ಹೆತ್ತವರು ಉತ್ತಮ ಗುಣ ಸಂಪನ್ನರು, ಸದ್ಗುಣಶೀಲರಾದರೆ, ಮಕ್ಕಳು ಹಾಗೆಯೇ ಆಗುವರೆಂಬ ನಂಬಿಕೆ ಹುಸಿಯಾದದ್ದಿದೆ. ಆಗಬಾರದೆಂಬ ಬಯಕೆಯಿದ್ದರೂ ಕೆಲವೊಂದು ಪರಿಸ್ಥಿತಿಯಿಂದಾಗಿ ಮಕ್ಕಳು ಅಡ್ಡದಾರಿ ಹಿಡಿಯುತ್ತಾರೆ. ಸ್ವಲ್ಪ ಹೆತ್ತವರ ಮುದ್ದು ಸಹ ಕಾರಣವಾಗಬಹುದು. ನೆರೆಹೊರೆಯವರು, ಶಾಲಾ ಶಿಕ್ಷಕರು ತಮ್ಮ ಮಕ್ಕಳ ಬಗ್ಗೆ ತಿಳಿಸಿದಾಗ, 'ಹೌದೆಂದು' ಒಪ್ಪಿಕೊಳ್ಳುವ ತಂದೆತಾಯಿ ಬಹಳ ಕಡಿಮೆ.
ಮಕ್ಕಳು ಏನು ಮಾಡಿದರೂ ಸರಿಯೆಂಬ ಧೋರಣೆ ಹೆಚ್ಚಿನವರದು. ಮಕ್ಕಳೆದುರೇ ಅಧ್ಯಾಪಕರನ್ನು ನಿಂದಿಸಿ, ಅವಹೇಳನ ಮಾಡುವುದೂ ಇದೆ. ದೊಡ್ಡವರೇ ಗುರುಗಳಿಗೆ ಗೌರವ ಕೊಡದಾಗ, ಅವರ ಮಕ್ಕಳೆಷ್ಟು ಗೌರವಿಸಿಯಾರು? 'ಗಿಡವಾಗಿ ಬಗ್ಗದ್ದು ಬೆಳೆದು ಮರವಾದ ಮೇಲೆ ಬಗ್ಗಲುಂಟೇ? ಸಣ್ಣ ವಯಸ್ಸಿನಲ್ಲಿಯೇ ಮಕ್ಕಳನ್ನು ತಿದ್ದಿ, ಸರಿದಾರಿಯಲ್ಲಿ ನಡೆಸುವುದು ಇಂದಿನ ಈ ತಾಂತ್ರಿಕ ಕಾಲಘಟ್ಟದಲ್ಲಿ ಸುಲಭದ ಮಾತಲ್ಲ. ತುಂಬಾ ತಾಳ್ಮೆಯೂ ಬೇಕು.
ತಮ್ಮ ಮಕ್ಕಳ ಮೇಲೆ ಒಂದು ದೃಷ್ಟಿ ಇಡದೇ ಇದ್ದಲ್ಲಿ, ಮುಂದೆ ಖಂಡಿತಾ ಅನುಭವಿಸಬೇಕಾಗಬಹುದು. ಬುದ್ಧಿವಾದ ಹೇಳುವಾಗ ಜಾಗ್ರತೆಯೂ ಬೇಕು. ಹಿಂದೆ-ಮುಂದೆ, ಎಡ-ಬಲ ನೋಡಿಕೊಂಡು ಹೇಳದಿದ್ದರೆ, ಮಾಧ್ಯಮಗಳಲ್ಲಿ, ಪರಿಸರದಲ್ಲಿ ಕಂಡು, ಕೇಳುವ ಅನಾಹುತಗಳಿಗೆ ಎಡೆ ಮಾಡಿದಂತಾಗ ಬಹುದು.
"ಎಂಥ ತಂದೆಗೆ ಎಂಥ ಮಗ ಹುಟ್ಟಿದ"? ಆಗಬಾರದು. ದೊಡ್ಡವರ ನಡೆನುಡಿ, ತುಳಿದ ಬದುಕಿನ ಹಾದಿ, ಆದರ್ಶಗಳನ್ನು ಮೈಗೂಡಿಸಿಕೊಂಡು, ಒಳ್ಳೆಯ ರೀತಿಯಲ್ಲಿ ಜೀವಿಸಿದರೆ ಸಾಕು. ಅದೇ ದೊಡ್ಡ ಸಂಪತ್ತು. ಶ್ರೀಕೃಷ್ಣ ಚರಿತೆಯಲ್ಲಿ ಒಂದೆಡೆ ಉಲ್ಲೇಖಿಸಿದಂತೆ ಭಗವಂತನಾದ ಶ್ರೀಕೃಷ್ಣನ ಮಗ ಸಾಂಬನ ಕಥೆ ನಮಗೆಲ್ಲ ಗೊತ್ತಿದೆಯಲ್ಲವೇ? ಶೀಲಭ್ರಷ್ಟ, ಕರ್ತವ್ಯಭ್ರಷ್ಟ, ಪಾಪ-ಪುಣ್ಯಗಳ ಭೀತಿಯಿಲ್ಲದವ, ದುರ್ನಡತೆ, ದುರಹಂಕಾರಿಯಾಗಿಯೇ ಬೆಳೆದ. ಮುಂದೆ ಅಹಂಕಾರದಿಂದ ಅವಮಾನಗೊಳಿಸಿ, ಕಣ್ವ ಮಹಾಋಷಿಗಳ ಶಾಪಕ್ಕೆ ತುತ್ತಾದ. ಯಾದವ ಕುಲವೇ ನಾಶವಾಗಲು ಸಾಂಬನ ಮದವೇ ಕಾರಣವಾಯಿತು.
ಸರ್ವರನ್ನೂ ಕಾಪಾಡುವ ಕರುಣಾಮಯಿ ಕೃಷ್ಣನಿಗೆ ಎಂತಹ ಮಗನಪ್ಪಾ? ಎಂದಾಯಿತು. ಯಾರನ್ನೂ ಅವಮಾನ ಪಡಿಸಬಾರದು. ತನ್ನ ಹಿರಿಯರು ನಡೆದು ಬಂದ ಹಾದಿಯತ್ತ ಹಿಂದಿರುಗಿ ನೋಡಬೇಕು. ತಾನು ಹೇಗೆ ಸಮಾಜದಲ್ಲಿ ವರ್ತಿಸಬೇಕೆಂಬ ಪರಿಜ್ಞಾನವಿರಬೇಕು. ಹಣ, ಆಸ್ತಿ, ಸಂಪತ್ತು ಎಲ್ಲವೂ ಕ್ಷಣಿಕ, ಗುಣವೊಂದೇ ಶಾಶ್ವತ ತಿಳಿದಿರಬೇಕು. ಮನೆಯ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಸಾಗುವಂತೆ ನಿಗಾ ವಹಿಸೋಣ. 'ಮಕ್ಕಳೇ ಮನೆಗೆ ಮಾಣಿಕ್ಯ' ಇರುವ ಒಂದೆರಡು ಸಂತಾನಗಳನ್ನು ಕಣ್ಣರೆಪ್ಪೆಯೊಳಗಿಟ್ಟು ಜತನದಿಂದ ಕಾಪಾಡುವುದು ಹಿರಿಯರ ಜವಾಬ್ದಾರಿ ಸಹ.
- ರತ್ನಾ ಕೆ ಭಟ್, ತಲಂಜೇರಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ