ವಿವಿ ಮಟ್ಟದಲ್ಲಿ ಗುರುತಿಸಿಕೊಂಡಿದ್ದು 2016-17 ನೇ ಸಾಲಿನಲ್ಲಿ ಉತ್ತಮ ಘಟಕ, ಯೋಜನಾಧಿಕಾರಿ ಗೌರವವೂ ಈ ಘಟಕಕ್ಕೆ ಲಭಿಸಿತ್ತು ಎನ್ನುವುದು ಮಾತ್ರವಲ ಈ ಪಾಲಿಟೆಕ್ನಿಕ್ ಗುಣಮಟ್ಟದ ಶಿಕ್ಷಣಕ್ಕೆ ರಾಜ್ಯದಲ್ಲೇ ಮೊದಲ ಸಾಲಿನಲ್ಲಿದೆ ಎನ್ನುವುದು ಗಮನಾರ್ಹ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


