ಸಾಂದರ್ಭಿಕ ಚಿತ್ರ
ನಮ್ಮೂರಿನಲ್ಲಿ ಮಳೆಗಾಲದ ಬೇಸಾಯದ ನಾಟಿ ಕೆಲಸಗಳೆಲ್ಲಾ ಮುಗಿಯುವಾಗ ಸಾಮಾನ್ಯವಾಗಿ ಸೌರಮಾನದ ಕರ್ಕಾಟಕ ಮಾಸ ಅಂದರೆ ಆಸಾಡಿ ತಿಂಗಳು ಬಂದಿರುತ್ತದೆ. ಆಗ ಉಳುಮೆಗೆ ದುಡಿಸಿಕೊಂಡ ಕೋಣಗಳಿಗೆ ಮೊದಲು ಎರೆತ (ಎರ್ತ) ಕೊಡುತ್ತಾರೆ. “ಎರ್ತ” ಕೊಡುವುದು ಅಂದರೆ ಕೋಣಗಳನ್ನು ಮೀಯಿಸಿ, ಮೈಮೇಲೆ ಗಾಯಗಳಾಗಿದ್ದರೆ ಅವುಗಳಿಗೆ ಕಪ್ಪು ಮಸಿ ಮತ್ತು ಹೊನ್ನೆ ಎಣ್ಣೆಯಿಂದ ತಯಾರಿಸಿದ ಒಂದು ರೀತಿಯ ಮುಲಾಮನ್ನು ಹಚ್ಚಿ ಆರೈಕೆ ಮಾಡಿ, ಬಳಿಕ ಅವುಗಳ ಇಡೀ ಮೈಗೆ ಎಣ್ಣೆ ಹಚ್ಚಿ ತಿಕ್ಕಿ, ನಂತರ ಅವುಗಳಿಗಾಗಿಯೇ ವಿಶೇಷವಾಗಿ ತಯಾರಿಸಿದ ಪಶು ಆಹಾರವನ್ನು ತಿನ್ನಿಸುವುದು.
ಸಾಮಾನ್ಯವಾಗಿ ಹುರುಳಿಯನ್ನು ಬೇಯಿಸಿ ಅದರೊಡನೆ ತೆಂಗಿನ ಕಾಯಿಯ ತುರಿ ಮತ್ತು ಒಣಗಿಸಿ ಇಟ್ಟ ಹುರುಳಿಯ ಗಿಡಗಳನ್ನು (ಹುರುಳಿಯ ಕೊಣ್ಣೆಯನ್ನು) ಮಿಶ್ರಗೊಳಿಸಿ, ಒರಳಿಗೆ ಹಾಕಿ ಒನಕೆಯಿಂದ ಕುಟ್ಟಿ ಈ ವಿಶೇಷ ಪಶು ಆಹಾರವನ್ನು ತಯಾರಿಸುತ್ತಾರೆ. ಆ ಎರ್ತವನ್ನು ಅಂದು ಕೋಣಗಳಿಗೆ ಮಾತ್ರವಲ್ಲದೇ ಹಟ್ಟಿಯಲ್ಲಿರುವ ಇತರ ಎಲ್ಲಾ ದನ, ಕರು, ಗುಡ್ಡಗಳಿಗೂ ತಿನ್ನಿಸುತ್ತಾರೆ. ಹೀಗೆ ಎರ್ತ ಕೊಟ್ಟ ನಂತರ ಮತ್ತೆ ಆ ಮಳೆಗಾಲ ಮುಗಿಯುವವರೆಗೂ ಆ ಕೋಣಗಳನ್ನು ಉಳುಮೆಗೆ ಬಳಸಿಕೊಳ್ಳುವುದಿಲ್ಲ.
ಹೀಗೆ ದೊಡ್ಡ ಹಂಡೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಎರ್ತ ಕೊಡಲು ಹುರುಳಿಯನ್ನು ಬೇಯಿಸಿದಾಗ ಎರಡು ಮೂರು ಬಕೆಟ್ ಆಗುವಷ್ಟು ಹುರುಳಿಯ ಗಂಜಿಯ ರಸ ದೊರೆಯುತ್ತದೆ. ಆ ರಸಕ್ಕೆ ನಮ್ಮಲ್ಲಿ ಹುರುಳಿಯ ಹಾಲು ಎನ್ನುತ್ತಾರೆ. ಅದರಲ್ಲಿ ಅಧಿಕಾಂಶವನ್ನು ಕೋಣಗಳಿಗೆ ಕುಡಿಸುತ್ತಾರೆ. ಇನ್ನುಳಿದ ಸ್ವಲ್ಪಾಂಶವನ್ನು ಹುರುಳಿಯ ಸಾರು ಮಾಡಲು ಬಳಸುತ್ತಾರೆ. ಬೆಳ್ಳುಳ್ಳಿಯ ಒಗ್ಗರಣೆ ಹಾಕಿದ ಹುರುಳಿಯ ಸಾರಿಗೆ ಹಳ್ಳಗನ ಕೊಚ್ಚಕ್ಕಿಯ ಅನ್ನವು ಒಂದು ಉತ್ತಮ ಕಾಂಬಿನೇಶನ್. ಬೇಸಾಯಗಾರರಿಗೆ ಹುರುಳಿಯ ಸಾರು ಎಂದರೆ ಬಹಳ ಇಷ್ಟ. ಹೀಗಾಗಿ ಆ ರೀತಿ ಎರ್ತ ಕೊಡುವ ದಿನ ಕೇವಲ ಹಟ್ಟಿಯಲ್ಲಿರುವ ಜಾನುವಾರುಗಳಿಗೆ ಮಾತ್ರವಲ್ಲದೆ ಮನೆ ಮಂದಿಗೆಲ್ಲ ಕೂಡಾ ವಿಶೇಷದ ಹುರುಳಿಯ ಸಾರಿನ ಊಟ ಲಭಿಸುತ್ತದೆ.
ಎರಡು ಜೋಡು ಕೋಣಗಳಿರುವ ಮನೆಯಲ್ಲಿ ಎರ್ತ ಕೊಡುವ ದಿನ ತುಂಬಾ ಪ್ರಮಾಣದಲ್ಲಿ ಹುರುಳಿಯ ಹಾಲು ಉಳಿದಿರುತ್ತದೆ. ಅದನ್ನು ಅಕ್ಕಪಕ್ಕದ ಮನೆಯವರಿಗೆ, ಬೇಸಾಯಕ್ಕೆ ಸಹಕರಿಸಿದ ಕೂಲಿಗಳಿಗೆ ಮತ್ತು ನೆಂಟರು ಇಷ್ಟರಿಗೆ ಕಳುಹಿಸಿಕೊಡುತ್ತಾರೆ. ಹೀಗಾಗಿ ಈ ಎರ್ತ ಕೊಡುವುದೂ ಕೂಡಾ ಆಸಾಡಿ ತಿಂಗಳಿನ ಒಂದು ಸಣ್ಣ ಹಬ್ಬವೇ ಆಗಿರುತ್ತದೆ. ಈಗೀಗ ಹುರುಳಿಯನ್ನು ಬೆಳೆಯುವವರೂ ಇಲ್ಲ ಮತ್ತು ಕೋಣಗಳನ್ನು ಸಾಕುವವರೂ ಇಲ್ಲ. ಹೀಗಾಗಿ ಇತ್ತೀಚೆಗೆ ಇಂತಹ ಆಚರಣೆಗಳೆಲ್ಲ ಕಣ್ಮರೆಯಾಗಿವೆ.
- ಹರಿಕೃಷ್ಣ ಹೊಳ್ಳ, ಬ್ರಹ್ಮಾವರ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ