ವಿಶ್ವ ಕುಂದಾಪ್ರ ಕನ್ನಡ ದಿನ: ಜುಲೈ 20ರಂದು ಬೆಂಗಳೂರಲ್ಲಿ ಕುಂದಾಪ್ರ ಉತ್ಸವ

Upayuktha
0


ಡುಪಿಯ ಮಾಬುಕೊಳದಿಂದ ಬೈಂದೂರಿನ ತನಕ ಮಾತನಾಡುವ ಕನ್ನಡದ ಒಂದು ಉಪಭಾಷೆಯೆ ಕುಂದಾಪ್ರ ಕನ್ನಡ. ಇಲ್ಲಿಯ ಜನರು ಶೈಕ್ಷಣಿಕವಾಗಿಯೂ ಮತ್ತು ವ್ಯಾವಹಾರಿಕವಾಗಿಯೂ ಜಗತ್ತಿನ ಹಲವಾರು ಭಾಗದಲ್ಲಿ ತಮ್ಮ‌ ಹೆಜ್ಜೆಯ ಗುರುತುಗಳನ್ನು ಮೂಡಿಸಿದ್ದಾರೆ. ಕಡಲ ಅಂಚಿನಲ್ಲಿ ತುಂಬಾ ಶಿಸ್ತುಬದ್ಧವಾಗಿ, ಧಾರ್ಮಿಕವಾಗಿ, ತಮ್ಮ ಬದುಕನ್ನ ಕಟ್ಟಿಕೊಂಡಿರುವ ಜನರು, ಪರ ಊರಿಗೆ ಹೋದಾಗ ತಮ್ಮ ಭಾಷೆಯ ಶೈಲಿಯಿಂದಲೆ ಬೇರೆ ಎಲ್ಲರಿಗಿಂತ ವಿಭಿನ್ನವಾಗಿ ನಿಲ್ಲುತ್ತಾರೆ. ಹಾಗೆಯೇ ಕುಂದಾಪ್ರ ಕನ್ನಡ ಎನ್ನುವುದು ಕೇವಲ ಒಂದು ಉಪಭಾಷೆಯಾಗದೆ... ಅಲ್ಲಿಯ ಜನರ ಬದುಕಿನ ಅಭಿವ್ಯಕ್ತಿಗೆ ಹಿಡಿದ ಕನ್ನಡಿಯಾಗಿದೆ!


ಕೆಲವು ವರ್ಷಗಳಿಂದ ಈ ಆಷಾಢ ಮಾಸದಲ್ಲಿ ವಿಶ್ವ ಕುಂದಾಪ್ರ ಕನ್ನಡ ಎನ್ನುವ ವಿಶೇಷ ದಿನವನ್ನು, ಜಗತ್ತಿನ ಮೂಲೆ ಮೂಲೆಗಳಲ್ಲಿರುವ ಕುಂದಾಪುರ ಭಾಷಿಕರು ಒಂದು ಜಾಗದಲ್ಲಿ ಸೇರಿ, ತಮ್ಮ ಭಾಷಾಭಿಮಾನವನ್ನು ವಿಶಿಷ್ಟ ರೀತಿಯಲ್ಲಿ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಾರೆ. 

ಇದೇ ಉದ್ದೇಶವನ್ನಿಟ್ಟುಕೊಂಡು ಬೆಂಗಳೂರಿನಲ್ಲಿ  ಕುಂದಾಪುರ ಭಾಗದ ಯುವ ಸಮುಹವೊಂದು ಕಳೆದ 5 ವರ್ಷಗಳಿಂದ ವಿಶ್ವ ಕುಂದಾಪ್ರ ಕನ್ನಡ ಆಚರಣೆ ತಮ್ಮದೆ ಆದ ರೀತಿಯಲ್ಲಿ ಬೇರೆಯವರಿಗಿಂತ ವಿಭಿನ್ನವಾಗಿ ಆಚರಿಸುತ್ತ ಬಂದಿದ್ದಾರೆ. 

      

ವಿಶೇಷವೆಂದರೆ ಈ ಯುವಕ ಯುವತಿಯರು ವೃತ್ತಿಯಲ್ಲಿ ಬೆಂಗಳೂರಿನ ಬೇರೆ ಬೇರೆ ಸ್ಥಳಗಳಲ್ಲಿ ಇದ್ದು ತಮ್ಮ ಬದುಕನ್ನು ಕಟ್ಟಿಕೊಂಡು, ಟೀಮ್ ಕುಂದಾಪುರನ್ಸ್ ಎನ್ನುವ ಗುಂಪನ್ನ ಕಟ್ಟಿಕೊಂಡು ಕುಂದಾಪುರದ ಭಾಷೆ, ಅಲ್ಲಿಯ ಆಚಾರ ವಿಚಾರಗಳನ್ನು ಬೆಂಗಳೂರಿನಲ್ಲಿರುವ ಕನ್ನಡಿಗರಿಗೆ ತೋರಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಇಂತಹುದೇ ಒಂದು ಅಪರೂಪದ ಕಾರ್ಯಕ್ರಮ ಈ ವರ್ಷವೂ ವಿಶ್ವ ಕುಂದಾಪ್ರ ಕನ್ನಡದ ಭಾಗವಾಗಿ ಟೀಮ್ ಕುಂದಾಪುರಿಯನ್ಸ ನಡೆಸುತ್ತಿದ್ದು ಇದೇ ಭಾನುವಾರ ಅಂದರೆ ಜುಲೈ 20 ರಂದು ರಾಜಾಜಿನಗರದ ನೇತಾಜಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದಾರೆ.


ಈ ಕಾರ್ಯಕ್ರಮವು ಬೆಳಿಗ್ಗೆ 8.30 ರ ಶುಭ ಮುಂಜಾನೆಯ ಸಮಯದಲ್ಲಿ ರಾಜಾಜಿನಗರದ ಮೆಟ್ರೋ ಸ್ಟೇಷನ್ ನಿಂದ ಕೊಲ್ಲೂರು ಮೂಕಾಂಬಿಕೆಯ ಟ್ಯಾಬ್ಲೋ ಮೆರವಣಿಗೆ ಮತ್ತು ವಿಶೇಷ ಭಜನೆಯ ಮೂಲಕ ಸರಿಸುಮಾರು 1.5 ಕಿಲೋ ಮೀಟರ್ ಕ್ರಮಿಸಿ ನೇತಾಜಿ ಆಟದ ಮೈದಾನ ತಲುಪಿ ಕಾರ್ಯಕ್ರಮಕ್ಕೆ ಗಣ್ಯರ ಮೂಲಕ ಚಾಲನೆ ನೀಡಲಿದ್ದಾರೆ.


ಕುಂದಾಪುರ ಭಾಗದಲ್ಲಿ ಉಪಯೋಗಿಸುವ ವಿಶೇಷವಾದ ವಸ್ತುಗಳ ಪ್ರದರ್ಶನವು ಬರುವ ಎಲ್ಲಾ ಸಭಿಕರಿಗೆ ಕಾಣಸಿಗುತ್ತದೆ. ಕುಂದಾಪುರ ಭಾಗದ ಹಲವಾರು ಖ್ಯಾತ ಕಲಾವಿದರ ಕಾರ್ಯಕ್ರಮಗಳು, ಗಾಯಕರ ಹಾಡುಗಾರಿಕೆಯು, ಗ್ರಾಮೀಣ ಭಾಗದ ಕ್ರೀಡೆಗಳು ಮತ್ತು ಮಧ್ಯಾಹ್ನ ಕುಂದಾಪುರ ಭಾಗದ ಗಂಜಿ ಊಟದ ವ್ಯವಸ್ಥೆ ಕೂಡ ಈ ತಂಡ ಮಾಡುತ್ತಿದೆ.


ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನ ವೈಭವವು ಪ್ರದರ್ಶನಗೊಳ್ಳುವುದರ ಮೂಲಕ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಆಯೋಜನೆ ಮಾಡಿದ್ದಾರೆ.


ಇಂದಿನ ಜಂಜಾಟದ ಬದುಕಿನ ನಡುವೆಯು, ತನ್ನ ಕರ್ಮಭೂಮಿಯಲ್ಲಿ, ಜನ್ಮ ಭೂಮಿಯ ಬಗ್ಗೆ ವಿಶೇಷ ಅಭಿಮಾನ ಇಟ್ಟುಕೊಂಡು ಅದರ ಏಳಿಗೆಗಾಗಿ ತಮ್ಮ ಸಮಯವನ್ನು ನೀಡುವ ಈ ತಂಡದ ಎಲ್ಲಾ ಮನಸ್ಸುಗಳ ಶ್ರಮಕ್ಕೆ ನಾವು ಕೊಡಬಹುದಾದ ಗೌರವವೆಂದರೆ, ಜುಲೈ 20ರ ಕಾರ್ಯಕ್ರಮದಲ್ಲಿ ಭಾಗಿಯಾಗುವುದು. ಕುಂದಾಪುರ ದ ಭಾಷೆ, ಆಚಾರ ವಿಚಾರ, ಸಂಪ್ರದಾಯ ಮತ್ತು ಪ್ರತಿಭಾವಂತ ಕಲಾವಿದರ ಕಲೆಯನ್ನ ಸವಿಯುತ್ತಾ, ಒಂದಿಷ್ಟು ಕ್ರೀಡೆಯನ್ನು ಆಟವಾಡಿ, ಗಂಜಿಯ ಊಟವ ಸವಿದು, ಈ ಮುಂದಿನ ಭಾನುವಾರದ ಸಮಯವನ್ನು ಒಳ್ಳೆಯ ರೀತಿಯಲ್ಲಿ ಕಳೆಯಲು ಈ ತಂಡ ಅವಕಾಶ ನಮಗೆಲ್ಲರಿಗೂ ಮಾಡಿಕೊಟ್ಟಿದೆ. 


ಕುಂದಾಪ್ರ ಕನ್ನಡ “ಭಾಷಿ ಅಲ್ಲ ಬದ್ಕ್”


- ಪ್ರದೀಪ ಶೆಟ್ಟಿ ಬೇಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top