ವರದಿಗಾರನು ಬಂದು ಅಡಿಕೆ ತೋಟದಿ ನಿಂದು
ಹೈಕಮಾಂಡ್ ವರುಣನಿಗೆ ಪ್ರಶ್ನೆಯಿಟ್ಟ/
ತೋಟದಲಿ ನಡೆಯುತಿಹ ಭಿನ್ನಮತ ಯುದ್ಧಕ್ಕೆ
ಈ ಬಾರಿಯಾದರೂ ಉತ್ರವುಂಟಾ?//1//
ಭಿನ್ನಮತ ವಾರ್ತೆಯೇ? ಒಳಜಗಳವೇನಿಲ್ಲ
ಕಟ್ಟುಕತೆ ನಂಬದಿರಿ ಸುದ್ಧಿಗಳನು/
ಹೊಟ್ಟೆಯುರಿ ತಾಳದೆಯೆ ಎದುರಾಳಿ ರೋಗಗಳು
ಸರಮಾಲೆ ಮಾಡುವರು ಸುಳ್ಳುಗಳನು//2//
ಅಷ್ಟಕ್ಕು ಏನುಂಟು ಸುದ್ಧಿಗಳ ಒಳಸಾರ
ಬಿನ್ನಮತ ಕಾರಣವ? ತಿಳಿಸಿಯದನು/
ಸದ್ದದನು ಅಡಗಿಸುತ, ಒಟ್ಟಾಗಿ ನೆಡೆವಂತೆ
ತಿಳಿಸಿ ಸರಿಪಡಿಸಲೀಗ ಬಂದಿರುವೆನು//3//
ಹಿಂದಾದ ಒಪ್ಪಂದ ಮೂರ್ವರ್ಷ ಅಧಿಕಾರ
ಮೊದಲಿಲ್ಲಿ ಎಲೆಚುಕ್ಕಿ ಮುನ್ನೆಡೆಯಲಿ/
ಮಾತುಕತೆ ನೆಡೆದಿತ್ತು ಕೊಳೆರೋಗ ಒಪ್ಪಿತ್ತು
ತೋಟಸಭೆ ನೆಡೆದಾಗ ಸನ್ನಿಧಿಯಲಿ//4//
ಮೂರ್ವರ್ಷ ಆಧಿಕಾರ ಮುಗಿದಾಯ್ತು ಆಗಸ್ಟ್‌ಗೆ
ಎಲೆಚುಕ್ಕಿ ಮರದಿಂದ ಇಳಿಯೊದಿಲ್ವಾ?/
ಕೊಳೆರೋಗ ಕೈಗಳಿಗೆ ಅಧಿಕಾರ ಧಾಟಿಸಲು
ಎಲೆಚುಕ್ಕಿ ಫಂಗಸ್‌ಗೆ ಮನಸೆ ಇಲ್ವಾ?//5//
ಈ ಸುದ್ಧಿ ಹರಡಿಹುದು ತೋಟದಾ ತುಂಬೆಲ್ಲ
ಏಪ್ರಿಲ್ಲು ತಿಂಗ್ಳಿಂದ ತೋಟದೊಳಗೆ/
ಇದಕೇನು ಔಷಧವು ಹುಡುಕಾಟ ನೆಡೆದಿಹುದು
ಸಿಗುತಿಲ್ಲ ಪರಿಹಾರ ಚಿಂತೆಯೊಳಗೆ//6//
ಕೊಳೆರೋಗ ಮೌನದಲಿ ಅಧಿಕಾರದಾಸೆಯಲಿ
ಅಡಿಕೆಮರ ತೋಟದೆಡೆ ಬರುತಿರುವನು/
ಅಲ್ಲಲ್ಲಿ ಬೆಂಬಲಿಗರನ್ನೆಲ್ಲ ಮುಂದಿಟ್ಟು
ಪ್ರತಿದಿನವು ಹೊಸದಾಳ ಉರುಳಿಸಿಹನು//7//
ಈ ಸುದ್ದಿ ಕಿವಿಯಾರೆ ಕೇಳಿದಾ ಎಲೆಚುಕ್ಕಿ
ವರಸೆಯನು ಬದಲಿಸುತ ನುಡಿಯಿತಂತೆ/
ಮೂರಲ್ಲ ಇನ್ನಾರು ವರ್ಷಗಳೆ ನಾನಿರುವೆ
ಎನ್ನುತ್ತ ವರದಿಗಗೆ ಟಗರಿನಂತೆ//8//
ಆಲಿಸುತ ಮಳೆರಾಯ ತೀರ್ಮಾನ ಹೇಳಿದನು
ಇಬ್ಬರಿಗು ಅಧಿಕಾರ ನೆಡೆಸಿರೆಂದು/
ಹಸ್ತಲಾಘವ ಮಾಡಿ ಎಲೆಚುಕ್ಕಿ, ಕೊಳೆರೋಗ
ಒಪ್ಪಿದರು ಈ ಮಾತು ಒಟ್ಟಿಗಿಂದು//9//
ಆರು ತಿಂಗಳ ಕಾಲ ಮಳೆರಾಯ ಇಲ್ಲಿದ್ದು
ಬೆಳವಣಿಗೆ ನೋಡುವನು ಗಮನಿಸುತಲಿ/
ಕೊಳೆರೋಗ ಎಲೆಚುಕ್ಕಿ ಅಧಿಕಾರ ನೆಡೆಸುವರು
ಮಲೆನಾಡ ತೋಟವನು ಒಮ್ಮತದಲಿ//10//
ತೋಟದಲಿ ಈ ವರ್ಷ ಇಬ್ಬರದು ಅಧಿಕಾರ
ಮಲೆನಾಡ ಅಡಿಕೆಗೇ ಬದುಕೆ ಇಲ್ವಾ?/
ಅಡಿಕೆಯನು ನಂಬಿರುವ ಮಲೆನಾಡ ಜನಗಳಿಗೆ
ಮಂದೇನು ಎಂಬುದೇ ಚಿಂತೆಯಲ್ವಾ?//11//
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ