ಸರ್ಕಾರಿ ಉದ್ಯೋಗ ಸಿಕ್ಕರೆ ಸಾಕು ನೆಮ್ಮದಿಯಾಗಿ ಇರಬಹುದು ಎಂದು ಹೇಳುವ ಜನಗಳ ಮಧ್ಯೆ ಇಲ್ಲೊಬ್ಬರು ತಮ್ಮ ಕೈಯಲ್ಲಿದ್ದ ಪೊಲೀಸ್ ಹುದ್ದೆಯನ್ನು ತೊರೆದು ಸಮಾಜ ಸೇವೆಯ ಜೊತೆಗೆ ಸಾವಯವ ಕೃಷಿ ಪದ್ಧತಿಯಲ್ಲಿ ತೊಡಗಿರುವುದು ವಿಶೇಷ. ಅವರೇ ಕೊಣಾಜೆಯಲ್ಲಿ ಕೂಡು ಕುಟುಂಬದೊಂದಿಗೆ ಜೀವನ ನಡೆಸುತ್ತಿರುವ 'ಅಚ್ಚ್ಯುತ್ ಗಟ್ಟಿ'ಯವರು.
ಸರಳ ಮತ್ತು ನೆಮ್ಮದಿಯ ಜೀವನಕ್ಕೆ ಕೃಷಿಯೇ ಉತ್ತಮ. ಉದ್ಯೋಗ ಹರಸಿ ಪರದೇಶಕ್ಕೆ ಹೋಗುವ ಅಗತ್ಯವಿಲ್ಲ ಎನ್ನುತ್ತಾರೆ ಅಚ್ಚ್ಯುತ್ ಗಟ್ಟಿಯವರು.
ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ, ಕೋಣಾಜೆ ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು, ತಮ್ಮ ಹಿರಿಯರ ಪಾರಂಪರಿಕ ವಿಧಾನವನ್ನು ಅನುಸರಿಸುತ್ತ ಸೊಂಪಾದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
1992ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆಗೆ ನೇಮಕಗೊಂಡ ಇವರು ಒಂದು ವರ್ಷ ಸೇವೆ ಸಲ್ಲಿಸಿ ಸಮಾಜ ಸೇವೆ ಮತ್ತು ಕೃಷಿಯಲ್ಲಿನ ಆಸಕ್ತಿಯಿಂದಾಗಿ 1993ರಲ್ಲಿ ಕೆಲಸದಿಂದ ನಿರ್ಗಮಿಸಿ ತಮ್ಮ ಸಹೋದರ ನೊಂದಿಗೆ ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಅಚ್ಚ್ಯುತ್ ಗಟ್ಟಿಯವರು ತಮ್ಮ ಜಮೀನಿನಲ್ಲಿ ಮುಖ್ಯ ಬೆಳೆಯಾಗಿ ಭತ್ತ, ಅಡಿಕೆ, ತೆಂಗು, ಬಾಳೆ ಬೆಳೆದರೆ, ಉಪ ಬೆಳೆಯಾಗಿ ಕರಿ ಮೆಣಸು, ಅಲ್ಪ ಪ್ರಮಾಣದ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಇದರೊಂದಿಗೆ ಔಷಧಿಯ ಗುಣಗಳಿರುವ ಬಿಲ್ವ ಪತ್ರೆ, ಲಕ್ಷ್ಮಣ ಫಲ, ಕೆಂಪು ಬೇರು, ಅಮೃತ ಬಳ್ಳಿ, ಪಾಲಸ್ ನಂತಹ 100-150 ಬಗೆಯ ವಿಶೇಷ ಸಸಿಗಳನ್ನು ಸಲಹುತ್ತಿರುವುದು ಇವರ ಕೃಷಿಯ ವ್ಯವಸ್ಥೆಯ ಮತ್ತೊಂದು ವಿಶೇಷವಾಗಿದೆ.
ಪೌರಾಣಿಕ ಹಿನ್ನೆಲೆ ಇರುವ ಕದಂಬ ಮರದ ಜೊತೆಗೆ ಎರಡೇ ವರ್ಷಕ್ಕೆ ಫಲ ಬಿಡುವ ಹಲಸಿನ ಮರವನ್ನೂ ಇವರ ತೋಟದಲ್ಲಿ ಕಾಣಬಹುದಾಗಿದೆ.
ಬೇರೆ ಬೇರೆ ಸ್ಥಳಗಳಿಗೆ ಭೇಟಿ ಕೊಟ್ಟಾಗ ಅಲ್ಲಿಂದ ಖಾಲಿ ಕೈಯಲ್ಲಿ ಬರದೆ ಅಲ್ಲಿರುವ ವಿಶೇಷ ಗಿಡದ ಸಸಿಗಳನ್ನು ತೆಗೆದುಕೊಂಡು ಬರುವ ಇವರ ಹವ್ಯಾಸವೇ ಇವರ ತೋಟದಲ್ಲಿರುವ ವಿವಿಧ ಬಗೆಯ ಸಸಿಗಳ ಅನಾವರಣಕ್ಕೆ ಕಾರಣವಾಗಿದೆ.
ಬೇಸಿಗೆ ಸಮಯದಲ್ಲಿ ಇವರ ಸಮಗ್ರ ಕೃಷಿಗೆ ನಿರುಣಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ತಮ್ಮದೇ ತೋಟದಲ್ಲಿನ ತೆರೆದ ಬಾವಿ ಮತ್ತು ಬೋರ್ವೆಲ್ ಗಳು. ಬೋರ್ವೆಲ್ ಮತ್ತು ಬಾವಿಯ ನೀರನ್ನು ಸ್ಪಿಂಕ್ಲೇರ್ ಮೂಲಕ ಪೂರೈಸಿ, ಕಡಿಮೆ ನೀರಿನಲ್ಲಿ ಉತ್ತಮ ಮತ್ತು ಸೊಂಪಾದ ಬೆಳೆ ಬೆಳೆಯುವ ಮಾರ್ಗ ಇವರದು.
ಅಡಿಕೆ ಬೆಳೆಗೆ ಬಿಟ್ಟರೆ ಬೇರೆ ಯಾವ ಬೆಳೆಗೂ ಇವರು ಕೀಟನಾಶಕ ಸಿಂಪಡಿಸದೆ ಕೇವಲ ಹಟ್ಟಿ ಗೊಬ್ಬರವನ್ನು ಬಳಸಿ ಬೆಳೆ ಬೆಳೆಯುವ ಮೂಲಕ ರಾಸಾಯನಿಕ ಗೊಬ್ಬರದಿಂದ ದೂರ ಉಳಿದು ನೈಸರ್ಗಿಕವಾಗಿ, ಸಾವಯವ ಪದ್ಧತಿಯಲ್ಲಿ ಕೃಷಿ ವಿಧಾನ ಅನುಸರಿಸುತ್ತಿದ್ದಾರೆ.
ಇವರು ಬೇಸಿಗೆ ಸಮಯದಲ್ಲಿ ಸೌತೆ, ಬದನೆ, ಬೆಂಡೆ, ಅಲಸಂಡೆ, ಹೀಗೆ ಹಲವಾರು ಬಗೆಯ ತರಕಾರಿಗಳನ್ನು ಬೆಳೆಯುವುದರಿಂದ ಮಾರುಕಟ್ಟೆಗೆ ಹೋಗುವ ಅವಶ್ಯಕತೆಯೇ ಇರುವುದಿಲ್ಲ. ಮನೆಗೆ ಬೇಕಾಗುವಷ್ಟು ಉಳಿಕೊಂಡು ಹೆಚ್ಚಿನ ತರಕಾರಿಯನ್ನು ಮಾರಾಟ ಮಾಡುತ್ತಾರೆ. ತಮ್ಮ ಜಮೀನಿನಲ್ಲಿ ಶಾಲಾ ಕಾಲೇಜು ಮಕ್ಕಳಿಗೆ ಕೃಷಿಬಗ್ಗೆ ತರಬೇತಿಯನ್ನು ನೀಡುವ ಕಾರ್ಯದಲ್ಲಿಯೂ ತೊಡಗಿದ್ದಾರೆ.
ಉತ್ತಮ ಲಾಭಕ್ಕೆ ಮಿಶ್ರ ಬೇಸಾಯ ಮಾಡಿ. ಒಂಟಿ ಬೆಳೆ ಮಾಡುವ ಕೆಲಸಕ್ಕೆ ಹೋಗಬೇಡಿ. ಖರ್ಚು ವೆಚ್ಚಗಳನ್ನು ಸರಿದೂಗಿಸಬೇಕೆಂದರೆ ಮಿಶ್ರ ಬೇಸಾಯ ಅಗತ್ಯ ಎಂದು ಹೊಸದಾಗಿ ಕೃಷಿ ಕಾಲಿಡಬೇಕೆಂದಿರುವ ಆಸಕ್ತರಿಗೆ ಕಿವಿ ಮಾತು ನೀಡಿದ್ದಾರೆ.
ಐಷಾರಾಮಿ ಜೀವನ ಬೇಡ ನೆಮ್ಮದಿ ಬೇಕು, ಇನ್ನೊಬ್ಬರ ಕಟ್ಟು ಪಾಡುಗಳಿಗೆ ನಮ್ಮ ಜೀವನ ಬಲಿ ಕೊಡದೆ ಸ್ವತಂತ್ರವಾಗಿ ಜೀವನ ಮಾಡಬೇಕು ಎನ್ನುವ ಆಸೆ ಇದ್ದರೆ ಕೃಷಿಯನ್ನು ಆಯ್ಕೆ ಮಾಡಿ ಎನ್ನುತ್ತಾರೆ ಕೃಷಿಕರಾದ ಅಚ್ಚ್ಯುತ್ ಗಟ್ಟಿಯವರು.
ಕೃಷಿ ಮಾತ್ರವಲ್ಲದೆ ಸಮಾಜ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು ಕರ್ನಾಟಕ ಮಾತ್ರವಲ್ಲದೆ ಅಂತರ್ ರಾಜ್ಯ ಮಟ್ಟದಲ್ಲಿಯೂ ತಮ್ಮ ಸಮಾಜ ಸೇವಾ ಕಾರ್ಯಾಸ್ತವನ್ನು ಚಾಚಿದ್ದಾರೆ. ಅನೇಕ ಸಂಘ ಸಂಸ್ಥೆಗಳಲ್ಲಿ ಉತ್ತಮ ದರ್ಜೆಯ ಸ್ಥಾನಗಳನ್ನು ಅಲಂಕರಿಸಿ ಸೇವೆ ಗೈಯುತ್ತಿದ್ದು, ಇವರ ಸೇವೆಗೆ ಅನೇಕ ಪುರಸ್ಕಾರಗಳು ಸಂದಿವೆ. ಪ್ರಭಾವಿ ಮತ್ತು ಜ್ಞಾನಿಯಾದರು ಇವರ ಸರಳತೆಯನ್ನು ಇವತ್ತಿನ ಯುವಕರು ಮಾದರಿಯಾಗಿಸಿಕೊಳ್ಳಬೇಕು.
- ಹನುಮಂತ ಎಸ್ ಕೆ. ರಾಯಚೂರು
ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ
ವಿವೇಕಾನಂದ ಕಾಲೇಜ್ ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ