ನುಡಿನಮನ: ಸಮರ್ಥ ಸಾಧಕ ಡಾ. ಬಿ.ಎಸ್. ರಾವ್

Upayuktha
0


ವೈದ್ಯಕೀಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆಗಳನ್ನು ನೀಡಿದ ಡಾ. ಬಿ.ಎಸ್. ರಾವ್ ಅವರದ್ದು ಚಿರಸ್ಮರಣೀಯವಾದ ವ್ಯಕ್ತಿತ್ವ. ಕಲ್ಲಿಕೋಟೆ ವೈದ್ಯ ವಿದ್ಯಾಲಯದಲ್ಲಿ ನನ್ನ ಓರಗೆಯವರಾಗಿದ್ದ ಅವರು ಮುಂದೆ ಎಂ.ಡಿ ಪದವೀಧರರಾಗಿ ಕಾಸರಗೋಡಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ವೃತ್ತಿಜೀವನವನ್ನು ಕೈಗೊಂಡರು. ಕೆಲವೇ ವರ್ಷಗಳಲ್ಲಿ ಸ್ವತಂತ್ರವಾದ ವೈದ್ಯಕೀಯ ಸೇವೆಯಲ್ಲಿ ತೊಡಗಿಕೊಂಡರು. ಸಮಾನ ಮನಸ್ಕರೊಂದಿಗೆ ಅವರು ಕಟ್ಟಿ ಬೆಳೆಸಿದ ಕಾಸರಗೋಡು ನರ್ಸಿಂಗ್ ಹೋಂ ಕಾಸರಗೋಡಿನ ಮುಖಪುಟವನ್ನೇ ಬದಲಾಯಿಸಿ ದಾಖಲೆಯ ಇತಿಹಾಸವನ್ನು ಸೃಷ್ಟಿಸಿತು.


ವೃತ್ತಿಯೊಂದಿಗೆ ಅವರ ಆಸಕ್ತಿಯ ಕ್ಷೇತ್ರಗಳಾದ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಸಾರ್ಥಕ ಸೇವೆಯನ್ನು ಸಲ್ಲಿಸಿ ಸರ್ವಜನಾದರಣೀಯರಾದ ಬಿ.ಎಸ್. ರಾವ್ ಅವರು ಮೊನ್ನೆ ಜರಗಿದ ಮಧೂರಿನ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಆರೋಗ್ಯದ ಸಮಸ್ಯೆಯೂ ಸೇರಿದಂತೆ ಅನೇಕ ಪ್ರತಿಕೂಲಗಳ ನಡುವೆಯೂ ಕಾರ್ಯಕ್ರಮದ ವೇದಿಕೆಯಲ್ಲಿ ಭಾಗವಹಿಸಿದ್ದು ಅವರ ಶ್ರದ್ಧೆ, ಭಕ್ತಿ ಮತ್ತು ಕರ್ತವ್ಯ ಪ್ರಜ್ಞೆಗೆ ಜ್ವಲಂತ ಸಾಕ್ಷಿಯಾಗಿತ್ತು. 


ನಾವು ನಿಡುಗಾಲದ ಸ್ನೇಹಿತರು. ಕುಟುಂಬ ಸ್ನೇಹಿತರು ಕೂಡ. ಶ್ರೀ ಎಡನೀರು ಮಠ ಮತ್ತು ಪೂಜ್ಯ ಸ್ವಾಮೀಜಿಯವರ ಸಾನ್ನಿಧ್ಯ 

ನಮಗೊಂದು ಹಾರ್ದಿಕವಾದ ಸಂಗಮ ಕ್ಷೇತ್ರವಾಗಿತ್ತು. ಅಲ್ಲಿ ಒಟ್ಟಾಗಿ ಕಾರ್ಯಕ್ರಮಗಳಲ್ಲಿ ಸಹಭಾಗಿಗಳಾದ ನೆನಪುಗಳು ನಮ್ಮ ಮನಸ್ಸಿನಲ್ಲಿ ಚಿರಕಾಲ ಅಚ್ಚಳಿಯದೆ ಉಳಿಯುತ್ತವೆ. 


ಬಿ.ಎಸ್. ರಾವ್ ಅವರ ಶ್ರೀಮತಿಯವರು, ಮಕ್ಕಳು ಮತ್ತು ಕುಟುಂಬದವರೆಲ್ಲ ಅವರ  ಕರ್ತೃತ್ವ ಶಕ್ತಿಗೆ ಪ್ರೋತ್ಸಾಹ ಕೊಟ್ಟವರು. ಅವರ  ಶ್ರೀಮತಿಯವರ ಮತ್ತು ನನ್ನ ಶ್ರೀಮತಿಯವರ ನಡುವಣ ಪ್ರೀತಿ, ವಿಶ್ವಾಸಕ್ಕೂ ಸೇತುವೆಯಾದದ್ದು ಎಡನೀರು ಮಠದ ಮಹಿಳಾ ಒಕ್ಕೂಟದ ಸಂದರ್ಭಗಳಲ್ಲಿ. 


ಈಗ ಉಳಿದಿರುವುದು ಆ ನೆನಪುಗಳು ಮಾತ್ರ. ಅಗಲಿದ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮನು ನೀಡಲಿ. ಅವರ ಸಾಧನೆ ಚಿರಾಯುವಾಗಿ ನಿಲ್ಲಲಿ ಮತ್ತು ಅದಕ್ಕೆ  ಸಮುಚಿತವಾದಂತಹ ಗೌರವ ಸದಾ ಸಲ್ಲುತ್ತಿರಲಿ.


- ಡಾ. ರಮಾನಂದ ಬನಾರಿ, ಮಂಜೇಶ್ವರ 

ಅಧ್ಯಕ್ಷರು

ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರ

ಮತ್ತು ಗೋಪಾಲಕೃಷ್ಣ ಯಕ್ಷಗಾನ ಸಂಘ, ಬನಾರಿ

ದೇಲಂಪಾಡಿ, ಕಾಸರಗೋಡು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top