ಶ್ರಾವಣಾ ಬಂತು ಶ್ರಾವಣ ನಾಡಿಗೆ...

Upayuktha
0



ಜಿಟಿ ಜಿಟಿ ಮಳೆ, ಕಿಚಿಪಿಚಿ ಕೆಸರು, ಹೊಲಗದ್ದೆಗಳೆಲ್ಲಾ ಹಸಿರು, ಬೆಟ್ಟಗುಡ್ಡಗಳಿಗೆಲ್ಲಾ ಅಭ್ಯಂಗ, ಹಳ್ಳ ಹಗರಿ ಹೊಳೆಗಳೆಲ್ಲಾ ಮೈದುಂಬಿ ಹರಿಯುವ ಅರ್ಭಟ, ಹಕ್ಕಿಗಳ ಕಲರವ, ನವಿಲನ ನರ್ತನ ಈ ಸಂಭ್ರಮವೆಲ್ಲಾ  ಪ್ರಕೃತಿ ಮಾತೆಯದ್ದಾದರೆ ಮನೆಯನ್ನೆಲ್ಲಾ ಸ್ವಚ್ಛಗೊಳಿಸಿ ಸುಣ್ಣ ಬಣ್ಣಗಳಿಂದ ಅಲಂಕಾರ ಮಾಡಿ ಹೊಸ ಬಟ್ಡೆ ತೊಟ್ಡು ಸಿಹಿ ಸಿಹಿ ಅಡಿಗೆ ಉಂಡು ನಾಡಿನ ಜನ ಸಂಭ್ರಮದಲ್ಲಿದ್ದಾರೆ ಅಂದರೆ  ಶ್ರಾವಣ ಮಾಸದ ಆಗಮನ ಆಗಿದೆಯೆಂದೇ ಅರ್ಥ, ಹೌದು ಆಷಾಢ ಕಳೆದು ಶ್ರಾವಣ ಬಂತೆಂದರೆ ಸಾಕು ಕಾಡು ನಾಡು ಆನಂದದಲ್ಲಿ ನಲಿಯುತ್ತವೆ ಜನಗಳ  ಮೈ ಮನೆಗಳಲ್ಲಿ ಸಂತೋಷ ಸಂಭ್ರಮ ಗರಿಗೆದರುತ್ತದೆ. 


ಪ್ರಕೃತಿ ತನ್ನನ್ನೆ ತಾನು ಸಿಂಗರಿಸಿಕೊಂಡು ನವ ವಧುವಿನಂತೆ ಕಂಗೊಳಿಸುತ್ತಾಳೆ. ಇದನ್ನು ಕಂಡ ಬೇಂದ್ರೆಯವರು ಶ್ರಾವಣ ಬಂತು ಕಾಡಿಗೆ, ಬಂತು ಬೀಡಿಗೆ, ಬಂತು ನಾಡಿಗೆ.. ಬಂತು  ಶ್ರಾವಣ ಕುಣಿದಾಂಗ ರಾವಣ ಎಂದು ಹಾಡಿದರೆ, ಜನಪದ ಮಹಿಳೆ ನಾಗರ ಪಂಚಮಿ ನಾಡಿಗೆ ದೊಡ್ಡದೂ.. ಅಣ್ಣಾ ಬರಲಿಲ್ಲ್ಲಾ ಕರಿಯಾಕ ಎಂದು ಹಾಡುತ್ತಾಳೆ. 


ಹಿಂದೂಗಳಿಗೆ ಶ್ರಾವಣ ಮಾಸ ಪವಿತ್ರವಾದ ಮಾಸ ಒಂದು ತಿಂಗಳ ಪರ್ಯಂತ  ಪೂಜೆ ವ್ರತ, ಪುರಾಣ ಶ್ರವಣ ಹೀಗೆ ನಾನಾ ಭಕ್ತಿ ಪೂರಕ ಚಟುವಟಿಕೆಗಳಲ್ಲಿಯೇ  ಈ ತಿಂಗಳನ್ನು ಕಳೆಯುತ್ತಾರೆ,  ಹಾಗಾದರೆ ಬನ್ನಿ ಈ ತಿಂಗಳಿನ ಸೊಬಗನ್ನು ತಿಳಿಯೋಣ.


ರೊಟ್ಟಿ ಹಬ್ಬದ ರಿಂಗಣ 

ಶ್ರಾವಣ ಮಾಸದ ಮೂರನೇ ದಿನವನ್ನು ರೊಟ್ಟಿ ಹಬ್ಬವೆಂದು ಆಚರಿಸುತ್ತಾರೆ. ಈ ಹಬ್ಬ ಬರುವ ಎರಡು ದಿನ ಮೊದಲೇ ಗೃಹಿಣಿಯರು ಜೋಳದ ರೊಟ್ಟಿ ಸಜ್ಜಿರೊಟ್ಟಿಗಳನ್ನು ಎಳ್ಳಚ್ಚಿ ಸುಟ್ಟು ಕಡಕ್ ಆಗಿ ಮಾಡಿ ಸೀರೆಯ ಜೋಳಿಗೆಯಲ್ಲಿ ಸಂಗ್ರಹಿಸಿಡುತ್ತಾರೆ, ಶೇಂಗಾ ಚಟ್ನಿ ಹೆಸರಿಟ್ಟು ಗುರಾಳ್ ಪುಡಿ ಕೊಬ್ಬರಿ ಪುಡಿ ಬೊಳ್ಳಳ್ಳಿ ಪುಡಿ ಇವುಗಳನ್ನು ಮೊದಲೇ ತಯಾರಿಸಿಕೊಂಡು ಡಬ್ಬಿಯಲ್ಲಿ ತುಂಬಿಟ್ಟಿರುತ್ತಾರೆ.


ರೊಟ್ಟಿ ಹಬ್ಬದ ದಿನದಂದು ತರತರದ ತರಕಾರಿ ಪಲ್ಯ  ಮುಳಗಾಯಿ ಎಣಿಗಾಯಿ ಬಾಡಿಸಿದ ಮೆಣಿಸಿನಕಾಯಿ ಕಾಳ ಪಲ್ಯ ಸೊಪ್ಪಿನ ಪಚಡಿ ತರಹೇವಾರಿ ಚಟ್ಟಿ ಅಬ್ಬಾ ! ಒಂದೇ ಎರಡೇ ಇದನ್ನು ಹೇಳುತ್ತಿದ್ದರೆ ಬಾಯಲ್ಲಿ ನೀರೂರುತ್ತವೆ.ಈ ಎಲ್ಲ ಪಡಿ ಪದಾರ್ಥಗಳನ್ನು ಮನೆಯವರಲ್ಲಾ  ಒಂದೆಡೆ ಕೂತು ಬಂಧು ಬಾಂದವರೊಂದಿಗೆ ನಗು ನಗುತ್ತಾ ಊಟ ಮಾಡುವ ಆ ಸಂಭ್ರಮ ಸ್ವರ್ಗಕ್ಕೆ ಕಿಚ್ವು ಹಚ್ವುವಂತಿರುತ್ತದೆ.


ನಾಗಚೌತಿಯ ಚಿತ್ತಾರ 

ಶ್ರಾವಣ ಮಾಸದ ನಾಲ್ಕನೇ ದಿನವೇ ನಾಗಚೌತಿ, ನಾಗಪ್ಪನಿಗೆ ಹಾಲೆರೆಯುವ ಸಂಭ್ರಮ, ಮಹಿಳೆಯರು ಆದಿನ ಬೆಳಗ್ಗೆ ಎದ್ದು ಅಂಗಳವನ್ನು ಸಣಿಯಿಂದ ಸಾರಿಸಿ ,ರಂಗೋಲಿ ಚಿತ್ತಾರದಲ್ಲಿ ನಾಗರ ಹಾವಿನ ಚಿತ್ರವನ್ನು ಮೂಡಿಸುವರು ನಂತರ ನಾಗಪ್ಪನ ಪೂಜೆ . ಗೋದಿ ಸಸಿ  ಹತ್ತಿಯಿಂದ ಮಾಡಿದ ಕೊಕ್ಕ ಬತ್ತಿ ಹೂಗಳಿಂದ ಸಾಲಾಂಕೃತಗೊಂಡ ನಾಗಪ್ಪನ ವಿಗ್ರಹಕ್ಕೆ ಮನೆಯವೆಲ್ಲಾ ಸೇರಿ ನನ್ನ ಪಾಲು ನಮ್ಮಪ್ಪನ ಪಾಲು ನಮ್ಮಮ್ಮನ ಪಾಲು ನಮ್ಮಣ್ಣನ  ಪಾಲೆಂದು ಹಾಲೆರೆಯವ ಸಂಭ್ರಮವನ್ನು ನೋಡಲೆರಡು  ಕಣ್ಣು ಸಾಲದು.


ಮನೆಯಲ್ಲಿ ತಯಾರಾದ ಅಳ್ಳಿಟ್ಟು ತಂಬಿಟ್ಡು ಶೇಂಗಾ ಉಂಡಿ ಎಳ್ಳುಂಡಿ ಗಾರ್ಗಿ  ಹಲಸಂದಿ ವಡಿ ಕಲಪಟ್ಲ ಕಾಯಿ ಬುರುಬುರಿ ಇವುಗಳನೆಲ್ಲಾ ನಾಗಪ್ಪನಿಗೆ  ನೈವೇದ್ಯ ಮಾಡಿ ನಂತರ ಮನೆಯವರೆಲ್ಲ  ಒಂದೆಡೆ ಕುಳಿತು ಉಂಡಿ ತಿನ್ನುತ್ತಾ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ  ಊಡ ಮಾಡುವ ಆ  ಸಂಭ್ರಮಕ್ಕೆ ಬೆಲೆ ಕಟ್ಟಲಾದೀತೆ  ಮಕ್ಜಳು ಮನೆಯ ಪಡಸಾಲಿಯಲ್ಲಿ ಕಟ್ಟಿದ ಜೋಕಾಲಿ ಜೀಕುತ್ತಾ ಅಳ್ಳಿಟ್ಡು  ತಂಬಿಟ್ಟು ತಿನ್ನೋಣಾ ಬಾ ನಾಗಪ್ಪನಿಗೆ ಹಾಲನ್ನು ಹಾಕೋಣ ಬಾ ,ಎಂದು ಹಾಡುತ್ತಾ ಜೋಕಾಲಿ ಜೀಕುತ್ತಾರೆ.  


ಗಂಡಸರು ಜೂಜಾಟ, ಕಬಡ್ಡಿ ಪಂದ್ಯಗಳನ್ನಾಡಿದರೆ, ಹೆಂಗಸರು ಚೌಕಾಬಾರ, ಕೊಕೋ ಆಟ ಅಡಿ ಸಂಭ್ರಮಿಸುವ ದೃಶ್ಯಗಳನ್ನು  ನಮ್ಮೂರ ಕೆರೆ ಅಂಗಳದಲ್ಲಿ  ಕಾಣುತ್ತಿದ್ದೆವು. ಕೊಬ್ಬರಿ ಬಟ್ಟಲಿಗೆ ಎರಡು ರಂಧ್ರ ಕೊರೆದು ಅದಕ್ಕೆ ದಾರ ಪೋಣಿಸಿ ಕೊಬ್ಬರಿ ಬಟ್ಟಲನ್ನು ಗಿರ ಗಿರ ತಿರುಗಿಸುವ ಮಕ್ಕಳ ಆಟ ನೋಡುವುದೇ ಚಂದ.

  

 ನಾಗರ ಪಂಚಮಿಯ ಪಂಚ್

ಶ್ರಾವಣ ಮಾಸದ ಐದನೇ ದಿನವೇ ನಾಗ ಪಂಚಮಿ ಇದನ್ನು ನಮ್ಮ ಗ್ರಾಮೀಣ ಜನ ಮರಿ ನಾಗಪ್ಪನ ಹಬ್ಬ ಎನ್ನುತ್ತಾರೆ. ಇಲ್ಲೂ ಅದೇ ಸಂಭ್ರಮ, ಮನೆಯವರಲ್ಲಾ ಸೇರಿ ಮತ್ತೊಮ್ಮೆ ಮರಿ ನಾಗಪ್ಪನಿಗೆ  ಹಾಲೆರೆಯವ ಪದ್ಧತಿ, ಆದರೆ ಉಂಡಿಯ ಬದಲಾಗಿ ಹೋಳಿಗೆ ಮಾಡುತ್ತಾರೆ. ಹೋಳಿಗೆ ತುಪ್ಪ ಕೋಸಂಬರಿ ಪಲ್ಯ ಕಟ್ಟಿನ ಸಾರು, ಹಪ್ಪಳ ಸಂಡಿಗೆ ಉಪ್ಪಿನ ಕಾಯಿ ಇವೆಲ್ಲವುಗಳನ್ನು ನಾಗಪ್ಪನಿಗೆ ನೈವೇದ್ಯ ಮಾಡಿ ನಂತರ ಮನೆಯವರು ನೆಂಟರಿಷ್ಟರು ಸೇರಿ ಹೋಳಿಗೆ ಊಟ ಮಾಡುತ್ತಾ ಹಿರಿಯರು ತಮ್ಮ ಅನುಭವದ ಬುತ್ತಿಯನ್ನು ಕಿರಿಯರಿಗೆ ಉಣ ಬಡಿಸುತ್ತಾರೆ, ಅಳಿಯ ಮಾವರ ಸರಸ, ಅತ್ತೆ ಸೊಸೆಯರ ವಿರಸ ಗೆಳೆಯರ ಚೆಲ್ಲಾಟ  ಗಾನ-ಪಾನ ಜೂಜಾಟ-ಜೂಟಾಟ ಇವುಗಳಿಗೆಲ್ಲಾ ಸಾಕ್ಷಿಯಾದ  ನಾಗಪಂಚಮಿ ಹಬ್ಬ ಗ್ರಾಮೀಣ ಜನರ ಜೀವ ದ್ರವ್ಯವಾಗಿದೆ.


ಮೌಢ್ಯವೆಂದು ಮೈ ಮರೆಯದಿರಿ

ಇಂದಿನ ವೈಜ್ಞಾನಿಕ ಹಾಗೂ ವೈಚಾರಿಕತೆಯ ಭರಾಟೆಯಲ್ಲಿ ಸಿಕ್ಕ ನಾವು  ಪ್ರತಿಯೊಂದನ್ನು ಪ್ರಶ್ನಿಸುತ್ತಾ ಸಾಗಿದ್ದೇವೆ ಕಲ್ಲು ನಾಗರಕ್ಕೆ ಹಾಲೆರೆಯುವುದು ಎಷ್ಟು ಸೂಕ್ತ ಎಂದು ಈ ಹಬ್ಬವನ್ನು ಆಚರಿಸದೇ ಇದ್ದರೆ ಈ ಎಲ್ಲಾ ಸಂಭ್ರಮಗಳು ನಮ್ಮಿಂದ ದೂರವಾಗುವುದಿಲ್ಲವೇ, ಪಂಚಮಿ ಹಬ್ಬದ ಹಿಂದೆ ಕೆಲವೊಂದು ವೈಜ್ಞಾನಿಕ ಸತ್ಯಗಳಿವೆ, ಶ್ರಾವಣ ಮಾಸ ಬಂದರೆ ಸಾಕು ರೈತಾಪಿ ಕುಟುಂಬದ ಜನಕ್ಕೆ ಹೊಲ ಗದ್ಯಗಳಲ್ಲಿ ಕೆಲಸ ಹೆಚ್ಚಿರುತ್ತದೆ  ಶ್ರಮದಾಯಕ ಕೆಲಸಕ್ಕೆ ದೈಹಿಕ ಶಕ್ತಿ ಮಾನಸಿಕ ಆರೋಗ್ಯ ಬೇಕಲ್ಲವೇ ಅದಕ್ಕೆ ಈ ಹಬ್ಬದ ಆಚರಣೆ ಈ ಹಬ್ಬದ ನೆಪದಲ್ಲಿ ಶ್ರಮಿಕರು ಪೌಷ್ಟಿಕ ಆಹಾರ ಸೇವಿಸಿ ಮೂರ್ನಾಲ್ಕು ದಿನ  ಆನಂದದಿಂದ ಕಾಲ ಕಳೆದಾಗ ಆತನ ಮನಸ್ಸು ಸದೃಢಗೊಂಡು ಮುಂದಿನ ಕಾರ್ಯಕ್ಕೆ ಅವರು ಸಿದ್ದಗೊಳ್ಳುತ್ತಾರೆ. 


ಜೊತೆಗೆ ಮಾನವೀಯ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಎಲ್ಲ ಜಾತಿ ಜನಾಂಗದವರು ಸೇರಿ  ಕಬಡ್ಡಿ ಕೋಕೋ ಆಟ ಆಡುವಾಗ ಅವರಲ್ಲಿ ಮೇಲು ಕೀಳು ಭಾವನೆಗಳು ದೂರಾಗಿ  ನಾವೆಲ್ಲಾ ಬಂದೇ ಎನ್ನುವ ಭಾವ ಬರುತ್ತದೆ ಅಲ್ಲವೆ? ಇದಕ್ಕಿಂತ ಇನ್ನೇನು ಬೇಕು. ಇರುವಷ್ಟು ದಿನ ನಾವು ನಗು ನಗುತ್ತಾ ಬಾಳಬೇಕಲ್ಲವೇ ಬರುವಾಗ ನಾವೇನೂ ತಂದಿಲ್ಲ ಹೋಗುವಾಗ ಎನೂ ಒಯ್ಯಲಾರೆ  ನಗು ನಗುತ್ತಾ ಬಾಳಿದರೆ ಅದೇ ಸ್ವರ್ಗ ಸುಖವಲ್ಲವೇ? ಇಂತಹ ಬದುಕು ಎಲ್ಲರದ್ದಾಗಲಿ ಎನ್ನುವುದೇ ಈ ಪಂಚಮಿ ಹಬ್ಬದ ಹಾರೈಕೆಯಾಗಿದೆ.

"ಸರಸವೇ ಜನನ ವಿರಸವೇ ಮರಣ ಸಮರಸವೇ ಜೀವನ"


                               


-ಎ.ಎಂ.ಪಿ ವೀರೇಶಸ್ವಾಮಿ

ಹೊಳಗುಂದಿ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top