ಪ್ರತಿಯೊಬ್ಬರ ಜೀವನದಲ್ಲೂ ಒಬ್ಬ ಸ್ನೇಹಿತ ಅಥವಾ ಸ್ನೇಹಿತೆ ಇದ್ದೆ ಇರುತ್ತಾರೆ. ಆ ಸ್ನೇಹ ಎನ್ನುವ ಪದವನ್ನು ವರ್ಣಿಸಲು ಸಾಧ್ಯವೇ ಇಲ್ಲ. ಸ್ನೇಹವೆಂಬ ಎರಡಕ್ಷರವು ಬೆಲೆ ಕಟ್ಟಲಾಗದ ಬಂಧವಾಗಿದೆ.
ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಚಲನಾ- ವಲನವನ್ನು ತಂದೆ- ತಾಯಿಯರಿಗೆ ತಿಳಿಸುತ್ತೇವೋ ಗೊತ್ತಿಲ್ಲ, ಆದರೆ ನಮ್ಮ ಆತ್ಮಿಯರಾದ ಸ್ನೇಹಿತರ ಬಳಿ ಹೇಳಿಯೇ ಹೇಳುತ್ತೇವೆ. ಕಾರಣ ಇಷ್ಟೇ ನಮ್ಮ ಮನದ ನೋವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ ಎಂಬ ಸಣ್ಣ ವಿಶ್ವಾಸ. ಗೆಳೆತನವು ಅಷ್ಟೊಂದು ಶಕ್ತಿ, ನಂಬಿಕೆಯನ್ನು ಹೊಂದಿದೆ.
ಗೆಳೆತನ ಎಂದರೆ ಬರಿ ಮೋಜು- ಮಸ್ತಿ, ಸಮಯ ಕಳೆಯುವುದಕ್ಕೋಸ್ಕರ ಮಾತ್ರ ಅಲ್ಲ, ಜೀವನದಲ್ಲಿ ನಡೆಯುವ ಎಲ್ಲಾ ಕಷ್ಟ, ಸುಖ-ದುಃಖ, ಸಂತೋಷ ಹಂಚಿಕೊಳ್ಳಲು, ಪ್ರತಿ ನೋವು ನಲಿವಿನಲ್ಲೂ ಜೊತೆಗಿರಲು ದೇವರು ಸೃಷ್ಟಿ ಮಾಡಿದ ಒಂದು ಗಟ್ಟಿಯಾದ ಸಂಬಂಧ.
ಹಾಗೆಯೇ ನನ್ನ ಬಾಳಿನಲ್ಲಿ ಹಲವಾರು ಗೆಳೆಯರು ಬಂದು ಹೋಗಿದ್ದಾರೆ. ಆದರೆ ಅದರಲ್ಲಿ ಒಬ್ಬರು ನನ್ನ ಮನದಲ್ಲಿ ಆಳವಾಗಿ ಬೇರೂರಿ ನನ್ನ ಜೀವನವನ್ನೇ ಬದಲಾವಣೆ ಮಾಡಿದರು. ಅವರ ಅಂದಿನ ಪರಿಚಯ ಇಂದು ನೋವು ತಂದಿದೆ. ಮನವು ಅತಿಯಾಗಿ ನಂಬಿ ನೊಂದಿದೆ. ಕೆಲವು ಬಾರಿ ಯಾರು ಬೇಡ ಎನ್ನುವ ಮನವು, ಪದೇ ಪದೇ ಆ ಹಿಂದಿನ ಸ್ನೇಹವನ್ನು ಬಯಸಿದೆ.ಕಾರಣ ಇಷ್ಟೇ ಅವರಷ್ಟು ಪ್ರೀತಿ ನೀಡುವ ಸ್ನೇಹ ಇಂದಿಗೂ ನನಗೆ ದೊರಕಲಿಲ್ಲ, ಹಾಗಾಗಿ ಪದೇ ಪದೇ ನೆನಪುಗಳು ಕಾಡುತ್ತಿರುತ್ತದೆ, ಕೆಲವೊಂದು ಬಾರಿ ಸಂದೇಶವನ್ನು ಕಳುಹಿಸಲು ಕೈಗಳು ಮುಂಬರುತ್ತವೆ,ಆದರೆ ಅದು ವ್ಯರ್ಥ ಎಂಬುದು ಮನಸ್ಸಿಗೆ ತಿಳಿದಿದ್ದರೂ ಏನೋ ಒಂದು ಚಡಪಡಿಕೆ. ಆದರೂ ಮನಸ್ಸು ಒಪ್ಪದೇ ಒಮ್ಮೊಮ್ಮೆ ಸಂದೇಶವನ್ನು ಕಳಿಸಿಯೇ ಬಿಡುತ್ತೇನೆ. ಅದಕ್ಕೆ ಪ್ರತಿಯುತ್ತರ ಬರದೇ ಇದ್ದಾಗ ಆಗುವ ಬೇಸರ, ನನಗೆ ನನ್ನ ಮೇಲೆ ಸಿಟ್ಟು ಹೆಚ್ಚಾಗಿ ಬಿಡುತ್ತದೆ.
ಓ ನನ್ನ ಗೆಳತಿಯೇ, ನಿನ್ನ ನಾನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದೆ. ಆದರೆ ನೀನು ಆ ಪ್ರೀತಿಗೆ ಕೊಂಚವು ಬೆಲೆ ನೀಡಲಿಲ್ಲ. ನೀನೆ ಈ ರೀತಿ ಅರ್ಧ ದಾರಿಯಲ್ಲಿ ಕೈ ಬಿಟ್ಟರೆ, ಮುಂದಕ್ಕೆ ಯಾವ ಸ್ನೇಹದ ಮೇಲು ನಂಬಿಕೆ ಇಡಲು ಭಯವಾಗಿದೆ. ಗೆಳೆತನದ ಮೇಲೆ ವಿಶ್ವಾಸ ತನ್ನಿಂದ ತಾನಾಗಿಯೇ ಮಾಯವಾಗಿದೆ.
ಈ ಸ್ನೇಹವೆಂಬ ನಂಬಿಕೆ ಚೂರಾದಾಗ ಆಗುವ ಬೇಸರ, ರೋದನೆ ಇವೆಲ್ಲ ಸಹಿಸಲಾಗದು. ಕೆಲವು ಸನ್ನಿವೇಶದಲ್ಲಿ ಕೆಲವರು ನನ್ನಲ್ಲಿ ಬಂದು ಅವರ ಸ್ನೇಹ ಮುರಿದ ನೋವನ್ನು ನನ್ನಲ್ಲಿ ಹೇಳಿದಾಗ. ನಾನು ಇಷ್ಟು ಹೇಳುತ್ತಿದ್ದೆ "ನೀವೇಕೆ ಇಷ್ಟು ಚಡಪಡಿಸುತ್ತಿರಿ? ಅವರೇ ನಿನ್ನ ಮರೆತು ಮುಂದೆ ಸಾಗುತಿದ್ದಾರೆ, ಅದೇ ರೀತಿ ಮರೆತು ಮುಂದಕ್ಕೆ ಸಾಗಿ" ಎಂದು ಸುಲಭವಾಗಿ ಹೇಳುತ್ತಿದ್ದೆ.
ಆದರೆ ಅದೇ ಬೇಸರ ನನಗಾದಾಗ ಹೃದಯವೆ ಚೂರದ ಭಾವ, ಜೀವನದಲ್ಲಿ ಮುಂದಕ್ಕೆ ಯಾವ ಸಂಬಂಧವು ಬೇಡ ಎಂದು ಅನಿಸಿಬಿಡುತ್ತದೆ.
- ಕಾವ್ಯ, ಕೊಕ್ಕಡ
ವಿವೇಕಾನಂದ ಪದವಿ ಕಾಲೇಜು (ಸ್ವಾಯತ್ತ) ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ