ಬೆಳ್ತಂಗಡಿ: ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ ಭಾನುವಾರ (ಆ.24) ಗೀತೆ ಜತೆ ಸಾಹಿತ್ಯ ಸಾಂಗತ್ಯ ಒಂದು ವರ್ಷದ ಸಾಹಿತ್ಯ ಪರ್ವ ಉಪನ್ಯಾಸ ಮಾಲಿಕೆಯ ಹನ್ನೆರಡನೇ ಅಧ್ಯಾಯ ಭಕ್ತಿ ಯೋಗದ ಉಪನ್ಯಾಸವನ್ನು ಸಂಪನ್ಮೂಲ ವ್ಯಕ್ತಿ ಶ್ರೀಮತಿ ವಸಂತಿ ಕುಳಮರ್ವ, (ಅರ್ಥಶಾಸ್ತ್ರ ಉಪನ್ಯಾಸಕರು, ಸರಕಾರಿ ಪದವಿ ಪೂರ್ವ ಕಾಲೇಜು, ನಡ) ಇವರು ನೀಡಿದರು.
ಮಾಜಿ ಯೋಧ ಲಯನ್ ಡಾ| ಗೋಪಾಲಕೃಷ್ಣ ಕಾಂಚೋಡು ಇವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಅತಿಥಿಗಳು ಶಾರದ ಮಾತೆ ಮತ್ತು ಭಾರತ ಮಾತೆಯ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದರು.
ಶ್ರೀಮತಿ ನಯನಾ ಟಿ. ಇವರ ಶಾರದಾ ಸ್ತುತಿ ಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಸಮಿತಿಯ ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿಯವರು ರಚಿಸಿದ ಆಶಯಗೀತೆಯನ್ನು ಕು.ಸಿಂಚನಾ ಇವರು ಹಾಡಿದರು. ಶ್ರೀಮತಿ ಆಶಾ ಅಡೂರು ಇವರು ಆಗಮಿಸಿದ್ದ ಸರ್ವರನ್ನು ಸ್ವಾಗತಿಸಿದರು. ಅಭ್ಯಾಗತರನ್ನು ತಾಂಬೂಲ ನೀಡಿ ಸ್ವಾಗತಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಶ್ರೀಮತಿ ವಸಂತಿ ಕುಳಮರ್ವ ಇವರು ಭಗವದ್ಗೀತೆಯ 12ನೇ ಅಧ್ಯಾಯ ಭಕ್ತಿ ಯೋಗವನ್ನು ವಿವರಿಸಿದರು. ಈ ಅಧ್ಯಾಯವು ಭಗವಂತನನ್ನು ಪೂಜಿಸುವ ಮತ್ತು ಧ್ಯಾನಿಸುವ ಮಾರ್ಗಗಳ ಬಗ್ಗೆ ಅರ್ಜುನನ ಪ್ರಶ್ನೆಗೆ ಶ್ರೀ ಕೃಷ್ಣನು, ಭಕ್ತಿಯ ಸ್ವರೂಪ, ನಿರಾಕಾರ ಭಕ್ತಿ ಎಂದರೇನು?, ನಿಜವಾದ ಭಕ್ತನ ಲಕ್ಷಣಗಳೇನು? ಅಭ್ಯಾಸ ಮತ್ತು ಕರ್ಮ ಹಾಗೂ ಅಭ್ಯಾಸಕ್ಕಿಂತ ಜ್ಞಾನ, ಜ್ಞಾನಕ್ಕಿಂತ ಧ್ಯಾನ, ಧ್ಯಾನಕ್ಕಿಂತ ಭಕ್ತಿ ಹೇಗೆ ಶ್ರೇಷ್ಠ ಎನ್ನುವುದರ ಬಗ್ಗೆ ಕೃಷ್ಣನ ವಿವರಣೆಯನ್ನು ಮಂಕುತಿಮ್ಮನ ಕಗ್ಗ, ದಾಸರ ಹಾಡುಗಳು, ಭಜನೆಯ ಉದಾಹರಣೆಗಳನ್ನು ನೀಡುತ್ತಾ ಭಕ್ತಿಮಾರ್ಗದಿಂದ ಭಗವಂತನನ್ನು ಸೇರುವ ವಿಧಾನಗಳ ಕುರಿತು ಅತ್ಯಂತ ಮನೋಜ್ಞವಾಗಿ ವಿವರಿಸಿದರು.
ಲ| ಡಾ| ಗೋಪಾಲಕೃಷ್ಣ ಕಾಂಚೋಡು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಜೀವನ ಪದ್ಧತಿಯನ್ನು ತಿಳಿಸುವ ಭಗವದ್ಗೀತೆಯ ಬಗ್ಗೆ ತಿಳಿದುಕೊಳ್ಳುವುದು, ತಿಳಿಸುವುದು ಮತ್ತು ಅದನ್ನು ಅನುಸರಿಸುವುದು ಎಷ್ಟು ಅಗತ್ಯ ಅನ್ನೋದನ್ನು ಹೇಳುತ್ತಾ, ಭಗವಂತನ 10 ಅವತಾರಗಳು ಕೂಡ ಮಾನವ ಜನ್ಮದಲ್ಲಿ ಅಡಕವಾಗಿರುವ ಬಗ್ಗೆ ವಿವರಿಸಿದರು.
ಅತಿಥಿಗಳನ್ನು ಪುಸ್ತಕ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀಮತಿ ಅಕ್ಷತಾ ಅಡೂರ್ ಇವರು ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಮತಿ ವಿನುತಾ ರಜತ್ ಗೌಡ ಇವರು ಸರ್ವರಿಗೂ ಧನ್ಯವಾದವನ್ನಿತ್ತರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

