ಕಲಿಯುಗ ಕಾಮಧೇನು ಕಲ್ಪವೃಕ್ಷ ಶ್ರೀ ರಾಘವೇಂದ್ರ ಗುರುಸಾರ್ವಭೌಮರು

Upayuktha
0

ಶ್ರೀ ಗುರುರಾಘವೇಂದ್ರ ಸಾರ್ವಭೌಮರ 354ನೇ ವರ್ಷದ ಆರಾಧನಾ ಪ್ರಯುಕ್ತವಾಗಿ ಶ್ರೀಹರಿಯ ಪ್ರೇರಣೆಯಂತೆ ಅವರ ಬಗ್ಗೆ ವಿಶೇಷ ಲೇಖನ.




ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ

ರಾಯರ ಬಾರೋ ರಾಘವೇಂದ್ರ ಬಾರೋ


ಪರಮಾತ್ಮನ  ಪ್ರಸಾದದಿಂದಲೇ ಸಕಲ ಜೀವನ ಉದ್ದಾರ. ಆ ಪರಮಾತ್ಮನ ಅನುಗ್ರಹ ವಾಗಬೇಕಾದರೆ, ಅವನು ಒಲಿಯಬೇಕಾದರೆ ಅವನಲ್ಲಿ ಪ್ರೇಮ ಅಂದರೆ ಭಕ್ತಿಯನ್ನು ಮಾಡಬೇಕು. ಸರ್ವ ಜೀವರ ಮುಖ್ಯ ಗುರಿಯಾದ ಶಾಶ್ವತ ಸುಖ ದೊರೆಯಬೇಕಾದರೆ ಅವನನ್ನು ಭಕ್ತಿಯಿಂದ ಅರ್ಚಿಸಬೇಕು. ಅವನ ಗುಣಗಳನ್ನು ಸದಾಕಾಲ ಚಿಂತಿಸುತ್ತಾ ಇರಬೇಕು. ಇಂಥ ಶ್ರೀಹರಿಯ ಅಚಿಂತ್ಯಾತ್ಮಕ ಗುಣಗಳನ್ನು, ಅವನ ಜ್ಞಾನವನ್ನು ಬೋಧಿಸುವ ಗುರುಗಳಲ್ಲಿಯೂ ಶ್ರೀಹರಿಯಲ್ಲಿ ಮಾಡುವಂತೆಯೇ ಭಕ್ತಿ ಮಾಡಬೇಕು. 'ಗು' ಅಂದರೆ ಶಿಷ್ಯರ ಅಜ್ಞಾನವೆಂಬ ಅಂಧಕಾರ 'ರು' ಅಂದರೆ ಅದನ್ನು ಪರಿಹರಿಸುವ‌ವರು. ಶಿಷ್ಯರ ಅಜ್ಞಾನವನ್ನು ಪರಿಹರಿಸಿ ಜ್ಞಾನೋಪದೇಶ ಮಾಡುವವರೇ ನಿಜವಾದ ಗುರುಗಳು. ತಾರತಮ್ಯಾನುಸಾರವಾಗಿ ಇಂತಹ ಎಲ್ಲಾ ಗುರುಗಳಲ್ಲಿಯೂ ಭಕ್ತಿಯನ್ನು ಮಾಡಲೇಬೇಕು.

ಜಗತ್ ಪೂಜ್ಯರಾಗಿ ಜಗತ್ತನ್ನು ಉದ್ಧರಿಸುತ್ತಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರಲ್ಲಿ ಭಕ್ತಿಯನ್ನು ಮಾಡಬೇಕೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇಂತಹ ಗುರುರಾಜರಲ್ಲಿ ಭಕ್ತಿ ಉಂಟಾಗಬೇಕಾದರೆ ಅವರು ಯಾರು, ಅವರ ಮೂಲ ರೂಪ ಯಾವುದು, ಅವರು ಮಾಡಿದ ಮಹತ್ಕಾರ್ಯಗಳು, ಪರಮಾತ್ಮನನ್ನು ಅವರು ಒಲಿಸಿಕೊಂಡ ಬಗೆ, ಅವರು ತೋರಿದ ಮಹಿಮೆಗಳು, ಅವರಿಗೆ ಪರಮಾತ್ಮ ಅನುಗ್ರಹಿಸಿದ ಬಗೆ ಮುಂತಾದುವನ್ನು ಅವಶ್ಯವಾಗಿ ತಿಳಿಯಬೇಕು.

.

ಶಂಕುಕರ್ಣ:

ನರಸಿಂಹ ಪುರಾಣದ ವಾಕ್ಯದಂತೆ ಶ್ರೀಗುರುರಾಜರ ಮೂಲರೂಪ ಕರ್ಮಜ ದೇವತೆಯಾದ ಶಂಕುಕರ್ಣ.  ಚತುರ್ಮುಖ ಬ್ರಹ್ಮ ದೇವರು ಪ್ರತಿದಿನವೂ ಭಗವಂತನ ನಾನಾ ರೂಪಗಳನ್ನು ಪೂಜಿಸುವುದು ವಾಡಿಕೆ. ಆ ಪೂಜೆಗಾಗಿ ಶಂಕುಕರ್ಣರು ವಿವಿಧ ಪುಷ್ಪಮತ್ತು ತುಳಸಿಯನ್ನು ತರುವ ಹೊಣೆಯನ್ನು ಹೊತ್ತಿದ್ದರು. ಒಂದು ದಿನ ಸರಸ್ವತಿಯ ವೀಣಾವಾದನದಲ್ಲಿ ತಲ್ಲೀನರಾಗಿ ಬ್ರಹ್ಮದೇವರ ಪೂಜೆಗೆ ಹೂವನ್ನು ತಡವಾಗಿ ತಂದಿದ್ದರಿಂದ ಬ್ರಹ್ಮ ದೇವರ ಕೋಪಕ್ಕೆ ಗುರಿಯಾಗಿ ದೈತ್ಯ ಯೋನಿಯಲ್ಲಿ ಜನಿಸು ಎಂದು ಬ್ರಹ್ಮದೇವರಿಂದ ಶಪಿಸಲ್ಪಟ್ಟರು. ಈ ಶಾಪವನ್ನು ಪರಮಾತ್ಮನು ಲೋಕದ ಉದ್ಧಾರಕ್ಕಾಗಿ ಬ್ರಹ್ಮ ದೇವರಲ್ಲಿ ನಿಂತು ಕೊಡಿಸಿದರು.


ಮೊದಲನೇ ಅವತಾರ ಪ್ರಹ್ಲಾದ ರಾಜರು

ಹಿರಣ್ಯಕಶಿಪು ಮತ್ತು ಕಯಾದುವಿನಲ್ಲಿ ಪ್ರಲ್ಹಾದನಾಗಿ  ಜನಿಸಿದರು. ದೈತ್ಯ ಯೋನಿಯಲ್ಲಿ ಜನಿಸಿದರೂ ದೈತ್ಯ ಸ್ವಭಾವ ಬಾರದಿರಲಿ ಎಂದು ಬ್ರಹ್ಮದೇವರು ಅನುಗ್ರಹಿಸಿದ ಕಾರಣ ಮತ್ತು ನಾರದರ ಉಪದೇಶದ ಕಾರಣದಿಂದ ಅವರು ಪರಮ ಭಾಗವಾಗತೋತ್ತಮರಾದರು. ಅವರ ರಕ್ಷಣೆಗೆಂದೇ ಪರಮಾತ್ಮ ಒಂದು ಲೋಕ ವಿಲಕ್ಷಣವಾದ ನರಸಿಂಹ ರೂಪ ಧರಿಸಿ ಉದ್ದಾರ ಮಾಡಿದರು. ಶ್ರೀರಮಾ ಪತಿಯಾದ ನಾರಾಯಣನನ್ನು ಪೂರ್ಣವಾಗಿ ತಿಳಿಯಲು ವರ್ಣಿಸಲು ರಮಾ ಬ್ರಹ್ಮಾದಿ ದೇವತೆಗಳಿಗೂ ಸಾಧ್ಯವಿಲ್ಲ.  ಆದರೆ ಪ್ರಹ್ಲಾದರಾಜನಂತೆ ಭಕ್ತಿ ಮತ್ತು ವಿರಕ್ತಿಯಿಂದ ಪರಮಾತ್ಮನನ್ನು ಅರ್ಚಿಸಿದರೆ ಶ್ರೀಹರಿ ಪ್ರಸನ್ನನಾಗಿ ಅನುಗ್ರಹಿಸುವನೆಂಬ ವಿಚಾರವು ಭಾಗವತ ಸಪ್ತಮ ಸ್ಕಂದದ ಪ್ರಹ್ಲಾದನ ಚರಿತ್ರೆಯಿಂದ ತಿಳಿದು ಬರುತ್ತದೆ.


ಎರಡನೇ ಜನ್ಮ ಬಾಹ್ಲೀಕ ರಾಜರು

ಪ್ರತೀಪ ರಾಜನ ಪುತ್ರರಾಲ ಬಾಹ್ಲೀಕ ರಾಜರು ಪರಮ ಭಾಗವತೋತ್ತಮರು. ಅವರು ಮಹಾಭಾರತ ಯುದ್ಧ ಸಮಯದಲ್ಲಿ ಇದ್ದವರು. ಅವರು ಒಮ್ಮೆ ಶ್ರೀಕೃಷ್ಣ ಮತ್ತು ಭೀಮಸೇನ ದೇವರಿಗೆ ಕನಕರಥ ಸಮರ್ಪಣೆ ಮಾಡಿ ಉತ್ಸವ ಮಾಡಿದರು. ಆಗ ಶ್ರೀಕೃಷ್ಣ ಪರಮಾತ್ಮನು ಭೀಮಸೇನ ದೇವರಿಂದ ಅವರಿಗೆ ನೀವು ಚಕ್ರವರ್ತಿಗಳಾಗಿ ಭಕ್ತರು ಅರ್ಪಿಸುವ ಸ್ವರ್ಣ ರಥದಲ್ಲಿ ಮೆರೆಯುವಂತೆ ಆಗಲಿ ಎಂದು ವರವನ್ನು ನೀಡಿದರು.


ಮೂರನೇ ಅವತಾರ:

ಮೂರನೇ ಜನ್ಮದಲ್ಲಿ ವ್ಯಾಸರಾಯರಾಗಿ ವೇದಾಂತ ಸಾಮ್ರಾಜ್ಯದ ಅಧಿಪತಿಗಳಾಗಿ ಮೆರೆದರು. ಬ್ರಹ್ಮಣ್ಯತೀರ್ಥರಿಗೆ ಬದರಿಯಲ್ಲಿ ಬದರಿನಾಥನು ಅನುಗ್ರಹ ಮಾಡಿ ಪ್ರಹ್ಲಾದ ರಾಜರೇ ಅವತಾರ ಮಾಡಿ  ನಿಮ್ಮ ಶಿಷ್ಯರಾಗುತ್ತಾರೆ ಎಂದು ಅಭಯವನ್ನು ಇತ್ತರು. ರಾಮಾಚಾರ್ಯರ ದಂಪತಿಗಳಲ್ಲಿ ಜನಿಸಿ ಭೂಸ್ಪರ್ಶವಾಗದೆ ಬ್ರಹ್ಮಣ್ಯತೀರ್ಥರಲ್ಲಿ ಬೆಳೆದು ಶ್ರೀಪಾದರಾಜರಲ್ಲಿ ವಿಶೇಷ ಅಧ್ಯಯನವನ್ನು ಮಾಡಿದರು. ಒಮ್ಮೆ ಕಂಚಿಯಲ್ಲಿ ಪ್ರತಿವಾದಿಗಳು ವಿಷಪ್ರಾಶನ ಮಾಡಿಸಿದಾಗ ಔಷಧಿಯನ್ನು ಸೇವಿಸದೆ ಕೇವಲ ಭಗವಂತನ ಅನುಗ್ರಹದಿಂದ ಪಾರು ಮಾಡಿಕೊಂಡರು. 


ಶ್ರೀ ವ್ಯಾಸರಾಜ ಗುರುಸಾರ್ವಭೌಮರು ವ್ಯಾಸ ಸಾಹಿತ್ಯ ಮತ್ತು ದಾಸ ಸಾಹಿತ್ಯ ಎರಡನ್ನೂ ಅಭಿವೃದ್ಧಿ ಮಾಡಿದರು. ವ್ಯಾಸ ಸಾಹಿತ್ಯಕ್ಕೆ ವ್ಯಾಸ ತ್ರಯ ಎಂಬ ಉದ್ಗ್ರಂಥಗಳನ್ನು ಕೊಡುಗೆಯಾಗಿ ಕೊಟ್ಟರು. ಅದೇ ನ್ಯಾಯಾಮೃತ, ತರ್ಕತಾಂಡವ ಮತ್ತು ತಾತ್ಪರ್ಯ ಚಂದ್ರಿಕ. ದಾಸ ಸಾಹಿತ್ಯದಲ್ಲಿ ಅನೇಕ ಸುಳಾದಿ ಉಗಾಭೋಗ ಮತ್ತು ದೇವರನಾಮಗಳನ್ನು ರಚಿಸಿ ಶ್ರೀಸಾಮಾನ್ಯರು ಉದ್ಧಾರವಾಗುವಂತೆ ಮಾಡಿದರು.


ಶ್ರೀಕೃಷ್ಣದೇವರಾಯನ ಕುಹಯೋಗವನ್ನು ಪರಿಹಾರ ಮಾಡಿ ಸಿಂಹಾಸನದಲ್ಲಿ ಮೆರೆದರು. ಮರಳಿ ಸಿಂಹಾಸನವನ್ನು ರಾಜನಿಗೆ ಬಿಟ್ಟುಕೊಟ್ಟರು ಇದರ ದ್ಯೋತಕವಾಗಿ ಇಂದಿಗೂ ವ್ಯಾಸರಾಜ ಮಠದಲ್ಲಿ ಸಂಜೆ ವೇಳೆ ದರ್ಬಾರು ನಡೆಯುತ್ತದೆ. ಪುರಂದರದಾಸರನ್ನು ಮತ್ತು ಕನಕದಾಸರನ್ನು  ದಾಸಶ್ರೇಷ್ಠರು ಎಂದು ಸತ್ಕರಿಸಿದರು. ಪುರಂದರದಾಸರ ದೇವರನಾಮ ಗಳನ್ನು ವ್ಯಾಸಪೀಠದ ಇರಿಸಿ ಮಂಗಳಾರತಿ ಮಾಡಿ ಪುರಂದರೋಪನಿಷತ್ ಎಂದು ಕೊಂಡಾಡಿದರು. ಶಾಲಿವಾಹನ ಶಕ 1461 ವಿಳಂಬಿ ನಾಮ ಸಂವತ್ಸರ ಪಾಲ್ಗುಣ ಕೃಷ್ಣ ಪಕ್ಷ ಚತುರ್ಥಿ ಶನಿವಾರದಂದು ಬೃಂದಾವನಸ್ಥರಾದರು. ಅವರು ಇಂದಿಗೂ ತುಂಗಾ ತೀರದಲ್ಲಿರುವ ಆನೆಗೊಂದಿ ನಡುಗಡ್ಡೆಯಲ್ಲಿ ವಿರಾಜಮಾನರಾಗಿ ಭಕ್ತರನ್ನು ಉದ್ದಾರ ಮಾಡುತ್ತಿದ್ದಾರೆ.


ನಾಲ್ಕನೇ ಅವತಾರ: ಶ್ರೀ ರಾಘವೇಂದ್ರಗುರುಸಾರ್ವಭೌಮರು

ಭಾರತದಲ್ಲಿ ಸಕಲ ವಿದ್ಯೆಗಳಿಗೆ ಪಾಷ್ಟೀಕ ವಂಶ ತವರುಮನೆ ಎನಿಸಿದೆ. ಈ ಪಾಷ್ಟೀಕ ವಂಶದ ಗೌತಮ ಗೊತ್ರ ಬೀಗಮುದ್ರೆ ಮನೆತನದಲ್ಲಿ ಇಂದಿನ ಕಥಾ ನಾಯಕರಾದ ಶ್ರೀ ರಾಯರು ಅವತರಿಸಿದರು. ಅವರ ಪೂರ್ವಾಶ್ರಮದ ತಂದೆ ತಾಯಿಗಳು ತಿಮ್ಮಣ್ಣ ಭಟ್ಟರು ಗೋಪಿಕಾಂಬ ದಂಪತಿಗಳು. ಗುರುರಾಜ ಮತ್ತು ವೆಂಕಟಾಂಬ ಎಂಬ ಇಬ್ಬರು ಮಕ್ಕಳು ಇದ್ದರು. ಆದರೂ ಅವರಿಗೆ ಮತ್ತೊಂದು ಪುತ್ರರತ್ನ ಬೇಕೆಂಬ ಹಂಬಲವಾಯಿತು. ವಂಶದ ಕೀರ್ತಿ ಬೆಳಗಿಸಿ ಲೋಕಮಾನ್ಯ ರಾಗಿ ವಿರಾಜಿಸುವ ಮತ್ತೊಬ್ಬ ಪುತ್ರನನ್ನು ಪಡೆಯಲು ಕುಲದೇವರಾದ ಶ್ರೀನಿವಾಸ ನಲ್ಲಿ ಸಂಕಲ್ಪ ಪೂರ್ವಕವಾಗಿ ಸೇವೆಯನ್ನು ಪ್ರಾರಂಭಿಸಿದರು. ಅವರ ಸೇವೆಗೆ ಮೆಚ್ಚಿ ಶ್ರೀನಿವಾಸನು ಅವರಿಗೆ ಪುತ್ರನನ್ನು ಅನುಗ್ರಹಿಸಿದನು.


ಶಾಲಿವಾಹನ ಶಕ ಸಾವಿರದ 1418 ಮನ್ಮಥನಾಮ ಸಂವತ್ಸರ ಫಾಲ್ಗುಣ ಶುದ್ಧ ಸಪ್ತಮಿ ಗುರುವಾರ ಮೃಗಶಿರ ನಕ್ಷತ್ರದಲ್ಲಿ ರಾಯರ ಅವತಾರವಾಯಿತು. ಮಗನಿಗೆ ವೆಂಕಟನಾಥ ಎಂದು ನಾಮಕರಣ ಮಾಡಿದರು. ಪ್ರಾಥಮಿಕ ವಿದ್ಯೆಯನ್ನು ಭಾವನವರಾದ ಲಕ್ಷ್ಮೀನಾರಾಯಣರಲ್ಲಿ, ನಂತರ ಕುಂಭಕೋಣದಲ್ಲಿ ಶ್ರೀವಿಜಯೇಂದ್ರ ತೀರ್ಥಶ್ರೀಪಾದಂಗಳವರ ಶಿಷ್ಯರಾದ ಶ್ರೀಸುಧೀಂದ್ರ ತೀರ್ಥ ಶ್ರೀಪಾದರಲ್ಲಿ ಆಯಿತು. ಕಡುಬಡತನ ಇದ್ದರೂ ಯಾರಲ್ಲೂ ಏನನ್ನೂ ಯಾಚಿಸದೆ ಪರಮಾತ್ಮನ ಪ್ರೀತಿಗಾಗಿ ಜೀವನ ನಡೆಸಿದರು. ಯೋಗ್ಯಳಾದ ಸರಸ್ವತಿಬಾಯಿ ಎಂಬ ಕನ್ಯೆಯೊಡನೆ ವಿವಾಹವಾಯಿತು. ಅವರಿಗೆ ಪುತ್ರ  ಜನನವಾಯಿತು. ಬಡತನದ ಜೀವನ ನಡೆಸುತ್ತಿದ್ದರೂ ಜ್ಞಾನದಲ್ಲಿ ಬಹಳ ಶ್ರೀಮಂತರಾಗಿದ್ದರು. ಶ್ರೀ ಸುಧೀಂದ್ರ ತೀರ್ಥರು ಸನ್ಯಾಸತ್ವವನ್ನು ಕೊಡುತ್ತೇನೆ ಎಂದರೆ ನನಗೆ ಯೋಗ್ಯತೆ ಇಲ್ಲ ಬೇಡವೆಂದು ನಿರಾಕರಿಸಿದರು.


ನಂತರ ವಾಗ್ದೇವಿಯ ಆಜ್ಞೆಯಂತೆ ಯತ್ಯಾಶ್ರಮವನ್ನು ಸ್ವೀಕರಿಸಲು ನಿರ್ಧಾರ ಮಾಡಿದರು. ಶ್ರೀಸುಧೀಂದ್ರ ತೀರ್ಥರಿಂದ ಆಶ್ರಮವನ್ನು ಸ್ವೀಕಾರ ಮಾಡಿದರು. ರಾಘವೇಂದ್ರ ತೀರ್ಥರೆಂಬ ನಾಮಕರಣ ಆಯಿತು. ಇವೆಲ್ಲವೂ ಅವರ ಜೀವನ ಚರಿತ್ರೆ. ಆದರೆ ಅವರ ಮಹಿಮೆಗಳು ಅಪಾರ. ಸಂಗೀತ ಪ್ರೀಮರೂ ಆಗಿ ವೀಣೆಯನ್ನು ಚೆನ್ನಾಗಿ ನುಡಿಸುತ್ತಿದ್ದರು.


ಇಂದು ಎನಗೆ ಗೋವಿಂದ ಎಂಬ ದೇವರನಾಮವನ್ನು ರಚಿಸಿ ದೇವರಿಗೆ ಸಮರ್ಪಿಸಿದರು. ಅವರು ಸಾಕ್ಷಾತ್ ಪರಮಾತ್ಮನ ಸಾಕ್ಷಾತ್ಕಾರ ಪಡೆದು ಅನುಗ್ರಹೀತರಾದವರು. ಅಪಾರ ಪುಣ್ಯ ಗಳಿಸಿದವರು. ಆ ಪುಣ್ಯವನ್ನು ಇಂದಿಗೂ ಸಕಲ ಭಕ್ತ ಜನರಿಗೆ ಹಂಚಿ ಉದ್ದಾರ ಮಾಡುತ್ತಿದ್ದಾರೆ.


ಮಹಿಮೆಗಳು:

ವಿಜಯರಾಘವ ನಾಯಕನ ರಾಜ್ಯದಲ್ಲಿ ಭೀಕರ ಕ್ಷಾಮ ಉಂಟಾದಾಗ ರಾಯರು ಮೂರು ದಿನ ಉಪವಾಸ ಕುಳಿತು ಧ್ಯಾನ ಮಾಡಿ ಧಾನ್ಯಗಾರದಲ್ಲಿ ಇದ್ದ ಸ್ವಲ್ಪ ಧಾನ್ಯಗಳ ಮೇಲೆ ಬೀಜಾಕ್ಷರಗಳನ್ನು ಬರೆದರು. ಮಾರನೇ ದಿನ ಪರಮಾತ್ಮನ ಅನುಗ್ರಹದಿಂದ ಧಾನ್ಯಗಳು ತುಂಬಿ ತುಳುಕುತ್ತಿತ್ತು. ಇದು ಅದ್ಭುತವಾದ ರಾಯರ ಪವಾಡ.


ಶ್ರೀ ಪಾಂಡುರಂಗನ ದರ್ಶನಕ್ಕೆಂದು ಒಂದು ಬೆಂಗಾಡಿನಲ್ಲಿ ಹೊರಟಾಗ ನೀರು-ನೆರಳು ಇರಲಿಲ್ಲ. ಅಲ್ಲಿ ಪ್ರಸವವೇದನೆ ಪಡುತ್ತಿದ್ದ ಗರ್ಭಿಣಿ ಸ್ತ್ರೀಗೆ ಅಂಬರಕ್ಕೆ ಶಾಟಿ ಬಿಸಿ ನೆರಳು ಕಲ್ಪಿಸಿ, ಕಮಂಡಲವನ್ನು ಸ್ಪರ್ಶಿಸಿದಾಗ ನೀರು ಧಾರಾಕಾರವಾಗಿ ಪ್ರವಹಿಸಿ ಸುಖ ಪ್ರಸವವಾಗುವಂತೆ ಅನುಗ್ರಹಿಸಿದರು.

ಒಬ್ಬ ಮೂಕನಿಂದ ಸಂಗೀತ ಕಾರ್ಯಕ್ರಮವನ್ನು ಕೊಡಿಸಿದರು. ಪರಿಚಾರಕನಾದ ವೆಂಕಣ್ಣನ ಎಂಬಾತನು ಗುರುಗಳನ್ನು ಶ್ರದ್ಧಾಭಕ್ತಿಗಳಿಂದ ಸೇವಿಸುತ್ತಿದ್ದನು. ಅವನ ಸೇವೆಗೆ ಮೆಚ್ಚಿದ ರಾಯರು ನಿನಗೆ ಏನು ಬೇಕು ಎಂದು ಕೇಳಿದಾಗ ನನಗೆ ಮೋಕ್ಷ ಬೇಕು ಎಂದು ಕೇಳುತ್ತಿದ್ದನು. ಎಷ್ಟು ಸಲ ಕೇಳಿದರೂ ಅದನ್ನೇ ಹೇಳುತ್ತಿದ್ದನು. ತ್ರಿಕಾಲ ಜ್ಞಾನಿಗಳಾದ ರಾಯರು ವೆಂಕಣ್ಣನು ಮುಕ್ತಿಯೋಗ್ಯನಾದ ಸುಜೀವಿ ಎಂದು ತಿಳಿದು ಅವನಿಗೆ ಮೋಕ್ಷವನ್ನು ಕೊಡಿಸಿದರು. ಇಂದಿಗೂ ಚಿತ್ರದುರ್ಗದಲ್ಲಿ ವೆಂಕಣ್ಣನಿಗೆ ಮೋಕ್ಷ ಕೊಡಿಸಿದ ಜಾಗವನ್ನು ತೋರಿಸಿ ಗುರುರಾಜರ ಅಗಮ್ಯ ಮಹಿಮೆಯನ್ನು ಕೊಂಡಾಡುತ್ತಾರೆ. 


ದೇಸಾಯಿಯವರ ಮಗ ಮಾವಿನ ರಸದಲ್ಲಿ ಬಿದ್ದಾಗ ಅವನಿಗೆ ಬಂದ ಅಪಮೃತ್ಯುವನ್ನು ಪರಿಹಾರ ಮಾಡಿದರು. ನವಾಬನು ನಿಷಿದ್ಧ ಪದಾರ್ಥಗಳು ತುಂಬಿದ ತಟ್ಟೆಯನ್ನು ರಾಯರಿಗೆ ಸಮರ್ಪಿಸಿದಾಗ ಶಂಖ ತೀರ್ಥವನ್ನು ಪ್ರೋಕ್ಷಿಸಿ ಫಲಪುಷ್ಪಗಳನ್ನು ಪರಿವರ್ತಿಸಿದರು. ರಾಯರ ಮಹಿಮೆಗಳು ಸಾವಿರಾರು.


ರಾಯರ ಕೃತಿಗಳು

ಇಡೀ ರಾಮಾಯಣವನ್ನು ಹತ್ತು ಶ್ಲೋಕಗಳಲ್ಲಿ ರಾಮಚಾರಿತ್ರ ಮಂಜರೀ ಎಂದು, ಭಾಗವತರ ದಶಮಸ್ಕಂದವನ್ನು ಶ್ರೀ ಕೃಷ್ಣ ಚಾರಿತ್ರ ಮಂಜರೀ ಎಂದು ರಚಿಸಿ ನಮ್ಮನ್ನು ಉದ್ಧಾರ ಮಾಡಿದ್ದಾರೆ. ಮುಖ್ಯವಾಗಿ ಶ್ರೀಮನ್ಯಾಯಸುಧಾ ಗ್ರಂಥಕ್ಕೆ ಪರಿಮಳ ಎಂಬ ಟಿಪ್ಪಣಿ ಬರೆದು ಪರಿಮಳಾಚಾರ್ಯ ಎಂದು ಪ್ರಸಿದ್ಧರಾಗಿದ್ದಾರೆ. ತಾತ್ಪರ್ಯ ನಿರ್ಣಯಕ್ಕೆ ಭಾವ ಸಂಗ್ರಹ, ಭಗವದ್ಗೀತೆಗೆ ಗೀತಾ ನಿವೃತ್ತಿ ಎಂಬ ಟಿಪ್ಪಣಿಗಳನ್ನು ಬರೆದಿದ್ದಾರೆ. ಇಡೀ ಭಾರತ ದೇಶವನ್ನು ಸಂಚಾರ ಮಾಡಿ ಜನರ ಅಪೇಕ್ಷೆಗಳನ್ನು ಪೂರೈಸಿ ತಮ್ಮ ಕಾರ್ಯಕ್ಷೇತ್ರಕ್ಕೆ ಮಂಚಾಲೆ ಗ್ರಾಮ (ಈಗಿನ ಮಂತ್ರಾಲಯ)ವನ್ನು ಆರಿಸಿಕೊಂಡರು. ಏಕೆಂದರೆ ಕೃತಯುಗದಲ್ಲಿ ಶ್ರೀ ಪ್ರಹ್ಲಾದ ರಾಜರು ಈ ಸ್ಥಳದಲ್ಲಿ ಶ್ರೀಹರಿ ಪ್ರೀತಿಗಾಗಿ ಅನೇಕ ಯಜ್ಞಯಾಗಾದಿಗಳನ್ನು  ನೆರವೇರಿಸಿದ್ದರು. ಶ್ರೀಹರಿ ಸಂಕಲ್ಪದಂತೆ ಅವರ ಅವತಾರ ಕಾರ್ಯಗಳನ್ನು ಪರಿಸಮಾಪ್ತಿ ಗೊಳಿಸಿ ಸಶರೀರವಾಗಿ ಬೃಂದಾವನ ಪ್ರವೇಶ ಮಾಡಲು ನಿರ್ಧರಿಸಿದರು.


ಶ್ರೀ ಗುರುಸಾರ್ವಭೌಮರು ಒಂದು ಶುಭ ಮುಹೂರ್ತದಲ್ಲಿ ತಮ್ಮ ಪೂರ್ವಾಶ್ರಮದ ಅಣ್ಣಂದಿರಾದ ಗುರುರಾಜಾಚಾರ್ಯರ ಪೌತ್ರರೂ ತಮ್ಮಲ್ಲಿಯೇ ಸಕಲ ಶಾಸ್ತ್ರಗಳನ್ನು ಅಧ್ಯಯನ ಮಾಡಿದ ಪ್ರಿಯ ಶಿಷ್ಯ ಶ್ರೀ ವೆಂಕಣ್ಣಾಚಾರ್ಯರಿಗೆ ಮಂತ್ರಾಕ್ಷತೆ ಕೊಟ್ಟು ಯೋಗೀಂದ್ರತಿರ್ಥರೆಂದು ನಾಮಕರಣ ಮಾಡಿದರು. ಶ್ರೀಗುರುರಾಜರು ಶ್ರಾವಣ ಕೃಷ್ಣಪಕ್ಷ ಬಿದಿಗೆಯಂದು ಸಶರೀರವಾಗಿ ಬೃಂದಾವನೈ ಪ್ರವೇಶ ಮಾಡುವುದನ್ನು ಕಣ್ಣಾರೆ ಕಂಡು ಸಾಕ್ಷಿ ಆಗುವುದಕ್ಕೆ ಸಹಸ್ರ ಸಂಖ್ಯೆಯಲ್ಲಿ ಜನ ಸೇರಿದ್ದರು. ಗುರುಗಳಾದ ರಾಯರ ಬೃಂದಾವನ ಪ್ರವೇಶವಾಯಿತು.


ಶ್ರೀ ಮಧ್ವಾಚಾರ್ಯರ ಸನ್ಮತದಲ್ಲಿ ವ್ಯಾಸರಾಜರಾಗಿ, ರಾಯರಾಗಿ ಬಂದು 700 ವರ್ಷಗಳ ಕಾಲ ತಾವು ಬೃಂದಾವನದಲ್ಲಿದ್ದು ಲೋಕ ಜನರನ್ನು ಉದ್ಧಾರ ಮಾಡಿ ಸಮಸ್ತ ಇಷ್ಟಾರ್ಥಗಳನ್ನು ಕರುಣಿಸಿವುದಾಗಿ ಭರವಸೆ  ನೀಡಿದರು.


ಇಂತಹ ಲೋಕಠ ಗುರುಗಳನ್ನು ಕಲಿಯುಗ ಕಲ್ಪತರಾಗಿ ಪಡೆದ ನಾವೇ ಧನ್ಯರು ಹಾಗೂ ಭಾಗ್ಯಶಾಲಿಗಳು.

ಇಂತು ನಮ್ಮನ್ನು ಸದಾ ಕರುಣೆಯಿಂದ ಆನುಗ್ರಹಿಸುತ್ತಿರುವ ಆ ತಪೋ ಮೂರ್ತಿಗಳಿಗೆ ನಾವೇನು ಕೊಡಬಲ್ಲೆವು. ಭೂಯಿಷ್ಟಾಂತೇ ನಮ ಉಕ್ತಿಂ ವಿಧೇಯ ಎಂಬ ಪ್ರಮಾಣದಂತೆ ಅವರಿಗೆ ನಮ್ಮ ಭಕ್ತಿಪೂರ್ವಕ ನಮನಗಳು ಅರ್ಪಿಸುತ್ತಾ ಪ್ರಾರ್ಥಿಸೋಣ.


ನನಗೆ ರಾಯರ ಬಗ್ಗೆ ಬರೆಯುವ ಯೋಗ್ಯತೆ ಇಲ್ಲ. ಆದರೂ ಈ ಸಾಹಸಕ್ಕೆ ಕೈಹಾಕಿ, ಸಂಗ್ರಹಿಸಿ ಬರೆದಿದ್ದೇನೆ ಅಂದರೆ ಅದು ನನ್ನ ವಾಕ್ ಮತ್ತು ಮನಸ್ಸಿನ  ಶುದ್ಧಿಗಾಗಿ. ಇದರಲ್ಲಿ ಇರುವ ಲೋಪದೋಷಗಳನ್ನು ಎಣಿಸದೆ ಅವರು ನನಗೆ ಜ್ಞಾನ ಭಕ್ತಿಗಳನ್ನು ಅನುಗ್ರಹಿಸಸಲಿಎಂದು  ಅವರ ಅಂತರ್ಯಾಮಿಯಾದ ಶ್ರೀ ಮೂಲರಾಮಚಂದ್ರ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ.


 ಶ್ರೀಕೃಷ್ಣಾರ್ಪಣಮಸ್ತು

ನಾಹಂ ಕರ್ತಾ ಹರಿ:  ಕರ್ತ

- ಹೇಮಾಮಾಲಿನಿ ಶ್ರೀಧರಾಚಾರ್

ಪ್ರಕಾಶನಗರ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top