ಉಜಿರೆ: ದಕ್ಷಿಣ ಕನ್ನಡ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಂಭೀರವಾಗಿ ಪರಿಗಣಿಸಿ ಸರಕಾರಿ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುವತ್ತ ಕಾರ್ಯ ಪ್ರವೃತ್ತರಾಗಬೇಕು ಎಂದು ಕೊಯ್ಯೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಾ. ಪ್ರಕಾಶ್ ಎಸ್. ಹೇಳಿದರು.
ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗದ 2025-26 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಜು.14ರಂದು ಚಾಲನೆ ನೀಡಿ ಅವರು ಮಾತನಾಡಿದರು. ಎಲ್ಲಾ ಸವಲತ್ತು, ಅವಕಾಶಗಳಿದ್ದರೂ ಈ ಭಾಗದ (ದಕ್ಷಿಣ ಕನ್ನಡ) ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಹಿಂದೇಟು ಹಾಕುತ್ತಿದ್ದಾರೆ. ಪದವಿ ವಿದ್ಯಾಭ್ಯಾಸ ಸಂದರ್ಭದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿತುಕೊಂಡು ಪ್ರಯತ್ನ ಶೀಲರಾಗಬೇಕು ಎಂದು ಅವರು ಸಲಹೆ ನೀಡಿದರು.
“ವಿದ್ಯಾರ್ಥಿ ಜೀವನದಲ್ಲಿ ಹತ್ತಾರು ಅವಕಾಶಗಳು ನಮ್ಮನ್ನು ಹುಡುಕಿಬರುತ್ತವೆ. ಅವುಗಳ ಸದುಪಯೋಗದಿಂದ ಯಶಸ್ಸು ಸಾಧ್ಯ. ಚಿಕ್ಕ ವಯಸ್ಸಿನಲ್ಲಿ ಅವಕಾಶಗಳು ಬಹಳಷ್ಟು ಇರುತ್ತವೆ ಆದರೆ ಬೆಳೆಯುತ್ತಾ ಹೋದಂತೆ ಅವಕಾಶ ಕಡಿಮೆಯಾಗುತ್ತದೆ. ವಯಸ್ಸು ಓಡುವ ಕುದುರೆಯಿದ್ದಂತೆ. ಹಾಗಾಗಿ ಆಯಾ ವಯಸ್ಸಿಗೆ ಸೂಕ್ತವಾದ ಕಾರ್ಯಗಳಲ್ಲಿ ನಾವು ತೊಡಗಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗ ಮುಖ್ಯಸ್ಥ ಡಾ. ಗಣರಾಜ ಕೆ., ಶಿಕ್ಷಣದಲ್ಲಿ ಸೃಜನಶೀಲತೆ ಬಹಳ ಮುಖ್ಯ, ಸೃಜನಶೀಲತೆಯಿಂದ ಉತ್ತಮ ಶಿಕ್ಷಣದ ಜೊತೆಗೆ ಯಶಸ್ಸು ಸಾಧ್ಯ ಎಂದರು.
ವಿಭಾಗ ಬೆಳೆದು ಬಂದ ಹಾದಿಯನ್ನು ನೆನಪಿಸಿದ ಅವರು, ವಿಭಾಗದ ಯಶಸ್ಸನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಪುನೀತ್, ಸುಹೈಮಾ ಹಾಗೂ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತೃತೀಯ ಬಿಎ ವಿದ್ಯಾರ್ಥಿಗಳಾದ ಸೂರ್ಯ, ಸೃಷ್ಟಿ ಪ್ರಾರ್ಥಿಸಿ, ಅಚಲ ಹಾಗೂ ವೀಕ್ಷಾ ಕಾರ್ಯಕ್ರಮ ನಿರೂಪಿಸಿ, ಮಾನವ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ