ಚಾತುರ್ಮಾಸ ವೇದಿಕೆಯಲ್ಲೇ ಚಾತುರ್ಮಾಸ ವ್ರತವನ್ನು ಹೀಯಾಳಿಸಿದ ತಾಳಮದ್ದಳೆ ಪಾತ್ರಧಾರಿಗಳು

Upayuktha
0

ಚಾತುರ್ಮಾಸ- ತಾಳಮದ್ದಳೆಯಲ್ಲಿ  ಗೇಲಿ ಮಾಡಲು ಬಳಸಬಹುದಾದ ಶಬ್ದವೇ?




ಡನೀರು ಸಂಸ್ಥಾನಾಧೀಶ್ವರ ಶ್ರೀ ಸಚ್ಚಿದಾನಂದ ಸ್ವಾಮಿಯವರು ಐದನೇ ಚಾತುರ್ಮಾಸ ವೃತ ಆಚರಿಸುತ್ತಿರುವ ಸಂದರ್ಭದಲ್ಲಿ ಅಮೋಘ ತಾಳ ಮದ್ದಳೆ ದಶಾಹ ಎಂಬ ಕಾರ್ಯಕ್ರಮ ಮಠದ ಭಕ್ತರಿಂದ ಮಠದ ಆವರಣದಲ್ಲಿ ನಡೆಯುತ್ತಿರುವ ವಿಷಯ ತಮ್ಮೆಲ್ಲರ ಅವಗಾಹನೆಯಲ್ಲಿ ಇರಬಹುದು. ಕುಂಬಳೆ ಸೀಮೆಯ ಮಟ್ಟಿಗೆ ಎಡನೀರು ಮಠ ಶಂಕರಾಚಾರ್ಯ ಪೀಠವನ್ನು ಅನುಸರಿಸುವವರಿಗೆ ಸೀಮಾ ಮಠ. ಆದ್ದರಿಂದ ಕುಂಬಳೆ ಸೀಮೆಯ ಮಟ್ಟಿಗೆ ಅದೊಂದು ವಿಶೇಷ ಮಠ.


ವಿಷಯಕ್ಕೆ ಬರೋಣ. ತಾರೀಕು 19/07/2025 ನೇ ಶನಿವಾರ ಸಂಜೆ ಆರುಗಂಟೆಗೆ ಸುಭದ್ರಾ ಕಲ್ಯಾಣ (ಕವಿ ಹಟ್ಟಿಯಂಗಡಿ ರಾಮಭಟ್ಟ) ಎಂಬ ತಾಳಮದ್ದಳೆ ಕಾರ್ಯಕ್ರಮ ನಡೆದಿರುತ್ತದೆ. ಅದರಲ್ಲಿ ಶ್ರೀಕೃಷ್ಣ ಪಾತ್ರಧಾರಿಯಾಗಿ ಪಾತ್ರವಹಿಸಿದವರು ಹಿರಣ್ಯ ವೆಂಕಟೇಶ್ವರ ಭಟ್ಟರು. ಹಾಗೆಯೇ ಅರ್ಜುನ ಪಾತ್ರಧಾರಿ ಅಶೋಕ ಭಟ್ಟ, ಉಜಿರೆ ಅವರಿಬ್ಬರೂ ಪ್ರಸಂಗಕ್ಕೆ ಹೊಂದದ ರೀತಿ‌ ಹಾಗೂ ಚಾತುರ್ಮಾಸವನ್ನೇ ಅವಹೇಳನ ಮಾಡುವ ರೀತಿ ಸಂಭಾಷಣೆ ಮಾಡಿರುತ್ತಾರೆ. ಈ ವಿಷಯ ಅವಗಾಹನೆಗೆ ಬರದವರಿದ್ದರೆ ಅಂದಿನ ಯೂ ಟ್ಯೂಬ್ ಚೆನಲನ್ನು ವೀಕ್ಷಿಸಿ ತಿಳಿದು ಕೊಳ್ಳಬಹುದು.


ಇಲ್ಲಿ ಕಲಾಗಾರರೆಂದು ಕರೆದು ಕೊಳ್ಳುವ ಇಬ್ಬರೂ ಕಲಾ ಮಾತೆಗೇ ಅಪಚಾರಗೈದಿದ್ದಾರೆ. ಕಲಾದೇವಿಯ ಉಪಾಸಕರು ಮಾತ್ರ ಕಲಾಗಾರ ಎನ್ನಿಸಿಕೊಳ್ಳುತ್ತಾರೆ. ಕಲಾಗಾರರಿಗೆ ಆ ಕಲೆಗೆ ನ್ಯಾಯ ಒದಗಿಸಿ ಕೊಡೋದಷ್ಟೇ ಕೆಲಸ. ಅಪಹಾಸ್ಯ ವಿಡಂಬನೆಗಳು ಸಾರ್ವಜನಿಕೆ ವೇದಿಕೆಯಲ್ಲಂತೂ ಅಕ್ಷಮ್ಯ ಅಪರಾಧ. ಇಂತಹ ಅಪರಾಧ ಮಾಡಿದ ಕೂಡಲೇ ಅವರು ಕಲಾಗಾರರೆಂದು ಕರೆಸಿಕೊಳ್ಳಲು ಅನರ್ಹರಾಗುತ್ತಾರೆ. ಅವರು ಎಷ್ಟೇ ದೊಡ್ಡ ಕಲಾಗಾರನೆಂದು ಅವರು ತಿಳಿದು ಕೊಂಡಿದ್ದರೂ ಅವರು ಕಲಾಗಾರರಲ್ಲ ಮಾತ್ರವಲ್ಲ ನನ್ನ ದೃಷ್ಟಿಯಿಂದ ಬಹುವಚನಕ್ಕೂ ಅರ್ಹರಲ್ಲ. ಆದರೂ ಅವರಷ್ಟು ಕೀಳು ಮಟ್ಟಕ್ಕೆ ಇಳಿಯಲಾರದ ಮನಃಸ್ಥಿತಿ ನನ್ನದು.


ಮೂಲ ಯೂಟ್ಯೂಬ್ ವೀಡಿಯೋ ಲಿಂಕ್ ಇಲ್ಲಿದೆ: 33 ನಿಮಿಷ 30 ಸೆಕೆಂಡ್‌ ನಂತರ ಈ ಅರ್ಥಧಾರಿಗಳ ಮಾತಿನ ಶೈಲಿ, ವ್ಯಂಗ್ಯಗಳನ್ನು ನೀವು ಗಮನಿಸಬಹುದು.



ಈ ಇಬ್ಬರು ಸುಭದ್ರಾ ಪರಿಣಯದಲ್ಲಿ ಬರುವ ಅರ್ಜುನ ಸನ್ಯಾಸಿಯ ರೂಪದ ಸಂದರ್ಭವನ್ನು ಉಪಯೋಗಿಸಿ  ಚಾತುರ್ಮಾಸವನ್ನೇ ಗೇಲಿ ಮಾಡಿರುತ್ತಾರೆ. ಹಟ್ಟಿಯಂಗಡಿ ರಾಮ ಭಟ್ಟರು ಬರೆದ ಸುಭದ್ರಾ ಕಲ್ಯಾಣ ಕೃತಿಯಲ್ಲಿ ಅವರು ಅಲ್ಲಿ ಆಡಿದ ಮಾತುಗಳು ಇತ್ತೇ ಎಂದು ಸಮಾಜಕ್ಕೆ ತಿಳಿಸಲು ಅವರು ಬಾಧ್ಯಸ್ಥರು.


ಅವರಿಬ್ಬರ ವರಸೆ ಹೇಗಿತ್ತೆಂದರೆ ಚಾತುರ್ಮಾಸವನ್ನು ಗೇಲಿ ಮಾಡಲೇ ಅವರು ಆ ಸಂದರ್ಭವನ್ನು ತಾವಾಗಿ ಸೃಷ್ಟಿಸಿದಂತೆ ಇತ್ತು.  ಒಬ್ಬರನ್ನೊಬ್ಬರು ಮಾತಿಗೆಳೆಯುತ್ತಾ ದುಡ್ಡು ಮಾಡುವ ಬಗ್ಗೆ ಚಾತುರ್ಮಾಸ ನಡೆಸುತ್ತಿದ್ದಾರೆ ಎಂಬ ಅಭಿಪ್ರಾಯ ಬರುವಂತೆ ಮಾತನಾಡಿದ್ದಾರೆ. ಅದೂ ಚಾತುರ್ಮಾಸ ನಡೆಯುತ್ತಿರುವ ಒಂದು ಶಂಕರಪೀಠದ ಆವರಣದಲ್ಲಿ. ಆ ಪೀಠದಿಂದ ಚಾತುರ್ಮಾಸ ನಡೆಯುತ್ತಿರುವ ಸಂದರ್ಭದಲ್ಲಿ. ಅವರ ಉದ್ದೇಶ ಏನಿತ್ತು ಗೊತ್ತಿಲ್ಲ. ಆದರೆ ತಾವು ಕುಳಿತು ಮಾತನಾಡಿದ ನೆಲದೊಡೆಯರಾದ ಮಠಾಧಿಪತಿಗಳಿಗೇ ತಾವು ಮಾಡುತ್ತಿರುವುದು ಅಪಮಾನ ಎಂದು ಕೂಡಾ ತಿಳಿಯದಷ್ಟೂ ಸಂಕುಚಿತವಾಯ್ತೇ ಅವರ ಮನಃಸ್ಥಿತಿ. ತಾನು ಪಂಡಿತ ತಾನು ಏನು ಹೇಳಿದರೂ ನಡೆಯುತ್ತದೆಂಬ ಭಾವನೆ ತುಂಬಿದಂತೆ ಕಂಡಿತು ಅವರ ಶರೀರಾವಸ್ಥೆಯನ್ನು ಗಮನಿಸಿದಾಗ. ಮಾತಿನ ಧಾಟಿ ಅದನ್ನು ಪ್ರಸ್ತುತ ಪಡಿಸಿದ ರೀತಿಯಂತೂ ಸಭ್ಯಸ್ಥರಿಗೆ ಅಸಹ್ಯ ಎನ್ನಿಸುವಂತಿತ್ತು.



ತಾವು ಮಾತನಾಡಿದ ವೇದಿಕೆಯಾದರೂ ಯಾವುದು? ಒಂದು ಶಂಕರಾಚಾರ್ಯ ಪೀಠದ ಚಾತುರ್ಮಾಸ ನಡೆಯುತ್ತಿದ್ದ ಮಠದ ವೇದಿಕೆ ಎಂಬಂತಹ ಕನಿಷ್ಟ ಜ್ಞಾನವೂ ಇಲ್ಲದಂತೆ ಕಾಣುತ್ತಿತ್ತು ಅವರ ಮಾತಿನ ಗತ್ತಲ್ಲಿ.


ಚಾತುರ್ಮಾಸ ಮಾಡುತ್ತಿರುವ ಸಮಸ್ತ ಸನ್ಯಾಸ ವರ್ಗವನ್ನೇ ಹೀಗಳೆದಂತೆಯೇ ಇತ್ತು ಅವರ ಮಾತುಗಳು. ಚಾತುರ್ಮಾಸದ ಉದ್ದೇಶವಾದರೂ ತಿಳಿದಿದೆಯೇ ಈ ಪಂಡಿತರೆಂದು ತಿಳಿದುಕೊಂಡ ಅಸಂಸ್ಕೃತರಿಗೆ? ಇನ್ನು ಚರ್ಚೆ ಬಂದರೆ ಅದು ನಮ್ಮ ಉದ್ದೇಶ ಅಲ್ಲ ಎಂದು ತಮ್ಮ ಮಾತಿನ ವರಸೆಯಿಂದ ಸರಿ ಪಡಿಸಲು ಅವರೆಲ್ಲಾದರೂ ಹೊರಟರೆ- ಒಂದು ಶಂಕರಾಚಾರ್ಯ ಪೀಠದ ಚಾತುರ್ಮಾಸ ನಡೆಯುತ್ತಿರುವ ಜಾಗದಲ್ಲಿ ಚಾತುರ್ಮಾಸ ವನ್ನೇ ವಿಡಂಬನಾ ವಸ್ತುವಾಗಿಸಿದ ಬಗ್ಗೆ ಅವರೇ ಸಮಾಜಕ್ಕೆ ತಿಳಿಯ ಪಡಿಸಬೇಕಲ್ಲವೇ?


ಎಡನೀರು ಮಠಾಧಿಪತಿಗಳ ಗಮನಕ್ಕೆ ಈ ವಿಷಯ ಬಂದಿರಲಾರದು ಅನ್ನಿಸುತ್ತಿದೆ. ಭಕ್ತರು ತಮ್ಮ ಮಠದ ವೇದಿಕೆಯೊಂದನ್ನು  ಸಮಸ್ಥ ಸಂನ್ಯಾಸ ವರ್ಗಕ್ಕೇ ಅಪಮಾನ ಮಾಡಲು ಬಳಸಬಹುದೆಂಬ ಕಲ್ಪನೆ ಅವರಿಗೆ ಇರಲು ಸಾಧ್ಯವೇ ಇಲ್ಲ. ಭಕ್ತರು ಅಭಿಮಾನದಿಂದ ಚಾತುರ್ಮಾಸ ಕಾಲದಲ್ಲಿ ತಮ್ಮ ಸೇವೆ ಮಾಡುತ್ತೇವೆಂದರೆ ಭಕ್ತರ ಬಗ್ಗೆ ಸದಾ ಕಳಾಜಿಯುಳ್ಳ ಶ್ರೀಗಳು ಸ್ಥಳಾವಕಾಶ ಕೊಟ್ಟೇ ಕೊಡುತ್ತಾರೆ. ಅದನ್ನು ದುರುಪಯೋಗ ಪಡಿಸಿದ ಹಿರಣ್ಯ ವೆಂಕಟೇಶ್ವರ ಭಟ್ಟ ಹಾಗೂ ಉಜಿರೆ ಅಶೋಕ ಭಟ್ಟರು ಚಾತುರ್ಮಾಸದ ಬಗ್ಗೆ ತಾವಾಡಿದ ಮಾತಿಗೆ ಸಮಾಜದ ಕ್ಷಮೆ ಕೇಳಲೇ ಬೇಕು. ಇಲ್ಲವಾದರೆ ಇದು ಚಾತುರ್ಮಾಸ ಆಚರಿಸುತ್ತಿರುವ ಸರ್ವ ಮಠಾಧಿಪತಿಗಳಿಗೂ ಮಾಡಿದ ಅಪಮಾನಕ್ಕೆ ಪರಿಮಾರ್ಜನೆಯಾಗಲಾರದು.


ಆದ್ದರಿಂದ ಕಾಸರಗೋಡಿನ ಬ್ರಾಹ್ಮಣ ಸಭೆ ಹಾಗೂ ಇನ್ನಿತರ ಜವಾಬ್ಧಾರಿಯುತ ಸ್ಥಾನದಲ್ಲಿರುವವರು ಇಂತಹಾ ವಿಕಟೋದ್ದೇಶಿತ ಕಲಾದ್ರೋಹಿಗಳು ಹಾಗೂ ಮಠಾಧಿಪತಿಗಳಿಗೆ ಅಪಮಾನ ಮಾಡಿದವರಿಗೆ ತಕ್ಕ ಶಾಸ್ತಿಯನ್ನು ಮಾಡಿ ಸೂಕ್ತ ಶಿಕ್ಷೆಯನ್ನು ಕೊಡಬೇಕಾಗಿ ವಿನಂತಿ. ಸಮಾಜದೆದುರು ನಡೆದ ಕಾರ್ಯಕ್ಕೆ ಸಮಾಜದೆದುರೇ ಕ್ಷಮೆ ಯಾಚಿಸುವುದೇ ಸೂಕ್ತ ಶಿಕ್ಷೆ ಅನ್ನಿಸುತ್ತಿದೆ.


ಸಂಪೂರ್ಣ ಸಂನ್ಯಾಸ ಧರ್ಮಕ್ಕೇ ನಡೆದ ಅಪಮಾನವನ್ನು ಸಹಿಸದ ಭಕ್ತವೃಂದದ ಪರವಾಗಿ


-ಎಡನಾಡು ಕೃಷ್ಣ ಮೋಹನ ಭಟ್ಟ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top