ಷಣ್ಮತ ಸ್ಥಾಪನಾಚಾರ್ಯ ಆದಿ ಶಂಕರಾಚಾರ್ಯರ ಬೋಧನೆಗಳಿಂದ ಪ್ರಭಾವಿತರಾಗಿ ಅವರ ಶಿಷ್ಯರಾಗಿ ಆಧ್ಯಾತ್ಮದ ಹಾದಿಯಲ್ಲಿ ಸಾಧನಾ ಪಥದಲ್ಲಿ ಮುಂದುವರೆದಿದ್ದ ಪದ್ಮಪಾದ, ಸುರೇಶ್ವರ ಆಚಾರ್ಯ, ಹಸ್ತಾಮಲಕ ಮುಂತಾದ ಶಿಷ್ಯರು ಅವರ ಕೃತಿಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದರ ಜೊತೆಗೆ ತಮ್ಮದೇ ಆದ ವೈಯುಕ್ತಿಕ ಸಾಧನೆಗಳನ್ನು ಕೂಡ ಮಾಡುತ್ತಿದ್ದರು.
ಶಂಕರಾಚಾರ್ಯರ ಶಿಷ್ಯ ಬಳಗದಲ್ಲಿ ಗಿರಿ ಎಂಬಾತ ಕೂಡ ಇದ್ದ. ಅತ್ಯಂತ ನಿಷ್ಠೆ ಮತ್ತು ಸೇವಾ ಮನೋಭಾವವುಳ್ಳ ಆತನಿಗೆ ವಿದ್ಯೆ ಮಾತ್ರ ನಾಸ್ತಿಯಾಗಿತ್ತು. ಅದೆಷ್ಟೇ ಅರಿತುಕೊಳ್ಳಲು ಪ್ರಯತ್ನಿಸಿದರೂ ಕೂಡ ಆತನಿಗೆ ವಿದ್ಯೆ ತಲೆಗೆ ಹತ್ತುತ್ತಿರಲಿಲ್ಲ. ಕಲಿಯಬೇಕು ಎಂಬ ಹಂಬಲ ಹೆಚ್ಚಿದ್ದರೂ ಕೂಡ ಆತ ಗುರುಗಳ ಸೇವೆ ಮಾಡುವುದಕ್ಕೆ ಹೆಚ್ಚು ಸಮಯವನ್ನು ವಿನಿಯೋಗಿಸುತ್ತಿದ್ದ.
ಆದರೆ ಗುರುಗಳ ಭೋಜನದ ಸರ್ವ ಸಿದ್ಧತೆಯನ್ನು, ಅವರ ಎಲ್ಲ ರೀತಿಯ ಸೇವೆಗಳನ್ನು ಅತ್ಯಂತ ನಿಷ್ಠೆಯಿಂದ ಗಿರಿ ಮಾಡುತ್ತಿದ್ದ. ಪ್ರತಿದಿನ ಮುಂಜಾನೆ ಶಂಕರಾಚಾರ್ಯರು ಏಳುವ ಮುನ್ನವೇ ತಾನು ಎದ್ದು ಅವರ ದಿನಚರಿಗೆ ಪೂರಕವಾಗುವಂತೆ ಎಲ್ಲ ಕೆಲಸಗಳನ್ನು ನಿರ್ವಹಿಸುತ್ತಿದ್ದ. ಅವರ ಸ್ನಾನಕ್ಕೆ ನೀರು ಸಿದ್ಧಪಡಿಸುವುದರಿಂದ ಹಿಡಿದು ಅವರ ಪೂಜೆ ಪುನಸ್ಕಾರಗಳಿಗೆ ಊಟ ಉಪಚಾರಕ್ಕೆ ತಾನೇ ಮುಂದಾಗಿ ನಿಲ್ಲುತ್ತಿದ್ದ... ಗುರುಗಳು ಅದೆಷ್ಟೇ ಆಕ್ಷೇಪಿಸಿದರೂ ಕೂಡ ಬಿಡದೆ ವಿಶ್ರಾಂತಿ ಪಡೆಯುವಾಗ ಅವರ ಕಾಲನ್ನು ಒತ್ತುತ್ತಾ ನೀಡುತ್ತಿದ್ದ ಗಿರಿ ಅವರು ಮಲಗಿದ ನಂತರ ಅವರ ಕೋಣೆಯ ಹೊರಗೆಯೇ ಗುರುಗಳು ಕೂಗಿದರೆ ಕೇಳಿಸುವಷ್ಟು ಸನಿಹದಲ್ಲಿ ಮಲಗುತ್ತಿದ್ದ.
ಕುಮಾರಿಲ ಭಟ್ಟರ ಶಿಷ್ಯನಾಗಿದ್ದ ಮಂಡನ ಮಿಶ್ರ ಎಂಬ ಮಹಾನ್ ವಿದ್ವಾಂಸರು ಶಂಕರಾಚಾರ್ಯರೊಂದಿಗಿನ ವಾಗ್ವಾದದಲ್ಲಿ ಸೋತು ಅವರ ಶಿಷ್ಯರಾದರು. ತಮ್ಮ ಪೂರ್ವಾಶ್ರಮದ ಹೆಸರನ್ನು ಸುರೇಶ್ವರ ಆಚಾರ್ಯ ಎಂಬ ನಾಮಧೇಯಕ್ಕೆ ಬದಲಿಸಿಕೊಂಡ ಅವರು ಶಂಕರಾಚಾರ್ಯರು ಗುರು ಪರಂಪರೆಯಲ್ಲಿ ಹಾಕಿಕೊಟ್ಟ ವಿಷಯಗಳನ್ನು ಹೊಸ ಪ್ರತಿಗಳಲ್ಲಿ ನಕಲು ಮಾಡಿ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದರು.
ಗುರುಗಳ ಸೇವೆಯಲ್ಲಿ ಸದಾ ನಿರತನಾಗಿರುತ್ತಿದ್ದ ಅವರ ಶಿಷ್ಯ ಸನಂದನ ಆ ದಿನ ನದಿ ತಟದ ಇನ್ನೊಂದು ಭಾಗದಲ್ಲಿ ಗುರುಗಳ ಬಟ್ಟೆಯನ್ನು ತೊಳೆಯುತ್ತಿದ್ದ. ಗುರುಗಳು ಜೋರಾಗಿ ಸನಂದನ ಎಂದು ಈತನನ್ನು ಕೂಗಿ ಕರೆದ ತಕ್ಷಣವೇ ಗುರುಗಳ ಕರೆಗೆ ಓಗೊಟ್ಟ ಸನಂದನ ನದಿಯ ಮೇಲೆ ನಡೆಯುತ್ತಾ ಬಂದನು. ಹಾಗೆ ಆತ ಓಡೋಡಿ ನದಿಯ ಪ್ರವಾಹವನ್ನು ಲೆಕ್ಕಿಸದೆ ಬರುತ್ತಿರುವುದನ್ನು ನೋಡಿ ಗುರುಗಳು ಆತನ ಮೇಲೆ ಅನುಗ್ರಹ ದೃಷ್ಟಿಯನ್ನು ಬೀರಿದರು. ಕೂಡಲೇ ನದಿಯ ಮೇಲೆ ಆತ ಹೆಜ್ಜೆ ಇಟ್ಟಲ್ಲೆಲ್ಲ ಆತನ ಪಾದಗಳಿಗೆ ನೀರು ಸೋಕದ ಹಾಗೆ ಕಮಲದ ಹೂಗಳು ಅರಳಿದವು. ನದಿಯ ಎರಡೂ ದಡದಲ್ಲಿ ಇದ್ದ ಜನರಿಗೆ ಆಶ್ಚರ್ಯವಾದರೆ ಶಂಕರಾಚಾರ್ಯರು ನಸುನಗುತ್ತಿದ್ದರು. ಅಂದಿನಿಂದ ಆ ಶಿಷ್ಯನ ಹೆಸರು ಪದ್ಮಪಾದ ಎಂದಾಯಿತು.. ಆತ ಕೂಡ ಶಂಕರಾಚಾರ್ಯರ ಕೃತಿಗಳನ್ನು ಪರಂಪರಾನುಗತವಾಗಿ ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ.
ಇನ್ನು ಹಸ್ತಾಮಲಕ ಎಂಬ ವ್ಯಕ್ತಿ ಶಂಕರಾಚಾರ್ಯರ ಶಿಷ್ಯನಾಗಿದ್ದುದೇ ಒಂದು ಸೋಜಿಗದ ಸಂಗತಿ. ನಮ್ಮ ಕರ್ನಾಟಕ ರಾಜ್ಯದ ಗೋಕರ್ಣದ ಬಳಿಯ ಒಂದು ಪುಟ್ಟ ಹಳ್ಳಿಯಲ್ಲಿ ವಾಸವಾಗಿದ್ದ ಪ್ರಕಾಂಡ ಪಂಡಿತ ಪ್ರಭಾಕರ್ ಶಾಸ್ತ್ರಿಗಳ ಮಗನಾದ ಈ ಬಾಲಕ ಜನ್ಮತಹ ಲೌಕಿಕ ವಿಚಾರಗಳಿಗೆ ಅತೀತನಾಗಿದ್ದನು. ಜಗತ್ತಿನ ಆಗುಹೋಗುಗಳ, ಅಷ್ಟೇ ಏಕೆ ತನ್ನ ಸುತ್ತಣ ಸಮಾಜದಲ್ಲಿ ನಡೆಯುತ್ತಿರುವ ವ್ಯವಹಾರಗಳ ಕುರಿತು ಆತನಿಗೆ ಅಷ್ಟಾಗಿ ಯಾವುದೇ ಆಸಕ್ತಿ ಇರಲಿಲ್ಲ. ಆತ ಅದ್ಭುತ ಸ್ಮರಣ ಶಕ್ತಿಯನ್ನು ಹೊಂದಿದ್ದನು. ಆತನ ವಿಕ್ಷಿಪ್ತ ವ್ಯಕ್ತಿತ್ವದಿಂದ ಬೇಸತ್ತು ಆತನ ಪಾಲಕರು ಒಂದು ಬಾರಿ ಶ್ರೀ ಬಾಲಿ ಗ್ರಾಮಕ್ಕೆ ಶಂಕರಾಚಾರ್ಯರು ಆಗಮಿಸಿದಾಗ ಅವರ ಬಳಿ ಈ ಬಾಲಕನನ್ನು ಕರೆತಂದರು. ಪಾಲಕರ ಅಹವಾಲನ್ನು ಆಲಿಸಿದ ಶಂಕರಾಚಾರ್ಯರು ಪುಟ್ಟ ಬಾಲಕನೆಡೆ ನೋಡಿದರು. ಆತನನ್ನು ಮಾತನಾಡಿಸುವ ಪ್ರಯತ್ನದ ಅಂಗವಾಗಿ ನೀನು ಯಾರು? ನಿನ್ನ ಹೆಸರೇನು? ಎಂದು ಕೇಳಿದ ಸಹಜ ಪ್ರಶ್ನೆಗೆ ತಾನು ಆತ್ಮನೋ ಪರಮಾತ್ಮನೋ ಎಂಬುದು ತನಗೆ ಗೊತ್ತಿಲ್ಲ ತನ್ನೊಳಗೆ ಆತ್ಮವಿದೆಯೋ ಇಲ್ಲವೇ ಆತ್ಮದೊಳಗೆ ತಾನೆ ಇರುವೆನು ಎಂಬುದರ ಸತ್ಯವನ್ನು ಅರಿಯಬೇಕಾಗಿದೆ ಎಂದು ದ್ವೈತಭಾವದಿಂದ ಉತ್ತರಿಸಿದ. ಹುಟ್ಟುತ್ತಲೇ ಅಲೌಕಿಕ ಜ್ಞಾನವನ್ನು ಪಡೆದ ಮಗುವಿನ ಜಾಣ್ಮೆ ಲೌಕಿಕ ಜನರಿಗೆ ಅರಿವಾಗದ ಕಾರಣ ಆತ ಜನರ ಕಣ್ಣಿಗೆ ಅಜ್ಞಾನಿ ಎಂಬಂತೆ ತೋರುತ್ತಿದ್ದಾನೆ ಎಂಬುದನ್ನು ಅರಿತ ಶಂಕರಾಚಾರ್ಯರು ಆತನನ್ನು ತಮಗೆ ಬಿಟ್ಟು ಕೊಡು ಎಂದು ಕೇಳಿದರು. ಅಂಗೈಯಲ್ಲಿ ನೆಲ್ಲಿಕಾಯಿಯನ್ನು ಹಿಡಿದುಕೊಂಡ ರೀತಿಯಲ್ಲಿ ಬ್ರಹ್ಮ ಜ್ಞಾನವನ್ನು ಹಸ್ತಗತ ಮಾಡಿಕೊಂಡ ಆತನನ್ನು ಹಸ್ತಾಮಲಕ ಎಂದು ಕರೆದರು.
ಹೀಗೆ ಎಲ್ಲರ ಕುರಿತು ಕಥೆಗಳನ್ನು ಕೇಳುತ್ತಾ ಗುರುಗಳ ಸೇವೆಯಲ್ಲಿ ಕಾಲ ಕಳೆಯುತ್ತಿದ್ದರೂ ಕೂಡ ತನಗೇಕೆ ವಿದ್ಯೆ ಒಲಿಯುತ್ತಿಲ್ಲ ಎಂಬ ಭಾವವು ಗಿರಿಯನ್ನು ಕಾಡುತ್ತಿತ್ತು. ತಾನು ಕೂಡ ವಿದ್ಯಾವಂತನಾಗಿ ಗುರುಗಳ ಜ್ಞಾನವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಮರ್ಥ ಶಿಷ್ಯನಾಗಬೇಕು, ಪರಂಪರೆಯನ್ನು ಮುಂದುವರಿಸಬೇಕು ಎಂಬ ಅಭಿಲಾಷೆ ಆತನನ್ನು ಸದಾ ಕಾಡುತ್ತಿತ್ತು. ಇನ್ನೇನು ಆತನ ಆಸೆ ಕೈಗೂಡುವ ಸಮಯ ಬಂದಿತು.
ಅದೊಂದು ದಿನ ಗುರುಗಳು ಬ್ರಹ್ಮಸೂತ್ರವನ್ನು ತಮ್ಮ ವಿದ್ಯಾರ್ಥಿಗಳಿಗೆ ಹೇಳಿಕೊಡುವ ಸಮಯದಲ್ಲಿ ಕುಳಿತ ವಿದ್ಯಾರ್ಥಿಗಳಲ್ಲಿ ಗಿರಿ ಇಲ್ಲದೆ ಇರುವುದನ್ನು ನೋಡಿದರು. ಗಿರಿ ಎಲ್ಲಿ ಹೋಗಿದ್ದಾನೆ ಎಂದು ಕೇಳಿದಾಗ ಆತ ಬಟ್ಟೆ ಸೆಳೆಯಲು ಹೋಗಿದ್ದಾನೆ ಎಂಬ ಉತ್ತರ ಅವರ ಶಿಷ್ಯರಿಂದ ಬಂತು. ಅವನಿಲ್ಲದೆ ಪಾಠವನ್ನು ಮುಂದುವರಿಸುವುದು ಬೇಡ, ಕೆಲ ಹೊತ್ತು ಕಾಯೋಣ ಎಂದು ಗುರುಗಳು ಹೇಳಿದಾಗ ಶಿಷ್ಯರೆಲ್ಲರೂ ಮುಖ ಮುಖ ನೋಡಿಕೊಂಡರು. ಮತ್ತಷ್ಟು ಸಮಯ ಸರಿದರೂ ಗಿರಿ ಬಾರದೇ ಇರುವುದನ್ನು ಕಂಡು ಶಿಷ್ಯರು ಅವನು ಬಂದರೂ ಆತನಿಗೆ ಅರ್ಥವಾಗುವುದು ಅಷ್ಟರಲ್ಲಿಯೇ ಇದೆ ಗುರುಗಳೇ, ತಾವು ದಯವಿಟ್ಟು ಪಾಠವನ್ನು ಮುಂದುವರಿಸಿ ಎಂದು ವಿನಯದಿಂದ ಕೇಳಿಕೊಂಡರು.
ಶಿಷ್ಯರ ವಿನಯ ಭಾವದಲ್ಲಿಯು ಕೂಡ ಆತನ ಬಗ್ಗೆ ಇರುವ ಅಹಂಭಾವವನ್ನು ಕಂಡು ಗುರುಗಳು ನಸುನಕ್ಕು ತಮ್ಮ ಅನುಗ್ರಹಿತ ಭಾವವನ್ನು ತಮ್ಮ ಧ್ವನಿಯಲ್ಲಿ ತಂದು ಶಿಷ್ಯ ಗಿರಿಯನ್ನು ಕೂಗಿದರು. ದೂರ ಹಳ್ಳದ ಬಳಿ ಬಟ್ಟೆ ಸೆಳೆಯುತ್ತಿದ್ದ ಗಿರಿಗೆ ಗುರುಗಳ ಧ್ವನಿಯಲ್ಲಿದ್ದ ಭಾವದಿಂದಲೇ ಗುರು ಪ್ರೇರೇಪಣೆ ದೊರೆತು ಸರ್ವವಿದ್ಯಾ ಪರಿಪೂರ್ಣನಾದನು.
ಓಡೋಡುತ್ತಲೇ ಬಂದ ಶಿಷ್ಯನನ್ನು ಎಲ್ಲಿಗೆ ಹೋಗಿದ್ದೆ ಎಂದು ಪ್ರಶ್ನಿಸಿದ ಗುರುಗಳಿಗೆ ತೋಟಕ ಶತಕದಲ್ಲಿ ಉತ್ತರಿಸಿದ ಶಿಷ್ಯನ ವಿದ್ವತ್ತನ್ನು ಕಂಡು ಎಲ್ಲರೂ ಅಪ್ರತಿಭರಾಗಿ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತಾಯಿತು. ತಮ್ಮ ಅಹಂಭಾವಕ್ಕೆ ಶಿಷ್ಯರು ಪಶ್ಚಾತಾಪ ಪಟ್ಟರೆ ಗುರುಗಳಿಂದ ಅನುಗ್ರಹಿತನಾಗಿ ತೋಟಕ ಶತಕದಲ್ಲಿ ಗುರುವಿನ ಸ್ತೋತ್ರವನ್ನು ರಚಿಸಿದ ಆತನನ್ನು ತೋಟಕಾಚಾರ್ಯ ಎಂದು ಶಂಕರಾಚಾರ್ಯರು ಕರೆದರು.ಎಲ್ಲರಿಗಿಂತಲೂ ಮುಂಚೆಯೇ ಬ್ರಹ್ಮ ಸೂತ್ರವನ್ನು ಕಲಿತ ತೋಟಕ ಆಚಾರ್ಯರು ತಮ್ಮ ಗುರುಭಕ್ತಿಯ ಶಕ್ತಿಯಿಂದ ಸರ್ವ ವಿದ್ಯಾ ಪಾರಂಗತರಾದರು.
ಮುಂದೆ ಶಂಕರಾಚಾರ್ಯರು ಸ್ಥಾಪಿಸಿದ ಬದರಿ ಆಶ್ರಮದ ಮೊದಲ ಪೀಠಾಧಿಪತಿಯಾಗಿ ನಿಯುಕ್ತರಾದ ತೋಟಕಾಚಾರ್ಯರು ಶಂಕರಾಚಾರ್ಯರ ಉಪನಿಷದ್ ಭಾಷ್ಯಗಳಿಗೆ ಟೀಕೆಗಳನ್ನು ಬರೆದರು. ಸಂಸ್ಕೃತದಲ್ಲಿ ಹಲವಾರು ಗ್ರಂಥಗಳನ್ನು ರಚಿಸಿದ ಅವರು ತಮ್ಮ ಗುರು ಭಕ್ತಿ ಮತ್ತು ಸೇವೆಯಿಂದ ಗುರು ಕಾರುಣ್ಯವನ್ನು ಪಡೆದರು.
ನೋಡಿದಿರಾ ಸ್ನೇಹಿತರೆ, ಗುರುಗಳ ಶಕ್ತಿಯ ಮಹಿಮೆಯನ್ನು. ಆದ್ದರಿಂದಲೇ ನಮ್ಮ ಹಿರಿಯರು ಮಾತೃದೇವೋಭವ ಪಿತೃದೇವೋಭವದ ಜೊತೆ ಜೊತೆಗೆ ಆಚಾರ್ಯ ದೇವೋಭವ ಎಂದು ಹೇಳಿರುವುದು.
ಗುರುವೇ ಪರಬ್ರಹ್ಮ, ಗುರುವೇ ವಿಷ್ಣು, ಗುರುವೇ ಮಹೇಶ್ವರ ಎಂದು ಭಕ್ತಿ ಭಾವದಿಂದ ಕೊಂಡಾಡಿರುವುದು. ಅಜ್ಞಾನವೆಂಬ ಕತ್ತಲನ್ನು ಕಳೆದು ಸುಜ್ಞಾನವೆಂಬ ಬೆಳಕನ್ನು ನೀಡುವ ಗುರುವಿನ ಶಕ್ತಿ ಅಪಾರ.
ನಾ ಗುರೂರಧಿಕಮ್.... ಗುರುವಿಗಿಂತ ಹೆಚ್ಚು ಯಾರೂ ಅಲ್ಲ. ಗುರುವಿನ ಮಾರ್ಗದರ್ಶನದಲ್ಲಿ ನಾವು ನಮ್ಮ ಅಜ್ಞಾನದ ತಮವನ್ನು ಕಳೆದುಕೊಂಡು ಜ್ಞಾನದ ಬೆಳಕಿನಲ್ಲಿ ಬದುಕನ್ನು ಅರ್ಥಪೂರ್ಣವಾಗಿ ಬಾಳೋಣ.ಅಂತಹ ಎಲ್ಲ ಗುರುಗಳಿಗೂ ಸಾವಿರ ನಮನಗಳನ್ನು ಸಲ್ಲಿಸೋಣ.
- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ