ಶಿರಸಿ: ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂವರನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 40 ಕ್ವಿಂಟಾಲ್ ಅಕ್ಕಿ ಹಾಗೂ ಸಾಗಾಟಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಶಿರಸಿಯ ಚಿಪಗಿ ನರೆಬೈಲ್ ನಿವಾಸಿ ಉಬೇದ್ ಅಲಿಯಾಸ್ ಸಲೀಂ ಜವಳಿ ಎಂಬಾತ ಪಡಿತರ ಚೀಟಿದಾರರಿಂದ ಕಡಿಮೆ ಬೆಲೆಗೆ ಅನ್ನಭಾಗ್ಯ ಯೋಜನೆಯ 40 ಕ್ವಿಂಟಾಲ್ ಅಕ್ಕಿಯನ್ನು ಖರೀದಿಸಿ, ತನ್ನ ಹಿಟ್ಟಿನ ಗಿರಣಿಯಲ್ಲಿ ಸಂಗ್ರಹಿಸಿಟ್ಟಿದ್ದನು. ಈ ಅಕ್ಕಿಯನ್ನು ಇಸಳೂರು, ಶಿರಸಿ ನಿವಾಸಿ ಸುನೀಲ್ ಮಹಾದೇವಪ್ಪ ನಾಡಗಿ ಎಂಬಾತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಖರೀದಿಸಿದ್ದನು.
ಶಿರಸಿಯಿಂದ ಹುಬ್ಬಳ್ಳಿ ಕಡೆಗೆ ಟಾಟಾ ಕಂಪನಿಯ 407 ವಾಹನದಲ್ಲಿ ಈ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಿಕೊಂಡು ಹೋಗುತ್ತಿದ್ದಾಗ, ಶಿರಸಿಯ ಮಂಗಳೂರು ಹೋಟೆಲ್ ಕ್ರಾಸ್ ಬಳಿ ಪೊಲೀಸರು ವಾಹನ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಸುನೀಲ್ ಮಹಾದೇವಪ್ಪ ನಾಡಗಿ (ಈಸಳೂರು, ಶಿರಸಿ) ಮತ್ತು ಅಲ್ತಾಫ್ ರೆಹಮತ್ ಉಲ್ಲಾ ಶೇಖ್ (ಕಸ್ತೂರ ಬಾ ನಗರ, ಶಿರಸಿ), ಮಹ್ಮದ್ ಉಬೇದ ಜವಳಿ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಅಂದಾಜು ₹1,36,000 ಬೆಲೆ ಬಾಳುವ 40 ಕ್ವಿಂಟಾಲ್ (50 ಕೆ.ಜಿ. ತೂಕದ 80 ಚೀಲ) ಪಡಿತರ ಅಕ್ಕಿ ಹಾಗೂ ಅಕ್ರಮ ಸಾಗಾಟಕ್ಕೆ ಬಳಸಿದ್ದ ಅಂದಾಜು ₹4,50,000 ಮೌಲ್ಯದ ಟಾಟಾ 407 ವಾಹನವನ್ನು ಜಪ್ತಿ ಮಾಡಲಾಗಿದೆ. ಒಟ್ಟು ₹5,86,000 ಮೌಲ್ಯದ ಸ್ವತ್ತನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ದೀಪನ್ ಎಂ.ಎನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿ. ಕೃಷ್ಣಮೂರ್ತಿ, ಜಗದೀಶ್ ನಾಯ್ಕ್ ಹಾಗೂ ಶಿರಸಿ ಉಪವಿಭಾಗದ ಡಿವೈಎಸ್‌ಪಿ ಗೀತಾ ಪಾಟೀಲ್, ವೃತ್ತ ನಿರೀಕ್ಷಕರಾದ ಶಶಿಕಾಂತ ವರ್ಮಾ, ಶಿರಸಿ ತಹಶೀಲ್ದಾರ್ ಪುಟ್ಟರಾಜ ಗೌಡ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯಲ್ಲಿ ಶಿರಸಿ ನಗರ ಠಾಣೆಯ ಪಿಎಸ್‌ಐ ನಾಗಪ್ಪ ಬಿ., ಆಹಾರ ನಿರೀಕ್ಷಕರಾದ ಕವಿತಾ ಪಾಟನಕರ್, ಸಿಬ್ಬಂದಿಗಳಾದ ಸದ್ದಾಂ ಹುಸೇನ್, ಚನ್ನಬಸಪ್ಪ ಕ್ಯಾರಕಟ್ಟಿ, ಹನುಮಂತ ಕಬಾಡಿ, ಸುದರ್ಶನ ನಾಯ್ಕ, ಸುನೀಲ್ ಹಂಡಲಗಿ, ರಾಜಶೇಖರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ