ಉಜಿರೆ: ಎಸ್. ಡಿ. ಎಂ. ಡಿ. ಎಡ್ ಕಾಲೇಜಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿ ಸಂಘ ಮತ್ತು ವಿಷಯವಾರು ಸಂಘಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿ ನಿವೃತ್ತ ಸಹಾಯಕ ಕೃಷಿ ನಿರ್ದೇಶಕರಾದ ಡಾ. ಶೈಲಜಾ ಎ. ಎನ್ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.
ಅವರು ಮಾತನಾಡಿ, ಗುರುಗಳು ನಮ್ಮ ಜೀವನದ ಸರ್ವತೋಮುಖ ಬೆಳವಣಿಗೆಗೆ ಕಾರಣೀಭೂತರು. ಗುರುವನ್ನು ಸದಾ ನಾವು ಗೌರವ ಭಾವದಿಂದ ಕಾಣಬೇಕು. ಜೀವನದ ಮೌಲ್ಯಗಳನ್ನು ಕಲಿಸಿಕೊಡುವ ವ್ಯವಸ್ಥೆಯೊಂದಿಗೆ ಗುರು ಸದಾ ಕಾಲ ನಮ್ಮೊಡನೆ ಇದ್ದು ನಮ್ಮ ಏಳಿಗೆಯಲ್ಲಿ ಸಂತೋಷವನ್ನು ಕಾಣುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ನಾಯಕತ್ವದ ಗುಣಗಳ ಅರಿವು ಮುಖ್ಯ. ವಿದ್ಯಾರ್ಥಿ ಸಂಘವು ಶೈಕ್ಷಣಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನು ಕಲಿಸುತ್ತದೆ. ಶಿಕ್ಷಕರು ಸಾಹಿತ್ಯವನ್ನು ಓದುವ ಅಭಿರುಚಿ ಬೆಳೆಸಿಕೊಳ್ಳುವುದರಿಂದ ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯ ಎಂದು ಹೇಳುತ್ತಾ ತಮ್ಮ ಜೀವನದಲ್ಲಿ ಅನುಭವಿಸಿದ ಹಲವು ಘಟನೆಗಳನ್ನು ಹೇಳಿ, ತಮ್ಮ ಬದುಕಿಗೆ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಸ್ಫೂರ್ತಿ ಎಂದು ಸ್ವಾರಸ್ಯಕರವಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಸಂತೋಷ್ ಸಲ್ದಾನ್ಹ "ಪ್ರಪಂಚವೆಂಬುದು ಬಹು ದೊಡ್ಡ ಶಾಲೆ ಇದ್ದಂತೆ" ನಾವುಗಳು ನೈಜ ಜೀವನದ ಪಾಠಗಳನ್ನು ಪ್ರಪಂಚದ ಬೇರೆ ಬೇರೆ ಸನ್ನಿವೇಶದಲ್ಲಿ ಕಲಿಯುತ್ತೇವೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಬದುಕಿಗೆ ಬೇಕಾಗಿರುವ ಮೂಲ ಕೌಶಲ್ಯಗಳನ್ನು ಕಲಿಸಿಕೊಡುತ್ತವೆ. ಆದುದರಿಂದ ವಿದ್ಯಾರ್ಥಿ ಸಂಘ ಮತ್ತು ವಿಷಯವಾರು ಸಂಘಗಳ ಅಗತ್ಯ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಉಪನ್ಯಾಸಕ ಮಂಜು ಆರ್ ಕಾರ್ಯಕ್ರಮ ಕುರಿತು ಪ್ರಾಸ್ತವಿಕ ಮಾತುಗಳಾಡಿದರು. ಪ್ರಾಂಶುಪಾಲರು ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ವಿದ್ಯಾಶ್ರೀ ಅನುಷಾ, ಆದ್ಯ, ವೀಕ್ಷಿತ ಹಾಗೂ ಬೋಧಕೇತರ ವರ್ಗದವರು ಮತ್ತು ಡಿ.ಎಡ್ ಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿಗಳಾದ ದೀಪ ಮುಖ್ಯ ಅತಿಥಿ ಪರಿಚಯಿಸಿ, ಸಿಂಚನ ಬಳಗ ಪ್ರಾರ್ಥಿಸಿ, ವಿದ್ಯಾರ್ಥಿ ನಾಯಕಿ ರಂಝಿಯಾ ಸ್ವಾಗತಿಸಿ, ಉಪ ನಾಯಕಿ ರಂಝಿನಾ ವಂದಿಸಿ, ರಂಜಿನಿ ಹಾಗೂ ಸತ್ಯನಾರಾಯಣ ಕಾರ್ಯಕ್ರಮವನ್ನು ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

