ಆ.26: ಗೌರಿಹಬ್ಬ- ಮಂಗಳಗೌರಿಯ ಎದುರುಗೊಳ್ಳಲು ಸಜ್ಜಾಗೋಣ

Upayuktha
0



ಭಾದ್ರಪದ ಮಾಸದಲ್ಲಿ ಭೂಮಿಗೆ ವಿಶೇಷ ಕಳೆ, ಈಗ ತಾನೆ ಶ್ರಾವಣದ ಕಡೆಯ ಬಿಕ್ಕಳಿಕೆ ಮುಗಿದು ಅಳುದುಳಿದ ಹನಿ ನೆಲ ಸೋಕುತ್ತಿರುತ್ತದೆ. ವಾತಾವರಣದ ಆಹ್ಲಾದಕತೆಗೆ ಹಬ್ಬದ ಸಂಭ್ರಮವೂ ಸೇರಿ ಮನೆ ಮನಗಳು ಮತ್ತಷ್ಟು ಕಳೆಗಟ್ಟುತ್ತವೆ.


ಬೆಲೆಯೇರಿಕೆ ನಡುವೆಯೂ ಗೌರಿ ಗಣೇಶನನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ ಶ್ರದ್ದಾವಂತ ಆಸ್ತಿಕರು. ಅರಿಶಿನ ಗೌರಿ ಪೂಜಿಸುವವರು ಕೆಲವರಾದರೆ; ಹಸಿಮಣ್ಣಿನಿಂದ ಪೂಜಿಸುವ ಪದ್ದತಿ ಕೆಲವರದು, ಪೂಜೆಯ ನಂತರದಲ್ಲಿ ಬಾಗಿನ ಕೊಡುತ್ತಾರೆ, ಜೋಡಿ ಮೊರದಲ್ಲಿ ಆಹಾರ ಪದಾರ್ಥಗಳು ಜೊತೆಗೆ ಮಂಗಳ ದ್ರವ್ಯಗಳನ್ನು ಇಟ್ಟು ಅರ್ಪಿಸುತ್ತಾರೆ. ಗೌರಿಯನ್ನು ಮನೆ ಮಗಳೆಂದು ಭಾವಿಸಿ ಪ್ರತಿ ವರ್ಷವೂ ಆಹ್ವಾನಿಸಿ ಉಡಿತುಂಬುವುದು ಈ ಹಬ್ಬದ ವಿಶೇಷ.


ಇದು ಸಕಲ ಸೌಭಾಗ್ಯ ನೀಡುವ ಹಬ್ಬ ಎಂಬ ನಂಬಿಕೆ ಹೆಂಗೆಳೆಯರದ್ದು. ಎರಡು ಸಂದರ್ಭಗಳಲ್ಲಿ ಗೌರಿಯನ್ನು ಪ್ರಮುಖವಾಗಿ ಪೂಜಿಸಲಾಗುತ್ತದೆ. ಶ್ರಾವಣದ ಮಂಗಳಗೌರಿ ವ್ರತ ಹಾಗೂ ಭಾದ್ರಪದದ ಸ್ವರ್ಣಗೌರಿ ವ್ರತ. ಹುಟ್ಟಿದ ಮನೆ ಹಾಗೂ ಕೊಟ್ಟ ಮನೆಗಳ ಭಾವನಾತ್ಮಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಈ ಹಬ್ಬ.


ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ಗೌರಿ ಹಬ್ಬ ಆಚರಿಸಿದರೂ ಈಗ ಇದಕ್ಕೂ ಆಧುನಿಕತೆಯ ಸ್ವರೂಪ ಬಂದಿರುವುದು ಕಾಲಮಹಿಮೆ. ಗೌರಿಯನ್ನು ಮಣ್ಣಿನ ರೂಪದಲ್ಲಿ ಅಥವಾ ಮರಳಿನಲ್ಲಿ ಗೊಂಬೆ ಮಾಡಿ ಕೂರಿಸುವ ಬದಲು ಇತ್ತೀಚೆಗೆ ಗೌರಿಯ ರೂಪವನ್ನೇ ಹೋಲುವ ಮುಖವಾಡವನ್ನಿಟ್ಟು ಪೂಜಿಸುವ ಪದ್ದತಿ ಚಾಲ್ತಿಯಲ್ಲಿದೆ.


ಜನಪದ ಸಾಹಿತ್ಯದಲ್ಲಿ ಗೌರಿ ಮತ್ತು ಗಂಗೆಯ ಸಂಬಂಧವನ್ನು ಮನಮುಟ್ಟುವಂತೆ ಬಣ್ಣಿಸಲಾಗಿದೆ. ಅವರ ದೃಷ್ಟಿಯಲ್ಲಿ ಭೂಲೋಕಕ್ಕೆ ಗೌರಿಗಣೇಶನ ಜೊತೆ ಶಿವನೂ ಬರುತ್ತಾನೆ. ವರ್ಷಕೊಮ್ಮೆ ಮಾವನ ಮನೆಗೆ ಬರುವ ಶಿವನಿಗೆ ಮಗಳು ಮೊಮ್ಮಗನಿಗೆ ನೀಡುವ ಪ್ರೀತಿ ಆದರಗಳು ಅಳಿಯನಿಗೂ ನೀಡಿದ್ದಾರೆ. ಅವನನ್ನು ಗೌರವದಿಂದ ಬರಮಾಡಿಕೊಳ್ಳುತ್ತಾರೆ.


ಮನೆಮಂದಿಯೆಲ್ಲ ಸಂಭ್ರಮಿಸುವ ಶುಭ ಸಂದರ್ಭದಲ್ಲಿ ಗೌರಿಯ ಸವತಿ ಗಂಗೆಯ ನೆನಪು ಯಾರಿಗೂ ಬರುವುದಿಲ್ಲ. ಗೌರಿಯ ಪರವಾದ ಪ್ರೀತಿಯೇ ಈ ಜಾಣ ಮರೆವಿಗೆ ಕಾರಣವಿರಬಹುದೇನೋ, ಗೌರಿಹಬ್ಬಕ್ಕೆ ಗಂಗೆಯನ್ನು ಕರೆಯದಿದ್ದರೇನಂತೆ, ಗೌರಿಗೆ ‘ಬಾಗಿನ’ ನೀಡುವುದು ಗಂಗೆಯ ಮೂಲಕವೇ.

ಬೇರೆಲ್ಲಾ ಹಬ್ಬಗಳಿಗಿಂತ ಗೌರಿ ಹಬ್ಬ ಆಪ್ತವೆನಿಸುವುದು ಹಲವು ಕಾರಣಗಳಿಗಾಗಿ. ಇದು ದೇವತಾರಾಧನೆಯ ಹಬ್ಬವಾದರೂ ಇದರ ಮೂಲತತ್ವ ಸಾಂಸ್ಕೃತಿಕ ಹಿನ್ನಲೆಯಿಂದ ಕೂಡಿದೆ.


ಲಕ್ಷ್ಮೀ- ಸರಸ್ವತಿಯರಿಗಿಂತ ಮಾನವ ಗುಣಸ್ವಭಾವಕ್ಕೆ ಹೆಚ್ಚು ಹತ್ತಿರವೆನಿಸುವ ನಮ್ಮೆಲ್ಲರಂತೆ ಸಂಸಾರದ ಒಳ-ಹೊರಗೆ ಗಂಡ ಮಕ್ಕಳೊಡನಾಡುವ ಪಾರ್ವತಿಯ ಹಬ್ಬ ಇದು. 


ಮದುವೆಯಿಂದಲೆ ತನ್ನ ಹಠ-ಛಲದ ಸಾಧನೆಯನ್ನು ಈ ಗೌರಿ ತೋರಿಸುತ್ತಾಳೆ. ಪರ್ವತರಾಜನ ಮಗಳಾದರು ಬೂದಿ ಬಡುಕ ಬೋಲಾ ಶಂಕರನನ್ನು ಮದುವೆಯಾಗುತ್ತಾಳೆ. ಇದಕ್ಕೂ ಮೊದಲಾದರು ಅಷ್ಟೇ. ‘ಸತಿ’ಯಾಗಿ ತನ್ನ ತಂದೆ ದಕ್ಷ ಪ್ರಜಾಪತಿಯ ಅಪಮಾನ ಸಹಿಸಲಾಗದೇ ಚಿತೆಗೆ ಹಾರುವ ಈಕೆ ಪುನರ್ಜನ್ಮದಲ್ಲಿ ಪಾರ್ವತಿಯಾಗುತ್ತಾಳೆ.


ಶುಂಭ ನಿಶುಂಭರೆಂಬ ರಾಕ್ಷಸರು ದೇವತೆಗಳಿಗೆ ಹಾಗೂ ಲೋಕಕ್ಕೆ ಕಂಟಕಪ್ರಾಯರಾಗಿ, ದೇವತೆಗಳು ಪದಚ್ಯುತರಾಗಿತ್ತಾರೆ. ಆಗ ದೇವತೆಗಳೆಲ್ಲರೂ ಸೇರಿ ದೇವಿಯನ್ನು ಸ್ತುತಿಸುತ್ತಾರೆ. ಆಗ ಗಂಗಾ ಸ್ನಾನಕ್ಕಾಗಿ ಬಂದ ಪಾರ್ವತಿಯ ಶರೀರದಿಂದ ಅತ್ತಯಂತ ದಿವ್ಯ ಸೌಂದರ್ಯದಿಂದದೊಗೂಡಿದ ಒಬ್ಬ ಸ್ತ್ರೀ ಹೊರ ಬರುತ್ತಾಳೆ.


ಅವಳು ಶರೀರಕೋಶದಿಂದ ಹೊರಬಂದವಳಾದ್ದರಿಂದ ‘ಕೌಶಿಕಿ’ ಪಾರ್ವತಿಯು ಆಗ ಕಪ್ಪಾಗಿ ಕಾಣುತ್ತಾಳೆ. ಈಶ್ವರನು ಪಾರ್ವತಿಯನ್ನು ‘ಕಾಳಿ’ (ಕಾಲಿ) ಎಂದು ಕರೆಯುತ್ತಾರೆ. ಆಗ ಆ ಕಾಳಿಯು ಪುನಃ ತಪಸ್ಸನ್ನು ಗೈದು ಅದರ ಪ್ರಭಾವದಿಂದ ಗೌರವರ್ಣವನ್ನು ಪಡೆಯುತ್ತಾಳೆ. ಅವಳೇ ಗೌರಿ ಎಂದು ಮತ್ಸ್ಯ ಪುರಾಣ ಸಾರುತ್ತದೆ.


ದಾಂಪತ್ಯ, ವಾತ್ಸಲ್ಯ, ಲಾವಣ್ಯಗಳು ಮಾತ್ರವಲ್ಲದೆ ಗಟ್ಟಿತನ, ಗರ್ವ, ಆತ್ಮಸಮ್ಮಾನಗಳಿಗೂ ಗೌರಿ ನಮಗೆ ಮಾದರಿಯಾಗುತ್ತಾಳೆ. ಲೀಲೆಯಲ್ಲಿ, ಪಾರಮ್ಯದಲ್ಲಿ ಭಕ್ತರ ಹೊಂದುವಿಕೆಯಲ್ಲಿ, ಜನಪ್ರಿಯತೆಯಲ್ಲಿ ಪತಿರಾಯ ಶಿವನಿಗೆ ಸರಿಸಮನಾಗಿ ನಿಲ್ಲುತ್ತಾಳೆ. ಪುರಾಣ ಹಾಗು ಜನಪದದಲ್ಲಿ ಚಿತ್ರಿಸಿರುವ ಗೌರಿಯ ಕಥೆ ಭಾರತೀಯ ಹೆಣ್ಣುಮಕ್ಕಳ ಅಂತರAಗಕ್ಕೆ ಕನ್ನಡಿಯಂತಿದೆ. ಹೆಣ್ಣಿನ ನಿಜವಾದ ಶಕ್ತಿಗಳೇನು ಎನ್ನುವುದು ಗೌರಿಯ ವ್ಯಕ್ತಿತ್ವದಲ್ಲಿ ಅನಾವರಣಗೊಳ್ಳುತ್ತದೆ.


ಗೌರಿ ಸಂಸಾರ ಅತ್ಯಂತ ವಿಲಕ್ಷಣವಾದುದು. ಇವರ ಕುಟುಂಬದಲ್ಲಿ ಗಂಡ ಹೆಂಡತಿ ಸೇರಿ ಕುಣಿಯುತ್ತಾರೆ. ಮಕ್ಕಳೂ ಸೇರಿದಂತೆ ಒಬ್ಬೊಬ್ಬರೂ ಒಂದೊAದು ಕಡೆ ರಾಕ್ಷಸರನ್ನು ಸಂಹರಿಸಲಿಕ್ಕೊ ಯಾರದೋ ಸಹಾಯಕ್ಕೋ ಯುದ್ದ ಹೂಡಿ ಹೊರಡುತ್ತಾರೆ.


ಇವರೆಲ್ಲರ ವಾಹನಗಳು ನಂದಿ, ಸಿಂಹ, ಹಾವು, ನವಿಲು, ಇಲಿ ಹೀಗೆ ಪರಸ್ಪರ ಶತೃಗಳು. ಆದರೂ ಅಲ್ಲಿ ಸೌಹಾರ್ದವಿದೆ. ಕುಟುಂಬದ ಇಂತಹ ಸೌಹಾರ್ದ ತಾಯಿಂದ ಮಾತ್ರ ಸಾಧ್ಯವಾಗುವಂತಹುದು. ಮನೋದೈಹಿಕ ಶಕ್ತಿ –ಆತ್ಮಘನತೆ ಮತ್ತು ವ್ಯಕ್ತಿತ್ವದ ಆಂತರಿಕ ಸೌಂದರ್ಯದಿಂದ ಗೌರಿ ಅಪೂರ್ವ ಚೈತನ್ಯಶಾಲಿಯಾಗಿ ಕಾಣಿಸುತ್ತಾಳೆ.


ಮದುವೆಯಾಗಿ ಕೈಲಾಸದಲ್ಲಿ ಶಿವನೊಡನೆ ನೆಲೆಸುವ ಪಾರ್ವತಿಗೆ ತವರಿನ ಮೋಹವೇನು ಕಡಿಮೆಯದಲ್ಲ, ಬಿಳಿ ಬಣ್ಣದ ಇವಳಿಗೆ ಗೌರಿ ಎನ್ನುವುದು ಮನೆ ಮುದ್ದಿನ ಹೆಸರು. ಪರ್ವತವನ್ನು ಹೊತ್ತ ಭೂಮಿಯೇ ಇವಳ ತವರು ನೆಲ. ವರ್ಷಕ್ಕೊಮ್ಮೆ ಭೂಮಿಗೆ ಬರುವ ತನ್ನ ಬಂಧು ಬಾಂಧವರ ಜೊತೆಗೆ ಇದ್ದು ಹೋಗುವ ಗೌರಿಗೆ ಗೌರವಾದರ ಸಲ್ಲಿಸುವ ಉತ್ಸವವೇ ಗೌರಿಪೂಜೆ. ಈ ಹಬ್ಬವು ನೆಲದಲ್ಲಿ ಹುಟ್ಟಿ ಮುಗಿಲ ಪತಿಯನ್ನು ಪಡೆದ ಪಾರ್ವತಿಯ ಬದುಕನ್ನು ಮಾದರಿಯಾಗಿ ನಮ್ಮ ಕಣ್ಣ ಮುಂದೆ ಇಡುತ್ತದೆ. ಭಗವಂತನನ್ನು ಹೊಂದಲು ಭಕ್ತಿಪ್ರೇಮವೊಂದು ಹೆದ್ದಾರಿಯಾಗಬಲ್ಲದು ಎಂದು ಸೂಚ್ಯವಾಗಿ ತಿಳಿಸುತ್ತದೆ.


ದಾಂಪತ್ಯದ ಅಗ್ನಿ ದಿವ್ಯಗಳನ್ನು ಗೌರಿ ಮೌನಗೌರಿಯಾಗಿ, ಶಕ್ತಿಗೌರಿಯಾಗಿ, ಕ್ರಿಯಾಗೌರಿಯಾಗಿ ಹಲವು ದಾರಿಗಳಲ್ಲಿ ಜಯಿಸಲು ನೋಡುತ್ತಾಳೆ. ಮಿಸುಕಾಡದೇ ಕುಳಿತು ತಲ್ಲಣವ ತಡೆಯುವ ಆರ್ದ್ರ ಗರ್ವದ ಹುಡುಗಿ ನಮ್ಮ ಗೌರಿ.


ನಮ್ಮ ಕವಿಗಳು, ಪುರಾಣಕಾರರು ‘ಗಂಡಸಿಗ್ಯಾಕೆ ಗೌರಿ ದುಃಖ’ ಅಂದುಕೊಂಡು ಸುಮ್ಮನಿಲ್ಲ, ಕಾವ್ಯಗಳಲ್ಲಿ ಗೌರಿಯ ಸುಖದುಃಖ ಸ್ವಾಭಿಮಾನದ ಸುಂದರ ಚಿತ್ರಣವಿದೆ. ಅಂತೆಯೇ ಅವಳ ಶಕ್ತಿಯ ಉಗ್ರ ವರ್ಣನೆಗಳಿವೆ.


ಭಾರತೀಯ ಪುರಾಣ ಪರಂಪರೆಯ ಸಮಾಜ ವಿಜ್ಞಾನ ಮೂಲದ ವ್ಯಾಖ್ಯಾನ ಹೇಗಾದರೂ ಇರಲಿ, ಈ ಪರಂಪರೆಯಲ್ಲಿ ಇವಳಂಥವಳು ಇನೊಬ್ಬಳಿಲ್ಲ. ಆದ್ದರಿಂದ ಸ್ತ್ರೀ ಶಕ್ತಿಗೆ ಗೌರಿಯೇ ಮಾದರಿ. ಮಿತಿಗಳ ನಡುವೆ ನಮ್ಮ ಹೆಣ್ಣು ಮಕ್ಕಳಿಗೆ ಗೆಳತಿ.


ಅರ್ಧನಾರೀಶ್ವರ ಪರಿಕಲ್ಪನೆ ನಮ್ಮೆಲ್ಲರ ಜೀವನದಲ್ಲೂ ಇರಬೇಕಾದ ಸ್ತ್ರೀ-ಪುರುಷ ಸಾಮರಸ್ಯದ, ಸಮಾನತೆಯ ದಿವ್ಯ ಚಿಂತನೆ. ಕೇವಲ ಗೌರಿ ಹಬ್ಬದ ಹೋಳಿಗೆಯಲ್ಲಿ ಮೈಮರೆಯುವ ಬದಲು ಮನೋವೈಜ್ಞಾನಿಕ ಚಿಂತನೆಯಿಂದ ಒಮ್ಮೆ ಇಂತಹ ಸಂಗತಿಗಳತ್ತ ಗಮನಹರಿಸೋಣ.


ಸಮಾಜ ಪಿತೃ ಪ್ರಧಾನವೇ ಆಗಿರಲಿ ಮಾತೃಪ್ರಧಾನವೇ ಆಗಲಿ, ತಾಯಿಯೊಂದಿಗಿನ ಗುರುತಿಸಿ ಕೊಳ್ಳುವಿಕೆ ಸ್ಥಾನ -ಸಂಪ್ರದಾಯ- ಚರಿತ್ರೆ -ಸಾಂಕೇತಿಕತೆ -ಹುಟ್ಟಿನ ಅರಿವು ಇವುಗಳೊಂದಿಗೆ ನಮ್ಮನ್ನು ಹೆಣೆಯುತ್ತದೆ. ತಾಯಿಯೊಂದಿಗೆ ಗುರುತಿಸಿಕೊಳ್ಳದಿದ್ದಾಗ ನಾವು ನಿರ್ಗತಿಕರಾದಂತೆ, 'ನಮ್ಮತನ’ವನ್ನೇ ಕಳೆದುಕೊಂಡಂತೆ. ಮಾತೃ ಮರಣ, ಸ್ತ್ರೀ ಭ್ರೂಣಹತ್ಯೆ, ಹದಿಹರೆಯದ ಗರ್ಭಧರಿಸುವಿಕೆಗಳಿಂದ ಇಡೀ ಸಮಾಜವೇ ತಾಯಿಯೊಂದಿಗಿನ ಸಂಬಂಧ ಕಡಿದು ಕೊಳ್ಳುತ್ತದೆ.


ಗೌರಿಯೆಂದರೆ ಕೂಡಲೆ ನಮ್ಮ ಕಣ್ಮುಂದೆ ಬರುವುದು ಮುಗುಳ್ನಗೆಯ ಶಾಂತ ಸುಂದರ ಮುಖ. ಸಮಯ ಬಂದಾಗ ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲ ಚತುರೆ, ತೋಳ್ಬಲವುಳ್ಳ ಸಬಲೆ ಕೂಡ. ಹಾಗೆಂದೇ ಗೌರಿ ಕಾಳಿಯೂ ಆಗಿ ಅಭಿವ್ಯಕ್ತಗೊಂಡಿದ್ದಾಳೆ. ಇವಳು ಸೌಮ್ಯ ಭಾವದವಳೆಂದು ಕೆಣುಕುವಂತಿಲ್ಲ .

ಅಂತಃಸತ್ವವುಳ್ಳ ಹೆಣ್ಣುಗಳೂ ಹೀಗೆಯೇ. ಹೂವಿನಂತೆ ಮೃದುವಾಗಿದ್ದರೂ ಸಮಯ ಸಂದರ್ಭಕ್ಕೆ ಅಗತ್ಯ ಬಿದ್ದಾಗ ವಜ್ರದಂತೆ ಕಠೋರವಾಗುತ್ತಾರೆ, ಇಂದೂ ರಾವಣರಿದ್ದಾರೆ, ಹೀಗಾಗಿ ಹೆಣ್ಣು ಮಕ್ಕಳು ಗೌರಿಯಂತೆ ಸಬಲರಾಗುವುದು ಅವಶ್ಯಕ. ಗೌರಿಹಬ್ಬದ ಸಲುವಾಗಿ ಹೊಸ ಸೀರೆ, ಪೂಜೆ ಬಾಗಿನ ವಿನಿಮಯ, ಹಬ್ಬದೂಟಗಳಂತೂ ಇದ್ದುದೇ. ಅವುಗಳ ಜೊತೆ ಗೌರಿ ಸ್ವರೂಪದ ಸಂಕೇತ, ಗುಣಗಳನ್ನು ಅರ್ಥೈಸಿಕೊಂಡು ಅನುಸರಿಸಿದರೆ ಭಾದ್ರಪದ ತದಿಗೆಯ ಆಚರಣೆ ಸಾರ್ಥಕವಾಗುತ್ತದೆ.



- ಕೆ.ವಿ. ಪದ್ಮಾವತಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top