ಇವತ್ತಿನ ದಿನಗಳಲ್ಲಿ ನಿವೇಶನಗಳ ಬೆಲೆ, ಕಟ್ಟಡ ಸಾಮಗ್ರಿಗಳ ಬೆಲೆ ಹಾಗೂ ಕಟ್ಟಡ ಕಾರ್ಮಿಕರ ಕೂಲಿಗಳ ವೆಚ್ಚಗಳು ಗಗನಕ್ಕೇರಿವೆ. ಇಂತಹ ಪರಿಸ್ಥಿತಿಯಲ್ಲಿಯೂ ಸಹ ತಮ್ಮ ಕನಸಿನ ಸ್ವಂತ ಮನೆ ಕಟ್ಟಿಕೊಳ್ಳಲು ಸಾಲ ಸೂಲ ಮಾಡಿ ಹರ ಸಾಹಸಕ್ಕೆ ಕೈ ಹಾಕಿ, ಧೈರ್ಯ ಮಾಡಿ ಕಟ್ಟಿರುವ ಹೊಸ ಮನೆಗಳಿಗೆ, ಹೊಸ ವಿದ್ಯುತ್ ಸಂಪರ್ಕ ಕೊಡುವುದರಲ್ಲಿ ಕಾನೂನು ತೊಡಕುಗಳಿಂದ ವಿದ್ಯುತ್ ಸಂಪರ್ಕವಿಲ್ಲದೇ ಸಾರ್ವಜನಿಕರು ಪರದಾಡುತ್ತಿದ್ದಾರೆ.
ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲಯವು 17-12-2024 ರಂದು ನೀಡಿರುವ ಆದೇಶದಲ್ಲಿ ಪ್ರಕಾರ ಹೊಸದಾಗಿ ಕಟ್ಟಿಸಿರುವ ಕಟ್ಟಡಗಳಿಗೆ ನಗರ ಪಾಲಿಕೆಯಿಂದ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರ/ ಅಕ್ಯುಪೆನ್ಸಿ ಸರ್ಟಿಫಿಕೇಟ್ (ಓಸಿ ಮತ್ತು ಸಿಸಿ) ಪ್ರಮಾಣಗಳನ್ನು ಒದಗಿಸಿದವರಿಗೆ ಮಾತ್ರ ಹೊಸ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದು ಆದೇಶ ಮಾಡಿದೆ.
ಆದೇಶ ಎಲ್ಲಾ ವರ್ಗ, ಎಲ್ಲಾ ನಗರ, ಎಲ್ಲಾ ಕಟ್ಟಡಗಳಿಗೆ ಒಂದೇ ರೀತಿ ಅಳವಡಿಸುವುದು ಅಸಾಧ್ಯ ಹಾಗೂ ಅವೈಜ್ಞಾನಿಕ. ಕಟ್ಟಡ ಪರವಾನಿಗೆ ಪಡೆಯದೇ (ಬಿಲ್ಡಿಂಗ್ ಲೈಸೆನ್ಸ್ ಪಡೆಯದೆ) ಇರುವಂತಹ ಮತ್ತು ಕಾನೂನನ್ನು ಉಲ್ಲಂಘನೆ ಮಾಡಿ ಮತ್ತು ವಾಸೋಪಯೋಗ ನಿವೇಶನದಲ್ಲಿ ಅಕ್ರಮದ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿ ಕಾನೂನು ಉಲ್ಲಂಘಿಸಿದವರಿಗೆ ಮತ್ತು ಪ್ಲಾನ್ ಅಪ್ರೋವಲ್ ಇಲ್ಲದ ಬಿಲ್ಡಿಂಗ್ ಅನಧಿಕೃತ ಕಟ್ಟಿದವರಿಗೆ ಈ ಕಾನೂನುಗಳನ್ನು ಅಳವಡಿಸಿರುವುದು ಸರಿ, ಆದರೆ ಕಟ್ಟಡ ಪರವಾನಿಗೆ ಪಡೆದು ತಮ್ಮ ನಿವೇಶನದ ಜಾಗದಲ್ಲೇ ವಾಸೋಪಯೋಗಕ್ಕಾಗಿ ಕಟ್ಟಿರುವ ಹೊಸ ಬಿಲ್ಡಿಂಗ್‌ಗಳಿಗೆ ವಿದ್ಯುತ್ ಸಂಪರ್ಕ ಕೊಡುವುದಿಲ್ಲ ಎನ್ನುವ ಆದೇಶ ಎಷ್ಟರಮಟ್ಟಿಗೆ ಸರಿ...?
ದೊಡ್ಡ ದೊಡ್ಡ ಮೆಟ್ರೋ ನಗರಗಳಿಗೆ ಇರುವ ಕಾನೂನುಗಳನ್ನು ಸಣ್ಣ ಪುಟ್ಟ ನಗರಗಳಿಗೂ ಸಹ ಅಳವಡಿಸಿರುವುದರಿಂದ ಅಮಾಯಕ ಜನಗಳು ಬಲಿಯಾಗುತ್ತಾರೆ. ಬಹು ಮಹಡಿ ಕಟ್ಟಡ, ವಾಣಿಜ್ಯ ಕಟ್ಟಡಗಳಿಗೆ ಈ ಆದೇಶಗಳನ್ನು ಪಾಲಿಸಲಿ ಆದರೆ ವಾಸೋಪಯೋಗಕ್ಕಾಗಿ ಕಟ್ಟಿರುವ ಮನೆಗಳನ್ನು ಸ್ವಲ್ಪ ಸೆಟ್‌ಬ್ಲಾಕ್‌ಗಳಲ್ಲಿ ವ್ಯತ್ಯಾಸ ಕಂಡು ಬರುವುದು ಸಹಜ ಮತ್ತು ಮುಂದೆ ಕಟ್ಟುವ ಕಟ್ಟಡಗಳಿಗೆ ಈ ಕ್ರಮ ತೆಗೆದುಕೊಳ್ಳಲಿ ಆದರೆ ಅಲ್ಲಿ ಕಟ್ಟಿ ಮುಕ್ತಾಯಗೊಂಡಿರುವ ಮನೆಗಳಿಗೆ ಈ ಆದೇಶ ಕಾನೂನುಗಳನ್ನು ಅಳವಡಿಸುವುದು ಸೂಕ್ತವಲ್ಲ, ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಾನೂನುಗಳು ಇರುವುದು ಆದೇಶಗಳನ್ನು ಹೊರಡಿಸುವುದು ಸಾರ್ವಜನಿಕರ ಅನುಕೂಲಕ್ಕಾಗಿ ಆದರೆ ಇದರಿಂದ ರಾಜ್ಯಾದ್ಯಂತ ಲಕ್ಷಾಂತರ ಸಾಮಾನ್ಯ ಹಾಗೂ ಬಡ ಜನಗಳು ತೊಂದರೆ ಪಡುತ್ತಾ ಕರೆಂಟ್ ಇಲ್ಲದೆ ಪರದಾಡುತ್ತಿದ್ದಾರೆ. ಮೂಲಭೂತ ಸೌಕರ್ಯಗಳಲ್ಲಿ ಒಂದಾದ ವಿದ್ಯುತ್ ಸಂಪರ್ಕ ಇಲ್ಲದಿದ್ದರೆ ಸಾರ್ವಜನಿಕರು ಬದುಕಲು ಮುಂದಿನ ಗತಿ ಏನು....?
ಇದರ ಪರಿಣಾಮವಾಗಿ ಮುಂದೆ ಕಟ್ಟಡ ಕಟ್ಟುವ ಜನಗಳ ಸಂಖ್ಯೆ ಕಡಿಮೆ ಅಗುವುದಲ್ಲದೆ, ಈ ಕ್ಷೇತ್ರದ ಮೇಲೆ ಅವಲಂಬಿತವಾದ ಕಟ್ಟಡ ಸಾಮಾಗ್ರಿಗಳ ವ್ಯವಹಾರಗಳು, ಕಟ್ಟಡ ಕಾರ್ಮಿಕರ ಪರಿಸ್ಥಿತಿಗಳು ಹಾಗೂ ದೇಶದ ಹಾಗೂ ರಾಜ್ಯದ ಸಾವಿರಾರು ಕೋಟಿ ಹಣಕಾಸಿನ ವಹಿವಾಟುಗಳು ಏರುಪೇರು ಉಂಟಾಗುತ್ತದೆ.
ಮಹಾನಗರ ಪಾಲಿಕೆಗೆ ಆದಾಯ ಕಡಿಮೆ ಆಗುತ್ತದೆ. ಇದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂ.ಗಳು ನಷ್ಟವಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಕಾನೂನು ತಜ್ಞರು ಹಾಗೂ ಆಡಳಿತ ಸರ್ಕಾರ ಇದರ ಬಗ್ಗೆ ಅಲೋಚಿಸಿ ಶೀಘ್ರದಲ್ಲೇ ಈ ಸಮಸ್ಯೆಗಳಿಗೆ ಒಂದು ಸೂಕ್ತ ಪರಿಹಾರ ಒದಗಿಸಬೇಕೆಂದು ಸಾರ್ವಜನಿಕರ ಪರವಾಗಿ ಹಾಗೂ ದಾವಣಗೆರೆ ಜಿಲ್ಲೆಯ ಇಂಜಿನಿಯರ್ಸ್ ಸಂಸ್ಥೆಗಳ ಪರಿವಾಗಿ ವಿನಂತಿಸುತ್ತಿದ್ದೇನೆ.
-ಹೆಚ್.ವಿ. ಮಂಜುನಾಥಸ್ವಾಮಿ
ಸಿವಿಲ್ ಇಂಜಿನೀಯರ್ ದಾವಣಗೆರೆ.
ಮೊ.: 9844882366
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ