ಹೊಸ ಅನ್ವೇಷಣೆಗಳಿಗೆ ಕನ್ನಡ ಪದ ಸೃಷ್ಟಿ ಅಗತ್ಯ: ರಾಘವೇಶ್ವರ ಶ್ರೀ

Upayuktha
0


ಗೋಕರ್ಣ: ಮರೆತು ಹೋದ ಕನ್ನಡದ ಪದಗಳನ್ನು ನೆನಪಿಸಿ ಚಾಲ್ತಿಗೆ ತರುವ ಜತೆಗೆ ಆಧುನಿಕ ಜಗತ್ತಿನ ಹೊಸ ಅನ್ವೇಷಣೆಗಳಿಗೆ ಕನ್ನಡ ಪದಗಳನ್ನು ಸೃಜಿಸುವ ಕಾರ್ಯ ಆಗಬೇಕಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀಮಹಾಸ್ವಾಮೀಜಿ ನುಡಿದರು.


ಅಶೋಕೆಯಲ್ಲಿ ಸ್ವಭಾಷಾ ಚಾತುಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 45ನೇ ದಿನವಾದ ಶನಿವಾರ ಬೆಂಗಳೂರಿನ ಹಿರಿಯ ವಕೀಲ ರಾಜಶೇಖರ ಹಿಲಿಯಾರು ಕುಟುಂಬದವರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.


ಹೊಸ ಅನ್ವೇಷಣೆಗಳಿಗೆ ಕನ್ನಡ ಕೋಶಗಳು, ಅಂತರ್ಜಾಲ ಅಥವಾ ಕೃತಕ ಬುದ್ಧಿಮತ್ತೆಯಲ್ಲಿ ಕೂಡಾ ಕನ್ನಡ ಪದಗಳು ಸಿಗುವುದಿಲ್ಲ. ಇದು ಇಂಗ್ಲಿಷ್‍ಗೂ ಅನ್ವಯಿಸುತ್ತದೆ. ಹೊಸ ಹೊಸ ಅನ್ವೇಷಣೆಗಳಾದಾಗ ಅದಕ್ಕೆ ತಕ್ಕ ಪದಪುಂಜಗಳು ಇಂಗ್ಲಿಷ್‍ನಲ್ಲಿ ಸೃಷ್ಟಿಯಾಗಿದ್ದು, ಅದನ್ನೇ ಬಳಸುವ ಬದಲು ಕನ್ನಡದಲ್ಲೂ ಹೊಸ ಪದಗಳನ್ನು ಸೃಷ್ಟಿಸಬೇಕಿದೆ ಎಂದು ವಿಶ್ಲೇಷಿಸಿದರು.


ದಿನಕ್ಕೊಂದು ಇಂಗ್ಲಿಷ್ ಪದತ್ಯಾಗ ಅಭಿಯಾನದಲ್ಲಿ ಶನಿವಾರ ಆನ್‍ಲೈನ್ ಪದಕ್ಕೆ ಕನ್ನಡ ಪದವನ್ನು ಸೂಚಿಸಿದ ಶ್ರೀಗಳು, ಸಂಸ್ಕøತದ ಸಂಪೃತ್ತ ಎಂಬ ಶಬ್ದ ಇದಕ್ಕೆ ಸರಿಯಾಗಿ ಹೊಂದಿಕೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.  ಪಾರ್ವತಿ ಪರಮೇಶ್ವರರ ಸಂಪರ್ಕಕ್ಕೆ ಕಾಳಿದಾಸ ಈ ಪದವನ್ನು ಬಳಸಿದ್ದಾರೆ. ಆನ್‍ಲೈನ್ ಕೂಡಾ ಇಂಥ ಸಂಪರ್ಕ ಸಾಧಿಸುವ ಪರಿಕಲ್ಪನೆಯಾಗಿದ್ದರಿಂದ ಈ ಪದ ಬಳಕೆ ಯೋಗ್ಯ. ಆದರೆ ಜನಬಳಕೆಗೆ ಇದು ಕಷ್ಟ ಎಂದಾದಲ್ಲಿ, ದೂರಗ್ರಾಹಿ, ದೂರವೇದಿ, ಅಂತರಾಳಕದಂಥ ಶಬ್ದಗಳನ್ನು ಬಳಸಬಹುದು ಎಂದು ಸಲಹೆ ಮಾಡಿದರು.


ಇಂಗ್ಲಿಷ್ ಮಾಯೆ ನಮಗೆ ಅರಿವಿಲ್ಲದಂತೆಯೇ ನಮ್ಮ ಭಾಷೆಯಲ್ಲಿ ನುಸುಳಿಕೊಂಡಿದ್ದು, ಭಾಷೆಯನ್ನು ಶುದ್ಧೀಕರಿಸುವ ಅಗತ್ಯತೆಯನ್ನು ಸಮಾಜ ಒಪ್ಪಿಕೊಂಡಿದೆ. ಇದು ಅನುಷ್ಠಾನಕ್ಕೆ ಬರಬೇಕಿದ್ದು, ಇದಕ್ಕೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಸ್ವಭಾಷಾ ಚಾತುರ್ಮಾಸ್ಯ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಕನ್ನಡವನ್ನು ಮಾತನಾಡುವಾಗ ಇಂಥ ಅರ್ಥಪೂರ್ಣ, ಹೊಸ ಪ್ರಯತ್ನವನ್ನು ಮಾಡೋಣ. ಅನಿವಾರ್ಯ ಎಂಬ ಸಂದರ್ಭದಲ್ಲಿ ಇಂಗ್ಲಿಷ್ ಮಾತನಾಡುವಾಗ ಆ ಭಾಷೆ ಮಾತನಾಡೋಣ. ಆದರೆ ನಮ್ಮ ಭಾಷೆಯ ನಡುವೆ ಇಂಗ್ಲಿಷ್ ಪದಗಳ ಬಳಕೆ ಬೇಡ ಎಂದು ಸ್ಪಷ್ಟಪಡಿಸಿದರು.

ಸ್ವಭಾಷೆ ನಮ್ಮ ಸಹಜತೆ; ಪರಕೀಯ ಭಾಷೆ ಕೃತ್ರಿಮತೆಯ ಸಂಕೇತ. ಮರೆತು ಹೋದ ಮನೆಮಾತನ್ನು ನೆನಪಿಸುವ ಮೂಲಕ ನಮ್ಮತನವನ್ನು ತಂದುಕೊಡುವ ಪ್ರಯತ್ನ ಇದಾಗಿದ್ದು, ಒಳ್ಳೆಯ ಬದಲಾವಣೆಗೆ ಸಮಾಜ ತೆರೆದುಕೊಳ್ಳಲಿ ಎಂದು ಆಶಿಸಿದರು.

ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ವತಿಯಿಂದ ಕರ್ನಾಟಕ ಸಂಗೀತ ಕಛೇರಿ ನಡೆಯಿತು. ಶ್ರುತಿರಂಜಿನಿ ಗಾಯನ ಪ್ರಸ್ತುತಪಡಿಸಿದರೆ, ಖ್ಯಾತ ಮೃದಂಗ ವಾದಕ ಜಯಚಂದ್ರ ರಾವ್ ಸಾಥ್ ನೀಡಿದರು.

ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಸಂಗೀತ ಶಿಕ್ಷಕ ರಘುನಂದನ್ ಬೇರ್ಕಡವು, ಚಾತುರ್ಮಾಸ್ಯ ತಂಡದ ವಿಷ್ಣುಮೂರ್ತಿ ಹೆಗಡೆ, ನಿಖಿಲ್, ಅಜಿತ್ ಗುಡ್ಗೆ, ವಿಷ್ಣುಬನಾರಿ, ರಾಘವೇಂದ್ರ ಎನ್.ಆರ್, ಅರವಿಂದ ಧರ್ಬೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ರಾಘವೇಂದ್ರ ಮಧ್ಯಸ್ಥ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top