ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ ನಿಧನ

Upayuktha
0


ಉಜಿರೆ: ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ (92) ಉಪ್ಪಿನಂಗಡಿಯಲ್ಲಿರುವ ಸ್ವಗೃಹ “ಪಾತಾಳ” ದಲ್ಲಿ ಶನಿವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ ಇಬ್ಬರು ಪುತ್ರರು ಹಾಗೂ ನಾಲ್ಕು ಮಂದಿ ಪುತ್ರಿಯರು ಇದ್ದಾರೆ.


ಮಗ ಅಂಬಾಪ್ರಸಾದ ಪಾತಾಳ ಪ್ರಸಿದ್ಧ ಸ್ತ್ರೀ ವೇಷಧಾರಿಯಾಗಿ ಪ್ರಸಿದ್ಧರಾಗಿದ್ದಾರೆ.1933ರ ನವಂಬರ್ 16 ರಂದು ಪುತ್ತೂರು ಬಳಿ ಬೈಪದವು ಎಂಬಲ್ಲಿ ರಾಮಭಟ್ಟ ಮತ್ತು ಹೇಮಾವತಿ ದಂಪತಿಯ ಮಗನಾಗಿ ಜನಿಸಿದ ಇವರು ಕೇವಲ 8ನೆ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದರು. ಬಳಿಕ ಸೌಕೂರು ಮೇಳದ ಸ್ತ್ರೀ ವೇಷಧಾರಿ ಸೀತಾರಾಮ ಅವರಿಂದ ಬಡಗುತಿಟ್ಟಿನ ನಾಟ್ಯದ ಹೆಜ್ಜೆಗಳನ್ನೂ ಪೆರುವೋಡಿ ನಾರಾಯಣ ಭಟ್ಟರಿಂದ ತೆಂಕುತಿಟ್ಟಿನ ನಾಟ್ಯಗಾರಿಕೆ ಕಲಿಕೆಯನ್ನೂ ಪೂರ್ಣಗೊಳಿಸಿದರು. ಕಡಾರು ನಾರಾಯಣ ಭಟ್ ಹಾಗೂ ಅಳಿಕೆ ರಾಮಯ್ಯ ರೈ ಅವರಿಂದಲೂ ಹೆಚ್ಚಿನ ನಾಟ್ಯಾಭ್ಯಾಸ ಕರಗತ ಮಾಡಿಕೊಂಡರು.


ಕಾಂಚನ ಮೇಳ, ಸೌಕೂರು ಮೇಳ, ಮೂಲ್ಕಿ ಮೇಳದಲ್ಲಿ ಕಲಾವಿದರಾಗಿ ಸೇವೆ ಮಾಡಿದ ಬಳಿಕ ಕೀರ್ತಿಶೇಷ ರತ್ನವರ್ಮ ಹೆಗ್ಗಡೆಯವರು ಧರ್ಮಾಧಿಕಾರಿಗಳಾಗಿದ್ದ ಅವಧಿಯಲ್ಲಿ 1963ರಲ್ಲಿ ಧರ್ಮಸ್ಥಳ ಮೇಳಕ್ಕೆ ಸ್ತ್ರೀ ಪಾತ್ರಧಾರಿಯಾಗಿ ಸೇರಿದರು. 18 ವರ್ಷಗಳ ಸೇವೆ ಬಳಿಕ ನಿವೃತ್ತರಾದರು. ನಿವೃತ್ತಿ ಬಳಿಕ ಉಪ್ಪಿನಂಗಡಿಯ ಹಿರೆಂಬಾಡಿ ಬಳಿ “ಪಾತಾಳ” ದಲ್ಲಿ ವಾಸ್ತವ್ಯ ಇದ್ದರು.


ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಮ್ಮು ಬಲ್ಲಾಳ್ತಿ, ಭಸ್ಮಾಸುರ ಮೋಹಿನಿ ಪ್ರಸಂಗದ ಮೋಹಿನಿ, ರಂಭೆ, ಊರ್ವಶಿ, ಮೇನಕೆ, ಶೂರ್ಪನಖಿ, ಅಂಬೆ, ಪೂತನಿ, ದ್ರೌಪದಿ, ದೇವಿ ಮೊದಲಾದ ಪಾತ್ರಗಳನ್ನು ಇವರು ನಿರ್ವಹಿಸಿ “ನಾಟ್ಯರಾಣಿ  ಶಾಂತಲೆ” ಬಿರುದನ್ನು ಪಡೆದಿರುತ್ತಾರೆ. ಬೇಲೂರಿನ ಶಿಲಾಬಾಲಿಕೆಯ ಅಂಗಭಂಗಿಗಳನ್ನು ಅವರು ಬೇಲೂರಿಗೆ ಹೋಗಿ ಸ್ವತಃ ಅಭ್ಯಾಸ ಮಾಡಿ ಯಕ್ಷಗಾನದಲ್ಲಿ ಅಳವಡಿಸಿಕೊಂಡಿದ್ದರು. ಯಕ್ಷರಂಗದ ಶಿಲಾಬಾಲಿಕೆ ಎಂದೇ ಅವರು ಚಿರಪರಿಚಿತರಾಗಿದ್ದರು.


ಪ್ರಶಸ್ತಿ-ಪುರಸ್ಕಾರಗಳು:

ಕರ್ನಾಟಕ ರಾಜ್ಯಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಯಕ್ಷಕಲಾನಿಧಿ ಪ್ರಶಸ್ತಿ, ದೇರಾಜೆ ಸೀತಾರಾಮಯ್ಯ ಪ್ರಶಸ್ತಿ, ಶಂಕರನಾರಾಯಣ ಸಾಮಗ ಪ್ರಶಸ್ತಿ, ಕುರಿಯವಿಠಲಶಾಸ್ತ್ರಿ ಪ್ರಶಸ್ತಿ, ದೇರಾಜೆ ಪ್ರಶಸ್ತಿ ಮೊದಲಾದ ಹಲವು ಪ್ರಶಸ್ತಿ-ಪುರಸ್ಕಾರಗಳಿಂದ ಗೌರವಿಸಲ್ಪಟ್ಟಿದ್ದಾರೆ.


ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅವರ ನಿಧನಕ್ಕೆ ಗಾಢ ಸಂತಾಪ ವ್ಯಕ್ತಪಡಿಸಿ, ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top