ತ್ಯಾಗರ್ತಿ: ವಿದ್ಯಾರ್ಥಿ ಪ್ರತಿಭೆಗಳು ಯಶಸ್ಸಿನ ಮೇಲೇರಿದಾಗ ತಾವು ಬೆಳೆದ ದಾರಿಯನ್ನು ಮರೆಯಬಾರದು ಎಂದು ನಿವೃತ್ತ ವಾಯುಸೇನೆ ಅಧಿಕಾರಿ ಹೆಚ್ ಎಲ್ ಶಾಮ್ ಹೇಳಿದರು.
ಸಮೀಪದ ನೀಚಡಿಯ ಶ್ರೀ ಲಕ್ಷ್ಮೀ ನಾರಾಯಣ ಸಭಾ ಭವನದಲ್ಲಿ ಭಾನುವಾರ ರಾತ್ರಿ ನೀಚಡಿ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಊರಿನ ಸಂಘಟನೆಗಳು ಜಲಸಂರಕ್ಷಣೆಯಂತಹ ಉತ್ತಮ ಕೆಲಸವನ್ನು ಮಾಡುತ್ತಿದೆ. ಗ್ರಾಮದ ಪರಿಸರ ಆಧುನಿಕತೆಯಿಂದ ಹಾಳಾಗದಂತೆ ಕಾಪಾಡಿಕೊಳ್ಳಬೇಕು.
ಹಾಗೆಯೇ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದು ಒಳ್ಳೆಯ ಕಾರ್ಯಕ್ರಮವಾಗಿದೆ. ಇಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳು ಮುಂದೆ ಯಶಸ್ಸು ಗಳಿಸಿದ ನಂತರ ಊರಿನ ಜನರ ತಂದೆ ತಾಯಿಗಳ ಸಹಕಾರ ಮರೆಯಬಾರದು. ಈ ನೆಲದ ಸೇವೆಗೆ ಸದಾ ಸಿದ್ಧರಾಗಿರಬೇಕು ಎಂದು ಹೇಳಿದರು.
ಸಿಗಂದೂರು ಸೇತುವೆ ಹೋರಾಟ ಸಮಿತಿ ಸಂಚಾಲಕ ಪ್ರಸನ್ನ ಕೆರೆಕೈ ನೀಚಡಿ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸೇತುವೆ ಲೋಕಾರ್ಪಣೆ ಗೊಂಡ ಸಂತೋಷ ಒಂದು ಕಡೆಯಾದರೆ ಶರಾವತಿ ನದಿ ಆಣೆಕಟ್ಟು ನಿರ್ಮಾಣದಿಂದ ಎರಡು ತಲೆಮಾರಿನ ಜನರು ಅನುಭವಿಸುತ್ತಿದ್ದ ಸಂಕಷ್ಟ ಎಂದಿಗೂ ಮರೆಯಲಾಗದು ಶರಾವತಿ ಹಿನ್ನೀರಿನ ಜನರ ಸಂಕಷ್ಟದ ಬದುಕು. ಆರೋಗ್ಯ ಸಮಸ್ಯೆ, ಹೆರಿಗೆ ಪ್ರಕರಣದಲ್ಲಿ ಆಸ್ಪತ್ರೆಗೆ ಹೋಗುವ ಸಂದರ್ಭದಲ್ಲಿ ಆದ ತೊಂದರೆ ಹೋರಾಟಕ್ಕೆ ಹೆಚ್ಚು ಕಿಚ್ಚು ಹೊತ್ತಿಸಿ ಜನರ ಸಂಘಟನೆಗೆ ನಾಂದಿಯಾಯಿತು.
ಈ ಸೇತುವೆ ಹೋರಾಟದಲ್ಲಿ ಪಕ್ಷಾತೀತವಾಗಿ ಪಾಲ್ಗೊಂಡ ಜನಪ್ರತಿನಿಧಿಗಳ ಸಹಕಾರ ಮರೆಯುವಂತಿಲ್ಲ. ಸಂಘಪರಿವಾರದ ಪ್ರಮುಖರ ಮಾರ್ಗದರ್ಶನ
ಬಿ ಎಸ್ ಯಡಿಯೂರಪ್ಪ ಮತ್ತು ಬಿ.ವೈ ರಾಘವೇಂದ್ರ ಅವರು ನೀಡಿದ ಭರವಸೆಯೊಂದಿಗೆ ಸೇತುವೆ ಕಟ್ಟಿಕೊಡುವ ಬದ್ದತೆ ಕಾರಣಕ್ಕೆ ಹಿನ್ನೀರಿನ ಜನರ ಬದುಕು ಬದಲಾವಣೆ ಹಂತಕ್ಕೆ ತಲುಪಿದೆ ಎಂದು ಹೇಳಿದರು. ಸಾಧಕರ ಕುರಿತು ಶರ್ವಾಣಿ ರಾಜೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸೇತುವೆ ಹೋರಾಟ ಸಮಿತಿ ಸಂಚಾಲಕ ಪ್ರಸನ್ನ ಕೆರೆಕೈ ಮತ್ತು ನೀಚಡಿ ಗ್ರಾಮದ ವಿದ್ಯಾರ್ಥಿಗಳಾದ ತ್ಯಾಗರ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿಜೇತ ಮತ್ತು ದ್ವಿತೀಯ ಪಿಯುಸಿ ಹಾಗೂ ಜೆಇಇ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಶಿವಮೊಗ್ಗ ಸರ್ ಎಂ ವಿ ಕಾಲೇಜಿನ ವಿದ್ಯಾರ್ಥಿ ಪ್ರದ್ಯೋತ್ ನಾಡಿಗ್ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನೀಚಡಿ ಟ್ರಸ್ಟ್ ಅಧ್ಯಕ್ಷ ಎಸ್ ಎಂ ಶಿವಪ್ರಕಾಶ್, ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್ ಎ ನಾರಾಯಣ ಮೂರ್ತಿ, ಸರ್ ಎಂ ವಿ ಕಾಲೇಜು ಪ್ರಾಚಾರ್ಯ ಜಗನ್ಮೋಹನ್ , ಹೊಂಗಿರಣ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಶೋಭಾ, ಪ್ರಮುಖರಾದ ಎನ್ ಎ ದತ್ತ ಮೂರ್ತಿ, ಶ್ರೀನಾಥ್ ನಾಡಿಗ್, ಶೃತಿ, ಬಿ ಜಿ ಅನಂತಮೂರ್ತಿ, ಎಸ್ ಪ್ರಕಾಶ್, ಭಾಗ್ಯಶ್ರೀ, ಎನ್ ಟಿ ಯೋಗೀಶ್ ಇನ್ನಿತರರು ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ