ಕಾರ್ಗಿಲ್ ಯುದ್ಧ ಸಂದರ್ಭದ ವಿಶೇಷ ಸ್ಮರಣೀಯ ಸ್ತ್ರೀ ಯಾಷಿಕಾ ಹತ್ವಾಲ್: ತಾಲ್ಲೂಕು ಅಧ್ಯಕ್ಷೆ ಲತಾಮಣಿ ಎಂ.ಕೆ
ತಿಪಟೂರು: 1999ರಲ್ಲಿ ಭಾರತ ಹಾಗೂ ಪಾಕಿಸ್ಥಾನದ ಮಧ್ಯೆ ನಡೆದ ಕಾರ್ಗಿಲ್ ಯುದ್ಧದಲ್ಲಿ ಪುರಷರಷ್ಟೇ ಮಹಿಳೆಯರ ಸಾಧನೆಯೂ ಅನನ್ಯವಾಗಿದೆ. ಈ ಯುದ್ಧ ಸಂದರ್ಭದ ವಿಶೇಷ ಸ್ಮರಣೀಯ ವೀರನಾರಿ ಎಂದರೆ ಯಾಷಿಕಾ ಹತ್ವಾಲ್ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಿಪಟೂರು ತಾಲ್ಲೂಕು ಅಧ್ಯಕ್ಷೆ ಲತಾಮಣಿ ಎಂ.ಕೆ ತುರುವೇಕೆರೆ ಅಭಿಪ್ರಾಯಪಟ್ಟರು.
ಅವರು ಪಟ್ಟಣದಲ್ಲಿ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಂದು ರಂಗದಲ್ಲಿಯೂ ತನ್ನದೇ ಆದ ಸ್ಥಾನವನ್ನು ಪಡೆದು ಸಾಧನೆಯತ್ತ ಸಾಗುತ್ತಿರುವ ಸ್ತ್ರೀ, ಸೇನೆಯಲ್ಲಿಯೂ ತನ್ನ ಶಕ್ತಿ ಸಾಮರ್ಥ್ಯವನ್ನು ತೋರುತ್ತಾ ದೇಶಪ್ರೇಮವನ್ನು ಸಾರುತ್ತಿರುವುದು ನಿಜಕ್ಕೂ ಪ್ರಶಂಸನೀಯ ಹಾಗೂ ಹೆಮ್ಮೆಯ ವಿಷಯವಾಗಿದೆ. ಅಂತೆಯೇ ೧೯೯೯ ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಗರ್ಭಿಣಿಯಾಗಿದ್ದರೂ ದಿಟ್ಟತನದಿಂದ ತನ್ನ ಕರ್ತವ್ಯವನ್ನು ಮೆರೆದ ನಾರಿ ಯಾಷಿಕಾ ಹತ್ವಾಲ್ ರವರ ಧೈರ್ಯ, ದೇಶಭಕ್ತಿ, ರಾಷ್ಟ್ರಾಭಿಮಾನ, ಕರ್ತವ್ಯ ಪ್ರಜ್ಞೆ ಮತ್ತು ನಿಷ್ಠೆ ನಮ್ಮೆಲ್ಲರಿಗೂ ಮಾದರಿಯಾಗಬೇಕು ಎಂದರು.
ಶಿವಮೊಗ್ಗ ಕುವೆಂಪು ವಿವಿ ಇತಿಹಾಸ ವಿಭಾಗದ ಪ್ರಾದ್ಯಾಪಕಿ ಡಾ. ಹಸೀನಾ ಎಚ್.ಕೆ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಾರ್ಗಿಲ್ ವಿಜಯ್ ದಿವಸ್ ಎಂಬುದು ಒಂದು ಸಂಭ್ರಮದ ದಿನ ಎನ್ನುವುದಕ್ಕಿಂತಲೂ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಹಾಗೂ ಅವರ ಕುಟುಂಬಗಳಿಗೆ ಧೈರ್ಯ ತುಂಬಿ, ಸಹಕಾರಿಯಾಗುವ ದಿನವಾಗಬೇಕಿದೆ ಎಂದು ಹೇಳುತ್ತಾ ಕಾರ್ಗಿಲ್ ಯುದ್ಧದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದಂತಹ ಕಾರ್ಗಿಲ್ ಯುದ್ಧದಲ್ಲಿ ನೇರವಾಗಿ ಎದುರಾಳಿಯೊಂದಿಗೆ ಸೆಣೆಸಾಡಿ ವಿಜಯ ಸಾಧಿಸಿದ ಹಿರಿಯ ಹಾಗೂ ನಿವೃತ್ತ ಸೈನಿಕರಾದ ಸುಬೇದಾರ್ ಚಂದ್ರಶೇಖರಪ್ಪನವರು ಯುದ್ಧ ಭೂಮಿಕೆಯಲ್ಲಿ ತಮಗಾದ ಅನುಭವಗಳನ್ನು, ಸಾವಿರಾರು ಅಡಿ ಎತ್ತರದಲ್ಲಿ ನಿಂತು ಹೋರಾಡಿದ ವೀರಾವೇಶವನ್ನು, ಯುದ್ಧಭೂಮಿಯ ನೀತಿ ನಿಯಮಗಳನ್ನು ವಿವರಿಸಿದರು.
ಈ ದಿನದ ಸಂಭ್ರಮಾಚರಣೆಗೆ ಸಾಕ್ಷಿಯಾದ ಪತ್ರಕರ್ತ ಭಾಸ್ಕರಾಚಾರ್ ರವರು ಯುದ್ಧದಲ್ಲಿ ಮದ್ದು ಗುಂಡುಗಳನ್ನು ಸಿಡಿಸುವಂತೆ ಶಬ್ದ ಹಾಗೂ ವಾಯು ಮಾಲಿನ್ಯರಹಿತವಾದ ಸಿಡಿಮದ್ದನ್ನು ಸಿಡಿಸಿ ಕಾರ್ಯ ಕ್ರಮೋಚಿತವಾಗಿ ವಿಶೇಷವಾಗಿ ಉದ್ಘಾಟಿಸಿದ ರೀತಿಯನ್ನು ಪ್ರಶಂಸಿಸಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಎಲ್ಲಾ ಕಾರ್ಯಕ್ರಮಗಳು ವಿಶೇಷ ವಿಭಿನ್ನ ಮೌಲ್ಯಭರಿತ ಹಾಗೂ ಅರ್ಥಗರ್ಭಿತವಾದ ಸರಳ ಸಜ್ಜನಿಕೆಗೆ ಪ್ರಸಿದ್ಧಿಯಾಗಿದೆ ಇವರ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀಮತಿ ಜಯಲಕ್ಷ್ಮೀರವರು ಕಾರ್ಗಿಲ್ ಯುದ್ಧದ ಸಂಪೂರ್ಣ ಮಾಹಿತಿಯನ್ನು ನೀಡಿ ನೆರೆದಿದ್ದವರ ಗಮನ ಸೆಳೆದರು. ಈ ಸಂದರ್ಭದಲ್ಲಿ ಧರಣೇಶ್ ಪತ್ರಿಕಾ ಮಾಧ್ಯಮದವರು, ಪೋಷಕರು ಮತ್ತು ಮಕ್ಕಳು ನೆರೆದಿದ್ದರು.
ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಿಪಟೂರು ತಾಲ್ಲೂಕು ಘಟಕದ ಕಾರ್ಯದರ್ಶಿ ಶಿಲ್ಪಾ ಎನ್. ಎಲ್ಲರನ್ನೂ ಸ್ವಾಗತಿಸಿದರು, ವೇದಿಕೆಯ ಸಹ ಕಾರ್ಯದರ್ಶಿ ಕುಮಾರಿ ಕುಸುಮ ಕೆ. ಜೆ. ತುರುವೇಕೆರೆ ಪ್ರಾರ್ಥಿಸಿದರು, ವೇದಿಕೆಯ ನಿರ್ದೇಶಕಿ ರಂಜಿತಾ ಆನಂದ್ ನಿರೂಪಿಸಿದರು ಹಾಗೂ ಮನು ರವರು ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ