ಸುಳ್ಯದಲ್ಲಿ ಕಟ್ಟಡ ಕಾರ್ಮಿಕರ ಬೃಹತ್ ಪ್ರತಿಭಟನೆ: ಜಿಲ್ಲೆಯಲ್ಲಿ ಮರಳು, ಕೆಂಪುಕಲ್ಲು ನೀತಿ ಸಡಿಲಿಸಲು ಬಿಎಂಎಸ್ ಆಗ್ರಹ

Upayuktha
0


ಸುಳ್ಯ: ಸರಕಾರದ ಅವೈಜ್ಞಾನಿಕ ನೀತಿಯಿಂದ ಕಟ್ಟಡ ಕೆಲಸಕ್ಕೆ ಬೇಕಾದ ಮರಳು, ಕೆಂಪು ಕಲ್ಲು ಸಿಗದೆ ಕಟ್ಟಡದ ಕಾಮಗಾರಿ ನಡೆಯುತ್ತಿಲ್ಲ.  ಇದರಿಂದಾಗಿ ಕಾರ್ಮಿಕರ ಬದುಕು ಅತಂತ್ರವಾಗಿದ್ದು, ಕಾರ್ಮಿಕರು ಬೀದಿಗಿಳಿಯುವಂತೆ ಸರಕಾರ ಮಾಡಿದೆ. ಒಂದು ವಾರದೊಳಗೆ ನಿಯಮ ಸಡಿಲಗೊಳಿಸದಿದ್ದಲ್ಲಿ ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಬಿಎಂಎಸ್ ನ ದ.ಕ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಹೇಳಿದರು.


ಅವರು ಸೋಮವಾರ ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಮರಳು, ಕೆಂಪುಕಲ್ಲು ಸಿಗದೆ ಕಾರ್ಮಿಕರು ತೊಂದರೆಗೆ ಒಳಗಾಗಿದ್ದು ಇದಕ್ಕೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು.


ಬಿಎಂಎಸ್ ನ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಮಾತನಾಡಿ, ಕಾರ್ಮಿಕ ಸಚಿವರು ಹಿಟ್ಲರ್ ನಂತೆ ವರ್ತಿಸುತ್ತಿದ್ದಾರೆ. ಮರಳು, ಕೆಂಪುಕಲ್ಲು ಸಿಗದೆ ಕಾರ್ಮಿಕರ ಬದುಕು ನರಕ ಸದೃಶವಾಗಿದೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರಿಗೆ ಕಾರ್ಮಿಕ ಸಚಿವರು ಸಹಾಯಕ್ಕೆ ಬರಬೇಕಾಗಿದೆ ಆದರೆ ನಾಲ್ಕು ವರ್ಷಗಳಿಂದ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನವು ಬಂದಿರುವುದಿಲ್ಲ ಹಾಗೂ ಕಾರ್ಮಿಕರ ಮರಣ ವೈದ್ಯಕೀಯ ಸಹಾಯಧನ ಮದುವೆ, ವೃದ್ಯಾಪ್ಯ ಪಿಂಚಣಿಯು ಕೂಡ ಒಂದು ವರ್ಷದಿಂದ ಬಂದಿರುವುದಿಲ್ಲ. ಕಾರ್ಮಿಕ ಸಚಿವರು ಅಸಂಬದ್ಧ ಹೇಳಿಕೆಗಳನ್ನು ಕೊಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಇಂತಹ ಕಾರ್ಮಿಕ ಸಚಿವರು ರಾಜ್ಯಕ್ಕೆ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಅಧಿಕಾರಿಗಳ ಗೊಡ್ಡು ಬೆದರಿಕೆಗೆ ಕಾರ್ಮಿಕರು ಹೆದರೋದಿಲ್ಲ. ತಕ್ಷಣ ಮರಳು, ಕೆಂಪುಕಲ್ಲಿನ ನಿಯಮ ಸಡಿಲಗೊಳಿಸಿ ಎಂದು ಒತ್ತಾಯಿಸಿದರು. ಕಳೆದ ಸರಕಾರ ಇರುವಾಗ ತಾಲೂಕಿಗೆ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಕ್ಕಿದೆ. ಆದರೆ ಈಗಿನ ಸರ್ಕಾರ ಅದನ್ನು ನೀಡುತ್ತಿಲ್ಲ. 2021 ರಲ್ಲಿ ಹಣ ಸಿಕ್ಕಿದೆ ಎಂದರು.


ಅರೋಗ್ಯ, ಶಿಕ್ಷಣಕ್ಕೆ ಹಣ ಮೀಸಲಿಡದೆ ಅನಗತ್ಯ ಯೋಜನೆಗಳಿಗೆ ಹಣವನ್ನು ಸರಕಾರ ವ್ಯಯಿಸುತ್ತಿದೆ. ಕಾರ್ಮಿಕ ಸಚಿವರಲ್ಲಿ ಮಕ್ಕಳಿಗೆ ಶಿಕ್ಷಣಕ್ಕೆ ನೆರವು ನೀಡಿ ಎಂದರೆ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಅಲ್ಲಿ ಎಲ್ಲವು ಉಚಿತವಾಗಿ ಸಿಗುತ್ತದೆ ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಆದರೆ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಈ ಸರ್ಕಾರಕ್ಕೆ ಇಷ್ಷವಿಲ್ಲ ಇದು ಕಾರ್ಮಿಕ ವಿರೋಧಿ ಸರಕಾರ ಎಂದು ಟೀಕಿಸಿದರು.


ಸಭೆಯಲ್ಲಿ ಶಾಸಕರಾದ ಭಾಗಿರಥಿ ಮುರುಳ್ಯ ಭಾಗವಹಿಸಿ ಪ್ರತಿಙಟನೆ ಬೆಂಬಲ ಸೂಚಿಸಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ವಿಧಾನ ಸೌಧದಲ್ಲಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು. ಗುತ್ತಿಗೆದಾರರ ಸಂಘದ ಸುಬೋಧ್ ಶೆಟ್ಟಿ ಮೇನಾಲ ಮಾತನಾಡಿದರು. ಇಂಜಿನಿಯರ್ ಅಸೋಸಿಯೇಷನ್ ವತಿಯಿಂದ ಶ್ಯಾಮ್, ಕೆಂಪು ಕಲ್ಲು ಗುತ್ತಿಗೆದಾರರ ಸಂಘದಿಂದ ಪ್ರಕಾಶ್ ಅಡ್ಕಾರ್, ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಪ್ರಕಾಶ್, ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ, ಪೈಂಟರ್ ಅಸೋಸಿಯೇಷನ್ ಅಧ್ಯಕ್ಷ ಜಗದೀಶ್, ಶಾಸಕಿ ಭಾಗೀರಥಿ ಮುರುಳ್ಯ, ಬಿಎಂಎಸ್ ಸುಳ್ಯ ಅದಕ್ಷರಾದ ಮಧುಸೂದನ ಸ್ವಾಗತ ಮಾಡಿ ಪ್ರಾಸ್ತಾವಿಕ ಮಾತನಾಡಿದರು.


ತಾಲೂಕು ಸಂಘಟನಾ ಕಾರ್ಯದರ್ಶಿ ಮನೋಹರ ವಂದಾನಾರ್ಪಣೆ ಮಾಡಿದರು. ಇಂಜಿನಿಯರ್ ನವನೀತ್ ರೈ ನಿರೂಪಣೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಅನಿಲ್ ಮಂಡೆಕೋಲು ಹಾಗೂ ಉಪಾಧ್ಯಕ್ಷ ಲವಕುಮಾರ್, ಜೊತೆ ಕಾರ್ಯದರ್ಶಿ ವಿಶುಕುಮಾರ್, ಕೋಶಾಧಿಕಾರಿ ವಿಜಯ, ಸದಸ್ಯರಾದ ಶಿಜು, ಗಣೇಶ್ ರೈ, ಸಂದೀಪ್ , ಶಿವಾನಂದ, ರಾಘವ, ರಾಜಶೇಖರ, ಪ್ರವೀಣ್ ಹಾಗೂ ದಿನೇಶ್ ಉಪಸ್ಥಿತರಿದ್ದರು.


ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಮತಿ ವಿಲ್ಮಾ ತಾವ್ರೋ, ಹಿರಿಯ ಕಾರ್ಮಿಕ ನೀರೀಕ್ಷಕರಾದ ಗಣಪತಿ ಹೆಗಡೆ ಹಾಗೂ ಸುಳ್ಯ ಉಪ ತಹಶಿಲ್ದಾರ್ ರವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತ ಪ್ರಮುಖರೊಂದಿಗೆ ಮಾತನಾಡಿ ಮನವಿ ಸ್ವೀಕರಿಸಿದರು. ಈ ಬಗ್ಗೆ ಸೂಕ್ತ ಕ್ರಮವಹಿಸಲು ಸರಕಾರಕ್ಕೆ ಮತ್ತು ‌ಉನ್ನತ ಆದಿಕಾರಿಗಳ ಗಮನಕ್ಕೆ ತರಲಾಗುವುದು ಭರವಸೆ ನೀಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top