ಬದುಕಿನ ಪರೀಕ್ಷೆ ಎದುರಿಸಲು ಸಾಹಿತ್ಯವೇ ಸಾಧನ: ಜಯಂತ ಕಾಯ್ಕಿಣಿ

Upayuktha
0

ಬೆಂಗಳೂರು: ಹೊಸ ತಲೆಮಾರಿನ ವಿದ್ಯಾರ್ಥಿಗಳು ಬದುಕಿನ ಸವಾಲುಗಳಿಗೆ ಧೃತಿಗೆಡದೆ ಸಮರ್ಥವಾಗಿ ಎದುರಿಸಲು ಸಾಹಿತ್ಯವೇ ಪ್ರಮುಖ ಸಾಧನ. ಹಾಗಾಗಿ ಇಂದಿನ ತಲೆಮಾರಿನ ಯುವಜನರು ಸಾಹಿತ್ಯಾಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು, ವ್ಯಾಸರಾಯ ಬಲ್ಲಾಳರ ‘ಬಂಡಾಯ’ ಕೃತಿಯ ಅಂತರಂಗದ ಆಶಯವೂ ಸಹ ಬದುಕಿನ ನಾನಾ ಸ್ತರಗಳ ವ್ಯವಸ್ಥೆಯೊಂದಿಗೆ ಮನುಷ್ಯರು ಮುಖಾಮುಖಿಯಾಗುವುದೇ ಆಗಿದೆ ಎಂದು ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು. 


ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ, ಶೇಷಾದ್ರಿಪುರಂ ಕಾಲೇಜು, ಕನ್ನಡ ಸಂಘ, ಕನ್ನಡ ವಿಭಾಗದ ಸಹಯೋಗದೊಂದಿಗೆ ಆಯೋಜಿಸಿದ್ದ ‘ಅಂಗಳದಲ್ಲಿ ತಿಂಗಳ ಪುಸ್ತಕ’ ಕಾರ್ಯಕ್ರಮದಡಿ ವ್ಯಾಸರಾಯ ಬಲ್ಲಾಳರ ‘ಬಂಡಾಯ’ ಕೃತಿ  ಕುರಿತು ಮಾತನಾಡುತ್ತಿದ್ದರು. ವ್ಯಾಸರಾಯ ಬಲ್ಲಾಳರು ಕನ್ನಡ ಸಾಹಿತ್ಯ ಕಂಡ ಅಪರೂಪದ ಬರಹಗಾರ. ಮೃದು ಧೋರಣೆಯ, ಭಾವ ಪರವಶತೆಯ ಶೈಲಿಯ ಕಾದಂಬರಿಗಳಿಂದ ಗುರುತಿಸಿಕೊಂಡಿದ್ದ ಬಲ್ಲಾಳರು ಕ್ರಾಂತಿಕಾರಕ ಮನಸ್ಥಿತಿಯ ಕಡೆಗೆ ಹೊರಳಿದ್ದು ಅವರ ಬಂಡಾಯ ಕಾದಂಬರಿಯ ವಿಶೇಷವಾಗಿದೆ. 


ಈ ಕಾದಂಬರಿ ಮೇಲ್ನೋಟಕ್ಕೆ ಕಾರ್ಮಿಕರು ಮತ್ತು ಬಂಡವಾಳ ಶಾಹಿಗಳ ನಡುವಿನ ಸಂಘರ್ಷದ ಕಥಾ ವಸ್ತು ಹೊಂದಿದ್ದರೂ ಅಲ್ಲಿನ ಪಾತ್ರಗಳು ಬದುಕಿನ ವಿವಿಧ ಹಂತಗಳಲ್ಲಿ ಪರಸ್ಪರ ಬಂಡಾಯ ಏಳುವುದನ್ನು ಕಾಣಬಹುದಾಗಿದೆ. ಮನುಷ್ಯನೇ ಮನುಷ್ಯನನ್ನು ಬೇಟೆಯಾಡುವುದು ಬದುಕಿನ ವಿಪರ್ಯಾಸಗಳಲ್ಲಿ ಒಂದು. ಮನುಷ್ಯನಷ್ಟು ಕ್ರೂರಿ ಬೇರೆ ಇಲ್ಲ ಎನ್ನುವುದೇ ಸಾರ್ವಕಾಲಿಕ ಸತ್ಯ. ಇಲ್ಲಿ ಈ ಬಂಡಾಯ, ಮಾಲಿಕ-ಕಾರ್ಮಿಕರ ನಡುವಿನದಾದರೂ ವ್ಯಕ್ತಿಗತವಾದ ಬಂಡಾಯವನ್ನೂ ಸಹ ಇಲ್ಲಿನ ಪಾತ್ರಗಳು ಪ್ರತಿನಿಧಿಸುತ್ತವೆ. ತಲೆಮಾರಿನಿಂದ ತಲೆಮಾರಿಗೆ, ವ್ಯಕ್ತಿಯಿಂದ ವ್ಯಕ್ತಿಗೆ, ಕುಟುಂಬದ ಒಳಗೆ ಮತ್ತು ಹೊರಗೆ ಹೀಗೆ ಬಂಡಾಯ ಎಲ್ಲ ಸ್ಥರಗಳಲ್ಲಿಯೂ ಒಂದಲ್ಲಾ ಒಂದು ಹಂತದಲ್ಲಿ ಸ್ಫೋಟಗೊಳ್ಳುತ್ತದೆ. ಇದು ಪ್ರತಿಯೊಂದು ಸಮಾಜದಲ್ಲೂ ಅನಿವಾರ್ಯ ಮತ್ತು ಸತ್ಯ ಎಂದು ಜಯಂತ ಕಾಯ್ಕಿಣಿ ವಿಶ್ಲೇಷಿಸಿದರು.


ಇಲ್ಲಿ, ಹೆಣ್ಣು ಹಣೆಯ ಮೇಲಿಡುವ ಕುಂಕುಮದ ಬೊಟ್ಟನ್ನು ಸಹ ಕ್ರಾಂತಿಕಾರಕ ಕೆಂಪು ಚಿಹ್ನೆ ಎಂದು ಚಿತ್ರಿಸಿದ ವ್ಯಾಸರಾಯ ಬಲ್ಲಾಳರ ಚಿಂತನಾಶೈಲಿ ಅಚ್ಚರಿ ಹುಟ್ಟಿಸುವಷ್ಟು ಶಕ್ತವಾಗಿದೆ ಎಂದ ಅವರು, ಯಾವುದೇ ಸಮಾಜ ನಮ್ಮ ಅಂತರಂಗದ ಭಾವನಾತ್ಮಕತೆಯ ಭಾಗವಾಗಿರಬೇಕು, ಸಾಹಿತ್ಯ ಅದಕ್ಕೆ ಪೂರಕವಾಗಿರಬೇಕು ಎಂದು ತಿಳಿಸಿದರು. ಸಾಹಿತ್ಯದ ಈ ಶಕ್ತಿ ಮತ್ತು ಅದರ ಸೌಂದರ್ಯವನ್ನು ವಿದ್ಯಾರ್ಥಿಗಳು ಅನುಭವಿಸಬೇಕೆಂದರೆ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಓದನ್ನು ರೂಢಿಸಿಕೊಳ್ಳಬೇಕು ಎಂದು ಅವರು ಕಿವಿ ಮಾತು ಹೇಳಿದರು. 



ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರು, ಪ್ರತಿ ವಿದ್ಯಾರ್ಥಿಯ ಹಸ್ತಕ್ಕೆ ಪುಸ್ತಕವಿರಬೇಕು. ಪುಸ್ತಕ ಮಕ್ಕಳ ಮಸ್ತಕದಲ್ಲಿ ತುಂಬುವಂತಾಗಬೇಕು. ಆಗ ಮಾತ್ರ ಕನ್ನಡ ಸಾಹಿತ್ಯ ಮತ್ತು ಕನ್ನಡ ಪುಸ್ತಕೋದ್ಯಮವು ಬೆಳೆಯುತ್ತದೆ ಎಂದರು. ಇಂದು ಮುದ್ರಣ ಮಾಧ್ಯಮ ಅತ್ಯಂತ ದೊಡ್ಡ ರೀತಿಯಲ್ಲಿ ಬೆಳೆದಿದೆ. ಜಗತ್ತಿನಾದ್ಯಂತ ಪ್ರಕಾಶನ ಸಂಸ್ಥೆಗಳು ಆಧುನಿಕ ಸಾಧ್ಯತೆಗಳನ್ನೆಲ್ಲಾ ಬಳಸಿಕೊಂಡು ಪುಸ್ತಕೋದ್ಯಮಕ್ಕೆ ಹೊಸ ಆಯಾಮವನ್ನು ತಂದಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ತನ್ನ ಯೋಜನೆಗಳ ಮೂಲಕ ಪುಸ್ತಕಾಭಿರುಚಿಯನ್ನು ಬೆಳೆಸಲು ಹೊರಟಿದೆ. ಆ ದಿಸೆಯಲ್ಲಿ ಮನೆಗೊಂದು ಗ್ರಂಥಾಲಯ ಮತ್ತು ಅಂಗಳದಲ್ಲಿ ತಿಂಗಳ ಪುಸ್ತಕ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

 

ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಕಾಲೇಜಿನ ಗೌರವ ಕಾರ್ಯದರ್ಶಿ ನಾಡೋಜ ಡಾ. ವೂಡೆ ಪಿ. ಕೃಷ್ಣ ಅವರು ಉಪಸ್ಥಿತರಿದ್ದು, ತಮ್ಮ ಕಾಲೇಜು ಇಂತಹ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸದಾ ಬೆಂಬಲ ಮತ್ತು ಪ್ರೋತ್ಸಾಹ ನೀಡುತ್ತದೆ ಎಂದು ಹೇಳಿದರು.


ಸಮಾರಂಭದಲ್ಲಿ ಜಯಂತ ಕಾಯ್ಕಿಣಿ ಹಾಗೂ ವೂಡೇ ಪಿ. ಕೃಷ್ಣ ಅವರನ್ನು ಸನ್ಮಾನಿಸಲಾಯಿತು. ವ್ಯಾಸರಾಯ ಬಲ್ಲಾಳರ ಪುತ್ರಿ ಶ್ರೀಮತಿ ಅಂಜಲಿ ಬಲ್ಲಾಳ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದದ್ದು ವಿಶೇಷವಾಗಿತ್ತು. ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್, ಶೇಷಾದ್ರಿಪುರಂ ಕಾಲೇಜು ಪ್ರಾಂಶುಪಾಲರಾದ ಮೇಜರ್ ಡಾ. ಆನಂದಪ್ಪ ಐ., ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಹೆಚ್.ಎಂ. ಗೀತಾ, ಕನ್ನಡ ಸಂಘದ ಸಂಚಾಲಕ ಎಂ.ಎನ್. ಅರ್ಚನಾ ತೇಜಸ್ವಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top