ಮೂಡುಬಿದಿರೆ: ಕಳೆದ 44 ವರ್ಷಗಳಿಂದ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವ ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು 2024ರ ಸಾಲಿನ ಪ್ರಶಸ್ತಿಗಳನ್ನು ನಿರ್ಣಯಿಸಿದ್ದು ಹಿರಿಯ ಸಾಹಿತಿ ಪ್ರೇಮಶೇಖರ್ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಮತ್ತು ಹೊಸ ಪೀಳಿಗೆಯ ಮಹತ್ವದ ವಿಮರ್ಶಕ ಹಾವೇರಿಯ ವಿಕಾಸ ಹೊಸಮನಿ ಅವರಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯನ್ನು ಘೋಷಿಸಿದೆ.
ವರ್ಧಮಾನ ಸಾಹಿತ್ಯ ಪ್ರಶಸ್ತಿಯು 25,000 ರೂ ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದರೆ ವರ್ಧಮಾನ ಉದಯೋನ್ಮುಖ ಪ್ರಶಸ್ತಿಯು 15,000 ರೂ ಗೌರವ ಸಂಭಾವನೆ, ತಾಮ್ರಪತ್ರದ ಜೊತೆ ಸನ್ಮಾನವನ್ನೂ ಒಳಗೊಂಡಿವೆ.
ಮೂಡುಬಿದಿರೆಯಲ್ಲಿ ಜು. 5ರ ಶನಿವಾರ ವರ್ಧಮಾನ ಪ್ರಶಸ್ತಿ ಪೀಠದ ಮಹಾಸಭೆಯು ಪೀಠದ ಉಪಾಧ್ಯಕ್ಷ ಕೆ. ಶ್ರೀಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಈ ಸಾಲಿನ ತೀರ್ಪುಗಾರರಾದ ವಿಮರ್ಶಕ ಡಾ.ಬಿ. ಜನಾರ್ದನ ಭಟ್, ಪ್ರಾಧ್ಯಾಪಕ ಪ್ರೊ| ಬಿ.ಪಿ. ಸಂಪತ್ ಕುಮಾರ್ ಮತ್ತು ವಿಮರ್ಶಕ ಬೆಳಗೋಡು ರಮೇಶ ಭಟ್ ಅವರುಗಳುಳ್ಳ ತ್ರಿಸದಸ್ಯ ಸಮಿತಿಯು ನೀಡಿದ ಶಿಫಾರಸ್ಸಿನ ಆಧಾರದಲ್ಲಿ ಪ್ರಶಸ್ತಿಗಳನ್ನು ನಿರ್ಣಯಿಸಲಾಗಿದೆ.
ಮೂಡುಬಿದಿರೆಯ ಸಮಾಜಮಂದಿರ ಸಭಾ (ರಿ.) ಸೆಪ್ಟೆಂಬರ್ ತಿಂಗಳಲ್ಲಿ ನಡೆಸುವ ದಸರಾ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪೀಠದ ಪ್ರಧಾನ ನಿರ್ದೇಶಕ ಡಾ.ನಾ. ಮೊಗಸಾಲೆ ಅವರು ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಪರಿಚಯ:
ಶ್ರೀ ಪ್ರೇಮಶೇಖರ್
ಚಾಮರಾಜ ನಗರ ಜಿಲ್ಲೆಯ ಕೊಳ್ಳೇಗಾಲದ ಪ್ರೇಮಶೇಖರ್ ಅವರು (1960) ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಎ. ದೆಹಲಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಹಾಗೂ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯಗಳಲ್ಲಿ ಎಂ.ಫಿಲ್. ಪದವಿಗಳನ್ನು ಪಡೆದು 21 ವರ್ಷಗಳ ಕಾಲ ಪಾಂಡಿಚೇರಿ ವಿಶ್ವವಿದ್ಯಾಲಯದಲ್ಲಿ ಭಾರತದ ವಿದೇಶಾಂಗ ನೀತಿ, ಅಂತರಾಷ್ಟ್ರೀಯ ಸಂಬಂಧಗಳು ಸೇರಿದಂತೆ ಹಲವು ಪಠ್ಯ ವಿಷಯಗಳನ್ನು ಬೋಧಿಸಿ 2012ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡಿರುತ್ತಾರೆ. ಪಠ್ಯ ವಿಷಯಗಳ ಬಗ್ಗೆ ಇಂಗ್ಲೀಷಿನಲ್ಲಿ ಸಂಶೋಧನಾ ಲೇಖನಗಳು ಹಾಗೂ ಕನ್ನಡದಲ್ಲಿ ಕಥೆ, ಕಾದಂಬರಿಗಳನ್ನು ಬರೆಯುವುದು ಅವರ ಇಷ್ಟದ ಹವ್ಯಾಸವಾಗಿದೆ. ಅಂತಾರಾಷ್ಟ್ರೀಯ ಸಂಬಂಧಗಳು, ಇತಿಹಾಸ ಮತ್ತು ಸಾಹಿತ್ಯದ ಬಗ್ಗೆ ಕನ್ನಡದಲ್ಲಿ ನಿರಂತರವಾಗಿ ಲೇಖನಗಳನ್ನು ಬರೆಯುತ್ತಿದ್ದು ಅವರ ಬರಹಗಳು ಕನ್ನಡದ ಎಲ್ಲ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕಗಳಲ್ಲಿ ಪ್ರಕಟಗೊಳ್ಳುತ್ತಿವೆ. ಅವರ ಲೇಖನಗಳು ಸಾಹಿತ್ಯ ಅಕಾಡೆಮಿಯ ಪ್ರಕಟಣೆಗಳೂ ಸೇರಿದಂತೆ ಹಲವಾರು ಸಂಪಾದಿತ ಕೃತಿಗಳಲ್ಲಿ ಸ್ಥಾನ ಪಡೆದುಕೊಂಡಿವೆೆ.
ಎಂಟು ಕಾದಂಬರಿಗಳು 17 ಕಥಾ ಸಂಕಲನ 20 ಲೇಖನಗಳ ಸಂಕಲನ, ಒಂದು ಕವನ ಸಂಕಲನ ಹಾಗೂ 2 ಸಂಶೋಧನಾ ಗ್ರಂಥಗಳು ಪ್ರಕಟಗೊಂಡಿವೆ. ಡಾ. ಶಿವರಾಮ ಕಾರಂತ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಶ್ರೀ ಪ್ರಶಸ್ತಿ, ಸರ್ವ ಭಾಷಾ ಸಾಹಿತ್ಯಕಾರ್ ಸಮ್ಮಾನ್, ಹೊ.ವೆ. ಶೇಷಾದ್ರಿ ಅಂಕಣಕಾರ ಪ್ರಶಸ್ತಿಗಳೂ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಲಭಿಸಿವೆ.
ಶ್ರೀ ವಿಕಾಸ ಹೊಸಮನಿ
ಯುವ ವಿಮರ್ಶಕ ಮತ್ತು ಸಂಘಟಕರಾದ ವಿಕಾಸ ಹೊಸಮನಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ‘ಗಾಳಿ ಹೆಜ್ಜೆ ಹಿಡಿದ ಸುಗಂಧ’, ‘ವೀತರಾಗ’ ಮತ್ತು ‘ಜೀವ ಸಂವಾದ’ ಎಂಬ ವಿಮರ್ಶಾ ಲೇಖನಗಳ ಸಂಕಲನ ಹಾಗೂ ‘ಮಿಂಚಿನ ಬಳ್ಳಿ’ ಎಂಬ ಲಲಿತ ಪ್ರಬಂಧಗಳ ಸಂಕಲನ ಸೇರಿದಂತೆ ಅವರು ಒಟ್ಟು ಆರು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಸಾಹಿತ್ಯ ಗಂಗಾ’ ಸಂಸ್ಥೆಯ ಸ್ಥಾಪಕ ಮತ್ತು ಮುಖ್ಯಸ್ಥರಾಗಿ ಹಲವು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ