ಕಾರ್ಖಾನೆಗಳು, ಜೆಸಿಬಿ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾನಿ: ಸುಬ್ಬಯ್ಯ ನಾಯ್ಕ
ಪಾಣಾಜೆ: ಕಾರ್ಖಾನೆಗಳು ಜೆಸಿಬಿ ಪ್ಲಾಸ್ಟಿಕ್ ಮುಂತಾದವುಗಳ ಬಳಕೆಯಿಂದ ನಮ್ಮ ಪರಿಸರಕ್ಕೆ ಹಾನಿ ಆಗ್ತಾ ಇದೆ ಇದನ್ನು ಸರಿಪಡಿಸುವ ಕೆಲಸ ಮುಂದಿನ ಭವಿಷ್ಯತ್ ನಿರ್ಮಾಣದ ವಿದ್ಯಾರ್ಥಿಗಳಿಂದ ಆಗಬೇಕಾಗಿದೆ ಎಂದು ಅರಣ್ಯ ಇಲಾಖೆಯ ಪುತ್ತೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕರವರು ಹೇಳಿದರು.
ಇವರು ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಆರ್ಲಪದವು, ನಾಗರಿಕ ಹಿತ ರಕ್ಷಣಾ ವೇದಿಕೆ ಇದರ ಆಶ್ರಯದಲ್ಲಿ ವಿದ್ಯಾವರ್ಧಕ ಸಂಘ ಪಾಣಾಜೆ ಹಾಗೂ ಸೂಬೋಧ ಪ್ರೌಢಶಾಲೆ ಪಾಣಾಜೆ ಇದರ ಸಹಭಾಗಿತ್ವದೊಂದಿಗೆ ಅರಣ್ಯ ಇಲಾಖೆ ಪುತ್ತೂರು ಇದರ ಸಹಕಾರದಲ್ಲಿ ಪಾಣಾಜೆ ಸುಬೋಧ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆದ ವನಮಹೋತ್ಸವ ಮತ್ತು ಸಸಿ ವಿತರಣಾ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳು ನಿಮ್ಮ ಅಮ್ಮನ ಹೆಸರಿನಲ್ಲಿ ಒಂದೊಂದು ಗಿಡವನ್ನು ನೆಟ್ಟು ಬೆಳೆಸಿ ಪರಿಸರದ ಜೊತೆಯಲ್ಲಿ ಸಂಬಂಧದ ಬಾಂಧವ್ಯವನ್ನು ಒಗ್ಗೂಡಿಸಬೇಕು ಎಂದು ಕರೆ ನೀಡಿದರು. ಸಸಿ ವಿತರಣೆ ಮಾಡಿದ ಉಕ್ಕಿನಡ್ಕ ವಸಿಷ್ಟಾಶ್ರಮ ಶಾಲೆಯ ಅಧ್ಯಕ್ಷರಾದ ಪಿ ಜಿ ಶಂಕರ ನಾರಾಯಣ ಭಟ್ ರವರು ಮಾತನಾಡಿ ಹಿರಿಯರು ಮಾಡಿದಂತಹ ಕಟ್ಟುಪಾಡುಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಸಕ್ತ ಸನ್ನಿವೇಶದಲ್ಲಿ ಬಿದಿರು ಬೆಳೆಸುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯಪಡಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳು ಗಿಡ ನೆಡುವುದರ ಮೂಲಕ ಶಾಲೆಯ ನೆನಪು ಅಚ್ಚಳಿಯದೆ ಉಳಿಯುವಂತೆ ಮಾಡಬೇಕು ಎಂದು ಹೇಳಿದರು. ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೈಮೂನತುಲ್ ಮೆಹ್ರಾ ಸಸಿ ನೆಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡುತ್ತ ಪರಿಸರ ಉಳಿಸಲು ಗಿಡ ಮರಗಳನ್ನು ಉಳಿಸಿ ಪೋಷಿಸಬೇಕು ಎಂದು ಹೇಳಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಾ ಸಂಚಾಲಕ ಗಿಳಿಯಾಲು ಮಹಾಬಲೇಶ್ವರ ಭಟ್ ಇವರು ಮಾತನಾಡುತ್ತಾ, ಗಿಡಗಳನ್ನು ನೆಟ್ಟರೆ ಸಾಲದು ಅದನ್ನು ಪೋಷಿಸುವ ಜವಾಬ್ದಾರಿ ಸರ್ವರದ್ದೂ ಆಗಿರಬೇಕು. ಮನೆಯ ಸುತ್ತ ನೀರು ಮತ್ತು ಆಹಾರ ಪ್ರಾಣಿ ಪಕ್ಷಿಗಳಿಗೆ ನೀಡುವಂತಾಗಬೇಕು. ಅಶ್ವತ್ಥ ಮರದ ಮಹತ್ವ ಹಾಗೂ ವಿದ್ಯಾರ್ಥಿಗಳು ಗಿಡ ನೆಟ್ಟು ಬೆಳೆಸುವ ಬಗ್ಗೆ ಪ್ರೇರಣಾದಾಯಕ ಮಾತುಗಳನ್ನಾಡಿ ಶುಭ ಹಾರೈಸಿದರು.
ಪ್ರಾಸ್ತಾವಿಕದೊಂದಿಗೆ ಸ್ವಾಗತ ಮಾಡಿದ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಾ.ಹಾಜಿ.ಎಸ್. ಅಬೂಬಕ್ಕರ್ ಆರ್ಲಪದವು ಮಾತನಾಡುತ್ತಾ, ಪರಿಸರ ಪ್ರೇಮಿಗಳಾಗಿದ್ದ ಮಣ್ಣಂಗಳ ಶ್ಯಾಮ್ ಭಟ್, ಶಂಪಾ ದೈತೋಟ, ಇವರನ್ನು ನೆನಪಿಸಿಕೊಂಡು ಜಿಲ್ಲಾದ್ಯಂತ ನಡೆಸಿದ ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿಯನ್ನು ನೀಡುವುದರೊಂದಿಗೆ ಕಾಡಿನಲ್ಲಿ ಹಣ್ಣು ಹಂಪಲುಗಳ ಗಿಡಗಳನ್ನು ನೆಟ್ಟು ಬೆಳೆಸಿದರೆ ಕಾಡುಪ್ರಾಣಿಗಳಿಗೆ ಸಹಾಯವಾಗುತ್ತದೆ. ಖಾಲಿ ಇರುವ ಪ್ರದೇಶ ಗಳಲ್ಲಿ ಬೀಡಿ ಎಲೆಗಳ ಗಿಡಗಳನ್ನು ಬೆಳೆಸಿದರೆ ಜನರಿಗೆ ಉಪಯೋಗವಾಗ ಬಹುದಾಗಿದೆ ವಿದ್ಯಾರ್ಥಿಗಳು ನಿಮ್ಮ ಮನೆಯಲ್ಲಿ ಗಿಡಗಳನ್ನು ನೆಟ್ಟು ನಿಮ್ಮ ಅಮ್ಮನೊಂದಿಗೆ ಭಾವಚಿತ್ರ ತೆಗೆದು ದಾಖಲೆ ಮಾಡಿ ಶಾಲಾ ಮುಖ್ಯ ಗುರುಗಳಿಗೆ ನೀಡಬೇಕೆಂದು ಮನವಿ ಮಾಡಿದರು.
ಅಲ್ಲದೆ ಗಿಡ ಮರಗಳನ್ನು ನೆಟ್ಟು ಬೆಳೆಸಲು ಸುಬೋಧ ಪ್ರೌಢ ಶಾಲೆಗೆ ಆವರಣ ಗೋಡೆಯ ಅಗತ್ಯತೆ ಇದೆ. ಇದನ್ನು ಅರಣ್ಯ ಇಲಾಖೆ ನೆರವೇರಿಸಿ ಕೊಡಬೇಕೆಂಬ ಮನವಿಯನ್ನು ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ವತಿಯಿಂದ ಪುತ್ತೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಇವರಿಗೆ ನೀಡಲಾಯಿತು. ಅದಕ್ಕೆ ಸ್ಪಂದಿಸಿದ ಪುತ್ತೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕರವರು ಇದಕ್ಕೆ ಬೇಕಾದ ಸಲಕರಣೆಗಳನ್ನು ನಾವು ನೀಡುವುದಾಗಿ ಯೂ ಅದರ ಕಾಮಗಾರಿಯನ್ನು ಉಕ್ಕಿನಡ್ಕ ವಶಿಷ್ಟಾಶ್ರಮ ಶಾಲೆಯ ಅಧ್ಯಕ್ಷರಾದ ಪಿ.ಜಿ. ಶಂಕರನಾರಾಯಣ ಭಟ್ ರವರು ವ್ಯವಸ್ಥೆಯನ್ನು ಮಾಡಿಕೊಡುವುದಾಗಿ ಒಪ್ಪಿಕೊಂಡು ಕಾರ್ಯಕ್ರಮ ಯಶಸ್ವಿಗೆ ಕಾರಣಕರ್ತರಾದರು.
ಅಬೂಬಕ್ಕರ್ ಆರ್ಲಪದವುರವರು ಮಾತನಾಡುತ್ತಾ, ಗಿಡ ಬೆಳೆಸೋಣ ಪರಿಸರ ಉಳಿಸೋಣ ಎಂಬ ಮಹತ್ವದ ಸಾರಾಂಶವನ್ನು ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಪಾಣಾಜೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ ದೇವಸ್ಯ ಮಾತನಾಡಿ, ಪರಿಸರದ ಮಹತ್ವವನ್ನು ತಿಳಿಸಿದರು. ನೆಟ್ಟ ಬೆಲೆಬಾಳುವ ಗಿಡವನ್ನು ಜನರಿಗೆ ಉಪಯೋಗಿಸುವ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಅರಣ್ಯ ಇಲಾಖೆಯಲ್ಲಿ ವಿನಂತಿಸಿಕೊಂಡರು.
ಪಾಣಾಜೆ ರೇಂಜ್ ಉಪವಲಯ ಅರಣ್ಯ ಅಧಿಕಾರಿ ಮದನ್ ರವರು, ಮರಗಳನ್ನು ಕಡಿಯುವ ಬಗ್ಗೆ ಸಾಗಾಣಿಕೆ ಬಗ್ಗೆ ಅರಣ್ಯ ಇಲಾಖೆಯ ಕಾನೂನಿನ ಕುರಿತು ಮಾಹಿತಿ ನೀಡಿ ಶುಭ ಹಾರೈಸಿದರು. ಗ್ರಾಮಜನ್ಯ ಸಂಸ್ಥೆಯ ನಿರ್ದೇಶಕ ರಾಮ್ ಪ್ರತೀಕ್ ಕನಿಯಾಲ ಮಾತನಾಡಿ, ಬಿದಿರು ಬೆಳೆಸುವುದರಿಂದ ಇರುವ ಮಹತ್ವ ಪರಿಸರಕ್ಕೆ ಹೇಗೆ ಇದು ಸಹಕಾರಿ ಎಂದು ತಿಳಿಸಿದರು.
ಶಾಲಾ ಸಂಚಾಲಕ ಗಿಳಿಯಾಲು ಮಹಾಬಲೇಶ್ವರ ಭಟ್ ರವರು ರಚಿಸಿದ ಪರಿಸರ ಗೀತೆಯನ್ನು ಶಾಲಾ ಶಿಕ್ಷಕಿಯರಾದ ಕವಿತಾ ಜಿ. ಹಾಗೂ ಪವಿತ್ರ ಕಡಂದೇಲುರವರ ಸ್ವರ ಸಂಯೋಜನೆಯಲ್ಲಿ ಶಾಲೆಯ ವಿದ್ಯಾರ್ಥಿನಿಯರಾದ ಸಿಂಚನ ಎಸ್ ರಚನಾ ಎಸ್, ಸಿಂಚನ ಎ, ಅರ್ಪಿತ, ದೀಪಿಕಾ ಪಿ ಎಸ್, ಸ್ವಸ್ತಿಕಾ, ಶ್ರಾವ್ಯ, ಲಾವಣ್ಯ, ಚೈತನ್ಯ ಮತ್ತು ದೀಪ್ತಿ ಲಕ್ಷ್ಮಿರವರು ಹಾಡಿದರು.
ವೇದಿಕೆಯಲ್ಲಿ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಈಶ್ವರ ಭಟ್ ಕಡಂದೇಲು, ನಾಗರಿಕ ಹಿತ ರಕ್ಷಣಾ ವೇದಿಕೆ ಪಾಣಾಜೆ ಇದರ ಅಧ್ಯಕ್ಷ ಬಾಬುರೈ ಕೋಟೆ, ಆರ್ಲಪದವು ಬೀಟ್ ಫಾರೆಸ್ಟ್ ಅಧಿಕಾರಿ ಸುನೀಶ್, ಬೆಟ್ಟಂಪಾಡಿ ಬೀಟ್ ಫಾರೆಸ್ಟ್ ಅಧಿಕಾರಿ ಪ್ರಜ್ಞಾ ಬಿ ಉಪಸ್ಥಿತರಿದ್ದರು. ಸಿಂಚನ ಎಸ್ ಪ್ರಾರ್ಥಿಸಿ ಶಾಲಾ ಮುಖ್ಯ ಗುರು ನಿರ್ಮಲ ಕೆ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ಎಸ್ ಪಿಯವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರು, ಸಿಬ್ಬಂದಿಗಳು, ಮಕ್ಕಳ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ