ಎಸ್‌ಡಿಎಂ ಮಹಿಳಾ ಐಟಿಐಯಲ್ಲಿ ಬೀಳ್ಕೊಡುಗೆ ಸಮಾರಂಭ
ಉಜಿರೆ: “ನಿಸ್ವಾರ್ಥವಾಗಿ ನಮ್ಮ ಕ್ಷೇಮವನ್ನು ಬಯಸುವವರು ಇದ್ದಾರೆಂದಾದರೆ ಅದು ನಮ್ಮ ಹೆತ್ತವರು ಮಾತ್ರ. ಹಾಗಾಗಿ ಅವರನ್ನು ಧಿಕ್ಕರಿಸಿ ನಡೆಯಬಾರದು. ಬದುಕಿಗೆ ಮಾರ್ಗದರ್ಶನ ನೀಡುವ ಗುರುಗಳು ಹಾಗೂ ಪೋಷಕರಿಗೆ ಸದಾ ಋಣಿಯಾಗಿರುವುದು ಅಗತ್ಯ” ಉಜಿರೆ ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ರವೀಶ್ ಪಡುಮಲೆ ಹೇಳಿದರು.
ಉಜಿರೆ ಎಸ್.ಡಿ.ಎಂ. ಮಹಿಳಾ ಐ.ಟಿ.ಐ ಕಾಲೇಜಿನಲ್ಲಿ ಜು.25ರಂದು ಅವರು ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ ಹಾಗೂ ಆಟಿದ ಕೂಟ ಕಾರ್ಯಕ್ರಮಕ್ಕೆ ಅಡಿಕೆ ಹಿಂಗಾರ ಅರಳಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿ ಹಾಗೂ ಗುರುಗಳು ತಲೆತಗ್ಗಿಸುವ ಕೆಲಸ ಮಾಡದೆ ಸಮಾಜದಲ್ಲಿ ಆದರ್ಶಪ್ರಾಯರಾಗಿ ಬಾಳಬೇಕು ಎಂದು ಅವರು ತಿಳಿಸಿದರು.
ಆಟಿ ಆಚರಣೆ ಕುರಿತು ಮಾತನಾಡಿದ ಅವರು, “ತುಳು ಸಂಸ್ಕೃತಿ ಪ್ರಕಾರ ಪಗ್ಗು ತಿಂಗಳು (ಸೌರಮಾನ ಯುಗಾದಿಯಿಂದ ಆರಂಭಗೊಂಡು) ಸುಗ್ಗಿ ತಿಂಗಳಿನ ತನಕ ಬರುವ ತಿಂಗಳುಗಳು ಅದರಲ್ಲೂ ಆಟಿ ನಾಲ್ಕನೇ ತಿಂಗಳು ತುಂಬಾ ವಿಶೇಷವಾದ ತಿಂಗಳು. ನಮ್ಮ ಹಿರಿಯರು ಗದ್ದೆಯಲ್ಲಿ ನೇಜಿ (ಬತ್ತದ ನಾಟಿ) ಮಾಡುತ್ತಿದ್ದರು. ಅಲ್ಲದೆ ಈ ಸಂದರ್ಭದಲ್ಲಿ ಹೊರಗೆ ಹೋಗಲು ಅನನುಕೂಲ ಇದ್ದ ಕಾರಣ ಪ್ರಕೃತಿಯಲ್ಲಿ ಸಹಜವಾಗಿ ಲಭಿಸುವ ದವಸ ಧಾನ್ಯ, ಸೊಪ್ಪು, ತರಕಾರಿ ತಿಂದು ಬದುಕು ಸಾಗಿಸುತ್ತಿದ್ದರು. ಅದೇ ಸಂಸ್ಕೃತಿ ಇಂದು ನಾವು ಆಚರಿಸುತ್ತಿದ್ದೇವೆ” ಎಂದರು.
ನಮಗೋಸ್ಕರ, ನಮ್ಮ ಸಮಾಜಕ್ಕೋಸ್ಕರ ಯಾರು ನಿಸ್ವಾರ್ಥ ಸೇವೆ ಮಾಡುತ್ತಾರೋ ಅವರಲ್ಲಿ ದೇವರನ್ನು ಕಾಣಬಹುದು. ಪ್ರಸ್ತುತ ಪರಮಪೂಜ್ಯ ಖಾವಂದರು ತಮಗೋಸ್ಕರ ಆಸ್ತಿ ಮಾಡದೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಅನೇಕ ಜವಾಬ್ದಾರಿಯುತ ಜನಪರ ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ, ಸರಕಾರದ ಅನೇಕ ಸವಲತ್ತುಗಳನ್ನು ಹಳ್ಳಿಯ ಮೂಲೆ-ಮೂಲೆಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ವಿದ್ಯಾದಾನ, ಅನ್ನದಾನ, ಔಷಧ ದಾನ ಮುಂತಾದ ಅನೇಕ ಕಾರ್ಯಕ್ರಮಗಳ ಮೂಲಕ ಸಮಾಜದ ಹೆಣ್ಣುಮಕ್ಕಳ ಕಣ್ಣೀರು ಒರೆಸುವ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ನಾವು ವಿದ್ಯಾಭ್ಯಾಸ ಪಡೆದು ಸಮಾಜಲ್ಲಿ ಸಂಸ್ಕೃತಿಯನ್ನು ಬೆಳೆಸಬೇಕು. ಅದರ ಬದಲು ಅದನ್ನು ಹಾಳು ಮಾಡುವ ಪ್ರಯತ್ನ ಮಾಡಬಾರದು. ನಮಗೆ ವಿದ್ಯೆಯ ಮೂಲಕ ಉತ್ತಮ ಜ್ಞಾನ, ಸಂಸ್ಕೃತಿ ಕಲಿಸಿದ ಹೆತ್ತವರು, ಗುರುಗಳು ತಲೆ ತಗ್ಗಿಸುವ ಕೆಲಸ ಮಾಡಬಾರದು.
- ಡಾ. ರವೀಶ್ ಪಡುಮಲೆ
ಇನ್ನೋರ್ವ ಅತಿಥಿ, ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಹಾಸ್ಟೆಲ್ ವಿಭಾಗದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಯುವರಾಜ ಪೂವಣಿ ಅವರು ಮಾತನಾಡಿ, ಶಿಕ್ಷಣದಲ್ಲಿ ಜೀವನ ನಿರ್ವಹಣೆ, ಉತ್ತಮ ಸಂಸ್ಕಾರ, ಆತ್ಮಸ್ಥೈರ್ಯ, ಆತ್ಮಸಂತೃಪ್ತಿ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶ ಹೊಂದಿದಾಗ ಎಲ್ಲಿಯೂ ಹೋಗಿ ಹೇಗೂ ಉದ್ಯೋಗ ಮಾಡಿ ಬದುಕಬಹುದು ಎಂದು ಕಿವಿಮಾತು ಹೇಳಿದರು.
ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿಗಳಾದ ಕ್ಷಮಾ ವಂದಿಸಿ, ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ