ನುಡಿನಮನ: ಯಕ್ಷಗಾನ ಕ್ಷೇತ್ರದ ಚಿರಂಜೀವಿ ಪಾತಾಳ ವೆಂಕಟರಮಣ ಭಟ್

Upayuktha
0



ಯಕ್ಷಲೋಕದ ಅಪೂರ್ವ ಕಲಾವಿದ ಪಾತಾಳ ವೆಂಕಟರಮಣ ಭಟ್ಟರ ನಿಧನದ ವಾರ್ತೆ ತೀವ್ರ ವಿಷಾದವನ್ನುಂಟು ಮಾಡಿದೆ. ಸುದೀರ್ಘ ಕಾಲದ ಬದುಕಿನಲ್ಲಿ ಕಲೆ, ಸಮಾಜ ಮತ್ತು ಸಂಸ್ಕೃತಿಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಪಾತಾಳ ಅವರು ವಿಜೃಂಭಿಸಿದ್ದು ಯಕ್ಷಗಾನ ಕ್ಷೇತ್ರದ ಸ್ತ್ರೀ ಪಾತ್ರಧಾರಿಯಾಗಿ. ದಿನನಿತ್ಯದ ಚಟುವಟಿಕೆಗಳನ್ನು ಅನುಷ್ಠಾನಗಳನ್ನು ಸಾಂಗೋಪಾಂಗವಾಗಿ ನೇರವೇರಿಸಿಕೊಂಡು ಬಂದ ಪಾತಾಳರು ಕುಮಾರವ್ಯಾಸನ "ಪಾತಾಳದ ಸುವಾಸಿನಿ"ಯರ ವರ್ಣನೆಯನ್ನು ರಂಗಭೂಮಿಯ ಮೇಲೆ ಸಾಕ್ಷಾತ್ಕರಿಸಿದವರು. ಸ್ತ್ರೀ ಪಾತ್ರಕ್ಕೆ ಪ್ರತ್ಯೇಕವಾದ ಒಂದು ಆಯಾಮವನ್ನು ನೀಡಿದವರು. ಶಿಲಾಬಾಲಿಕೆಯರ ಅಂಗವಿನ್ಯಾಸವನ್ನು ಅಭ್ಯಾಸ ಮಾಡಿ ಅದನ್ನು ತಮ್ಮ ಪಾತ್ರಕ್ಕೆ ಹೇಗೆ ಅಳವಡಿಸಬಹುದು ಎಂಬ ಚಿಂತನವನ್ನು ನಡೆಸಿದ್ದು ಮಾತ್ರವಲ್ಲ ಅದರಲ್ಲಿ ಪ್ರಯೋಗಶೀಲವಾಗಿ ಯಶಸ್ಸನ್ನು ಕಂಡವರು.


ಪ್ರಾಯದ ಹಂಗನ್ನು ತೊರೆದು  ವೃದ್ಯಾಪದಲ್ಲೂ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರತ್ಯೇಕವಾಗಿ ಕಲಾ ಕಾರ್ಯಕ್ರಮಗಳಲ್ಲಿ ಲವಲವಿಕೆಯಿಂದ ತೊಡಗಿಕೊಳ್ಳುತ್ತಿದ್ದ ಪಾತಾಳರು ತುಂಬಾ ಉದಾರಿಯೂ ಆಗಿದ್ದರು ಎನ್ನುವುದನ್ನು ಅನೇಕರು ನೆನಪಿಸಿಕೊಳ್ಳಬಹುದು. ಅವರು ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ಸಂದರ್ಭದಲ್ಲಿ ಆ ನಿಧಿಯನ್ನು ಸಂಪೂರ್ಣವಾಗಿ ಯಕ್ಷಗಾನ ಕಲೆಗೂ, ಸಮಾಜಕ್ಕೂ ಸಮರ್ಪಿಸಿದ್ದರು. 


ಅವರೊಂದಿಗೆ ಹಲವಾರು ಕಾರ್ಯಕ್ರಮಗಳಲ್ಲಿ, ಬೇರೆ ಬೇರೆ ಸಂದರ್ಭಗಳಲ್ಲಿ ಭಾಗವಹಿಸಿದ ನನ್ನ ನೆನಪು ಇನ್ನೂ ಹಚ್ಚ ಹಸುರಾಗಿಯೇ ಉಳಿದಿದೆ. ಮರೆಯಲಾರದ, ಮರೆಯಬಾರದ ವ್ಯಕ್ತಿತ್ವವನ್ನು ಹೊಂದಿದ್ದ ಪಾತಾಳ ವೆಂಕಟರಮಣ ಭಟ್ಟರಿಗೆ ನಮ್ಮ ತಂದೆಯವರ ಬಗ್ಗೆ ತುಂಬು ಅಭಿಮಾನವಿತ್ತು. ನಮ್ಮ ಸಂಘದೊಂದಿಗೆ ಅವರಿಗೆ ನಿಕಟವಾದ ಸಂಪರ್ಕವೂ ಇತ್ತು. ಅವರಿಗೆ ಕೀರಿಕ್ಕಾಡು ಪ್ರಶಸ್ತಿಯನ್ನು ನೀಡಿ ಗೌರವಿಸುವ ಅವಕಾಶ ದೊರಕಿದ್ದು ನಮಗೊಂದು ಹೆಮ್ಮೆಯ ಕ್ಷಣವೆಂದೇ ಭಾವಿಸುತ್ತೇನೆ.


ಅವರ ಸಾಧನೆಗಳು, ಸಿದ್ದಿಗಳು ಮುಂದಿನ ಜನಾಂಗಕ್ಕೆ ಮಾರ್ಗದರ್ಶಿಯಾಗಿ, ಪ್ರತ್ಯೇಕವಾಗಿ ಕಲಾ ಕ್ಷೇತ್ರಕ್ಕೆ ಒಂದು ದೀಪಸ್ತಂಭವಾಗಿ ಉಳಿಯುವಂತೆ ಸಹೃದಯರು, ಅಭಿಮಾನಿಗಳು ಪ್ರಯತ್ನಿಸಬೇಕು.


ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಕುಟುಂಬಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮನು ನೀಡಲಿ ಮತ್ತು ಸರ್ವ ಶುಭವನ್ನು ಮಾಡಲಿ ಎಂದು ಹೃತ್ಫೂರ್ವಕವಾಗಿ ಹಾರೈಸುತ್ತೇನೆ.


- ಡಾ. ರಮಾನಂದ ಬನಾರಿ, ಮಂಜೇಶ್ವರ

ಅಧ್ಯಕ್ಷರು

ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರ

ಮತ್ತು ಗೋಪಾಲಕೃಷ್ಣ ಯಕ್ಷಗಾನ ಸಂಘ, ಬನಾರಿ

ದೇಲಂಪಾಡಿ, ಕಾಸರಗೋಡು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top