NMITಯಲ್ಲಿ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಫ್ಯಾಶನ್ ಟೆಕ್ನಾಲಜಿ, ಔಷಧ ಶಾಸ್ತ್ರದ ವಿದ್ಯಾರ್ಥಿಗಳೊಡನೆ ಸಂವಾದ
ಬೆಂಗಳೂರು: ‘ನಮ್ಮ ಭಾರತ ದೇಶ ಕೃಷಿಪ್ರಧಾನ ಅರ್ಥವ್ಯವಸ್ಥೆಯಿಂದ ಕೈಗಾರಿಕಾ ಪ್ರಧಾನ ಅರ್ಥವ್ಯವಸ್ಥೆಗೆ ಸ್ಥಿತ್ಯಂತರಗೊಂಡಿತ್ತು; ಇದೀಗ ಜ್ಞಾನಾಧಾರಿತ ಅರ್ಥವ್ಯವಸ್ಥೆಗೆ ಹೊಂದಿಕೊಳ್ಳುತ್ತಿದೆ. ಇಲ್ಲಿ ಭೌತಿಕ ಉತ್ಪಾದನೆಯಷ್ಟೇ ಮುಖ್ಯವಾದುದು ಜ್ಞಾನದ ಬಂಡವಾಳ. ಈಗ ತಲೆಯೆತ್ತುತ್ತಿರುವ ಸೇವಾಕ್ಷೇತ್ರದ ಉದ್ಯಮಗಳಲ್ಲಿ ಸಂಪನ್ಮೂಲಗಳ ಸಂಗ್ರಹಣೆ, ಮಾಹಿತಿಗಳ ವಿಶ್ಲೇಷಣೆ ಹಾಗೂ ದತ್ತಾಂಶಗಳ ಸೂಕ್ತ ನಿರ್ವಹಣೆ ಪ್ರಧಾನ ಪಾತ್ರ ವಹಿಸುತ್ತವೆ. ಇಡೀ ವಿಶ್ವದ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ, ಅತ್ಯಂತ ಕಡಿಮೆ ವಯಸ್ಸಿನ ಯುವಜನರು ಅಧಿಕ ಸಂಖ್ಯೆಯಲ್ಲಿ ಭಾರತದಲ್ಲಿದ್ದಾರೆ. ಅಗತ್ಯ ಕಾರ್ಯ ನಿರ್ವಹಿಸಲು ಅವಶ್ಯವಿರುವ ಸಾಕಷ್ಟು ಪ್ರಮಾಣದ ಯುವಜನರ ಅಲಭ್ಯತೆ ಅನೇಕ ದೇಶಗಳನ್ನು ಕಾಡುತ್ತಿದೆ. ಹೀಗಾಗಿ ನಮ್ಮ ಯುವಜನ, ಇಡೀ ವಿಶ್ವದ ಜ್ಞಾನಧಾರಿತ ಅರ್ಥವ್ಯವಸ್ಥೆಯ ಆಧಾರಸ್ಥಂಭಗಳಾಗಲಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು ಅತೀವ ಬದ್ಧತೆಯಿಂದ ನಮ್ಮ ಯುವಜನರನ್ನು ಸಜ್ಜುಗೊಳಿಸಬೇಕಿದೆ’ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ ನುಡಿದರು.
ಅವರು ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನೂತನವಾಗಿ ಸೇರ್ಪಡೆಯಾದ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಫ್ಯಾಶನ್ ಟೆಕ್ನಾಲಜಿ ಹಾಗೂ ಔಷಧ ಶಾಸ್ತ್ರದ ವಿದ್ಯಾರ್ಥಿಗಳೊಡನೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಕಲಿಕೆಯ ಮಹತ್ವ ಹಾಗೂ ವಿಪುಲ ಅವಕಾಶಗಳ ಲಭ್ಯತೆ ಬಗ್ಗೆ ಅರಿವು ಮೂಡಿಸಲು ಈ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
‘ಸದ್ಯದ ಪರಿಸ್ಥಿತಿಯ ವಾಸ್ತವವನ್ನು ಅರಿತು, ಕಾಲಮಾನದ ಅವಶ್ಯಕತೆಗಳಿಗನುಗುಣವಾಗಿ ನಾವು ಮುನ್ನಡೆಯಬೇಕು. ನಮಗೆ ಎದುರಾಗುವ ಸವಾಲುಗಳನ್ನು ಸ್ವೀಕರಿಸಿ, ಸಾಮರ್ಥ್ಯದಿಂದ ಹಾಗೂ ಕುಶಲತೆಯಿಂದ ಯಶಸ್ಸು ಗಳಿಸಬೇಕು. ಇವೆಲ್ಲದರ ಜತೆ ನಮಗೆ ಅತ್ಯವಶ್ಯವಿರುವುದು ಒಳ್ಳೆಯ ನಡತೆಯ ಸಕಾರಾತ್ಮಕ ವ್ಯಕ್ತಿತ್ವ. ನಮ್ಮ ದೇಶದ ಯುವಜನರು ಈ ನಿಟ್ಟಿನಲ್ಲಿ ಸದ್ವಿವೇಚನೆ, ಸ್ವಸಾಮರ್ಥ್ಯ, ಅದ್ವಿತೀಯ ಕುಶಲತೆ ಹಾಗೂ ಸನ್ನಡತೆಯಿಂದ ಇಡೀ ವಿಶ್ವವನ್ನೇ ಗೆಲ್ಲುತ್ತಾರೆ ಎಂಬ ಭರವಸೆ ನನಗಿದೆ’ ಎಂದರು.
ಪ್ರಾರಂಭದಲ್ಲಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್‌ನ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ ಸರ್ವರನ್ನೂ ಸ್ವಾಗತಿಸಿದರು. ಸಂಸ್ಥೆಯ ಪಠ್ಯಕ್ರಮ ಮತ್ತು ಶೈಕ್ಷಣಿಕ ವಿಭಾಗದ ನಿರ್ದೇಶಕ ಡಾ. ಜೆ. ಸುಧೀರ್ ರೆಡ್ಡಿ, ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಅಳವಡಿಸಿಕೊಳ್ಳಬೇಕಾದ ಶಿಸ್ತು, ನೈತಿಕತೆ ಹಾಗೂ ಕಲಿಕೆಯಲ್ಲಿ ತಾಳಬೇಕಾದ ಏಕಾಗ್ರತೆಗಳ ಬಗ್ಗೆ ವಿದ್ಯಾರ್ಥಿಗಳ ಗಮನ ಸೆಳೆದರು.
ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ಕಿರಣ್ ಐತಾಳ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ಮುಖ್ಯಸ್ಥೆ ಡಾ. ಹಿತಾ ಡಿ. ಶೆಟ್ಟಿ, ಇತರೆ ಸಂಸ್ಥೆಗಳ ಮುಖ್ಯಸ್ಥರು, 2,000ಕ್ಕೂ ಅಧಿಕ ಸಂಖ್ಯೆಯಲ್ಲಿ ನೆರೆದಿದ್ದ ನೂತನ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ