ಹಿರಿಯರ ಸಾಧನೆ, ಮಾರ್ಗದರ್ಶನಗಳು ಎಳೆಯರಿಗೆ ಸ್ಫೂರ್ತಿಸೆಲೆ: ಪ್ರೊ. ಪಿ.ಎಲ್ ಧರ್ಮ

Upayuktha
0


ಸುರತ್ಕಲ್: ಹಿರಿಯರ ಸಾಧನೆಗಳನ್ನು ಗುರುತಿಸುವ ಮೂಲಕ ನಾವು ಸಾಗಬೇಕಾದ ಹಾದಿಯಲ್ಲಿ ಸ್ಫೂರ್ತಿಯ ಸೆಲೆ ದೊರೆಯುತ್ತದೆ. ಸಮಾಜ ಸೇವೆಯ ಮೂಲಕ ಮಾನವೀಯ ಸ್ಪಂದನೆ ನೀಡುವ ಕಾರ್ಯಕರ್ತರ ಗುರುತಿಸುವಿಕೆ ಉತ್ತಮ ಕಾರ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ನುಡಿದರು.


ಅವರು ಉಮ್ಮಕ್ಕೆ ಚಾರಿಟೇಬಲ್ ಟ್ರಸ್ಟ್ ಮತ್ತು ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಆಶ್ರಯದಲ್ಲಿ ದ.ಕ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಉಮ್ಮಕ್ಕೆನ ನೆಂಪು, ದತ್ತಿ ನಿಧಿ ಉಪನ್ಯಾಸ, ಕೂಡು ಕಟ್ಟದ ಪಾತೆರ ಕತೆ, ಸಂತ ಕವಿ ಕನಕದಾಸ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.


ಮಂಗಳೂರು ವಿಶ್ವ ವಿದ್ಯಾಲಯದ ಕುಲ ಸಚಿವ ಕೆ. ರಾಜು ಮೊಗವೀರ ಮಾತನಾಡಿ, ಕೌಟುಂಬಿಕ ಸಂಬಂಧಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಹಿರಿಯರ ನೆನಪುಗಳನ್ನು ವಿಶಿಷ್ಟ ಮಾದರಿಯಲ್ಲಿ ಮಾಡುತ್ತಿರುವುದು ಶ್ಲಾಘನೀಯ ಎಂದರು.


ಸಂತ ಕವಿ ಕನಕ ದಾಸ ಪ್ರಶಸ್ತಿಯನ್ನು ಜನಪರ ಹೋರಾಟಗಾರ ವಾಸುದೇವ ಉಚ್ಚಿಲರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ರೂ. 30,000 ಮತ್ತು ಸ್ಮರಣೆಕೆಗಳನ್ನು ಒಳಗೊಂಡಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಾಸುದೇವ ಉಚ್ಚಿಲ ಅವರು ಪ್ರಗತಿಪರ ಹಾಗೂ ಜನಪರ ಚಿಂತನೆಯ ಅನುಷ್ಠಾನದ ಕರ್ತವ್ಯ ನಿರ್ವಹಿಸಿದ ತನ್ನನ್ನು ಗುರುತಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.


ಮಾತೃ ಮೂಲಿಯ ಕುಟುಂಬ ವ್ಯವಸ್ಥೆಯ ಸಾಧ್ಯತೆಗಳ ಕುರಿತು ಲೇಖಕಿ ಡಾ. ಜ್ಯೋತಿ ಚೇಳಾಯಿರು ದತ್ತಿ ಉಪನ್ಯಾಸ ನೀಡಿದರು.


ಹತ್ತನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತ್ಯಧಿಕ ಗಳಿಸಿದ ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆಯ ಫಾತಿಮಾತ್ ರಿಫನ, ಮಾಣಿಲ  ಸರ್ಕಾರಿ ಪ್ರೌಢಶಾಲೆಯ ಶೈನಾ ಲೀಸಾ ಮೊಂತೆರೊ ಮತ್ತು ಮಂಗಳೂರಿನ ಕಾಸ್ಸಿಯಾ ಪ್ರೌಢ ಶಾಲೆಯ ಪ್ರಜ್ಞಾ ಅವರನ್ನು ರೂ. 10,000 ನಗದು ಪುರಸ್ಕಾರದೊಂದಿಗೆ ಸಂಮಾನಿಸಲಾಯಿತು.


ಪ್ರೊ. ರಾಜರಾಮ ತೋಡಿ ಅವರು ಉಮ್ಮಕ್ಕೆ ನೆಂಪು ನಡೆಸಿ ಉಮ್ಮಕ್ಕೆ ಮಾದರಿಯೊಂದು ನಮ್ಮೆದುರಿಗೆ ಇದ್ದು ಅದನ್ನು ಅನುಸರಿಸಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಮತ್ತು ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಮಾತನಾಡಿ ಕುಟುಂಬದ ಹಿರಿಯರಾಗಿ ಎಲ್ಲಾ ವರ್ಗದ ಜನರಿಗೆ ಪ್ರೀತಿ ಹಂಚಿದ ಉಮ್ಮಕ್ಕೆ ಮಾನವೀಯ ಸಂಬಂಧಗಳ ರೂಪಕವಾಗಿದ್ದಾರೆ ಎಂದರು.


ಉಮ್ಮಕ್ಕೆ ನೆಂಪು ಕೂಟ ಚಾರಿಟಿ ಟೇಬಲ್ ಟ್ರಸ್ಟ್ ಕಾರ್ಯದರ್ಶಿ ಕೃಷ್ಣಮೂರ್ತಿ ಸ್ವಾಗತಿಸಿದರು. ಅಧ್ಯಕ್ಷ ಪ್ರೊ. ಬಿ. ಶಿವರಾಮ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಕಾರ್ಯದರ್ಶಿ ಯಶೋದಾ ಮೋಹನ್ ವಂದಿಸಿದರು. 


ಸುನೀಲ್ ಪಲ್ಲಮಜಲು ಕಾರ್ಯಕ್ರಮ ನಿರೂಪಿಸಿದರು. ರತ್ನಾವತಿ ಬೈಕಾಡಿ ಆಶಯ ಗೀತೆ ಹಾಡಿದರು. ಸ್ವರಾಂಜಲಿ ಕಿನ್ನಿಗೋಳಿಯ ಆಶ್ವಿಜಾ ಉಡುಪ ಅವರಿಂದ ಪದ ರಂಗಿತ ಗಾಯನ ನಡೆಯಿತು.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top