ಧರ್ಮತ್ತಡ್ಕ: ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಆಗಸ್ಟ್ ತಿಂಗಳ ಸಭೆ ಭಾನುವಾರ (ಆ.3) ಅಪರಾಹ್ನ ಧರ್ಮತ್ತಡ್ಕದ ಗುಂಪೆ ವಲಯ ಕಛೇರಿಯಲ್ಲಿ ಜರಗಿತು.
ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿ, ಶ್ರೀಗುರುಪಾದುಕಾ ಸ್ತೋತ್ರದೊಂದಿಗೆ ಆರಂಭವಾದ ಸಭೆಯ ಅಧ್ಯಕ್ಷತೆಯನ್ನು ವಲಯಾಧ್ಯಕ್ಷರಾದ ಕುಮಾರಸುಬ್ರಹ್ಮಣ್ಯ ಕೊಂದಲಕಾಡು ವಹಿಸಿದರು.
ಕಾರ್ಯದರ್ಶಿ ಕೇಶವಪ್ರಸಾದ ಎಡಕ್ಕಾನ ಪ್ರಾಸ್ತಾವಿಕ ನುಡಿಗಳೊಡನೆ ಸ್ವಾಗತಿಸಿ ಗತಸಭೆಯ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿ, ವಿಭಾಗಾವಾರು ವರದಿಗಳನ್ನು ನೀಡಿದರು.
ಶ್ರೀಗುರುಗಳ ಸ್ವಭಾಷಾ ಚಾತುರ್ಮಾಸ್ಯ ಗೋಕರ್ಣದ ಅಶೋಕೆಯಲ್ಲಿ ನಡೆಯುತ್ತಿದ್ದು, ಗುಂಪೆ ವಲಯದ ಭಿಕ್ಷಾಂಗ ಸೇವೆಯ ದಿನ ಜುಲೈ 31ರ ಕಾರ್ಯಕ್ರಮದ ಹಾಗೂ ನಮ್ಮ ವಲಯದಿಂದ ಭಾಗವಹಿಸಿದವರ ವಿವರಗಳನ್ನು ಸಭೆಗೆ ನೀಡಲಾಯಿತು.
ವಲಯದ ಪರವಾಗಿ ವಲಯಾಧ್ಯಕ್ಷ ಕುಮಾರಸುಬ್ರಹ್ಮಣ್ಯ ಕೊಂದಲಕಾಡು ದಂಪತಿಗಳು ಪಾದಪೂಜೆ ನೆರವೇರಿಸಿದ್ದು, 23 ಮಂದಿ ಶಿಷ್ಯಬಂಧುಗಳು ಅಶೋಕೆಗೆ ತೆರಳಿ ಪರಮಪೂಜ್ಯ ಶ್ರೀಗಳಿಂದ ಮಂತ್ರಾಕ್ಷತೆ ಸ್ವೀಕರಿಸಿದ್ದರು.
ಸಮಸ್ತ ಗುರುಪರಂಪರೆಯ ಪ್ರೀತ್ಯರ್ಥವಾಗಿ ಚಾತುರ್ಮಾಸ್ಯದ ಅವಧಿಯ ಎಂಟು ಗುರುವಾರಗಳಂದು ವಿಷ್ಣುಸಹಸ್ರನಾಮ ಸಹಿತವಾದ ಲಕ್ಷ ತುಳಸಿ ಅರ್ಚನೆ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಲಾಯಿತು.
ಶ್ರೀಗುರುಗಳ 50ನೇ ವರ್ಧಂತಿಯಂದು ಘೋಷಣೆಯಾದ ಕಪ್ಪು ಬಂಗಾರ ಸಮರ್ಪಣೆ ಯೋಜನೆಯ ಬಗ್ಗೆ ತಿಳಿಸಲಾಯಿತು.
ಸ್ವಭಾಷಾ ಚಾತುರ್ಮಾಸ್ಯಕ್ಕೆ ಸುವಸ್ತು ದೇಣಿಗೆಗೆ ಅವಕಾಶವಿದ್ದು, ಶಿಷ್ಯಬಂಧುಗಳು ಈ ಅವಕಾಶವನ್ನು ಸದುಪಯೋಗ ಪಡಿಸಬೇಕೆಂದು ಅಪೇಕ್ಷಿಸಲಾಯಿತು.
ನೂತನ ಮಂಡಲ ಸಮಿತಿಯ ಪದಾಧಿಕಾರಿಗಳ ವಿವರಗಳನ್ನು ಹಾಗೂ ಗುಂಪೆ ವಲಯದ ಸಂಭಾವ್ಯ ಪದಾಧಿಕಾರಿಗಳ ಪಟ್ಟಿಯನ್ನು ಸಭೆಗೆ ನೀಡಲಾಯಿತು.
'ಸ್ವಭಾಷೆ, ಸ್ವಧರ್ಮದ ಆಚರಣೆಗಳೇ ನಮಗೆ ಶ್ರೇಷ್ಠ. ನಮ್ಮ ಮಾತಿನ ನಡುವೆ ಪ್ರಯೋಗಿಸಲ್ಪಡುವ ಆಂಗ್ಲಪದಗಳನ್ನು ಬಿಟ್ಟು ಸಾಧ್ಯವಾದಷ್ಟು ಸ್ವಭಾಷೆಯ ಪದಗಳನ್ನು ಬಳಸಬೇಕು, ಅಗತ್ಯ ಬಂದರೆ ಹೊಸ ಪದಗಳನ್ನು ಸೃಷ್ಟಿಸಬೇಕು' ಎನ್ನುವ ಶ್ರೀಗಳ ಆಶೀರ್ವಚನದ ಸಂದೇಶವನ್ನು ನೀಡಿದ ವಲಯ ಕಾರ್ಯದರ್ಶಿ 'ಸಂವಹನ ಮಾಧ್ಯಮವಾಗಿ ಸ್ವಭಾಷೆಯನ್ನೇ ಹೆಚ್ಚು ಬಳಸುವಂತಾಗಲಿ ಎಂಬ ತಮ್ಮ ಆಶಯವನ್ನು ಪ್ರಸ್ತುತ ಪಡಿಸಿದರು.
ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ನ ಸಹಭಾಗಿತ್ವದಲ್ಲಿ, ಪ್ರಾಧ್ಯಾಪಕರಾದ ಗಣರಾಜ್ ಕರ್ವಜೆ ಇವರ ಸಂಯೋಜನೆಯಲ್ಲಿ, ಪೊಸಡಿಗುಂಪೆಯ ಶ್ರೀಶಂಕರ ಧ್ಯಾನ ಮಂದಿರದ ಪರಿಸರದಲ್ಲಿ ನಡೆದ ವನಜೀವನ ಯಜ್ಞದ ಮಾಹಿತಿಗಳನ್ನು ನೀಡಲಾಯಿತು.
"ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಭೋಜನ ಶಾಲೆ ಹಾಗೂ ಇನ್ನಿತರ ಅಗತ್ಯಗಳಿಗೆ ವಲಯದ ಶಿಷ್ಯಬಂಧುಗಳೆಲ್ಲ ಸಹಕರಿಸಬೇಕು. ಸ್ವಭಾಷಾ ಚಾತುರ್ಮಾಸ್ಯದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಷ್ಯಬಂಧುಗಳು ಅಶೋಕೆಗೆ ತೆರಳಿ ಶ್ರೀಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕು. ಶ್ರೀಗುರುಗಳ ವಿವಿಧ ಸೇವಾಯೋಜನೆಗಳಲ್ಲಿ ಎಲ್ಲರು ಸೇವಾಬಿಂದುಗಳಾಗಿ ಜೊತೆಯಲ್ಲಿ ಮುನ್ನಡೆಯೋಣ" ಎಂದು ವಲಯಾಧ್ಯಕ್ಷರು ಕರೆ ನೀಡಿದರು.
ಇತ್ತೀಚೆಗೆ ವಿಷ್ಣು ಸಾಯೂಜ್ಯ ಹೊಂದಿದ ಗುಂಪೆ ರಾಮ ಭಟ್ ಅವರ ಆತ್ಮ ಸದ್ಗತಿಗಾಗಿ ಶ್ರೀರಾಮ ತಾರಕ ಜಪಿಸಲಾಯಿತು.
ಶ್ರೀರಾಮ ತಾರಕ, ಶಾಂತಿಮಂತ್ರ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ