800ಕ್ಕೂ ಹೆಚ್ಚು ಅಂಕಿತ ಪಡೆದ ಮಹಿಳಾ ಹರಿದಾಸರನ್ನು ಮುನ್ನೆಲೆಗೆ ತರಬೇಕಿದೆ: ಡಾ. ಬಿ.ಎಂ ವಾಣಿಶ್ರೀ

Upayuktha
0

ಮಹಿಳಾ ಹರಿದಾಸರ ಪರಿಚಯದ ಉಪನ್ಯಾಸ ಮಾಲಿಕೆಯ ಎರಡನೆಯ ಕಾರ್ಯಕ್ರಮ




ಬೆಂಗಳೂರು: ಅಪ್ರಚಲಿತವಾಗಿಯೇ ಉಳಿದಿರುವ 800ಕ್ಕೂ ಹೆಚ್ಚು ಅಂಕಿತ ಪಡೆದ ಕನ್ನಡ ಮಹಿಳಾ ಹರಿದಾಸರ ಜೀವನ ಪರಿಚಯ ಹಾಗೂ ಸಾಧನೆ ಸರ್ವರಿಗೂ ತಲುಪಬೇಕು. ಅದಕ್ಕೆ ಪೂರಕವಾಗಿ ಮಹಿಳಾ ಹರಿದಾಸರ ಕೃತಿಗಳನ್ನು ಹೆಚ್ಚು ಹೆಚ್ಚು ಹಾಡುವುದರ ಮೂಲಕ, ಅವುಗಳ ಅರ್ಥ ಚಿಂತನೆ ಮಾಡುವುದರ ಮೂಲಕ, ಅವರ ಸಾಹಿತ್ಯವನ್ನು ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ (ರಿ) ನವರು ಮುನ್ನೆಲೆಗೆ ತರುತ್ತಿದ್ದಾರೆ. ಇದು ಸ್ತುತ್ಯರ್ಹ ಎಂದು ಡಾ. ಬಿ.ಎಂ. ವಾಣಿಶ್ರೀಯವರು ಶ್ಲಾಘಿಸಿದರು.


ಅವರು ಬೆಂಗಳೂರಿನ ಶ್ರೀ ಶ್ರೀಪಾದರಾಜ ಮಠದಲ್ಲಿ ಮೈತ್ರೇಯಿ ಕನ್ನಡ ಮಹಿಳಾ ಹರಿದಾನ ಟ್ರಸ್ಟ್ (ರಿ), ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ, ಬೆಂಗಳೂರು ಹಾಗೂ ದಾಸವಾಣಿ ಕರ್ನಾಟಕ ಇವರ ಸಂಯುಕ್ತ ಆಶ್ರಯದಲ್ಲಿ, ಜುಲೈ 20 ರಂದು ಆಯೋಜಿಸಿದ್ದ ಮಹಿಳಾ ಹರಿದಾಸರ ಪರಿಚಯದ ಉಪನ್ಯಾಸ ಮಾಲಿಕೆಯ ಎರಡನೆಯ ಕಾರ್ಯಕ್ರಮದಲ್ಲಿ ಶ್ರೀಮತಿ ಬೆಳ್ಳೆ ಸೀತಾರತ್ನಬಾಯಿ ಇವರ ಪರಿಚಯದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 


ಪುತ್ತೂರಿನ ಮುಕ್ತಾಪುರೇಶನ ಅಂಕಿತದಿಂದ ಕೃತಿ ರಚನೆ ಮಾಡಿದ ಶ್ರೀಮತಿ ಬೆಳ್ಳೆ ಸೀತಾರತ್ನಬಾಯಿಯವರ ಕುರಿತಾಗಿ ಮೈತ್ರೇಯಿ ಮಹಿಳಾ ಹರಿದಾಸ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಡಾ. ವೃಂದಾ ಸಂಗಮ್‌ ಇವರು ಉಪನ್ಯಾಸ ನೀಡಿದರು. ಶ್ರೀಮತಿ ಬೆಳ್ಳೆ ಸೀತಾರತ್ನಬಾಯಿ ಇವರು ಕೇವಲ ಪ್ರಾಥಮಿಕ ಶಿಕ್ಷಣ ಪಡೆದು ಪತಿ ಗೃಹಕ್ಕೆ ಬಂದ ಪುಟ್ಟ ಹುಡುಗಿ ಪತಿಯ ಒತ್ತಾಸೆಯೊಂದಿಗೆ, ಸಂಸ್ಕೃತ ಕಲಿತು ಸಂಸ್ಕೃತ ಪಂಡಿತರಾದರು. ಹಿಂದಿಯಲ್ಲಿ ವಿಶಾರದಾ ಪರೀಕ್ಷೆ ಪಾಸು ಮಾಡಿ, ಸ್ವತಃ ಗಾಂಧೀಜಿಯವರ ಕೈಯಿಂದ ಪ್ರಶಸ್ತಿ ಪತ್ರ ಪಡೆದರು. ಚರಕದಿಂದ ನೂಲು ತೆಗೆದರು. ಸೀತಾರತ್ನಬಾಯಿ ಯವರು ಕನ್ನಡ, ಇಂಗ್ಲೀಷ್ ಹಿಂದಿ, ಸಂಸ್ಕೃತ, ತೆಲಗು ಮತ್ತೆ ತುಳು ಭಾಷೆ ಬಲ್ಲ, ಬಹುಭಾಷಾ ಪ್ರವೀಣರು. ಪುತ್ತೂರಿನ ಲೇಡೀಸ್ ಕ್ಲಬ್, ಮಹಾಲಿಂಗೇಶ್ವರ ದೇವಸ್ಥಾನದ ಸಮಾರಂಭಗಳಲ್ಲಿ, ಕನಿಷ್ಟ ಒಂದು ಗಂಟೆ ಕನ್ನಡದಲ್ಲಿ ಅಥವಾ ಇಂಗ್ಲೀಷಿನಲ್ಲಿ ಭಾಷಣ ಮಾಡುವಂತಾದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಅವರ ನೂರು ಕೃತಿಗಳ ಭಕ್ತಿವಾಹಿನಿ ಪುಸ್ತಕ ಪ್ರಕಟವಾಗಿದೆ. ಭಾಮಿನಿ ಷಟ್ಪದಿಯಲ್ಲಿ ಬರೆದ 700 ನುಡಿಗಳ ಮಹಾಕಾವ್ಯ ಶ್ರೀ ಮದ್ಭಗವದ್ಗೀತಾ ಇದು ಹಳೆಗನ್ನಡದ ಛಂದಸ್ಸಿನ ಸರ್ವ ಪ್ರಕಾರಗಳನ್ನೂ ಒಳಗೊಂಡಿದೆ. ಇದು ಕೇವಲ ಭಾಷಾಂತರ ಅಥವಾ ಅನುವಾದ ಅಲ್ಲ. ಸ್ವಪ್ರೇರಣೆಯಿಂದ ಬಂದ ಮಹಾ ಕಾವ್ಯ ಶ್ರೀಮತಿ ಬೆಳ್ಳೆ ಸೀತಾರತ್ನಬಾಯಿ ಅವರ ಭಾಮಿನಿಯ ಭಗವದ್ಗೀತೆ, ನೇರವಾಗಿ ಸರಳವಾಗಿ ಹೃದಯದಾಳದಲ್ಲಿ ಸೇರಿ ಹೋಗುವ ಸುಲಭ ಅರ್ಥದ ಕಾವ್ಯ. ಗೀತೆಯ ವಿಶೇಷ ಒಳಾರ್ಥದ ವಿಷಯಗಳೇನೂ ಅರಿಯದವರಿಗೂ ಅರಿವು ಮೂಡಿಸುವುದು ಎಂಬುದಾಗಿ ಅವರ ಜೀವನ ಹಾಗೂ ಕೃತಿಗಳ ಪರಿಚಯವನ್ನು ಮಾಡಿಕೊಟ್ಟರು.


ಕಾರ್ಯಕ್ರಮದಲ್ಲಿ ಶ್ರೀಮತಿ ಮಾನಸ ಜಯರಾಜ್ ಕುಲ್ಕರ್ಣಿ ಹಾಗೂ ತಂಡದವರು, 'ಶ್ರೀಮತಿ ಬೆಳ್ಳೆ ಸೀತಾರತ್ನ ಬಾಯಿ' ಇವರ ಕೃತಿಗಳಿಗೆ ರಾಗ ಸಂಯೋಜನೆ ಮಾಡಿ, ತುಂಬಾ ಸುಶ್ರಾವ್ಯವಾಗಿ ಹಾಡಿದರು. 


ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯ ಶ್ರೀಯುತ ಕೃಷ್ಣಮೂರ್ತಿ ಆಚಾರ್ ವಹಿಸಿದ್ದರು. ಮೈತ್ರೇಯಿ ಉಪಾಧ್ಯಕ್ಷರಾದ ಡಾ. ಶಾಂತಾ ರಘೂತ್ತಮ ಇವರು ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತ ಕೋರಿದರು. ಡಾ. ಶೀಲಾ ದಾಸ ಇವರು ಕೃತಿಗಳ ಅರ್ಥಾನುಸಂಧಾನ ಮಾಡಿ, ವಂದನಾರ್ಪಣೆ ಮಾಡಿದರು.


ಶ್ರೀಮತಿ ಸುನಂದ, ಭಾರ್ಗವಿ, ರಾಜಲಕ್ಷ್ಮಿ ಇನ್ನಿತರ ಟ್ರಸ್ಟ ನ ಸದಸ್ಯರೊಂದಿಗೆ, ದಾಸವಾಣಿ ಕರ್ನಾಟಕದ ಶ್ರೀ ಜಯರಾಜ್ ಕುಲ್ಕರ್ಣಿ ಹಾಗೂ ಡಾ. ಆನಂದಾಚಾರಿ ಇನ್ನಿತರ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top